ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದ ತಿಂಡಿಗಳು

Last Updated 6 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಸಾಕಷ್ಟು ಪೌಷ್ಠಿಕಾಂಶಗಳನ್ನು ಹೊಂದಿರುವ ಬೆಳೆಗಳಲ್ಲಿ ಜೋಳವೂ ಒಂದು. ಜೋಳದ ರೊಟ್ಟಿ ಫೇಮಸ್‌. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ರೊಟ್ಟಿಯನ್ನು ಜನ ಇಷ್ಟಪಟ್ಟು ಸೇವಿಸುತ್ತಾರೆ. ಜೋಳದಿಂದ ರೊಟ್ಟಿಯ ಜತೆಗೆ ಇತರ ತಿನಿಸುಗಳನ್ನು ಸಿದ್ಧಪಡಿಸಬಹುದು.

ಕಳೆದ ವಾರ ಜೋಳದ ದೋಸೆ, ಜೋಳದ ಅನ್ನ ಮಾಡುವ ವಿಧಾನವನ್ನು ತಿಳಿದು ಕೊಂಡಿದ್ದೇವೆ. ಈ ವಾರ ಜೋಳದ ಸಮೋಸ, ಜೋಳದ ಅಂಬಲಿ, ಜೋಳದ ಉಪ್ಪಿಟ್ಟು ಸಿದ್ಧಪಡಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಜೋಳದ ಸಮೋಸ
ಸಾಮಗ್ರಿಗಳು:
ಜೋಳದ ಹಿಟ್ಟು– 1 ಕಪ್‌, ಮೈದಾ ಹಿಟ್ಟು– 1 ಕಪ್‌, ಆಲೂಗಡ್ಡೆ, ಬೇಯಿಸಿದ ಬಟಾಣಿ, ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಕರಿಬೇವು.

ತಯಾರಿಸುವ ವಿಧಾನ
* ಒಂದು ಕಪ್ಪು ಜೋಳದ ಹಿಟ್ಟಿಗೆ ಒಂದು ಕಪ್ಪು ಮೈದಾ ಹಿಟ್ಟು ಬೆರಿಸಿ.

* ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ, ಹಿಟ್ಟನ್ನು ಹದವಾಗಿ ನಾದಿ.

* ಸಣ್ಣಗೆ ಚಪಾತಿ ಉಂಡೆ ಮಾಡಿ, ಲತ್ತಣಿಗೆಯಿಂದ ಅಗಲ ಮಾಡಿ. ನಂತರ ಅದರ ಅರ್ಧ ಭಾಗವನ್ನು ಕತ್ತರಿಸಿ ಇಡಿ.

* ಬೇಯಿಸಿದ ಆಲೂಗಡ್ಡೆಯನ್ನು ಸರಿಯಾಗಿ ಕಿವುಚಿ, ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಬೇಯಿಸಿದ ಬಟಾಣಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಗ್ಗರಣೆ ಹಾಕಿ.

* ಈ ಮಸಾಲೆಯನ್ನು ಅರ್ಧ ಕತ್ತರಿಸಿದ ಚಪಾತಿಯಲ್ಲಿ ತುಂಬಿ, ತ್ರಿಕೋನಾಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಕರಿಯಿರಿ.

****


ಜೋಳದ ಉಪ್ಪಿಟ್ಟು
ಸಾಮಗ್ರಿಗಳು:
ಜೋಳದ ರವೆ– 1 ಕಪ್, ಕಡಲೆ ಬೇಳೆ, ಸಾಸಿವೆ, ಜೀರಿಗೆ, ಕತ್ತರಿಸಿದ ಈರುಳ್ಳಿ, ಗಜ್ಜರಿ, ಹಸಿ ಮೆಣಸಿನಕಾಯಿ, ಟೊಮೆಟೊ, ಕರಿಬೇವು ಮತ್ತು ಉಪ್ಪು.

ತಯಾರಿಸುವ ವಿಧಾನ
* ಒಂದು ಕಪ್ಪು ಜೋಳದ ರವೆಯನ್ನು ಕಂದು ಬಣ್ಣಕ್ಕೆ ಬದಲಾಗುವವರೆಗೆ ಹುರಿಯಿರಿ.

* ಸಾಸಿವೆ, ಕಡಲೆ ಬೇಳೆ, ಈರುಳ್ಳಿ, ಹಸಿ ಮೆಣಸಿನ ಕಾಯಿ, ಗಜ್ಜರಿ, ಟೊಮೆಟೊ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.

* ಮೂರು ಕಪ್ಪು ನೀರು ಮತ್ತು ಉಪ್ಪನ್ನು ಹಾಕಿ ಕುದಿಸಿ. ನೀರು ಕುದಿ ಬಂದ ಮೇಲೆ ಹುರಿದ ರವೆಯನ್ನು ನಿಧಾನವಾಗಿ ಸೇರಿಸಿ.

* ಕಡಿಮೆ ಉಷ್ಣದಲ್ಲಿ ಮೃದುವಾಗುವವರೆಗೂ ಬೇಯಿಸಿ. ಈಗ ಬಿಸಿ ಬಿಸಿಯಾಗಿರುವ ಜೋಳದ ಉಪ್ಪಿಟ್ಟು ಸವಿಯಲು ಸಿದ್ಧ.

***
ಜೋಳದ ಅಂಬಲಿ
ಸಾಮಗ್ರಿಗಳು:
ಜೋಳ–1/2 ಕಪ್‌, ಅನ್ನದ ಗಂಜಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
* ಜೋಳದ ಹಿಟ್ಟನ್ನು ಉಗುರು ಬೆಚ್ಚನೆ ನೀರಿನಲ್ಲಿ ಗಂಟು ಉಂಟಾಗದ ಹಾಗೆ ಕಲಿಸಿ ಮತ್ತು ಅನ್ನದ ಗಂಜಿ, ಉಪ್ಪು ಸೇರಿಸಿ 15ರಿಂದ 20 ನಿಮಿಷ ಕುದಿಸಿ.

* ಬಳಿಕ ತಣ್ಣಗೆ ಮಾಡಿ ಕುಡಿಯಿರಿ. ಇಲ್ಲವೆ ಮಣ್ಣಿನ ಮಡಿಕೆಯಲ್ಲಿ ರಾತ್ರಿಯಿಡಿ ಇಟ್ಟು ಮುಂಜಾನೆ ಸೇವಿಸಿ.

ಕೃಪೆ: ಸಿರಿಧಾನ್ಯಗಳ ಪಾಕ ವಿಧಾನಗಳು, ಕೃಷಿ ಇಲಾಖೆಯ ಕೈಪಿಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT