ಶನಿವಾರ, ಜನವರಿ 28, 2023
15 °C

ನಳಪಾಕ | ಹಸಿವೆ ತಣಿಸುವ ಅಪಟೈಸರ್‌

ಋತ ರಾಘವಿ Updated:

ಅಕ್ಷರ ಗಾತ್ರ : | |

ಹಸಿವು ಎಂದಾಕ್ಷಣ ಥಟ್‌ ಅಂತ ಸಿದ್ಧಗೊಂಡು ಆ ಹಸಿವನ್ನು ನೀಗಿಸುವ ಎಲ್ಲ ಆಹಾರಗಳೂ‘ಅಪಟೈಸರ್‌’ಗಳೇ. ಇಂಥ ದಿಢೀರನೆ ಹಸಿವು ನೀಗಿಸುವ ಖಾದ್ಯಗಳ ರೆಸಿಪಿ ಇಲ್ಲಿದೆ.

ಸೋಯಾ ಚಂಕ್ಸ್ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು: ಬಿಸಿ ನೀರಿನಲ್ಲಿ ನೆನೆಸಿಟ್ಟ ಒಂದು ಕಪ್‌ ಸೋಯಾ ಚಂಕ್ಸ್, ಒಂದು ಈರುಳ್ಳಿ, ಹಸಿಮೆಣಸಿನಕಾಯಿ, ನಾಲ್ಕು ಬೆಳ್ಳುಳ್ಳಿ, ಅರ್ಧ ಇಂಚು ಶುಂಠಿ,  ಕೊತ್ತಂಬರಿ, ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ ಅಕ್ಕಿ ಹಿಟ್ಟು, ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ಅರ್ಧ ಚಮಚ ಗರಂ ಮಸಾಲ, ದನಿಯಾ ಪುಡಿ, 1/2 ಚಮಚ ಅರಿಶಿನ. ಕರಿಯಲು ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ನೆನಸಿಟ್ಟ ಸೋಯಾ ಚಂಕ್ಸ್, ಈರುಳ್ಳಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಹಾಗೂ ಶುಂಠಿಯನ್ನು  ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಆ ಮಿಶ್ರಣಕ್ಕೆ ಕೊತ್ತಂಬರಿ, ಕಡಲೆಹಿಟ್ಟು, ಅಕ್ಕಿಹಿಟ್ಟು, ಜೀರಿಗೆ ಪುಡಿ, ಗರಂ ಮಸಾಲ, ದನಿಯಾ ಪುಡಿ, ಅರಿಶಿನ , ಉಪ್ಪು ಸೇರಿಸಿ ನಾದಿಕೊಳ್ಳಿ. ಹಿಟ್ಟನ್ನು ವಡೆಯಾಕಾರಕ್ಕೆ ಮಾಡಿಕೊಂಡು ಮಧ್ಯಮ ಉರಿಯಲ್ಲಿರುವ ಕಾದ ಎಣ್ಣೆಗೆ ಬಿಡಿ. ಬಿಸಿ ಬಿಸಿ ಸೋಯಾ ಚಂಕ್ಸ್ ಕಟ್ಲೆಟ್ ಸವಿಯಲು ಸಿದ್ಧ. 

ಮ್ಯಾಗಿ ಪಕೋಡ

ಬೇಕಾಗುವ ಸಾಮಗ್ರಿಗಳು: ಒಂದು ಪ್ಯಾಕ್‌ ಮ್ಯಾಗಿ, ಒಂದು ಪ್ಯಾಕ್‌ ಮ್ಯಾಗಿ ಮಸಾಲ, ಅರ್ಧಕಪ್‌ ಎಲೆ ಕೋಸು, ಎರಡು ಹಸಿಮೆಣಸಿನಕಾಯಿ, ಎರಡು ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಅಕ್ಕಿಹಿಟ್ಟು, ಕಡಲೆಹಿಟ್ಟು, ಅರ್ಧ ಚಮಚ ಜಿರೀಗೆ ಪುಡಿ, ಒಂದು ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾಗುವಷ್ಟು ಎಣ್ಣೆ

ಮಾಡುವ ವಿಧಾನ: ಕುದಿಯುವ ನೀರಿಗೆ ಮ್ಯಾಗಿ ಹಾಕಿ. ಮೂರು ನಿಮಿಷ ಬೇಯಿಸಿ. ಬೆಂದ ಮ್ಯಾಗಿಯನ್ನು ಸೋಸಿಕೊಂಡು ಇಡಿ. ಒಂದು ಪಾತ್ರೆಗೆ ಎಲೆಕೋಸು, ಹಸಿಮೆಣಸು, ಹೆಚ್ಚಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ ಪುಡಿ, ಖಾರದಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಬೆಂದ ಮ್ಯಾಗಿ ಹಾಗೂ ಅದರ ಮಸಾಲವನ್ನು ಸೇರಿಸಿ. ಹೆಚ್ಚು ನೀರು ಬಳಸಬೇಡಿ. ಎರಡು ಚಮಚ ನೀರು ಹಾಕಿ, ಅಕ್ಕಿಹಿಟ್ಟು ಹಾಗೂ ಕಡಲೆ ಹಿಟ್ಟನ್ನು ಹಂತ ಹಂತವಾಗಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಾದ ಎಣ್ಣೆಗೆ ಉಂಡೆಯಾಗಿ ಬಿಡಿ. ಮ್ಯಾಗಿ ಪಕೋಡ ಸಿದ್ಧಗೊಳ್ಳುತ್ತದೆ. 


ಮ್ಯಾಗಿ ಪಕೋಡ

ಪಾಲಕ್‌ ಚೀಸ್ ಬಾಲ್

ಬೇಕಾಗುವ ಸಾಮಗ್ರಿಗಳು: ಎಣ್ಣೆ, ನಾಲ್ಕು ಬೆಳ್ಳುಳ್ಳಿ ಎಸಳು, ಚಿಕ್ಕ ಶುಂಠಿ,  ಈರುಳ್ಳಿ,  ಹಸಿ ಮೆಣಸು, ಬ್ರೆಡ್‌ ಪುಡಿ, ಕಾರ್ನ್‌ ಪುಡಿ, ಒಂದು ಕಪ್‌ ಪಾಲಕ್‌, ಚೀಸ್‌ ಕ್ಯೂಬ್‌, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಒಂದು ಪಾತ್ರೆಗೆ ಎರಡು ಚಮಚ ಎಣ್ಣೆ ಹಾಕಿ, ಅದರಲ್ಲಿ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಹಸಿಮೆಣಸನ್ನು ಚೆನ್ನಾಗಿ ಹುರಿಯಿರಿ. ಇದಕ್ಕೆ ಪಾಲಕ್‌ ಸೊಪ್ಪು ಸೇರಿಸಿ ಬಾಡಿಸಿ. ನಂತರ ಇಷ್ಟನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಉಪ್ಪು, ಬ್ರೆಡ್‌ಪುಡಿ ಹಾಗೂ ಕಾರ್ನ್‌ ಪುಡಿ ಸೇರಿಸಿ ಹಿಟ್ಟಿನಾಕಾರಕ್ಕೆ ನಾದಿಕೊಳ್ಳಿ. ನಾದಿಕೊಂಡ ಹಿಟ್ಟನ್ನು  ಅಗಲ ಆಕಾರಕ್ಕೆ ತಂದು ಅದರ ಮಧ್ಯೆ ಚೀಸ್ ಕ್ಯೂಬ್‌ ಇಟ್ಟು ಉಂಡೆಯಾಕಾರ ಮಾಡಿ. ಈ ಉಂಡೆಗಳನ್ನು ಕಾದ ಎಣ್ಣೆಯಲ್ಲಿ ಬಿಟ್ಟರೆ ಪಾಲಕ್ ಚೀಸ್ ಬಾಲ್ ಸಿದ್ಧ. 


ಪಾಲಕ್‌ ಚೀಸ್ ಬಾಲ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು