ಭಾನುವಾರ, ನವೆಂಬರ್ 29, 2020
21 °C

PV Web Exclusive: ಒಂದು ಕಪ್‌ ಚಹಾದ ಸ್ವಾದ ಅರಸುತ್ತ...

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬಿಸಿಯಾದ, ರುಚಿಕರ ಚಹಾದ ಜೊತೆಗೆ ನಡೆಯುವ ಚರ್ಚೆ ಮಾತ್ರವಲ್ಲ, ಅದರ ಕುರಿತ ಚರ್ಚೆ ಕೂಡ ಯಾವತ್ತಿಗೂ ಬಿಸಿಬಿಸಿಯೇ! ಎಷ್ಟೋ ತಲೆಮಾರುಗಳಿಂದ, ವಿವಿಧ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ಈ ಪೇಯದ ಸೇವನೆ ನಡೆಯುತ್ತಲೇ ಬಂದಿದೆ. ಮುಂಜಾವಿನ ಚಳಿಗೆ, ಮನಸ್ಸಿನಲ್ಲಿ ಆಹ್ಲಾದ ಸುಳಿದಾಡಲು, ಹಾಗೆಯೇ ಕ್ಷೇಮಕರ ಭಾವವನ್ನು ಮನದಲ್ಲಿ ಮೂಡಿಸಲು ಒಂದು ಕಪ್‌ ಚಹಾ ಇದ್ದರೆ ಸಾಕು ಎನ್ನುವವರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಅಷ್ಟೇ ಅಲ್ಲ, ಹಸಿರು ಚಹಾ, ಕಪ್ಪು ಚಹಾ, ಮಸಾಲೆ ಚಹ.. ಹೀಗೆ ವೈವಿಧ್ಯಮಯ ಚಹಾದಲ್ಲಿ ಆರೋಗ್ಯದ ಮೂಲವನ್ನು ಅರಸುವವರೂ ಸಾಕಷ್ಟಿದ್ದಾರೆ.

ಎಷ್ಟೇ ಚಹಾ ಪ್ರಿಯರಾದರೂ ಸಾಂಪ್ರದಾಯಿಕ ಚಹಾಕ್ಕೆ ಬಳಸುವ ಎಲೆಯ ಹೆಸರು ‘ಕ್ಯಾಮೆಲಿಯ ಸಿನೆನ್ಸಿ್‌ಸ್‌’ ಎಂದು ಹೇಳುವಾಗ ಚಹಾ ರುಚಿ ಸವಿದ ನಾಲಿಗೆ ಕೊಂಚ ತಡವರಿಸದಿರದು. ಅದು ಹಸಿರಿರಲಿ, ಕಪ್ಪು ಚಹಾ ಇರಲಿ ಅಥವಾ ಸಾದಾ ಚಹಾ ಇರಲಿ, ಬಳಸುವ ಎಲೆ ಒಂದೇ. ಆದರೆ ಅದನ್ನು ಎಷ್ಟರ ಮಟ್ಟಿಗೆ ಆಕ್ಸಿಡೈಸ್‌ ಅಥವಾ ಫರ್ಮೆಂಟ್‌ ಮಾಡುತ್ತಾರೆ ಎಂಬುದರ ಮೇಲೆ ಈ ವ್ಯತ್ಯಾಸಗಳನ್ನು ಹೇಳುತ್ತ ಹೋಗಬಹುದು. ಹೆಚ್ಚು ಆಕ್ಸಿಡೈಸ್‌ ಮಾಡಿದರೆ ಗಾಢ ರಂಗು, ಕೊಂಚವೇ ಮಾಡಿದರೆ ದಟ್ಟ ಹಸಿರು ವರ್ಣ ಬರಬಹುದು, ಹಾಗೆಯೇ ರುಚಿಯಲ್ಲೂ ವ್ಯತ್ಯಾಸ ಇದ್ದೇ ಇರುತ್ತದೆ. ಏನೆ ಇರಲಿ, ಎಲೆಯಲ್ಲಿರುವುದು ಮಾತ್ರ ಕೆಫಿನ್‌ ಅಂಶವೇ.

ಹಸಿರು ಚಹಾದ ಮೋಹ

ಸಾಂಪ್ರದಾಯಿಕ ಚಹ ಬಿಟ್ಟರೆ ಸದ್ಯ ಹೆಚ್ಚು ಜನಪ್ರಿಯತೆ ಗಳಿಸಿರುವುದು ಹಸಿರು ಚಹ (ಗ್ರೀನ್‌ ಟೀ). ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳಿಂದಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರ ನೆಚ್ಚಿನ ಪೇಯ.

ಚಹಾದ ಆರೋಗ್ಯಕರ ಅಂಶಗಳ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿವೆ. ಕೆಲವು ಅಧ್ಯಯನಗಳು ಇದು ಕೊಲೆಸ್ಟರಾಲ್‌ ಕಡಿಮೆ ಮಾಡುತ್ತದೆ, ಹೃದ್ರೋಗದಿಂದ ದೂರ ಇರಬಹುದು ಎಂದೆಲ್ಲ ಪ್ರತಿಪಾದಿಸಿವೆ. ಇನ್ನು ಕೆಲವು ಸಂಶೋಧನೆಗಳು ಹಸಿರು ಚಹಾ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯತ್ರಿಸಬಹುದು, ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ ಎಂದು ಹೇಳಿವೆ. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದು ಹಲ್ಲು ಹುಳುಕಾಗುವುದನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ.

‘ಸದ್ಯಕ್ಕಂತೂ ಬೆಳಗಿನ ಮೂಡ್‌ ಹೆಚ್ಚಿಸಲು ಹಸಿರು ಚಹಾದ ಮೊರೆ ಹೋಗಿದ್ದೇನೆ’ ಎಂಬ ಖ್ಯಾತ ಹಾಲಿವುಡ್‌ ನಟಿ ಏಂಜೆಲಿನಾ ಜೋಲಿ ಹೇಳಿಕೆಯನ್ನೇ ಒಪ್ಪಿಕೊಂಡು ‘ಉಲ್ಲಾಸಕ್ಕಾಗಿ ಚಹಾ’ ಎಂದು ಸರಳವಾಗಿ ಹೇಳಬಹುದು.

ಆದರೆ ಇದರ ಸೇವನೆಯ ಪ್ರಯೋಗ ಮಾಡಲು ಹೊರಟವರು ಶುರುವಿಗೆ ವಾಕರಿಕೆಯಂತಹ ಅಲ್ಪ ತೊಂದರೆಯನ್ನು ಎದುರಿಸಬೇಕಾದೀತು ಅಷ್ಟೆ. ಜೊತೆಗೆ ಇದರಲ್ಲಿರುವ ಕೆಫಿನ್‌ ಕೊಂಚ ನಿದ್ರೆ ಸಮಸ್ಯೆಯನ್ನು ಉಂಟು ಮಾಡಬಹುದು.

ಸಾಂಪ್ರದಾಯಿಕ ಚಹಾ

ಈಗ ನಮ್ಮ ಸಾಂಪ್ರದಾಯಿಕ ಕಪ್ಪು ಚಹಾಕ್ಕೆ ಬರೋಣ. ದಾರ್ಜಿಲಿಂಗ್‌, ಅರ್ಲ್‌ ಗ್ರೇ, ಮಸಾಲಾ ಚಾಯ್‌ (ಸಂಬಾರು ಪದಾರ್ಥಗಳ ಜೊತೆ ಮಿಶ್ರ ಮಾಡಿದ್ದು).. ಹೀಗೆ ಬೇಕಾದಷ್ಟು ವೈವಿಧ್ಯಮಯ ಕಪ್ಪು ಚಹಾದ ಪುಡಿ ಲಭ್ಯ. ಒಂದು ಕಪ್‌ ಕಪ್ಪು ಚಹಾದಲ್ಲಿ ಹೆಚ್ಚು ಕಡಿಮೆ 60– 80 ಮಿ.ಗ್ರಾಂ. ಕೆಫಿನ್‌ ಇರಬಹುದು.

ಹಸಿರು ಚಹಾದಂತೆ ಇದರಲ್ಲಿಯೂ ಪಾಲಿಫಿನಾಲ್ಸ್‌ ಎಂಬ ಆರೋಗ್ಯಕಾರಿ ಅಂಶವಿರುತ್ತದೆ. ಆದರೆ ಈ ಬಗ್ಗೆಯೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ ಎನ್ನುತ್ತಾರೆ ತಜ್ಞರು. ಹಾಗೆಯೇ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ಇದರ ಲಾಭಾಂಶ ನಿಮಗೆ ಬೇಕಾದರೆ ಟೀ ಬ್ಯಾಗ್‌ ಬದಲಾಗಿ ಚಹಾದ ಎಲೆಗಳನ್ನೇ ಬಳಸುವುದು ಉತ್ತಮ ಎಂಬುದು ಚಹಾಪ್ರಿಯರ ಅಂಬೋಣ. ಸಕ್ಕರೆ ಮತ್ತು ಹಾಲು ಸೇರಿಸದೆ ಸೇವಿಸುವುದು ಒಳಿತು. ಆದರೆ ಹೆಚ್ಚಿನ ಭಾರತೀಯರು, ಅದರಲ್ಲೂ ದಕ್ಷಿಣದಲ್ಲಿ ಹಾಲು ಮತ್ತು ಸಕ್ಕರೆ ಬೆರೆತರೆ ಮಾತ್ರ ಅದು ರುಚಿಕರವಾಗಿ ‘ಆಹಾ!’ ಎಂಬ ಉದ್ಗಾರ ಹೊರಡಿಸಬಹುದು. ಸಕ್ಕರೆ ಮತ್ತು ಹಾಲಿನ ಬದಲು ಜೇನುತುಪ್ಪ, ಏಲಕ್ಕಿ ಪುಡಿ ಬೆರೆಸಿಯೂ ಒಂದು ಕಪ್‌ ಚಹಾ ಹೀರಬಹುದು.

ಮಸಾಲಾ ಚಾಯ್‌

ಹಸಿರು ಅಥವಾ ಕಪ್ಪು ಚಹಾದ ರುಚಿ ಇಷ್ಟಪಡದವರು ಮಸಾಲೆ ಚಹಾಕ್ಕೆ ಮೊರೆ ಹೋಗಬಹುದು. ಗುಲಾಬಿ, ದಾಲ್ಚಿನ್ನಿ, ಏಲಕ್ಕಿ, ವೆನಿಲಾ.. ಹೀಗೆ ತರಾವರಿ ಮಸಾಲೆ ಚಹಾ ಮಾರುಕಟ್ಟೆಯಲ್ಲಿ ಲಭ್ಯ. ಇದರ ಸುವಾಸನೆ, ಸ್ವಾದ ಬೇರೆಯಾದರೂ ಚಹಾದ ಕೆಲವು ಆರೋಗ್ಯಕರ ಅಂಶಗಳಲ್ಲೇನೂ ಏರುಪೇರಾಗದು. ಇದಕ್ಕೆ ಸಕ್ಕರೆ, ಕ್ರೀಂ.. ಹೀಗೆ ನಿಮಗೆ ಯಾವುದು ಇಷ್ಟವೋ ಅದನ್ನು ಸೇರಿಸಿಕೊಂಡು ಕುಡಿಯಬಹುದು.

ಆದರೆ ಒಂದು ಅಂಶ ನೆನಪಿರಲಿ, ಸುವಾಸನೆಭರಿತ ಐಸ್‌ ಟೀ, ಟೀ ಡ್ರಿಂಕ್‌ ಮೊದಲಾದವುಗಳು ಪ್ಯಾಕ್‌ಗಳಲ್ಲಿ ದೊರೆಯುತ್ತಿದ್ದು, ಇವು ಹೆಚ್ಚು ಸಕ್ಕರೆ ಅಂಶವನ್ನು ಮಾತ್ರ ನಿಮ್ಮ ದೇಹಕ್ಕೆ ಸೇರಿಸುತ್ತವೆಯೇ ಹೊರತು ನೀವು ಅಂದುಕೊಂಡ ಆರೋಗ್ಯಕರ ಅಂಶಗಳನ್ನಲ್ಲ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು