ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್‌ ಪಾಸ್ತಾ, ನೂಡಲ್ಸ್‌ 'ಇಟಲಿ – ಚೀನಾ' ಜುಗಲ್‌ಬಂದಿ

Last Updated 28 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಚಿಕನ್‌ ಪಾಸ್ತಾ, ನೂಡಲ್ಸ್, ನಗೆಟ್ಸ್‌ನಂತಹ ಕಾಂಟಿನೆಂಟಲ್‌ ಖಾದ್ಯಗಳನ್ನು ಹೋಟೆಲ್‌ಗಳಿಗೆ ಹೋಗಿ ಸವಿದಾಗ, ಟಿವಿಯಲ್ಲಿ ಬರುವ ಅಡುಗೆ ಕಾರ್ಯಕ್ರಮಗಳಲ್ಲಿ ನೋಡಿದಾಗ ವಾವ್ ಎನ್ನಿಸುವುದು ಸಹಜ. ನೋಡಿದ ತಕ್ಷಣ ಬಾಯಲ್ಲಿ ನೀರೂರುವ ಈ ಖಾದ್ಯಗಳನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ ಮನೆಯಲ್ಲೇ ರುಚಿಯಾದ ಕಾಂಟಿನೆಂಟಲ್‌ ಖಾದ್ಯಗಳನ್ನು ಸವಿಯಬಹುದು ಎನ್ನುತ್ತಾರೆ ರೇಷ್ಮಾ.

ಚಿಕನ್‌ ಪಾಸ್ತಾ

ಬೇಕಾಗುವಸಾಮಗ್ರಿಗಳು: ನೀರು– 1 ಕಪ್‌, ಉಪ್ಪು– 2ಟೀಚಮಚ, ಆಲಿವ್ಎಣ್ಣೆ–ಒಂದೂವರೆಟೀಚಮಚ, ಪಾಸ್ತಾ– 1/2ಕಪ್‌, ಬೇಯಿಸಿದಚಿಕನ್‌ತುಂಡುಗಳು– 1/2 ಕಪ್‌, ಕಾಳುಮೆಣಸು – 2 ಟೀ ಚಮಚ, ಬೆಳ್ಳುಳ್ಳಿ – 1 ಟೀ ಚಮಚ, ಕೊತ್ತಂಬರಿ ಸೊಪ್ಪು – 1 ಟೀ ಚಮಚ (ಹೆಚ್ಚಿದ್ದು), ಒಣ ಮೆಣಸಿನ ಬೀಜ - 1 ಟೀ ಚಮಚ, ಕ್ಯಾರೆಟ್ - 2ಟೇಬಲ್ ಚಮಚ, ಬೀನ್ಸ್ – 2 ಟೇಬಲ್ ಚಮಚ, ಚಿಕನ್ ಸ್ಟಾಕ್ – 2 ಟೇಬಲ್ ಚಮಚ, ಪಾಸ್ತಾ ನೀರು – ½ ಕಪ್, ಬೆಣ್ಣೆ – 1 ಟೇಬಲ್ ಚಮಚ, ಚೀಸ್ -2 ಟೀ ಚಮಚ

ತಯಾರಿಸುವ ವಿಧಾನ: ಮೊದಲು ಪಾತ್ರೆಯೊಂದಕ್ಕೆ ನೀರು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಲು ಇಡಿ. ಇದು ಕುದಿಯಲು ಆರಂಭಿಸಿದಾಗ ಉಪ್ಪು ಸೇರಿಸಿ. ಗುಳ್ಳೆ ಬರುವವರೆಗೂ ನೀರನ್ನು ಕುದಿಸಿ. ನಂತರ ಅದಕ್ಕೆ ಆಲಿವ್ ಎಣ್ಣೆ ಹಾಗೂ ಪಾಸ್ತಾ ಸೇರಿಸಿ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿ. ಬೇಯಿಸಿದ ಚಿಕನ್ ತುಂಡುಗಳನ್ನು ಅದಕ್ಕೆ ಸೇರಿಸಿ.ಅದಕ್ಕೆ ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆಲಿವ್ ಎಣ್ಣೆ, ಹೆಚ್ಚಿದ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಒಣ ಮೆಣಸಿನ ಬೀಜ ಹಾಗೂ ಕಾಳುಮೆಣಸು ಸೇರಿಸಿ. ಕ್ಯಾರೆಟ್, ಬೀನ್ಸ್, ಚಿಕನ್ ಸ್ಟಾಕ್ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಹುರಿಯಿರಿ. ನಂತರ ಮಧ್ಯಮ ಉರಿಯಲ್ಲಿ ಇಟ್ಟು ಕ್ಯಾರೆಟ್, ಬೀನ್ಸ್ ಬೇಯುವವರೆಗೂ ಇಡಿ. ಅದಕ್ಕೆ ಬೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೇಯಿಸಿದ ಪಾಸ್ತಾ ಸೇರಿಸಿ ಮಿಶ್ರಣ ಮಾಡಿ. ಚೀಸ್ ಸೇರಿಸಿ, ಮತ್ತೆ ಸ್ವಲ್ಪ ಬೇಯಿಸಿ.

ಚಿಕನ್ ಫ್ರೈಡ್ ನೂಡಲ್ಸ್


ಬೇಕಾಗುವ ಸಾಮಗ್ರಿಗಳು: ಕೋಳಿಯ ಎದೆ ಭಾಗದ ಮೃದು ತುಂಡುಗಳು – 250 ಗ್ರಾಂ, ಸಾಸಿವೆ ಎಣ್ಣೆ – 1 ಟೇಬಲ್ ಚಮಚ, ಹೆಚ್ಚಿದ ಬೆಳ್ಳುಳ್ಳಿ – 2 ಎಸಳು, ಸೋಯಾ ಸಾಸ್ – 3 ಟೇಬಲ್ ಚಮಚ, ಸಿಹಿ ಸೋಯಾ ಸಾಸ್ – 1 ಟೇಬಲ್ ಚಮಚ, ಪನ್ನೀರ್ ಟೋಫು – 2 ಟೇಬಲ್ ಚಮಚ, ಚಿಕ್ಕದಾಗಿ ಹೆಚ್ಚಿಕೊಂಡ ಕ್ಯಾರೆಟ್ – 2 ಟೇಬಲ್ ಚಮಚ, ಉಪ್ಪು – ರುಚಿಗೆ, ಎಗ್ ನೂಡಲ್ಸ್ – 200 ಗ್ರಾಂ, ಎಣ್ಣೆ – 1 ಟೇಬಲ್ ಚಮಚ, ಈರುಳ್ಳಿ – 1 ಮಧ್ಯಮ ಗಾತ್ರದ್ದು ಹೆಚ್ಚಿಕೊಂಡಿದ್ದು, ಚಿಲ್ಲಿ ಸಾಸ್ – 2 ಟೇಬಲ್ ಚಮಚ, ಬ್ರೊಕೊಲಿ ಎಲೆಗಳು – 1/2 ಕಪ್, ಮೊಳಕೆ ಕಾಳು – ¼ ಕಪ್, ಕಾಳುಮೆಣಸು – 2 ಟೀ ಚಮಚ

ತಯಾರಿಸುವ ವಿಧಾನ: ಅಗಲವಾದ ಪಾತ್ರೆಯೊಂದರಲ್ಲಿ ನೀರು, ಉಪ್ಪು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ಆ ನೀರಿಗೆ ಎಗ್ ನೂಡಲ್ಸ್ ಸೇರಿಸಿ 10 ನಿಮಿಷ ಬೇಯಿಸಿ. ತಣ್ಣಗಾದ ಮೇಲೆ ನೂಡಲ್ಸ್ ಅನ್ನು ದೊಡ್ಡ ಪಾತ್ರೆಗೆ ಹಾಕಿ. ಅದಕ್ಕೆ ಸಾಸಿವೆ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಬೇರೊಂದು ಪಾತ್ರೆಯಲ್ಲಿ ಚಿಕನ್ ತುಂಡುಗಳನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಅದನ್ನು ಆರಲು ಬಿಡಿ.

ಬೇರೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಬೆಳ್ಳುಳ್ಳಿ ಕೆಂಪಾಗಾಗುವವರೆಗೂ ಹುರಿಯಿರಿ. ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಲ್ಲಿ ಸಾಸ್ ಹಾಗೂ ಮುಕ್ಕಾಲು ಚಮಚ ಸೋಯಾ ಸಾಸ್ ಸೇರಿಸಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ. ಉಳಿದ ಸೋಯಾ ಸಾಸ್, ಬೇಯಿಸಿಕೊಂಡ ಎಗ್ ನೂಡಲ್ಸ್ ಹಾಗೂ ಸಿಹಿ ಸೋಯಾ ಸಾಸ್ ಸೇರಿಸಿ ಮಿಶ್ರಣ ಮಾಡಿ. ನಂತರ ಇದನ್ನು 2 ನಿಮಿಷ ಬೇಯಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಪನ್ನೀರ್ ಟೋಫು, ಸೇರಿಸಿ ಅದು ಕೆಂಪಾಗಾಗುವವರೆಗೂ ಹುರಿದುಕೊಳ್ಳಿ. ನಂತರ ಹೆಚ್ಚಿಕೊಂಡ ಬ್ರೊಕೊಲಿ, ಕ್ಯಾಪ್ಸಿಕಂ, ಕ್ಯಾರೆಟ್ ಹಾಗೂ ಮೊಳಕೆಕಾಳು ಸೇರಿಸಿ. ಇವೆಲ್ಲವೂ ಪನ್ನೀರ್ ಟೋಫುವಿನೊಂದಿಗೆ ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ. ನಂತರ ಒಂದು ನಿಮಿಷ ಕುದಿಸಿ. ಬೇಯಿಸಿಕೊಂಡ ನೂಡಲ್ಸ್ ಪಾತ್ರೆಗೆ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿಯಿದ್ದಾಗಲೇ ಚಿಕನ್ ನೂಡಲ್ಸ್ ತಿನ್ನಲು ಚೆನ್ನಾಗಿರುತ್ತದೆ.

ಚಿಕನ್ ನಗೆಟ್ಸ್

ಬೇಕಾಗುವ ಸಾಮಗ್ರಿಗಳು: ಮೈದಾ, ಗೋಧಿ ಹಾಗೂ ಅಕ್ಕಿಹಿಟ್ಟಿನ ಮಿಶ್ರಣ – 1/2 ಕಪ್, ಹೆಚ್ಚಿಕೊಂಡ ಬೆಳ್ಳುಳ್ಳಿ – 1 ಟೀ ಚಮಚ, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಸ್ವಲ್ಪ, ಮೂಳೆ ರಹಿತ ಚಿಕನ್ ಎದೆ ಭಾಗದ ತುಂಡು – 1ಕಪ್‌ (½ ಇಂಚಿಗೆ ಕತ್ತರಿಸಿಕೊಂಡಿದ್ದು) ಬ್ರೆಡ್‌ ಪುಡಿ – 1 ಕಪ್, ಮೊಟ್ಟೆ – 1, ಎಣ್ಣೆ – 1 ಕಪ್

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಎಲ್ಲಾ ಹಿಟ್ಟುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೆಳ್ಳುಳ್ಳಿ, 1 ಟೀ ಚಮಚ ಉಪ್ಪು ಹಾಗೂ ಕಾಲು ಟೀ ಚಮಚ ಕಾಳುಮೆಣಸಿನ ಪುಡಿ ಸೇರಿಸಿ. ಅದರಲ್ಲಿ ಚೆನ್ನಾಗಿ ತೊಳೆದು ಸ್ವಚ್ಛ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ ಪಾತ್ರೆಯನ್ನು ಮುಚ್ಚಿ ಒಂದೆಡೆ ಇಡಿ. ಬ್ರೆಡ್ ಪುಡಿಗೆ ಸ್ವಲ್ಪ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಇಡಿ. ಬೌಲ್ ಒಂದರಲ್ಲಿ ಮೊಟ್ಟೆಯನ್ನು ಒಡೆದು ಹಾಕಿ. ಅದಕ್ಕೆ ಒಂದು ಟೇಬಲ್ ಚಮಚ ನೀರು ಸೇರಿಸಿ. ಹಿಟ್ಟಿನಿಂದ ಚಿಕನ್ ತುಂಡುಗಳನ್ನು ತೆಗೆದು ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ. ಅದನ್ನು ಬ್ರೆಡ್ ಮಿಶ್ರಣದ ಪುಡಿಯಲ್ಲಿ ಅದ್ದಿ. ಚಿಕನ್ ತುಂಡಿನ ಎಲ್ಲಾ ಭಾಗಕ್ಕೂ ಬ್ರೆಡ್ ಪುಡಿ ಚೆನ್ನಾಗಿ ಅಂಟಿಕೊಳ್ಳುವಂತೆ ನೋಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ವೆಜಿಟೇಬಲ್ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಬ್ರೆಡ್‌ಪುಡಿಯಲ್ಲಿ ಅದ್ದಿಕೊಂಡ ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಕೆಂಪು ಬಣ್ಣ ಬರುವವರೆಗೂ ಕರಿಯಿರಿ. ಕನಿಷ್ಠ 8 ನಿಮಿಷಗಳ ಕಾಲ ಎಣ್ಣೆಯಲ್ಲಿ ಕರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT