ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟಿಕೈನ ಉಪ್ಪಿನಕಾಯಿ!

ಲೆಮನ್‌ ಚಾಟ್‌ನಿಂದ ಉಪ್ಪಿನಕಾಯಿವರೆಗೆ..
Last Updated 2 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದ ಶಶಿಕಲಾ ಮತ್ತು ಶಾಂತರಾಮ ಹೆಗಡೆಯವರದ್ದು ಕೃಷಿ ಕುಟುಂಬ. ಒಂದು ಎಕರೆ ಜಮೀನಿದೆ. ಅದರಲ್ಲಿ ಅಡಿಕೆ, ಕಾಳುಮೆಣಸು, ಏಲಕ್ಕಿಯನ್ನು ಬೆಳೆಯುತ್ತಾರೆ. ಹಲವು ಬಗೆಯ ಹಣ್ಣಿನ ಗಿಡಗಳಿವೆ. ಇಷ್ಟಿದ್ದರೂ ಕೃಷಿಯಿಂದ ಆದಾಯ ಕಡಿಮೆ. ಜೀವನ ನಡೆಸುವುದು ಕಷ್ಟವಾಗುತ್ತಿತ್ತು. ‘ಕೃಷಿ ಜತೆಗೆ, ಕೃಷಿಗೆ ಪೂರಕವಾದ ಸ್ವ-ಉದ್ಯೋಗ ಮಾಡಬೇಕು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು’ ಎಂಬುದು ಶಶಿಕಲಾ ಅವರ ಮನದಲ್ಲಿ ತುಡಿಯುತ್ತಿದ್ದ ವಿಚಾರ.

ಒಮ್ಮೆ ಮನೆಯಲ್ಲಿ ನಿಂಬೆಹಣ್ಣಿನ ಸಿಪ್ಪೆ (ರಸ ಹಿಂಡಿದ ನಂತರ ಉಳಿಯುವ ಹೋಳು) ಕಂಡಾಗ, ‘ಇದನ್ನೇಕೆ ವ್ಯರ್ಥ ಮಾಡಬೇಕು. ಇದನ್ನು ಬಳಸಿಕೊಂಡು ಏನಾದರೂ ಮಾಡಬಹುದೇ’ ಎಂದು ‌ಚಿಂತಿಸಿದರು. ಮನೆಯವರಲ್ಲಿ, ಆತ್ಮೀಯರಲ್ಲಿ ಈ ಚಿಂತನೆ ಹಂಚಿಕೊಂಡರು. ಆಗ ಹೊರಬಂದ ಐಡಿಯಾವೇ ‘ಲೆಮನ್‌ ಚಾಟ್‌’ ತಯಾರಿಕೆ. ನಿಂಬೆಹಣ್ಣಿನ ಸಿಪ್ಪೆಯನ್ನು ಚೂರು ಚೂರು ಮಾಡಿ, ಬಿಸಿಲಿನಲ್ಲಿ ಒಣಗಿಸುವುದು. ಬೇಡಿಕೆ ಬಂದಾಗ, ಒಣಗಿದ ನಿಂಬೆ ಚೂರುಗಳಿಗೆ ಮಸಾಲೆ ಲೇಪಿಸಿ, ಪ್ಯಾಕಿಂಗ್ ಮಾಡಿ ಮಾರಾಟ ಮಾಡುವುದು. ಇದೇ ‘ಲೆಮನ್ ಚಾಟ್‌’.

2004ರಲ್ಲಿ ಈ ಪ್ರಯೋಗ ಮಾಡಿದ್ದು. ಆಗ ಮೊದಲು ಮನೆಯವರು, ಮನೆಗೆ ಬಂದ ನೆಂಟರಿಷ್ಟರಿಗೆ ರುಚಿ ತೋರಿಸಿದರು. ಸುತ್ತಲಿನವರಿಗೆ ಚಾಟ್‌ ತಿನ್ನಿಸಿದರು. ಎಲ್ಲರೂ ತುಂಬಾ ಇಷ್ಟಪಟ್ಟರು. ‌ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ನಂತರ ನಿಂಬೆಯ ಸಿಪ್ಪೆಯ ಬದಲಾಗಿ ಹೋಳುಗಳನ್ನು ಒಣಗಿಸಿ, ಮಸಾಲೆ ತುಂಬಿ ಚಾಟ್‌ ತಯಾರಿಸಿದರು. ಅದನ್ನು ಸ್ಥಳೀಯ ಅಂಗಡಿಗಳಿಗೆ ಕೊಟ್ಟು ನೋಡಿದರು. ಒಮ್ಮೆ ಕಾರವಾರದಲ್ಲಿ ನಡೆದ ಶಿಬಿರವೊಂದರಲ್ಲಿ ಭಾಗವಹಿಸಿದ್ದ ಶಶಿಕಲಾ, ಶಿಬಿರಾರ್ಥಿಗಳಿಗೂ ಲೆಮೆನ್‌ಚಾಟ್ ರುಚಿ ತೋರಿಸಿದರು. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹಲವಾರು ಬಗೆಯ ಸಲಹೆ ಸೂಚನೆಗಳೂ ಸಿಕ್ಕವು. ಮುಂದೆ ಸ್ವಸಹಾಯ ಸಂಘಕ್ಕೆ ಹೋಗುತ್ತಾ ಚಾಟ್‌ ರುಚಿ ಹೆಚ್ಚಿಸುವುದನ್ನು ಕಲಿತರು.

ಚಾಟ್‌ನಿಂದ ಉಪ್ಪಿನಕಾಯಿಯತ್ತ..

ಈ ‘ಲೆಮನ್ ಚಾಟ್‌’ನಂತಹ ಇನ್ನಷ್ಟು ವಿಭಿನ್ನವಾದ ತಿನಿಸುಗಳನ್ನು ತಯಾರಿಸಿದರೆ, ಮಾರುಕಟ್ಟೆ ವಿಸ್ತರಿಸಬಹುದು’ ಎಂದು ಆಲೋಚನೆ ಶಶಿಕಲಾ ಅವರಿಗೆ ಹೊಳೆಯಿತು. ಪತಿ ಶಾಂತರಾಮ ಹೆಗಡೆ, ಮಗ ಅವಿನಾಶ ಹೆಗಡೆ ಕೂಡ ಅವರ ಹೊಸ ‘ಸಾಹಸ’ಕ್ಕೆ ಸಹಕಾರ ನೀಡಿದರು. ಇವರೆಲ್ಲರ ಪ್ರೋತ್ಸಾಹದೊಂದಿಗೆ 2006 ರಲ್ಲಿ ‘ಉಪ್ಪಿನ ಕಾಯಿ ಗೃಹೋದ್ಯಮ’ ಆರಂಭವಾಯಿತು.

ಲೆಮನ್‌ಚಾಟ್‌, ಲೆಮನ್‌ ಉಪ್ಪಿನಕಾಯಿ ತಯಾರಿಕೆಗೆ ಉತ್ತೇಜಿಸಿತು. ಮುಂದೆ, ಮಾವಿನ ಮಿಡಿ ಉಪ್ಪಿನಕಾಯಿ ಸಿದ್ಧವಾಯಿತು. ಶಶಿಕಲಾ ಅವರು ಮಾವಿನ ಮಿಡಿ ಹಾಗೂ ನಿಂಬೆಯಿಂದ ಎರಡು ಬಗೆಯ ಉಪ್ಪಿನಕಾಯಿ ತಯಾರಿಸುತ್ತಾರೆ. ‘ಒಂದೂವರೆ ಕ್ವಿಂಟಲ್‍ನಿಂದ ಶುರುವಾದ ಇವರ ಉಪ್ಪಿನಕಾಯಿ ಉದ್ಯಮ ಇಂದು ವಿಸ್ತಾರವಾಗಿ ಬೆಳೆದಿದೆ. ಅದರಲ್ಲಿಯೂ ಜೀರಿಗೆ ಉಪ್ಪಿನಕಾಯಿಗೆ ಉತ್ತಮ ಬೇಡಿಕೆಯಿದೆ’ ಎನ್ನುತ್ತಾರೆ ಶಶಿಕಲಾ. ಒಂದು ಸೀಜನ್‌ಗೆ ಸುಮಾರು ಮೂರು ಲಕ್ಷದಷ್ಟು ಮಿಡಿ ಮಾವಿನಕಾಯಿಯನ್ನು ಖರೀದಿಸಿ ಜೋಪಾನ ಮಾಡಿಕೊಳ್ಳುತ್ತಾರಂತೆ.

ಮನೆಯಲ್ಲಿ ಉದ್ಯಮ

ತಮ್ಮ ಮನೆಯ ಪಕದಲ್ಲೇ ಈ ಗೃಹ ಉದ್ಯಮ ನಡೆಸುತ್ತಿದ್ದಾರೆ. ಪಕ್ಕದ ಜಾಗದಲ್ಲಿ ಉಪ್ಪಿನಕಾಯಿ, ಲೆಮನ್‌ ಚಾಟ್‌ ತಯಾರಾಗುತ್ತದೆ. ಜೊತೆಗೆ ಪುಟ್ಟದಾದ ಪಾಲಿಹೌಸ್‌ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ನಿಂಬೆ ಚೂರುಗಳನ್ನು ಒಣಗಿಸಲು ಇದು ಅನುಕೂಲವಾಗಿದೆ. ಪ್ಯಾಕಿಂಗ್ ಮಾಡುವುದಕ್ಕಷ್ಟೇ ಚಿಕ್ಕ ಯಂತ್ರವನ್ನಿಟ್ಟುಕೊಂಡಿದ್ದಾರೆ. ಉಳಿದಂತೆ, ಎಲ್ಲ ಕೆಲಸವನ್ನು ಸಾಮಾನ್ಯವಾಗಿ ಗ್ರೈಂಡರ್, ಮಿಕ್ಸರ್ ಬಳಸಿಯೇ ತಯಾರಿಸುತ್ತಾರೆ. ಉಪ್ಪಿನಕಾಯಿ ಮತ್ತಿತರ ಗೃಹ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದಿಂದ ಪರವಾನಗಿ ಪಡೆದಿದ್ದಾರೆ.

ಒಂದು ಎಕರೆಯ ತೋಟದಲ್ಲಿ ತಮ್ಮ ಉದ್ಯಮಕ್ಕೆ ಪೂರಕವಾಗಿರುವ ನಿಂಬೆಹಣ್ಣು ಮತ್ತು ಮಿಡಿ ಮಾವಿನಕಾಯಿ ಬೆಳೆಯುತ್ತಾರೆ. ಜತೆಗೆ, ಸ್ಥಳೀಯ ರೈತರಿಂದಲೂ ಖರೀದಿಸುತ್ತಾರೆ. ಒಂದೊಮ್ಮೆ ಸಾಕಾಗದಿದ್ದರೆ ಮಾತ್ರ ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಹೀಗಾಗಿ, ಇವರ ಗೃಹ ಉದ್ಯಮದಿಂದ ಸುತ್ತಲಿನ ರೈತರಿಗೆ ತಕ್ಕಮಟ್ಟಿಗೆ ಅನುಕೂಲವಾಗಿದೆ.

ಸ್ಥಳೀಯ ಮಾರುಕಟ್ಟೆ

ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ‘ಪೃಥ್ವಿ ಪಿಕಲ್ಸ್‌’ ಬ್ರಾಂಡ್‌ನಲ್ಲಿ ಶಿರಸಿ, ಸಿದ್ದಾಪುರದ ಹಲವಾರು ಅಂಗಡಿಗಳಿಗೆ ಕೊಡುತ್ತಾರೆ. ಶಿವಮೊಗ್ಗ ಜಿಲ್ಲೆ ಸಾಗರ, ಧಾರವಾಡ, ಬೆಂಗಳೂರು.. ಹೀಗೆ ಬೇರೆ ಬೇರೆ ನಗರಗಳಿಗೂ ಕಳಿಸಿಕೊಡುತ್ತಾರೆ ‘ವರ್ಷಕ್ಕೆ ಸುಮಾರು 25 ಕ್ವಿಂಟಲ್‍ನಷ್ಟು ಉಪ್ಪಿನಕಾಯಿ ಮಾರಾಟ ಮಾಡುತ್ತೇವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಶಿಕಲಾ ಹೆಗಡೆ.

‘ತಟ್ಟಿಕೈ ಕುಟುಂಬದವರು ತಯಾರಿಸುವ ಉಪ್ಪಿನಕಾಯಿ ಬಹಳ ರುಚಿಯಾಗಿದೆ. ಆರು ವರ್ಷಗಳಿಂದ ಇದನ್ನು ನಮ್ಮ ಸಾಮ್ರಾಟ್‌ ಹೋಟೆಲ್‌ನಲ್ಲಿ ಬಳಸುತ್ತಿದ್ದೇವೆ. ಉಪ್ಪಿನಕಾಯಿ ರುಚಿ ನೋಡಿದವರು, ಇದು ಎಲ್ಲಿ ಸಿಗುತ್ತದೆ ಎಂದು ಕೇಳುತ್ತಾರೆ’ ಎನ್ನುತ್ತಾರೆ ಹೋಟೆಲ್‌ ಉದ್ಯಮಿ ಗೋಳಿಕೊಪ್ಪದ ಎಂ.ಕೆ.ಹೆಗಡೆ.

ಉತ್ತರ ಕನ್ನಡ ಜಿಲ್ಲೆ ಹಾಗೂ ಸಾಗರದಲ್ಲಿ ನಮ್ಮ ಉತ್ಪನ್ನಗಳು ಅತ್ಯಧಿಕ ಮಾರಾಟವಾಗುತ್ತವೆ. ನಮಗೆ ಬೇಡಿಕೆ ಪೂರೈಸುವುದೇ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಅವಿನಾಶ ಹೆಗಡೆ.

‘ಹೆಗಡೆ ಹೋಂ ಪ್ರಾಡಕ್ಟ್‌’

ಉಪ್ಪಿನಕಾಯಿ ಜತೆಗೆ, ಅಪ್ಪೆಹುಳಿ ಮಿಕ್ಸ್, ಬೂತ್‍ಗೊಜ್ಜು ಸಹಾ ತಯಾರಿಸುತ್ತಾರೆ. ಇವರಲ್ಲಿ ಸಿದ್ಧಗೊಳ್ಳುವ ಲೆಮನ್ ಚಾಟ್‍ಗೆ ಉತ್ತಮವಾದ ಮಾರುಕಟ್ಟೆಯಿದೆ. ಇದನ್ನು ‘ಹೆಗಡೆ ಹೋಂ ಪ್ರಾಡಕ್ಟ್‌’ ಹೆಸರಲ್ಲಿ ಮಾರಾಟ ಮಾಡುತ್ತಾರೆ.

ಈ ಗೃಹ ಉದ್ಯಮಕ್ಕೆ ಶಶಿಕಲಾ ಅವರ ಜತೆ ಇಡೀ ಕುಟುಂಬವೇ ಬೆನ್ನೆಲುಬಾಗಿ ನಿಂತಿದೆ. ಜತೆಗೆ, ನಿತ್ಯ ಮೂವರು ಕಾರ್ಮಿಕರಿಗೆ ಕಾಯಂ ಕೆಲಸ ನೀಡಿದ್ದಾರೆ.

ಕೃಷಿ ಭೂಮಿ ಕಡಿಮೆ ಇದ್ದರೂ, ಇರುವ ಜಾಗದಲ್ಲೇ ಗೃಹ ಉದ್ಯಮ ನಡೆಸುತ್ತಾ ಸ್ವಾವಲಂಬಿಯಾಗಿ ಬದುಕು ಸಾಗಿಸಬಹುದು. ಕೆಲಸದಲ್ಲಿ ಶ್ರದ್ಧೆ, ಮನೆಯವರಲ್ಲರೂ ಕೈ ಜೋಡಿಸಿ ಒಟ್ಟಾಗಿ ದುಡಿದರೆ, ಇಂಥ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎನ್ನುವುದು ಶಶಿಕಲಾ ಕುಟುಂಬದ ಅಭಿಪ್ರಾಯ. ಗೃಹೋದ್ಯಮದ ಕುರಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆ – 9343745588 / 9900544202.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT