ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಿಪಿ: ನವರ ಕ್ಯಾನಪ್ಸ್‌, ಸಾಮೆ ಸಲಾಡ್‌

Last Updated 3 ಡಿಸೆಂಬರ್ 2022, 2:15 IST
ಅಕ್ಷರ ಗಾತ್ರ

ದೇಸಿ ಅಕ್ಕಿ ತಳಿಗಳಿಂದ ವಿಶಿಷ್ಟವಾದ ಸಸ್ಯಾಹಾರ ಮತ್ತು ಮಾಂಸಹಾರ ಖಾದ್ಯಗಳನ್ನು ತಯಾರಿಸುವ ಕುರಿತುಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆಯ ಬಾಣಸಿಗರಾದ ರುತ್ವಿಕ್‌ ಅಜಿತ್‌ ಖಾಸ್ನಿಸ್‌ ಮತ್ತು ವಿಕಾಸ್‌ ಪಿ ಮಾನೆ ತೋರಿಸಿಕೊಟ್ಟಿದ್ದಾರೆ. ಅವುಗಳ ಕೆಲವು ರೆಸಿಪಿಗಳನ್ನು ಶ್ರೀನಿಧಿ ಅಡಿಗ ಅವರು ಇಲ್ಲಿ ಪರಿಚಯಿಸಿದ್ದಾರೆ.

ನವರ ಅಕ್ಕಿ ಕ್ಯಾನಪ್ಸ್(ವಡೆಗಳು)

ಬೇಕಾಗುವ ಸಾಮಗ್ರಿಗಳು: ಅರ್ಧ ಕಪ್ ನವರ ಅಕ್ಕಿ, ಒಂದೂವರೆ ಕಪ್ ನೀರು, 50 ಮಿ.ಲಿ ಲೀಟರ್‌ ಎಣ್ಣೆ, ರುಚಿಗೆ ತಕ್ಕಂತೆ ಉಪ್ಪು.

ಟಾಪಿಂಗ್(ಮಾಂಸಹಾರ): 250 ಗ್ರಾಂ ಚಿಕನ್ ಕೀಮಾ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯ ಎಸಳು 3-4 , ಕತ್ತರಿಸಿದ ಸ್ಪ್ರಿಂಗ್ ಆನಿಯನ್ 50 ಗ್ರಾಂ , 50 ಗ್ರಾಂ ಹೆಚ್ಚಿದ ಈರುಳ್ಳಿ, ಒಂದು ಚಮಚ ಸೋಯಾ ಸಾಸ್ ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು, ಒಂದು ಚಮಚ ನಿಂಬೆ ರಸ

ಟಾಪಿಂಗ್‌(ಸಸ್ಯಾಹಾರ): 250 ಗ್ರಾಂ ಅಣಬೆಗಳು 100 ಗ್ರಾಂ, ಚೌಕಾಕಾರವಾಗಿ ಕತ್ತರಿಸಿದ ಕ್ಯಾರೆಟ್ 100 ಗ್ರಾಂ, ಸಣ್ಣಗೆ ಹೆಚ್ಚಿದ ಈರುಳ್ಳಿ 3-4, ಬೆಳ್ಳುಳ್ಳಿಯ ಎಸಳುಗಳು 3-4, 1 ಚಮಚ ಸೋಯಾ ಸಾಸ್ ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು

ಮಾಡುವ ವಿಧಾನ:ಮೊದಲಿಗೆ ಅಕ್ಕಿಯನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಎರಡು ವಿಷಲ್‌ ನಲ್ಲಿಬೇಯಿಸಿಕೊಳ್ಳಬೇಕು. ಅನ್ನ ಬೆಂದು ತಣ್ಣಗಾದ ನಂತರ, ಕೈಯಲ್ಲಿ ಹದ ಮಾಡಿಕೊಂಡು ಅದರಲ್ಲಿ ನಾಣ್ಯದ ಗಾತ್ರದ ಚಿಕ್ಕ ಬಿಲ್ಲೆಗಳನ್ನು ಮಾಡಿಕೊಳ್ಳಬೇಕು. ನಿಮ್ಮ ರುಚಿಗೆ ತಕ್ಕಂತೆ ನಿಮಗೆ ಬೇಕಾದಲ್ಲಿ ಅನ್ನಕ್ಕೆ ಹೆಚ್ಚುವರಿಯಾಗಿ ಆಯ್ಕೆಯ ಮಸಾಲೆಗಳನ್ನು ಸೇರಿಸಿ ನಂತರ ಬಿಲ್ಲೆಗಳನ್ನು ತಟ್ಟಿಕೊಳ್ಳಬಹುದು. ಬಿಲ್ಲೆಗಳ ತಯಾರಾದ ಮೇಲೆ ಅವುಗಳನ್ನು ತವಾ ಅಥವಾ ಪ್ಯಾನ್‌ನಲ್ಲಿ ಸ್ವಲ್ಪವೇ ಎಣ್ಣೆ ಹಾಕುತ್ತಾ ಮಾಡಬೇಕು. ಕ್ಯಾನಪಿಯ ತಯಾರಿಕೆಯಲ್ಲಿ ಪ್ರಮುಖ ಭಾಗ ಇದರ ಟ್ಯಾಪಿಂಗ್‌. ಇದನ್ನು ಸಸ್ಯಹಾರಿಗಳು ಹಾಗೂ ಮಾಂಸಹಾರಿಗಳು ಅವರ ರುಚಿಗೆ ತಕ್ಕಂತೆ ಮಾಡಿಕೊಳ್ಳಬಹುದು.

ಸಸ್ಯಾಹಾರ ಖಾದ್ಯ: ಮೊದಲು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ ಸೇರಿಸಿ. ಅವು ಕಂದು ಬಣ್ಣಕ್ಕೆ ಬರಲು ಪ್ರಾರಂಭಿಸಿದಾಗ, ಚಿಕ್ಕದಾಗಿ ಕತ್ತರಿಸಿದ ಅಣಬೆಗಳು ಮತ್ತು ಕ್ಯಾರೆಟ್‌ಗಳನ್ನು ಸೇರಿಸಬೇಕು. ತರಕಾರಿಗಳು ಬೇಯಲು ಪ್ರಾರಂಭಿಸಿದಾಗ, ಸೋಯಾ ಸಾಸ್, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಬೇಕು. ಕ್ಯಾನಪಿಗಳನ್ನು ಅಲಂಕರಿಸುವಾಗ ಅವುಗಳನ್ನು ಒಂದು ಪ್ಲೇಟ್‌ನಲ್ಲಿ ಜೋಡಿಸಿ ನಂತರ ಅವುಗಳ ಮೇಲೆ ಸ್ವಲ್ಪ ಸಾಸ್‌ ಹಾಕಬೇಕು. ನಂತರ ಬೇಯಿಸಿಕೊಂಡ ತರಕಾರಿಗಳನ್ನು ಅದರ ಮೇಲೆ ಹರಡಬೇಕು. ತಾಜಾ ಸೊಪ್ಪುಗಳನ್ನೂ ಇವುಗಳ ಮೇಲೆ ಹರಡಿ ಅಲಂಕರಿಸಲು ಬಳಸಬಹುದು.

ಮಾಂಸಾಹಾರ ಖಾದ್ಯ: ಹುರಿದು ಬೇಯಿಸಿದ ಚಿಕನ್‌ ಕೀಮಾದ ಉಂಡೆಗಳು, ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ ಸೊಪ್ಪು (ಸ್ಪಿಂಗ್‌ ಆನಿಯನ್‌), ನುಣ್ಣಗೆ ಕತ್ತರಿಸಿದ ಈರುಳ್ಳಿ, ಸೋಯಾ ಸಾಸ್ ಮತ್ತು ರುಚಿಗೆ ತಕ್ಕಂತೆ ಉಪ್ಪು ಮತ್ತು ಖಾರದ ಪುಡಿಯನ್ನು ಕ್ಯಾನಪೀಸ್‌ಗಳ ಟಾಪಿಂಗ್‌ಗೆ ಬಳಸಬಹುದು.

ಸಾಮೆ ಅಕ್ಕಿ ಮಸಾಲ ಸಲಾಡ್
ಸಾಮೆ ಅಕ್ಕಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೃದಯ ಸಂಬಂಧಿ ರೋಗಗಳಿಗೆ ಉತ್ತಮ ಮತ್ತು ಇದು ಕೊಬ್ಬನ್ನು ನಿಯಂತ್ರಿಸುತ್ತದೆ. ಸಾಮೆಯಲ್ಲಿವಿಟಮಿನ್‌ ಬಿ3ದೊರೆಯುತ್ತದೆ.

ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಸಾಮೆ ಅಕ್ಕಿ, ಒಂದೂವರೆ- ಕಪ್ ನೀರು (ನಿಮ್ಮಲ್ಲಿರುವ ಕುಕ್ಕರ್ ಅವಲಂಬಿಸಿ), ಒಂದು ತುರಿದ ಕ್ಯಾರೆಟ್, ಅರ್ಧ ಲೀಟರ್ ಕಿತ್ತಳೆ ರಸ, 250 ಮಿಲಿ ಆಲಿವ್ ಎಣ್ಣೆ, ಒಂದು ನಿಂಬೆ ರಸ, ಒಂದು ಚಮಚ ಜೇನುತುಪ್ಪ, ಒಂದು ಚಮಚ ವಿನೆಗರ್, ರುಚಿಗೆ ತಕ್ಕಂತೆ ಉಪ್ಪು.

ಅಲಂಕಾರಕ್ಕೆ: ಕತ್ತರಿಸಿದ ಬೀಜರಹಿತ ಸೌತೆಕಾಯಿ, 1 ಕಪ್‌ ಬೇಯಿಸಿದ ಕಡಲೆ ಕಾಳು (ಮಾಂಸಾಹಾರ ಪ್ರಿಯರು ಚಿಕನ್‌ನನ್ನು ಕಡಲೆ ಬದಲಿಗೆ ಬಳಸಬಹುದು), ಒಂದು ದಾಳಿಂಬೆ ಹಣ್ಣು, ಒಂದು ಮುಷ್ಠಿ ನಿಮ್ಮ ಆಯ್ಕೆಯ ಸೊಪ್ಪು, ಒಂದು ಕತ್ತರಿಸಿದ ಟೊಮೆಟೊ, 1 ಪಲಾವು ಎಲೆ, 2-3 ಲವಂಗ

ತಯಾರಿಸುವ ವಿಧಾನ
ಮೊದಲಿಗೆ ಒಂದು ರೈಸ್ ಕುಕ್ಕರ್‌ನಲ್ಲಿ ಪಲಾವು ಎಲೆ ಮತ್ತು ಲವಂಗವನ್ನು ಸ್ವಲ್ಪ ಎಣ್ಣೆಯನ್ನು ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ಸಾಮೆಯನ್ನು ಸೇರಿಸಿ ಸ್ವಲ್ಯ ಹೊತ್ತು ಹುರಿದು, ನಂತರ ನೀರು ಸೇರಿಸಿ ಅದನ್ನು ಎರಡು ವಿಶಲ್‌ವರೆಗೆ ಬೇಯಿಸಿ. ನಂತರ ಪ್ಯಾನ್‌ನಲ್ಲಿ ಕಿತ್ತಳೆ ರಸವನ್ನು ಸೇರಿಸಿ ಮಧ್ಯಮ ಉರಿಯಲ್ಲಿ ನಿಧಾನವಾಗಿ ಬಿಸಿ ಮಾಡಿ ಆಗ ಕಿತ್ತಳೆ ರಸ ದಪ್ಪವಾಗುತ್ತಾ ರಸದ ಅಂಶ ಕಡಿಮೆಯಾಗುತ್ತಾ ಬರುತ್ತದೆ. ರಸದ ಪ್ರಮಾಣ ಮುಕ್ಕಾಲು ಭಾಗಕ್ಕೆ ಇಳಿಯುವವರೆಗೆ/ಕುಗ್ಗುವರೆಗೂ ಈ ಮಿಶ್ರಣವನ್ನು ಕುದಿಸಬೇಕು.

ಕಿತ್ತಳೆ ರಸ ಸಿದ್ಧವಾದ ನಂತರ, ಸಲಾಡ್‌ ತಯಾರಿ ಆರಂಭಿಸಿ. ಒಂದು ಪಾತ್ರೆಗೆ ಕಿತ್ತಳೆ ರಸ, ಆಲಿವ್ ಎಣ್ಣೆ, ನಿಂಬೆ ರಸ, ಜೇನುತುಪ್ಪ ಮತ್ತು ವಿನೆಗರ್ ಅನ್ನು ಸೇರಿಸಿ ಅದನ್ನು ಹ್ಯಾಂಡ್ ಬ್ಲೆಂಡರ್ ಸಹಾಯದಿಂದ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು. ನಂತರ ಇನ್ನೊಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಸಾಮೆ ಅಕ್ಕಿ ತೆಗೆದುಕೊಂಡು ಅದಕ್ಕೆ ಈ ಕಿತ್ತಳೆ ಹಣ್ಣಿನ ರಸ ಮತ್ತು ಉಳಿದ ಪದಾರ್ಥಗಳನ್ನು ಸೇರಿಸಿ ಮಾಡಿದ ಮಿಶ್ರಣವನ್ನು ಅಗತ್ಯಕ್ಕೆ ತಕ್ಕಷ್ಟು ಹಾಕಬೇಕು. ಅದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಅದರ ಮೇಲೆ ಕ್ಯಾರೆಟ್‌ ತುರಿ, ಸೌತೆಕಾಯಿ, ಬೇಯಿಸಿದ ಕಡಲೆ ಕಾಳು (ಮಾಂಸಹಾರಕ್ಕಾದರೆ ಚಿಕನ್‌ ಪೀಸ್‌), ಕತ್ತರಿಸಿದ ಟೊಮೆಟೊ, ದಾಳಿಂಬೆ ಹಣ್ಣು, ಸೊಪ್ಪು ಇವುಗಳಿಂದ ಅಲಂಕರಿಸಿದರೆ ರುಚಿಕರ ಮಸಾಲಾ ಸಲಾಡ್‌ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT