ಮಂಗಳವಾರ, ಮೇ 11, 2021
24 °C

ರೆಸಿಪಿ: ಚಿಕನ್ ಕೊಂಡಾಟಂ, ಮೊಟ್ಟೆ ಉರುವಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಂಜಿತಾ ಎನ್. ಶೆಟ್ಟಿ

ಗ್ರೀನ್ ಚಿಕನ್ ಸುಕ್ಕ

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ - ಅರ್ಧ ಕೆ.ಜಿ., ಕೊಬ್ಬರಿ ಎಣ್ಣೆ, ಮೆಂತ್ಯೆ - ಅರ್ಧ ಚಮಚ, ಕಾಳುಮೆಣಸು -1 ಚಮಚ, ಜೀರಿಗೆ - ಅರ್ಧ ಚಮಚ, ಬೆಳ್ಳುಳ್ಳಿ - 5 ಎಸಳು, ಕೊತ್ತಂಬರಿ ಬೀಜ - 4 ಚಮಚ, ಈರುಳ್ಳಿ - 2, ಸ್ವಲ್ಪ ಶುಂಠಿ, ಪುದಿನ - ಒಂದು ಹಿಡಿ, ಹಸಿ ಮೆಣಸಿನ ಕಾಯಿ - 9, ಹುಣಸೆಹಣ್ಣು – ಸ್ವಲ್ಪ, ಅರಿಸಿನ ಪುಡಿ - ಅರ್ಧ ಚಮಚ, ತೆಂಗಿನತುರಿ - ಒಂದೂವರೆ ಕಪ್, ಗರಂ ಮಸಾಲೆ - ಅರ್ಧ ಚಮಚ, ಕರಿಬೇವು – 1 ಎಸಳು, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಒಂದು ಬಾಣಲೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಮೆಂತ್ಯೆ, ಕಾಳುಮೆಣಸು, ಜೀರಿಗೆ, ಬೆಳ್ಳುಳ್ಳಿ, ಕೊತ್ತಂಬರಿ ಬೀಜ, ಈರುಳ್ಳಿ ಹಾಕಿ ಹುರಿದಿಟ್ಟುಕೊಳ್ಳಬೇಕು. ಮಿಕ್ಸಿ ಜಾರ್‌ಗೆ 7 ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದಿನ, ಕರಿಬೇವು, ಶುಂಠಿ, ಹುಣಸೆಹಣ್ಣು, ಅರಿಸಿನ ಪುಡಿ ಹಾಕಿಕೊಂಡು ಅದಕ್ಕೆ ಹುರಿದಿಟ್ಟುಕೊಂಡ ಮಸಾಲೆ ಪದಾರ್ಥ, ನೀರು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಸಾಲೆಯನ್ನು ಕೋಳಿ ಮಾಂಸಕ್ಕೆ ಸೇರಿಸಿ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ 30 ನಿಮಿಷ ಮುಚ್ಚಿಡಬೇಕು. ಒಂದು ಬಾಣಲೆ ಬಿಸಿ ಮಾಡಿ, ಕೊಬ್ಬರಿ ಎಣ್ಣೆ ಹಾಕಿ ಹಸಿ ಮೆಣಸಿನಕಾಯಿ, ಒಂದು ಹೆಚ್ಚಿದ ಈರುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಅದಕ್ಕೆ ಮಸಾಲೆ ಮಿಶ್ರಿತ ಕೋಳಿ ಮಾಂಸವನ್ನು ಸೇರಿಸಿ ಕಲೆಸಿಕೊಳ್ಳಬೇಕು. ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಅರ್ಧ ಹೆಚ್ಚಿದ ಈರುಳ್ಳಿ, ಕಾಯಿ ಮೆಣಸು, ಕರಿಬೇವು, 1 ಎಸಳು ಬೆಳ್ಳುಳ್ಳಿ, ತೆಂಗಿನತುರಿ ಹಾಕಿ ಹುರಿಯಬೇಕು. ಇದನ್ನು ಗರಂ ಮಸಾಲೆ ಜತೆ ಬೆಂದ ಕೋಳಿಮಾಂಸಕ್ಕೆ ಸೇರಿಸಿ ಕಲೆಸಿಕೊಳ್ಳಬೇಕು. ಈಗ ಗ್ರೀನ್ ಚಿಕನ್ ಸುಕ್ಕ ಸಿದ್ಧ.

 

ಮೊಟ್ಟೆ ಉರುವಲ್

ಬೇಕಾಗುವ ಸಾಮಗ್ರಿಗಳು: ಬ್ಯಾಡಗಿ ಮೆಣಸು - 7, ಮೊಟ್ಟೆ - 4, ತುಪ್ಪ- 4 ಚಮಚ, ಕಾಳುಮೆಣಸಿನ ಪುಡಿ - ಅರ್ಧ ಚಮಚ, ಅರಿಸಿನ ಪುಡಿ - ಅರ್ಧ ಚಮಚ, ಗರಂ ಮಸಾಲೆ – 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ನಿಂಬೆರಸ, ಗೋಡಂಬಿ, ಕರಿಬೇವು

ತಯಾರಿಸುವ ವಿಧಾನ: ಬ್ಯಾಡಗಿ ಮೆಣಸನ್ನು ಸ್ವಲ್ಪ ನೀರು ಸೇರಿಸಿ ಬೇಯಿಸಿಟ್ಟುಕೊಳ್ಳಬೇಕು. ಆರಿದ ಮೇಲೆ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಬೇಕು. ಬಾಣಲೆಗೆ ಸ್ವಲ್ಪ ತುಪ್ಪ ಸುರಿದು ಅದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿ ಕರಿಯಬೇಕು. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿಕೊಳ್ಳಬೇಕು. ಬಳಿಕ ಕರಿದ ಮೊಟ್ಟೆಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಅದಕ್ಕೆ ಅರಿಸಿನ ಪುಡಿ, ಗರಂ ಮಸಾಲೆ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ 15 ನಿಮಿಷ ಮುಚ್ಚಿಡಬೇಕು. ಬಾಣಲೆಗೆ ಮೂರು ಚಮಚ ತುಪ್ಪ ಸುರಿದು ಅದಕ್ಕೆ ಗೋಡಂಬಿ, ಕರಿಬೇವು, ಒಣಮೆಣಸು ಹಾಕಿ ಹುರಿಯಬೇಕು. ಬಳಿಕ ಅದನ್ನು ಬೇರೆ ಪಾತ್ರೆಗೆ ಬದಲಿಸಿ‌. ಅದೇ ಬಾಣಲೆಗೆ ರುಬ್ಬಿ ಸಿದ್ಧವಾಗಿಟ್ಟುಕೊಂಡ ಮೆಣಸಿನ ಪೇಸ್ಟ್ ಹಾಕಿ, ಸ್ವಲ್ಪ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಕುದಿ ಬರುವಾಗ ಮಸಾಲೆ ಮಿಶ್ರ ಮಾಡಿಟ್ಟ ಮೊಟ್ಟೆಯನ್ನು ಸೇರಿಸಿ ಬೇಯಿಸಿಕೊಳ್ಳಬೇಕು. ಅದಕ್ಕೆ ಕರಿದ ಗೋಡಂಬಿ, ಕರಿಮೆಣಸು, ಒಣಮೆಣಸು ಸೇರಿಸಿದರೆ ಮೊಟ್ಟೆ ಉರುವಲ್ ಸಿದ್ಧ.

 

 

ಚಿಕನ್ ಕೊಂಡಾಟಂ

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ - ಅರ್ಧ ಕೆ.ಜಿ., ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಅರಿಸಿನ ಪುಡಿ - ಮುಕ್ಕಾಲು ಚಮಚ, ಕಾಶ್ಮೀರಿ ಮೆಣಸಿನ ಪುಡಿ - 4 ಚಮಚ, ಈರುಳ್ಳಿ - 1, ಹಸಿ ಮೆಣಸಿನಕಾಯಿ - 2, ಕೊತ್ತಂಬರಿ ಪುಡಿ - 2 ಚಮಚ, ಕಾಳುಮೆಣಸಿನ ಪುಡಿ - ಅರ್ಧ ಚಮಚ, ಚಿಲ್ಲಿ ಫ್ಲೇಕ್ಸ್ - 3 ಚಮಚ, ಟೊಮೆಟೊ ಸಾಸ್ - 2 ಚಮಚ, ಗರಂ ಮಸಾಲೆ – ಅರ್ಧ ಚಮಚ, ನಿಂಬೆರಸ, ಕೊಬ್ಬರಿ ಎಣ್ಣೆ, ಕರಿಬೇವು.

ತಯಾರಿಸುವ ವಿಧಾನ: ಕೋಳಿ ಮಾಂಸಕ್ಕೆ ಉಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್ (1ಚಮಚ), ಅರಿಸಿನ ಪುಡಿ (ಅರ್ಧ ಚಮಚ), ಕಾಶ್ಮೀರಿ ಮೆಣಸಿನ ಪುಡಿ (3 ಚಮಚ), ನಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ 30 ನಿಮಿಷ ಮುಚ್ಚಿಡಬೇಕು. ಬಳಿಕ ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಕೋಳಿ ಮಾಂಸವನ್ನು ಕರಿದಿಟ್ಟುಕೊಳ್ಳಬೇಕು. ಅದೇ ಎಣ್ಣೆಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಉಪ್ಪು, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. ಜೊತೆಗೆ ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಟೊಮೆಟೊ ಸಾಸ್ ಕೂಡ ಸೇರಿಸಬೇಕು. ಬಳಿಕ ಅರ್ಧ ಕಪ್ ನೀರು ಮತ್ತು ಗರಂ ಮಸಾಲೆ ಹಾಕಿ ಚೆನ್ನಾಗಿ ಕುದಿಸಬೇಕು. ಕರಿದಿಟ್ಟುಕೊಂಡ ಕೋಳಿ ಮಾಂಸವನ್ನು ಸೇರಿಸಿ ಬೇಯಿಸಿದರೆ ಚಿಕನ್ ಕೊಂಡಾಟಂ ಸಿದ್ಧ. ಚಪಾತಿ ಅಥವಾ ಪರೋಟ ಜತೆ ನಂಜಿಕೊಳ್ಳಲು ಇದು ರುಚಿಕರವಾಗಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.