ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್‌ ಅಡುಗೆ ಚಾನೆಲ್‌ನಲ್ಲಿ ಜನಪ್ರಿಯತೆ, ಆರ್ಥಿಕತೆ ಎಲ್ಲವೂ ಇವೆ

ಯೂಟ್ಯೂಬ್‌ ಅಡುಗೆ ಚಾನೆಲ್‌ನಲ್ಲಿ
Last Updated 19 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಅಡುಗೆ ಕಲಿಯುವುದು ಈಗ ಸುಲಭ. ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿನ ನೂರಾರು ಚಾನೆಲ್‌ಗಳು ನಮ್ಮ ಅಡುಗೆ ಕಲಿಯುವ ಉತ್ಸಾಹಕ್ಕೆ ನೀರೆರೆಯುತ್ತಿವೆ. ಹಿಂದೆಲ್ಲಾ, ಟಿ.ವಿ.ಗಳಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬರುತ್ತಿದ್ದ ಅಡುಗೆ ಕಾರ್ಯಕ್ರಮಕ್ಕೆ ಕೈಯಲ್ಲಿ ಪೇಪರ್‌, ಪೆನ್ನು ಹಿಡಿದು ಕಾಯುತ್ತಾ ಕೂರುತ್ತಿದ್ದೆವು. ಈಗ ಬೆರಳ ತುದಿಗೆ ಸಾವಿರಾರು ರೆಸಿಪಿಗಳು ಸಾಲುಗಟ್ಟಿವೆ.

ಲಾಕ್‌ಡೌನ್‌ ಸಮಯದಲ್ಲಿ ಅಡುಗೆ ಚಾನೆಲ್‌ಗಳ ಸಂಖ್ಯೆ ಒಂದೇ ಸಮನೆ ಹೆಚ್ಚಾಯಿತು. ಇದಕ್ಕೆ ಕಾರಣಗಳು ಹಲವಾರು. ಮನೆಯೊಳಗೇ ಇದ್ದ ಜನ ಶುಚಿಯಾದ, ರುಚಿಯಾದ ಅಡುಗೆಗಳ ಕಡೆ ಮುಖ ಮಾಡಿದರು. ಹೊಸ ರುಚಿ, ಸಾಂಪ್ರದಾಯಿಕ ಅಡುಗೆ ಎಂದೆಲ್ಲ ಸಂಭ್ರಮಿಸಿದರು. ಲಭ್ಯವಿರುವ ಸಾಮಗ್ರಿಗಳಿಂದ, ಬಹಳ ಕಡಿಮೆ ಸಮಯದಲ್ಲೇ ರುಚಿಕರ ಅಡುಗೆ ತಯಾರಿಸುವ ಕಡೆಗೆ ಜನರು ಹೆಚ್ಚು ಆಸಕ್ತರಾದರು. ಅಂತರ್ಜಾಲದಲ್ಲಿ ತಡಕಾಡುತ್ತಲೇ ಶೆಲ್ಫ್‌ಗಳಲ್ಲಿರುವ ಅಡುಗೆ ಸಾಮಗ್ರಿಗಳನ್ನು ಹೊಂದಿಸಿಕೊಂಡರು; ಯೂಟ್ಯೂಬ್‌ ಚಾನೆಲ್‌ ನೋಡುತ್ತ ತರಕಾರಿ ಹೆಚ್ಚತೊಡಗಿದರು. ಈ ಅವಶ್ಯಕತೆಗೆ ತಕ್ಕಂತೆ ಹಲವು ಯೂಟ್ಯೂಬ್‌ ಚಾನೆಲ್‌ಗಳು ಹುಟ್ಟಿಕೊಂಡವು. ಹೊಸ ಚಾನೆಲ್‌ಗಳ ಜೊತೆಗೆ ಲಾಕ್‌ಡೌನ್‌ಗೂ ಮುಂಚೆಯೇ ಪ್ರಾರಂಭಿಸಿದ್ದ ಚಾನೆಲ್‌ಗಳಿಗೂ ಹೆಚ್ಚು ಹೆಚ್ಚು ವ್ಯೂಸ್‌ ಬಂದವು.

ಹೆಚ್ಚು ವ್ಯೂಸ್‌

‘ಲಾಕ್‌ಡೌನ್‌ ಆಗುವುದಕ್ಕೂ ಮೊದಲೇ ನಾನು ಚಾನೆಲ್‌ ಪ್ರಾರಂಭಿಸಿದ್ದೆ. ಆದರೆ, ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚು ವ್ಯೂಸ್‌ ಬಂದವು. ನನ್ನ ಅಡುಗೆ ವಿಡಿಯೊಗಳು ಹೆಚ್ಚು ಶೇರ್‌ ಕೂಡ ಆದವು’ ಎನ್ನುತ್ತಾರೆ ‘ಮನೆ ಅಡುಗೆ ವಿಥ್‌ ವೇದಾ’ ಎನ್ನುವ ತಮ್ಮದೇ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ವೇದಾವತಿ ಎಚ್‌.ಎಸ್‌. ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವೂ ಇದೆ. ‘ಲಾಕ್‌ಡೌನ್‌ನಲ್ಲಿ ಬರುತ್ತಿದ್ದ ವ್ಯೂಸ್‌ಗೆ ಹೋಲಿಸಿದರೆ, ಈಗ ಬರುತ್ತಿರುವ ವ್ಯೂಸ್‌ ಅಷ್ಟಿಲ್ಲ. ಜನರು ಈಗ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ’ ಎನ್ನುತ್ತಾರೆ ‘ರಂಜುಸ್‌ ಹೋಮ್ಲಿ ಫುಡ್‌’ ಅಡುಗೆ ಚಾನೆಲ್‌ ನಡೆಸುತ್ತಿರುವ ರಂಜಿತ ಎನ್‌. ಶೆಟ್ಟಿ.

ಲಾಕ್‌ಡೌನ್‌ ಸಮಯದಲ್ಲಿ ಹಲವು ಮಹಿಳೆಯರು ಹವ್ಯಾಸಕ್ಕಾಗಿ ಚಾನೆಲ್‌ ಪ್ರಾರಂಭಿಸಿದರು. ಜನರ ಪ್ರತಿಕ್ರಿಯೆ, ವ್ಯೂಸ್‌ ಬಂದ ಕಾರಣ, ಅನ್‌ಲಾಕ್‌ ಬಳಿಕ ಇದನ್ನೇ ಉದ್ಯೋಗವಾಗಿಸಿಕೊಂಡರು. ಕೆಲವರು ಹೆಚ್ಚು ಹೂಡಿಕೆ ಮಾಡಿ, ಉತ್ತಮ ಗುಣಮಟ್ಟದ ಕ್ಯಾಮೆರಾ, ಪಾತ್ರೆ ಖರೀದಿ, ವಿಡಿಯೊಗಳ ಎಡಿಟಿಂಗ್‌ಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳಿಗೆ ಗಮನ ನೀಡಿದರು. ಕೆಲವರು ಇದರೊಂದಿಗೆ ಕೇಟರಿಂಗ್‌ ಕೂಡ ಪ್ರಾರಂಭಿಸಿದರು.

ತಂತ್ರಜ್ಞಾನದ ಮಾಹಿತಿಯೂ ಮುಖ್ಯ

ಚಾನೆಲ್‌ ಪ್ರಾರಂಭಿಸುವುದು ಎಂದರೆ ಸುಲಭದ ಮಾತಲ್ಲ. ಹಲವು ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತಂತ್ರಜ್ಞಾನದ ಮಾಹಿತಿಯೂ ಬೇಕಾಗುತ್ತದೆ.

‘ನಮ್ಮದೇ ಚಾನೆಲ್‌ ಪ್ರಾರಂಭಿಸಲು ಎಡಿಟಿಂಗ್‌ ಸಹ ಬಹುಮುಖ್ಯ ಪಾತ್ರ ವಹಿಸುತ್ತದೆ. ಜನರನ್ನು ಸೆಳೆಯಲು ಇದೂ ಕೂಡ ಅತ್ಯಂತ ಮುಖ್ಯ’ ಎನ್ನುತ್ತಾರೆ ವೇದಾವತಿ. ‘ನಮ್ಮ ವಿಡಿಯೊಗಳನ್ನು ಎಡಿಟ್ ಮಾಡಲು ತುಂಬಾ ಹಣ ಖರ್ಚು ಮಾಡಬೇಕಾಗಿಲ್ಲ. ಮೊಬೈಲ್‌ಗಳಲ್ಲೇ ಉತ್ತಮ ಎಡಿಟಿಂಗ್‌ ಆ್ಯಪ್‌ಗಳು ಸಿಗುತ್ತವೆ. ಕ್ಯಾಮೆರಾ ಕೆಲಸವನ್ನೂ ನಮ್ಮ ಮೊಬೈಲ್‌ಗಳೇ ಮಾಡುತ್ತವೆ’ ಎನ್ನುತ್ತಾರೆ ರಂಜಿತ.

ವಿಡಿಯೊಗಳು ತುಂಬಾ ಉದ್ದ ಇರಬಾರದು ಎನ್ನುವುದು ಹಲವರ ಅಭಿಪ್ರಾಯ. ಆದಷ್ಟು 5 ನಿಮಿಷದೊಳಗೇ ನಮ್ಮ ಅಡುಗೆಯನ್ನು ತೋರಿಸಬೇಕು. ಇದು ಸವಾಲಿನ ಕೆಲಸವೂ ಹೌದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ವೇದಾವತಿ ಹಾಗೂ ರಂಜಿತ.

‘ಚಾನೆಲ್ ಪ್ರಾರಂಭಿಸಲು ತುಂಬಾ ತಾಳ್ಮೆ ಬೇಕು. ನಾಳೆಗೆ ವ್ಯೂಸ್‌ ಸಿಗುತ್ತವೆ ಎಂದಲ್ಲ. ಹಾಗೆಯೇ ಹೆಚ್ಚು ಬಂಡವಾಳ ಹೂಡಿಕೆ ಮಾಡಿ ಚಾನೆಲ್‌ ಪ್ರಾರಂಭಿಸಲು ಮುಂದಾಗಬಾರದು. ವ್ಯೂಸ್, ಶೇರ್‌, ಜನರ ಪ್ರತಿಕ್ರಿಯೆ ನೋಡಿಕೊಂಡು, ಹಂತ ಹಂತವಾಗಿ ಮುಂದುವರೆಯಬೇಕು’ ಎಂದು ಕಿವಿಮಾತು ಹೇಳುತ್ತಾರೆ ರಂಜಿತ.

ಮನೆಯಲ್ಲೇ ಕೂತು ಯಾವುದೇ ಸ್ವಂತಿಕೆ ಇಲ್ಲದೇ ಗೃಹ ಕಾರ್ಯಗಳಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದ ಹಲವು ಮಹಿಳೆಯರು, ಲಾಕ್‌ಡೌನ್‌ ಸಮಯದಲ್ಲಿ ಸ್ವಂತದ ಅಡುಗೆ ಚಾನೆಲ್‌ ಪ್ರಾರಂಭಿಸಿ ಈಗ ಉದ್ಯೋಗಸ್ಥರಾಗಿದ್ದಾರೆ. ಅಸ್ಮಿತೆ ಗಳಿಸಿಕೊಂಡಿದ್ದಾರೆ.

ಹ್ಯಾಕರ್ಸ್‌ ಇದ್ದಾರೆ, ಎಚ್ಚರಿಕೆ!

ನಮ್ಮ ಚಾನೆಲ್‌ಗಳನ್ನು ಹ್ಯಾಕ್‌ ಮಾಡುತ್ತಾರೆ. ನಂತರ, ಆ ಚಾನೆಲ್‌ ನಮ್ಮ ಕೈತಪ್ಪಿ ಹೋಗುತ್ತದೆ. ನಾವು ಅಪ್‌ಲೋಡ್‌ ಮಾಡಿದ ವಿಡಿಯೊಗಳು ಸಹ ನಮಗೆ ಸಿಗುವುದಿಲ್ಲ. ನಮ್ಮ ಚಾನೆಲ್‌ ಹೆಸರಲ್ಲಿ ಯಾವುದೊ ಕೆಟ್ಟ ಕೆಟ್ಟ ಅಭಿರುಚಿಯ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ರಂಜಿತ ಎನ್‌. ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT