ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರ್ಯಾಗನ್ ಚಿಕನ್, ಚಿಕನ್ ಕೈಮಾ ಮಂಚೂರಿಯನ್

Last Updated 3 ಜುಲೈ 2021, 2:59 IST
ಅಕ್ಷರ ಗಾತ್ರ

ಡ್ರ್ಯಾಗನ್ ಚಿಕನ್

ಬೇಕಾಗುವ ಸಾಮಗ್ರಿಗಳು: ಮೂಳೆ ರಹಿತ ಚಿಕನ್ - ಅರ್ಧ ಕೆ.ಜಿ, ಕಾರ್ನ್‌ಫ್ಲೋರ್‌ - ಅರ್ಧ ಕಪ್, ಮೊಟ್ಟೆಯ ಬಿಳಿ ಭಾಗ – 1, ಕೊತ್ತಂಬರಿ ಸೊಪ್ಪು - ಅರ್ಧ ಕಪ್, ಕಾಳು ಮೆಣಸಿನ ಪುಡಿ - 1 ಚಮಚ, ಗೋಡಂಬಿ - 10, ಶುಂಠಿ - 1 ಇಂಚು, ಬೆಳ್ಳುಳ್ಳಿ - 2 ಚಮಚ, ಹಸಿ ಮೆಣಸಿನಕಾಯಿ - 2, ರೆಡ್ ಚಿಲ್ಲಿ ಸಾಸ್ - 2 ಚಮಚ, ಟೊಮೆಟೊ ಸಾಸ್ - ಅರ್ಧ ಚಮಚ, ಸೋಯಾ ಸಾಸ್ - 1 ಟೀ ಚಮಚ, ವಿನೆಗರ್ – 1 ಟೀ ಚಮಚ, ಈರುಳ್ಳಿ - 1, ಕ್ಯಾಪ್ಸಿಕಂ - 1, ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಡ್ರ್ಯಾಗನ್ ಚಿಕನ್
ಡ್ರ್ಯಾಗನ್ ಚಿಕನ್

ತಯಾರಿಸುವ ವಿಧಾನ: ಒಂದು ಬಟ್ಟಲಿಗೆ ಚಿಕನ್, ವಿನೆಗರ್, ಸೋಯಾ ಸಾಸ್, ಕಾಳುಮೆಣಸಿನ ಪುಡಿ, ಮೊಟ್ಟೆಯ ಬಿಳಿಭಾಗ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾರ್ನ್‌ಫ್ಲೋರ್‌ ಹಾಕಿ ಚೆನ್ನಾಗಿ ಕಲೆಸಿ, ಅರ್ಧ ಗಂಟೆ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕಲೆಸಿ ಇಟ್ಟಿದ್ದ ಚಿಕನ್ ಒಂದೊಂದೇ ತುಂಡುಗಳನ್ನು ಹಾಕಿ ಕರಿಯಿರಿ. ನಂತರ ಪ್ಯಾನ್‌ನಲ್ಲಿ 3 ಚಮಚ ಅಡುಗೆ ಎಣ್ಣೆ ಹಾಕಿ, ಅದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ 1 ನಿಮಿಷ ಹುರಿದುಕೊಳ್ಳಿ. ಕಡಿಮೆ ಉರಿಯಲ್ಲಿ ಸೋಯಾ ಸಾಸ್, ವಿನೆಗರ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್, ಕರಿಮೆಣಸಿನ ಪುಡಿ ಮತ್ತು ರುಚಿಗೆ ಉಪ್ಪು ಹಾಕಿ 30 ಸೆಕೆಂಡ್ ಹುರಿದುಕೊಳ್ಳಿ. ಇದಕ್ಕೆ 4 ಚಮಚ ನೀರನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ ಮತ್ತು ಕರಿದ ಚಿಕನ್ ಹಾಕಿ ಫ್ರೈ ಮಾಡಿ, ಇದಕ್ಕೆ ಬಿಳಿ ಎಳ್ಳು ಸೇರಿಸಿ ಚೆನ್ನಾಗಿ ಹುರಿದರೆ ರುಚಿಯಾದ ಡ್ರ್ಯಾಗನ್ ಚಿಕನ್ ಸವಿಯಲು ಸಿದ್ಧ.

ಚೆಟ್ಟಿನಾಡ್ ಚಿಕನ್

ಬೇಕಾಗುವ ಸಾಮಗ್ರಿಗಳು: ಚಿಕನ್ - ಅರ್ಧ ಕೆಜಿ, ಈರುಳ್ಳಿ - 2, ಟೊಮೆಟೊ - 2, ತೆಂಗಿನಕಾಯಿ - 1/2 ಕಪ್, ಅರಿಸಿನ ಪುಡಿ - 1/2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಕೊತ್ತಂಬರಿ ಸೊಪ್ಪು - 1/2 ಕಪ್, ನಿಂಬೆಹಣ್ಣು - 1/2, ಕರಿಬೇವಿನ ಸೊಪ್ಪು - 1 ಚಮಚ, ಒಣ ಮೆಣಸು - 3, ಚಕ್ಕೆ - 3, ಏಲಕ್ಕಿ - 3, ಜಾಪತ್ರೆ ಹೂ - 1, ಮರಾಠಿ ಮೊಗ್ಗು - 1, ನಕ್ಷತ್ರ ಹೂ - 1, ಕಾಳುಮೆಣಸು - 1 ಟೀ ಚಮಚ, ಜೀರಿಗೆ - 1 ಟೀ ಚಮಚ, ಸೋಂಪು - 1 ಟೀ ಚಮಚ, ಕೊತ್ತಂಬರಿ ಕಾಳು - 1 ಟೀ ಚಮಚ, ಅಡುಗೆ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ಚೆಟ್ಟಿನಾಡ್ ಚಿಕನ್
ಚೆಟ್ಟಿನಾಡ್ ಚಿಕನ್

ತಯಾರಿಸುವ ವಿಧಾನ: ಒಂದು ಬಟ್ಟಲಿನಲ್ಲಿ ತೊಳೆದು ಕತ್ತರಿಸಿದ ಚಿಕನ್, ಉಪ್ಪು, ನಿಂಬೆರಸ, ಅರಿಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು 15 ರಿಂದ 20 ನಿಮಿಷ ನೆನೆಸಿಡಿ. ಒಂದು ಬಾಣಲೆಗೆ ಒಣ ಮೆಣಸು, ಚಕ್ಕೆ, ಏಲಕ್ಕಿ, ಜಾಪತ್ರೆ ಹೂ, ಮರಾಠಿ ಮೊಗ್ಗು, ನಕ್ಷತ್ರ ಹೂ, ಕಾಳುಮೆಣಸು, ಜೀರಿಗೆ, ಸೋಂಪು, ಕೊತ್ತಂಬರಿ ಕಾಳು ಮತ್ತು ಹಸಿ ತೆಂಗಿನಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಹುರಿದ ಪದಾರ್ಥಗಳು ತಣ್ಣಗಾದ ನಂತರ ಒಂದು ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ. ಒಂದು ಬಾಣಲೆಗೆ 5 ಚಮಚ ಎಣ್ಣೆ ಹಾಕಿ, ಈರುಳ್ಳಿ, ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಮಿಶ್ರಣ ಮಾಡಿದ್ದ ಚಿಕನ್ ಹಾಕಿ 10 ನಿಮಿಷ ಮಧ್ಯಮ ಉರಿಯಲ್ಲಿ ಚಿಕನ್ ನೀರಿನ ಅಂಶ ಬಿಡುವವರೆಗೂ ಹುರಿದುಕೊಳ್ಳಿ. ಚಿಕನ್ ಡ್ರೈ ಆದ ಮೇಲೆ ರುಬ್ಬಿದ ಮಸಾಲೆ ಪುಡಿ ಸೇರಿಸಿ ಮಿಶ್ರಣ ಮಾಡಿ, ಇದಕ್ಕೆ ಮುಕ್ಕಾಲು ಕಪ್ ನೀರು, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಕಡಿಮೆ ಉರಿ ಇಟ್ಟು ಮುಚ್ಚಳ ಮುಚ್ಚಿ 10 ನಿಮಿಷ ಬಿಡಿ (ಮಧ್ಯದಲ್ಲಿ ಒಂದೆರೆಡು ಬಾರಿ ಕಲೆಸಿಕೊಳ್ಳಿ), ಕೊನೆಗೆ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿದರೆ ಸೂಪರ್ ಚೆಟ್ಟಿನಾಡ್ ಚಿಕನ್ ಸವಿಯಲು ಸಿದ್ಧ.

***

ಚಿಕನ್ ಕೈಮಾ ಮಂಚೂರಿಯನ್

ಬೇಕಾಗುವ ಸಾಮಗ್ರಿಗಳು: ಚಿಕನ್ ಕೈಮಾ - 1 ಕೆಜಿ, ಕಾರ್ನ್‌ಫ್ಲೋರ್‌ - 4 ಚಮಚ, ಮೈದಾ ಹಿಟ್ಟು - 2 ಚಮಚ, ಮೊಟ್ಟೆ - 1, ಈರುಳ್ಳಿ - 2, ಕ್ಯಾಪ್ಸಿಕಂ - 1, ಖಾರದಪುಡಿ - 1 ಟೀ ಚಮಚ, ಕಾಳುಮೆಣಸಿನ ಪುಡಿ - 1 ಟೀ ಚಮಚ, ಹಸಿಮೆಣಸಿನಕಾಯಿ - 3, ಹೆಚ್ಚಿದ ಶುಂಠಿ - 2 ಚಮಚ, ಹೆಚ್ಚಿದ ಬೆಳ್ಳುಳ್ಳಿ - 2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಟೊಮೆಟೊ ಸಾಸ್ - 4 ಚಮಚ, ಸೋಯಾ ಸಾಸ್ - 1 ಚಮಚ, ರೆಡ್ ಚಿಲ್ಲಿ ಸಾಸ್ - 2 ಚಮಚ, ಕೊತ್ತಂಬರಿ ಸೊಪ್ಪು - 1/4 ಕಪ್, ಅಡುಗೆ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ಚಿಕನ್ ಕೈಮಾ ಮಂಚೂರಿಯನ್
ಚಿಕನ್ ಕೈಮಾ ಮಂಚೂರಿಯನ್

ತಯಾರಿಸುವ ವಿಧಾನ: ಒಂದು ಬಟ್ಟಲಿಗೆ ಚಿಕನ್ ಕೈಮಾ ಹಾಕಿಕೊಳ್ಳಿ, ಇದಕ್ಕೆ ಮೊಟ್ಟೆ, ಹೆಚ್ಚಿದ ಈರುಳ್ಳಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಕಾಳುಮೆಣಸಿನ ಪುಡಿ ಅರ್ಧ ಚಮಚ, ಖಾರದ ಪುಡಿ ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕಾರ್ನ್‌ಫ್ಲೋರ್‌ 3 ಚಮಚ, ಮೈದಾಹಿಟ್ಟು 2 ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿಮಾಡಿಕೊಂಡು ಚಿಕ್ಕ ಚಿಕ್ಕ ಉಂಡೆ ಆಕಾರದಲ್ಲಿ ಕರಿಯಿರಿ. ಸರಿಯಾಗಿ ಬಣ್ಣ ಬದಲಾಗುವವರೆಗೂ ಬೇಯಿಸಿಕೊಂಡು ಪಕ್ಕಕ್ಕೆ ಇಡಿ. ಒಂದು ಕಡಾಯಿಯಲ್ಲಿ 4 ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಉರಿ ಕಡಿಮೆ ಮಾಡಿ ಇದಕ್ಕೆ ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್ ಹಾಕಿ ಉಳಿದಿರುವ ಕಾಳುಮೆಣಸಿನಪುಡಿ, ಖಾರದಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹುರಿದುಕೊಳ್ಳಿ, ಒಂದೂವರೆ ಕಪ್ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿದ ಚಿಕನ್ ಉಂಡೆಗಳನ್ನು ಸೇರಿಸಿ 2 ನಿಮಿಷ ಹುರಿಯಿರಿ.ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿ ಬಿಸಿಯಾದ ರುಚಿಕರವಾದ ಚಿಕನ್ ಕೈಮಾ ಮಂಚೂರಿಯನ್ ತಿನ್ನಲು ಕೊಡಿ.

ಲೇಖಕಿ: ‘ರೇಖಾ ಅಡುಗೆ’ ಯೂಟ್ಯೂಬ್ ಚಾನೆಲ್ ನಿರ್ವಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT