ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮುಚುಮು ಚಳಿಗೆ ಗರಿಗರಿ ಸ್ನ್ಯಾಕ್ಸ್‌

Last Updated 27 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಡಿಸೆಂಬರ್ ತಿಂಗಳು ಹತ್ತಿರ ಬರುತ್ತಿದೆ, ಮೈ ಥರಗುಟ್ಟಿಸುವ ಚಳಿ ಆರಂಭವಾಗಿದೆ. ಈ ಸಮಯದಲ್ಲಿ ದೇಹಕ್ಕೆ ಬೆಚ್ಚಗೆ, ಬಾಯಿಗೆ ರುಚಿ ಎನ್ನಿಸುವ ಕರಿದ ತಿಂಡಿಗಳನ್ನು ತಿನ್ನುವ ಮನಸ್ಸಾಗುವುದು ಅತಿಶಯೋಕ್ತಿಯಲ್ಲ. ಮನೆಯಲ್ಲೇ ಕುಳಿತು ಕೆಲಸ ಮಾಡುವ ನಮಗೆ ಸಂಜೆಯಾಗುತ್ತಲೇ ಬಾಯಿ ಚಪಲ ಆರಂಭವಾಗುತ್ತದೆ. ಅದಕ್ಕೆ ಹೊರಗೆಲ್ಲೋ ಹೋಗಿ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಬಗೆ ಬಗೆಯ ತಿನಿಸುಗಳನ್ನು ತಯಾರಿಸಬಹುದು ಎನ್ನುತ್ತಾರೆ ವೇದಾವತಿ ಎಚ್.ಎಸ್.

ಅಕ್ಕಿಹಿಟ್ಟಿನ ಮಸಾಲೆ ನಿಪ್ಪಟ್ಟು

ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ – 2 ಟೀ ಚಮಚ, ಹುರಿಗಡಲೆ – 2 ಟೀ ಚಮಚ, ಅಕ್ಕಿಹಿಟ್ಟು – 2 ಕಪ್‌, ಅಚ್ಚಖಾರದ ಪುಡಿ – 1 ಟೀ ಚಮಚ, ಜೀರಿಗೆ – 1 ಟೀ ಚಮಚ, ಎಳ್ಳು – 1 ಟೀ ಚಮಚ, ಇಂಗು – 1/2 ಟೀ ಚಮಚ, ಉಪ್ಪು –ರುಚಿಗೆ ತಕ್ಕಷ್ಟು, ಕಡಲೆಬೇಳೆ– 2 ಟೇಬಲ್ ಚಮಚ (1 ಗಂಟೆ ನೆನೆಸಿಡಿ), ಚಿಕ್ಕದಾಗಿ ಕತ್ತರಿಸಿದ ಕರಿಬೇವು – 10 ಎಲೆಗಳು, ಬಿಸಿ ಮಾಡಿದ ಎಣ್ಣೆ – 2 ಟೇಬಲ್ ಚಮಚ, ಹಿಟ್ಟು ಕಲೆಸಲು ನೀರು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಮೊದಲು ಉದ್ದಿನಬೇಳೆಯನ್ನು ಪರಿಮಳ ಬರುವರೆಗೆ ಹುರಿಯಿರಿ. ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನಬೇಳೆ ಮತ್ತು ಹುರಿಗಡಲೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬೌಲಿನಲ್ಲಿ ಅಕ್ಕಿಹಿಟ್ಟನ್ನು ಹಾಕಿ. ಜೊತೆಗೆ ಅಚ್ಚಖಾರದ ಪುಡಿ, ಜೀರಿಗೆ, ಎಳ್ಳು, ಇಂಗು, ಉಪ್ಪು, ಪುಡಿ ಮಾಡಿಕೊಂಡ ಉದ್ದಿನಬೇಳೆ ಮತ್ತು ಹುರಿಗಡಲೆ ಮಿಶ್ರಣ, ಕರಿಬೇವಿನಎಲೆ ಹಾಗೂ ನೆನೆಸಿಟ್ಟ ಕಡಲೆಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹಿಟ್ಟಿಗೆ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ. ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಕಲೆಸಿಕೊಳ್ಳಿ. ಹಿಟ್ಟು ಮೃದುವಾಗಿ ರೊಟ್ಟಿಯ ಹಿಟ್ಟಿನ ಹದದಲ್ಲಿರಲಿ. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಹಿಟ್ಟಿನಿಂದ ತಯಾರಿಸಿಕೊಳ್ಳಿ, ಈ ಉಂಡೆಗಳನ್ನು ಬಟರ‍್ ಪೇಪರ‍್ ಅಥವಾ ಪ್ಟಾಸ್ಟಿಕ್ ಪೇಪರಿಗೆ ಎಣ್ಣೆಯನ್ನು ಸವರಿ ತೆಳುವಾಗಿ ತಟ್ಟಿಕೊಳ್ಳಿ. ಇದನ್ನು ಬಿಸಿ ಮಾಡಿದ ಎಣ್ಣೆಯಲ್ಲಿ ಹಾಕಿ ಎರಡೂ ಬದಿಯನ್ನು ಗರಿಗರಿಯಾಗಿ ಕೆಂಬಣ್ಣ ಬರುವರೆಗೆ ಬೇಯಿಸಿ. ಗಟ್ಟಿಯಾದ ಡಬ್ಬಿಯಲ್ಲಿ ಗಾಳಿಯಾಡದಂತೆ ಹಾಕಿಟ್ಟರೆ ಆಗಾಗ ಸವಿಯುತ್ತಿರಬಹುದು.

ಎಲೆಕೋಸಿನ ಪಕೋಡ
ಬೇಕಾಗುವ ಸಾಮಗ್ರಿಗಳು:
ಉದ್ದುದ್ದ ತೆಳುವಾಗಿ ಕತ್ತರಿಸಿದ ಎಲೆಕೋಸು – 2 ಕಪ್, ಈರುಳ್ಳಿ – 2 (ಉದ್ದಕ್ಕೆ ತೆಳುವಾಗಿ ಹೆಚ್ಚಿದ್ದು), ಕಡಲೆಹಿಟ್ಟು – 1 ಕಪ್, ಅಕ್ಕಿಹಿಟ್ಟು – 2 ಟೇಬಲ್ ಚಮಚ, ಇಂಗು – 1/4 ಟೀ ಚಮಚ, ಅರಿಸಿನ – 1/4 ಟೀ ಚಮಚ, ಅಚ್ಚ ಖಾರದಪುಡಿ – 1/2 ಟೀ ಚಮಚ, ಹಸಿಮೆಣಸಿನಕಾಯಿ – 4 (ಚಿಕ್ಕದಾಗಿ ಕತ್ತರಿಸಿದ್ದು), ಶುಂಠಿ ಪೇಸ್ಟ್ – 1/2 ಟೀ ಚಮಚ, ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿದ್ದು – 2 ಟೇಬಲ್ ಚಮಚ, ಕರಿಬೇವು 8-10 (ಚಿಕ್ಕದಾಗಿ ಕತ್ತರಿಸಿದ್ದು), ಎಣ್ಣೆ – ಕರಿಯಲು, ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಬೌಲ್‌ನಲ್ಲಿ ಎಲೆಕೋಸು, ಈರುಳ್ಳಿ, ಕಡಲೆಹಿಟ್ಟು, ಅಕ್ಕಿಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ನಂತರ ಇಂಗು, ಅರಿಸಿನ, ಅಚ್ಚ ಖಾರದಪುಡಿ, ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಚಿಮುಕಿಸಿ ಗಟ್ಟಿಯಾಗಿ ಕಲಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಬಿಸಿಯಾದ ಎಣ್ಣೆಗೆ ತಯಾರಿಸಿಕೊಂಡ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಬಿಡುತ್ತಾ ಬನ್ನಿ. ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಕೆಂಬಣ್ಣ ಬರುವರೆಗೆ ಕಾಯಿಸಿ. ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಪಕೋಡವನ್ನು ಸಂಜೆಯ ಕಾಫಿಯೊಂದಿಗೆ ಸವಿಯಿರಿ.

ಬೇಬಿಕಾರ್ನ್ ಫ್ರೈ
ಬೇಕಾಗುವ ಸಾಮಗ್ರಿಗಳು: ಬೇಬಿಕಾರ್ನ್‌ – 1/2 ಕೆ.ಜಿ., ಮೈದಾಹಿಟ್ಟು – 1/2ಕಪ್‌, ಕಾರ್ನ್‌ ಫ್ಲೋರ್‌ – 1/4ಕಪ್‌, ಅಕ್ಕಿಹಿಟ್ಟು – 1/2 ಟೀ ಚಮಚ, ಅರಿಸಿನ – 1/2 ಟೀ ಚಮಚ, ಜೀರಿಗೆಪುಡಿ – 1 ಟೀ ಚಮಚ, ಕೊತ್ತಂಬರಿ ಪುಡಿ – 1 ಟೀ ಚಮಚ, ಅಚ್ಚ ಖಾರದಪುಡಿ – 1 ಟೀ ಚಮಚ, ಗರಂಮಸಾಲೆ – 1/2 ಟೀ ಚಮಚ, ಉಪ್ಪು – ರುಚಿಗೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಕರಿಬೇವು – 6 (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ಕೊತ್ತಂಬರಿಸೊಪ್ಪು – 2 ಟೇಬಲ್ ಚಮಚ (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ನಿಂಬೆರಸ – 1 ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದರಲ್ಲಿ ಬೇಬಿಕಾರ್ನ್‌ ಅನ್ನು ಹಾಕಿ. ಜೊತೆಗೆ 1 ಟೇಬಲ್ ಚಮಚ ಉಪ್ಪನ್ನು ಹಾಕಿ 5 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ. ನಂತರ ನೀರನ್ನು ಬಸಿಯಿರಿ. ಒಂದು ಬೌಲ್‌ನಲ್ಲಿ ಮೈದಾಹಿಟ್ಟು, ಕಾರ್ನ್‌ಫ್ಲೋರ್‌, ಅಕ್ಕಿಹಿಟ್ಟು, ಅರಿಸಿನ, ಜೀರಿಗೆಪುಡಿ, ಕೊತ್ತಂಬರಿಪುಡಿ, ಅಚ್ಚಖಾರದ ಪುಡಿ, ಗರಂಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಕರಿಬೇವು, ಕೊತ್ತಂಬರಿ ಸೊಪ್ಪು, ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ನೀರನ್ನು ಹಾಕಿ. ಹಿಟ್ಟು ಬೋಂಡಾಹಿಟ್ಟಿನ ಹದವಿರಲಿ. ಎಣ್ಣೆ ಬಿಸಿಯಾದ ಮೇಲೆ ಬೇಬಿಕಾರ್ನ್‌ ಅನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಬಿಡಿ. ಎರಡೂ ಬದಿಯನ್ನೂ ಮಧ್ಯಮ ಉರಿಯಲ್ಲಿ ಕೆಂಬಣ್ಣ ಬರುವವರೆಗೆ ಕಾಯಿಸಿ. ರುಚಿಕರವಾದ ಬೇಬಿಕಾರ್ನ್‌ ಫ್ರೈ ಅನ್ನು ಟೊಮೆಟೊ ಕೆಚಪ್, ಚಟ್ನಿಯೊಂದಿಗೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT