ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿವಂತ ಧಾನ್ಯದ ಧ್ಯಾನದಲ್ಲಿ

Last Updated 19 ಜೂನ್ 2018, 17:29 IST
ಅಕ್ಷರ ಗಾತ್ರ

ಅನ್ನ, ರಾಗಿ, ಗೋಧಿ ಅಷ್ಟೇ ತಿಂದು ಗೊತ್ತಿದ್ದ ಜನಕ್ಕೆ ಈಗ ಸಿರಿ ಧಾನ್ಯಗಳನ್ನು ಸವಿಯುವ ಸಂಕ್ರಮಣ ಕಾಲ. ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು... ಹೆಸರೇ ಕೇಳಿರದ ಜನ ಈಗ ಸಿರಿಧಾನ್ಯಗಳನ್ನು ಮುಗಿಬಿದ್ದು ಖರೀದಿಗೆ ತೊಡಗಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮೇಳಗಳಲ್ಲಿ ಜನವೋ ಜನ. ಸಿರಿಧಾನ್ಯ ಅಡುಗೆ ರೆಸಿಪಿ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಸಿರಿಧಾನ್ಯಗಳು ಮಾಲ್‌ಗಳಿಗೂ ಲಗ್ಗೆ ಇಟ್ಟಿವೆ. ಧಾನ್ಯ ಮಾತ್ರವಲ್ಲ, ಹಿಟ್ಟು, ರವೆಗಳೂ ಸಿಗುತ್ತಿವೆ. ಇನ್ನು ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ, ಬರ್ಫಿ ಎಲ್ಲಾ ಬಗೆಯ ಸಿಹಿ ಮತ್ತು ಕುರುಕುರು ತಿಂಡಿಗಳೂ ನವಧಾನ್ಯಗಳಲ್ಲಿ ಲಭ್ಯವಿದೆ.

ಎಷ್ಟೇ ಔಷಧಿ ಸೇವಿಸದರೂ ಆರೋಗ್ಯ ವೃದ್ಧಿಯಾಗದಿರುವ ಜನಸಮೂಹ ಒಂದು ಕಡೆಯಾದರೆ, ಆರೋಗ್ಯವಂತರಾಗಿ ಬದುಕಬೇಕು ಎಂಬ ಕಾಳಜಿಯಿಂದ ನವಧಾನ್ಯಗಳ ಕಡೆ ಮುಖ ಮಾಡಿದೆ ಯುವ ಸಮೂಹ ಮತ್ತೊಂದು ಕಡೆ. ವರ್ಷಗಳಿಂದ ಬಳಸುತ್ತಿದ್ದ, ಗೋಧಿ, ಬಿಳಿ ಅಕ್ಕಿಗೆ ಗೇಟ್‌ಪಾಸ್‌ ನೀಡಲು ಎಲ್ಲ ವಯಸಿನವರೂ ಸಿದ್ಧರಾಗಿದ್ದಾರೆ. ಕೆಲವು ಹೋಟೆಲುಗಳೂ ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸುತ್ತಿವೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿಧಾನ್ಯಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸುವುದಕ್ಕೆ ಕೃಷಿ ಇಲಾಖೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದರೂ ರೈತರು ಧೈರ್ಯವಾಗಿ ಸಿರಿಧಾನ್ಯಗಳನ್ನು ಬೆಳೆಸಲು ಮುಂದಾಗುತ್ತಿಲ್ಲ ಎಂದು ಹಿಂದಿನ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿಕೊಂಡಿದ್ದರು. ಸಿರಿಧಾನ್ಯಗಳಿಗೆ ಮಾರುಕಟ್ಟೆ ಇಲ್ಲ ಎಂಬ ರೈತರ ಆತಂಕ ಗಮನಿಸಿದ ಅವರು, ಬೆಂಗಳೂರಿಗಿಂತ ದೊಡ್ಡ ಮಾರುಕಟ್ಟೆಯೇ ಇಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿ ಎರಡು ವರ್ಷ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಮೇಳಗಳನ್ನು ಆಯೋಜಿಸಿದ್ದರು.. ಈಗ ನಗರದಲ್ಲಿ ಅನೇಕ ಸಿರಿಧಾನ್ಯ ಮಾರಾಟ ಮಾಡುವ, ಪ್ರಚುರಪಡಿಸುವ, ಖಾದ್ಯ ತಯಾರಿಯ ಬಗ್ಗೆ ತರಬೇತಿ ನೀಡುವ, ಸಿರಿಧಾನ್ಯಗಳ ಸೇವನೆಯಿಂದ ಸಿಗುವ ಆರೋಗ್ಯ ಭಾಗ್ಯದ ಬಗ್ಗೆ ಮಾಹಿತಿ ನೀಡುವ ಅನೇಕ ಸಂಸ್ಥೆಗಳಿವೆ. ಸಿರಿಧಾನ್ಯ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಸಿರಿಧಾನ್ಯಗಳ ವ್ಯಾಪಾರ ಈಗ ಆಶಾದಾಯಕವೆನಿಸಿದೆ.

ಇತ್ತೀಚೆಗೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೂರು ದಿನಗಳ ಕಾಲ ‘ಗ್ರಾಮೀಣ ಕುಟುಂಬ’ ಆಯೋಜಿಸಿದ್ದ ಸಿರಿಧಾನ್ಯ ಮೇಳ ಇದಕ್ಕೆ ತಾಜಾ ಉದಾಹರಣೆ. ಒಂದು ಕಡೆ ನವಧಾನ್ಯ, ಅವುಗಳಿಂದ ತಯಾರಿಸಿದ ಖಾದ್ಯಗಳ ಮಾರಾಟ, ಮತ್ತೊಂದು ಕಡೆ ಸಿರಿಧಾನ್ಯಗಳ ಬಳಕೆ, ಅವುಗಳಿಂದ ಸಿಗುವ ಲಾಭ ಕುರಿತು ಮಾಹಿತಿ ನೀಡಲಾಯಿತು. ‘ಭೂಮಿಕಾ ಮಿಲ್ಲೆಟ್ಸ್‌’ ಮಳಿಗೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಹತ್ತಾರು ಬಗೆಯ ತಿನಿಸುಗಳನ್ನು ಸವಿದ ಜನ, ಅಡುಗೆ ಮಾಡುವ ವಿಧಾನವನ್ನೂ ಅರಿತುಕೊಂಡರು. ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ ನಗರದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸಿರಿಧಾನ್ಯ ಬಳಸುತ್ತಿರುವ ಅನೇಕರು ಮಧುಮೇಹ, ಗ್ಯಾಸ್ಟ್ರಿಕ್‌, ಬೊಜ್ಜಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಗಂಟು ನೋವು, ಊತ ಕೂಡಾ ಕಡಿಮೆಯಾಗಿದೆ ಎನ್ನುತ್ತಾರೆ.

ಗಮನಿಸಬೇಕಾದದ್ದು...

*ಸಿರಿಧಾನ್ಯಗಳನ್ನು ಅಡುಗೆ ಮಾಡುವುದಕ್ಕೂ ಮುನ್ನ ತೊಳೆದು ಕನಿಷ್ಠ ಎರಡು ಗಂಟೆ ನೀರಿನಲ್ಲಿ ನೆನೆಸಿ ನಂತರ ಬೇಯಿಸಬೇಕು. ಇದರಿಂದಾಗಿ ನಾರಿನಂಶ ಸಂಪೂರ್ಣವಾಗಿ ಸಿಗುತ್ತದೆ. ಆಹಾರದ ಪ್ರಮಾಣವೂ ಹೆಚ್ಚುತ್ತದೆ.

*ಕುಕ್ಕರ್‌ ಬಳಸದಿರುವುದು ಉತ್ತಮ. ಹಿತ್ತಾಳೆ ಅಥವಾ ಮಣ್ಣಿನ ಪಾತ್ರೆ ಬಳಸುವುದರಿಂದ ಖನಿಜಾಂಶ ಆಹಾರದೊಂದಿಗೆ ಸೇರುತ್ತದೆ.

*ಒಂದೇ ಬಗೆಯ ಸಿರಿಧಾನ್ಯ ಬಳಸುವುದಕ್ಕಿಂತ ಎರಡು ದಿನಗಳಿಗೊಂದು ಬಗೆಯ ಧಾನ್ಯ ಬಳಸಿ.

ಶ್ರೀಧರಮೂರ್ತಿ
ಶ್ರೀಧರಮೂರ್ತಿ

ಗಿರಣಿ ಸಮಸ್ಯೆಯಿಂದ ದುಬಾರಿ ದರ

ಸಿರಿಧಾನ್ಯಗಳಿಗೆ ಬೆಲೆ ಹೆಚ್ಚು ಎಂಬುದು ನಿಜ. ಕರ್ನಾಟಕದಲ್ಲಿ ಧಾನ್ಯ ಬಿಡಿಸುವ ಆಧುನಿಕ ಗಿರಣಿಗಳು ಇಲ್ಲ. ಇಲ್ಲಿರುವ ಗಿರಣಿಗಳಸಾಮರ್ಥ್ಯ ಗಂಟೆಗೆ ಕೇವಲ 100–200 ಕೆ.ಜಿ. ಆದರೆ, ತಮಿಳುನಾಡಿನಲ್ಲಿ ಅತ್ಯಾಧುನಿಕ ಗಿರಣಿಗಳಿವೆ. ಅಲ್ಲಿ ಗಂಟೆಗೆ 20–30 ಟನ್‌ ಸಾಮರ್ಥ್ಯದ ಗಿರಣಿಗಳಿವೆ. ಹೀಗಾಗಿ ಅಲ್ಲಿನ ಗಿರಣಿ ಮಾಲೀಕರು ಇಲ್ಲಿಗೆ ಬಂದು ಧಾನ್ಯ ಖರೀದಿ ಮಾಡಿ ಅಲ್ಲಿಗೆ ಕೊಂಡೊಯ್ದು ಗಿರಣಿ ಮಾಡಿ ಮತ್ತೆ ಇಲ್ಲಿಗೆ ತಂದು ಮಾರುತ್ತಾರೆ. ಹೀಗಾಗಿ ಸಿರಿಧಾನ್ಯ ದರ ಮೂರು ಪಟ್ಟು ಹೆಚ್ಚಾಗಿದೆ. ಈ ಐದು ವರ್ಷಗಳಲ್ಲಿ ಸಿರಿಧಾನ್ಯ ಬಳಕೆದಾರರ ಸಂಖ್ಯೆ ಶೇ 60ರಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಗಿರಣಿಗಳನ್ನು ಸ್ಥಾಪನೆ ಮಾಡಿದರೆ ಅಕ್ಕಿ, ಗೋಧಿ ದರದಲ್ಲಿಯೇ ಸಿರಿಧಾನ್ಯಗಳು ಸಿಗಲಿವೆ.

–ಶ್ರೀಧರಮೂರ್ತಿ, ‘ಗ್ರಾಮೀಣ ಕುಟುಂಬ’ ಸಿರಿಧಾನ್ಯ ಮಳಿಗೆ, ವಿಜಯನಗರ, ಬೆಂಗಳೂರು

ಡಾ. ಖಾದರ್
ಡಾ. ಖಾದರ್

ಡಾ. ಖಾದರ್‌ ಎಂಬ ‘ಮಿಲ್ಲೆಟ್‌ ಮ್ಯಾನ್‌’

ಸಿರಿಧಾನ್ಯ ಬಳಸಲು ಪ್ರೇರಣೆ ಏನು ಎಂಬ ಪ್ರಶ್ನೆಗೆ ಬಹುತೇಕರ ಉತ್ತರ ‘ಡಾ. ಖಾದರ್’. ಹೌದು, ಸಿರಿಧಾನ್ಯಗಳ ಕುರಿತು ಜನಜಾಗೃತಿ ಮೂಡಿಸುತ್ತಿರುವ ಖಾದರ್‌ ಆಹಾರ ವಿಜ್ಞಾನಿ. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕುಳಿತು ಸಂಶೋಧನೆ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಹೊರಬಂದು ರೈತರ ಜೊತೆ ಬೆರೆತು ಕಾಡು ಕೃಷಿ, ಸಿರಿಧಾನ್ಯ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಡಾ.ಖಾದರ್‌ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಟೆರಾಯಿಡ್ಸ್‌ ಮೇಲೆ ಸಂಶೋಧನೆ ಮಾಡಿ ಪಿಎಚ್.ಡಿ ಪಡೆದರು. ನಂತರ ಅಮೆರಿಕದ ಒರೆಗನ್‌ ಕಂಪೆನಿಯಲ್ಲಿ ನಾಲ್ಕು ವರ್ಷ ‘ಪರ್ಯಾವರಣ ವಿಷ ಪದಾರ್ಥಗಳ ಉಳಿಕೆ’ ಕುರಿತು ಸಂಶೋಧನೆ ನಡೆಸಿ, ಅಲ್ಲಿನ ‘ಡ್ಯೂಪಾಂಟ್‌’ ಕಂಪೆನಿಯಲ್ಲಿ ಆಹಾರ ವಿಜ್ಞಾನಿಯಾಗಿ ಐದು ವರ್ಷ ದುಡಿದಿದ್ದಾರೆ. ನಂತರ ಮೈಸೂರಿನ ಕೇಂದ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾಲಯದ ನ್ಯೂಟ್ರೀಷನ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು.ಸದ್ಯ ಆಧುನಿಕ ಆಹಾರ ಪದ್ಧತಿಯ ಅಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಸಿರಿಧಾನ್ಯಗಳ ಬಗ್ಗೆ ನಗರದ ಜನ ಆಸಕ್ತಿ ತೋರಲು ಖಾದರ್ ಅವರ ಶ್ರಮ ಮಹತ್ವದ್ದು.

* ಒಂದು ವರ್ಷದಿಂದ ಸಿರಿಧಾನ್ಯಗಳೇ ನಮ್ಮ ಆಹಾರ. ಅದರಲ್ಲೂ ಸಾಮೆ ಅಕ್ಕಿ ಹೆಚ್ಚು ಬಳಸುತ್ತೇನೆ. ಟೊಮೆಟೊ ಬಾತ್‌, ಕಿಚಡಿ, ಬಿಸಿಬೇಳೆ ಬಾತ್‌, ಮೊಸರನ್ನ ಎಲ್ಲಕ್ಕೂ ಇದನ್ನೇ ಬಳಸ್ತೇನೆ. ನಾರಿನಾಂಶ ಹೆಚ್ಚು ಇರುವ ಕಾರಣ ಜೀರ್ಣಶಕ್ತಿ ಹೆಚ್ಚುತ್ತದೆ. ದೇಹ ಹಗುರ ಎನಿಸುತ್ತದೆ.
–ಡಾ. ಪ್ರಿಯಾಂಕ, ದಂತವೈದ್ಯೆ, ಜಯನಗರ

* ಖಾದರ್‌ ಅವರ ಭಾಷಣಗಳನ್ನು ಕೇಳಿ ಸಿರಿಧಾನ್ಯ ಬಳಸುವುದಕ್ಕೆ ಶುರು ಮಾಡಿದೆ.ನಂತರ ಅಕ್ಕಿಯ ಬಳಕೆ ಕೇವಲ ಶೇ 20ರಷ್ಟಕ್ಕೆ ಇಳಿದಿದೆ. ದುಬೈಯಲ್ಲಿ ಪೈಲಟ್‌ ಆಗಿರುವ ಮಗಇಲ್ಲಿಂದ ಸಿರಿಧಾನ್ಯ ಕೊಂಡೊಯ್ದು ಬಳಸುತ್ತಿದ್ದಾನೆ.
–ರಜನಿ, ಷೇರು ಕಂಪನಿ ಉದ್ಯೋಗಿ, ಇಂದಿರಾನಗರ

* ಆರು ವರ್ಷಗಳ ಹಿಂದೆ ನನಗೆ ಮಧುಮೇಹ ಇರುವುದು ಗೊತ್ತಾಯಿತು. ಸಿರಿಧಾನ್ಯ ಬಳಸುವುದನ್ನು ಶುರು ಮಾಡಿದ ನಂತರ ಶೂಟಿಂಗ್‌ಗೆ ಹೋಗುವಾಗಲೂ ಎಲೆಕ್ಟ್ರಿಕ್‌ ಸ್ಟೌ ಇಟ್ಟುಕೊಂಡಿರುತ್ತೇನೆ. ಮಧುಮೇಹದಿಂದ ದೇಹಕ್ಕೆ ಘಾಸಿಯಾಗದಂತೆ ಕಾಪಾಡಿಕೊಂಡಿದ್ದೇನೆ.
–ಬಿ.ಸುರೇಶ, ಚಲನಚಿತ್ರ ನಿರ್ದೇಶಕ

* ಬಹಳ ವರ್ಷಗಳಿಂದ ಮಧುಮೇಹದಿಂದ ಬಳಲಿದ್ದೆ. ಎಷ್ಟೇ ಔಷಧಿ ತೆಗೆದು ಕೊಂಡರೂ ಹತೋಟಿಗೆ ಬರುತ್ತಿರಲಿಲ್ಲ. ಸಿರಿಧಾನ್ಯಗಳನ್ನು ಬಳಸುವ ಬಗ್ಗೆ ಅನೇಕರು ಸಲಹೆ ನೀಡಿದರು. ಒಂದೂವರೆ ವರ್ಷಗಳಿಂದ ಸಿರಿಧಾನ್ಯ ಬಳಸುತ್ತಿದ್ದೇನೆ. ಈಗ ಇನ್ಸುಲಿನ್‌ ನಿಲ್ಲಿಸಿದ್ದೇನೆ. ಮಾತ್ರೆಯೂ ಕಡಿಮೆ ಮಾಡಿದ್ದೇನೆ. ಅಡ್ಡ ಪರಿಣಾಮ ಕಡಿಮೆಯಾಗಿದೆ.

–ಇಂದೂಧರ ಹೊನ್ನಾಪುರ, ಪತ್ರಕರ್ತ

* ನನಗೂ, ಪತಿಗೂ ಇಬ್ಬರಿಗೂ ವಾಯು ದೋಷ ಇತ್ತು. ‘ಸುಧಾ’ ವಾರಪತ್ರಿಕೆಯಲ್ಲಿ ಸಿರಿಧಾನ್ಯಗಳ ಕುರಿತು ಸಮಗ್ರ ಮಾಹಿತಿ ಪ್ರಕಟವಾಗಿತ್ತು. ನಂತರ ಪ್ರತಿ ರಾತ್ರಿ ಸಿರಿಧಾನ್ಯದ ಆಹಾರ ತಿನ್ನುವುದು ಅಭ್ಯಾಸ ಮಾಡಿಕೊಂಡೆವು. ಈಗ ವಾಯುದೋಷ ಕಡಿಮೆಯಾಗಿದೆ.
–ಸುಮನಾ, ಪಿಡಬ್ಯ್ಲೂಡಿ ಇಲಾಖೆ ಉದ್ಯೋಗಿ

*ಕಾಯಿಲೆ ಬಂದ ಮೇಲೆ ಆಸ್ಪತ್ರೆಗೆ ಹಣ ಸುರಿಯುವ ಬದಲು ಸಿರಿಧಾನ್ಯ ತಿಂದು ಆರೋಗ್ಯವಂತರಾಗುವತ್ತ ನಗರದ ಜನ ಮನಸು ಮಾಡಿದ್ದಾರೆ. ಸಿರಿಧಾನ್ಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ನವಣೆ, ಸಾಮೆ,ಸಜ್ಜೆ, ಊದಲು ತಿಂದು ವಾಯುದೋಷ, ಮಧುಮೇಹ, ರಕ್ತದೊತ್ತಡ ಸಮಸ್ಯೆ ಹತೋಟಿಗೆ ಬಂದಿದೆ ಎಂದು ಅನೇಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT