‘ಉಂಡಿ ಕಟ್ಟೂದ್ss ಅಗ್ದಿ ಸರಳೈತ್ರಿ. ಆದ್ರ ಬಾಳ್ ಮಂದಿ ಸಣ್ಪುಟ್ ತಪ್ ಮಾಡ್ತಾರ. ಆಗ ಉಂಡಿ ರುಚಿನೇ ಹಾಳಾಕತಿ. ಪಾಕ ಛಲೋತ್ನಗೆ ಹಿಡದ್ರ ಉಂಡಿ ಮಸ್ತ್ ಬರ್ತಾವ. ಪಂಚ್ಮಿ ಬಂತಲ್ರೀ, ಬರ್ರಿss… ಪಾಕ ಹೆಂಗ್ ಹಿಡಿಯೋದ್ ಅಂತ ತೋರಿಸ್ತೀನಿ...’

ಹೀಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ ಆಹ್ವಾನವೀಯುವ ‘ಪಾಕ ಶೃಂಗಾರ’ ಯೂಟ್ಯೂಬ್ ಚಾನೆಲ್ನ ಗೀತಾ ಪ್ರದೀಪ್, ಬಗೆಬಗೆ ಉಂಡಿ ಕಟ್ಟುವುದರಲ್ಲಿ ಸಿದ್ಧಹಸ್ತರು.

ಇನ್ನೇನು ಪಂಚಮಿ ಹಬ್ಬ ಹೊಸ್ತಿಲಲ್ಲಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಂತೂ ಈ ಹಬ್ಬದಲ್ಲಿ ಉಂಡಿಗಳದ್ದೇ ಕಾರುಬಾರು. ತಂಬಿಟ್ಟು, ಅಳ್ಳಿಟ್ಟು, ಶೇಂಗಾ ಉಂಡಿ, ಹುರಿಗಡಲೆ ಉಂಡಿ, ಗುಳ್ಳಡಕಿ ಉಂಡಿ, ಲಡಕಿ ಉಂಡಿ, ಎಳ್ಳುಂಡಿ, ಮಂಡಕ್ಕಿ ಉಂಡಿ, ರಾಜಗಿರಿ ಉಂಡಿ... ಸಾಲುಗಟ್ಟುತ್ತವೆ.

ಉಂಡಿ ಕಟ್ಟಲು ಹದವರಿತ ಬೆಲ್ಲ ಅಥವಾ ಸಕ್ಕರೆಯ ಪಾಕ ಜೊತೆಯಾದರೇನೆ ಚೆನ್ನ. ಆದರೆ ಬಹುತೇಕರಿಗೆ ಬೆಲ್ಲಕ್ಕೆ ಎಷ್ಟು ನೀರು ಹಾಕಬೇಕು, ಎಷ್ಟು ಹೊತ್ತು ಕುದಿದರೆ ಪಾಕ ಬರುತ್ತದೆ, ಯಾವ ಬಗೆಯ ಉಂಡಿಗೆ ಎಷ್ಟು ಬೆಲ್ಲ ಬೇಕು ಎನ್ನುವಂಥ ಹಲವು ಪ್ರಶ್ನೆಗಳು ಕಾಡುತ್ತವೆ. ಪಾಕದ ದೇಖರೇಖಿ ಅರಿತಿರುವ ಗೀತಾ, ಅಚ್ಚುಕಟ್ಟಾಗಿ ಪಾಕ ತೆಗೆಯುವುದನ್ನಷ್ಟೇ ಅಲ್ಲ, ಪಾಕ ತೆಗೆಯದೇ ರುಚಿಕಟ್ಟಾಗಿ ಉಂಡಿ ಕಟ್ಟುವ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ! ಉಂಡಿಪ್ರಿಯರಿಗೆ 87 ಬಗೆಯ ಉಂಡಿಗಳ ರುಚಿಯನ್ನು ಉಣಿಸಿದ್ದಾರೆ.

ಎಂಟು ವರ್ಷಗಳ ಹಿಂದೆ, ಎಸ್ಎಸ್ಎಲ್ಸಿ ಓದುತ್ತಿದ್ದ ಮಗಳ ನೆರವಿನಿಂದ ವಿಡಿಯೊ ಮಾಡಿ ಯೂಟ್ಯೂಬ್ಗೆ ಅವರು ಅಪ್ಲೋಡ್ ಮಾಡಿದ ಮೊದಲ ರೆಸಿಪಿಯೂ ಅಗಸೆ ಉಂಡಿಯದ್ದು. ಮೂರು ಲಕ್ಷಕ್ಕೂ ಹೆಚ್ಚು ಚಂದಾದಾರರಿರುವ ತಮ್ಮ ಚಾನೆಲ್ನಲ್ಲಿ, ತೆರೆಮರೆಗೆ ಸರಿದಿರುವ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳನ್ನು ಹೆಕ್ಕಿ ಹೇಳಿಕೊಡುವ ಅಭಿಲಾಷೆ ಅವರದ್ದು. ವಿಜಯಪುರ ಜಿಲ್ಲೆಯವರಾದ ಗೀತಾ ಸದ್ಯಕ್ಕೆ ಮಣಿಪಾಲದಲ್ಲಿ ನೆಲೆಸಿದ್ದಾರೆ.

‘ಈಗಿನ ಬಾಳ್ ಮಂದಿಗೆ ಉತ್ತರ ಕರ್ನಾಟಕದ ಊಟ ಅಂದ್ಕೂಡ್ಲೆ ಎಣ್ಗಾಯ್ ಪಲ್ಯ, ಜ್ವಾಳದ್ ರೊಟ್ಟಿ, ಝುಣುಕ ಎಂದಿರ್ತೈತ್ರಿ. ಅದರ ಹೊರತಾಗಿ ನಮ್ ಅಡುಗೆಗಳು ಬಾಳ್ ಅದಾವು. ಅಂಥವನ್ನೆಲ್ಲ ಅಮ್ಮ, ಅಜ್ಜಿ, ಅತ್ತೆಯಿಂದ ಕಲ್ತು ಹೇಳ್ಕೊಡ್ತಿದೀನಿ. ನನ್ ಅಡುಗಿ ನೋಡಿ, ಟ್ರೈ ಮಾಡಿ ಅಮೆರಿಕ, ದುಬೈ, ಲಂಡನ್ನಿಂದಲೂ ಫೋಟೊ ಹಾಕ್ತಾರ್ರಿ. ಆಗ ಅಗ್ದಿ ಖುಷಿ ಆಕೇತಿ. ನಮ್ ಹಿಂದಿನ ತಲೆಮಾರಿನ ರೆಸಿಪಿಗಳ್ನ ಎಲ್ಲರೂ ಮಾಡೂವಂತಾಗ್ಬೇಕ್. ಅದೇ ನಮ್ ಕಾಳಜಿ’ ಎನ್ನುತ್ತಾ ನಗೆ ಚೆಲ್ಲುವರು ಗೀತಾ.

ಕಾರುಕಲ್ಲಲ್ಲಿ ಕುಟ್ಟಿ ಕುಟ್ಟಿ...

ಅವರ ಅಡುಗೆ ಮನೆಯ ಮತ್ತೊಂದು ವಿಶೇಷ ಕಾರುಕಲ್ಲು (ಕುಟ್ಟುವ ಕಲ್ಲು). ಈ ಕಲ್ಲಿನಲ್ಲಿ ಕುಟ್ಟಿ ಮಾಡಿದ ಪದಾರ್ಥದ ರುಚಿಯೇ ಬೇರೆ. ಅಜ್ಜಿಯಿಂದ ಬಳುವಳಿಯಾಗಿ ಬಂದ, 50 ವರ್ಷಗಳಿಗೂ ಹಳೆಯದಾದ ಕಾರುಕಲ್ಲು ಗೀತಾ ಅವರ ಬಹುತೇಕ ವಿಡಿಯೊಗಳಲ್ಲಿ ಕಾಣಿಸಿಕೊಳ್ಳುತ್ತದೆ. ವೀಕ್ಷಕರಿಗೂ ‘ಕುಟ್ಟಾಣಿಯಲ್ಲೇ ಕುಟ್ಟಿ ಮಾಡಿ’ ಎಂದು ಸಲಹೆ ನೀಡುವ ಅವರು, ಹೊಸ ಕಾರುಕಲ್ಲು ಪಳಗಿಸುವುದನ್ನೂ ಹೇಳಿಕೊಟ್ಟಿದ್ದಾರೆ. ಹಾಗೇ ಸಾಂಬಾರು, ಪಲ್ಯ ಮಾಡಲು ಮಣ್ಣಿನ ಗಡಿಗೆ ಬಳಸುವ ಗೀತಾ, ಅದರಲ್ಲಿ ಮಾಡುವುದರಿಂದ ಪಡೆಯಬಹುದಾದ ಆರೋಗ್ಯದ ಗುಟ್ಟನ್ನೂ ತಿಳಿಸಿದ್ದಾರೆ. ಇನ್ನು ಕಬ್ಬಿಣದ ಹೆಂಚು ಪಳಗಿಸುವುದು ಸೇರಿದಂತೆ ಪಾಕಶಾಲೆಯ ಒಳ ಹೊರಗುಗಳನ್ನು ಮನಮುಟ್ಟುವ ರೀತಿಯಲ್ಲಿ ಬಿಡಿಸಿಟ್ಟಿದ್ದಾರೆ.

ಸಾಮಾನ್ಯವಾಗಿ ಯೂಟ್ಯೂಬರ್ಗಳು ಈಗಿನ ವಿಭಕ್ತ ಕುಟುಂಬಗಳಿಗೆ ಅನುಗುಣವಾಗಿ ಕಡಿಮೆ ಅಳತೆಯಲ್ಲಿ ಅಡುಗೆ ತಯಾರಿ ಕ್ರಮವನ್ನು ಹೇಳಿಕೊಡುತ್ತಾರೆ. ಆದರೆ, ಗೀತಾ ಹೆಚ್ಚು ಪ್ರಮಾಣದಲ್ಲಿ ಮಾಡುವ ರೆಸಿಪಿಗಳ ಬಗ್ಗೆಯೂ ಹೇಳುತ್ತಾರೆ. ಕೆ.ಜಿ. ಅಳತೆಯಲ್ಲಿ ಪುಳಿಯೋಗರೆ ಪುಡಿ, ಶೇಂಗಾ ಚಟ್ನಿಪುಡಿ, ಚಕ್ಕುಲಿ ಹಿಟ್ಟು, ಮಾವಿನಕಾಯಿ ಗುಳಂಬಾ, ಹೆಸರುಕಾಳು ಉಂಡಿ, ಮಾವಿನಕಾಯಿ ಉಪ್ಪಿನಕಾಯಿ, ಐದಾರು ಸೇರುಗಳ ಲೆಕ್ಕದಲ್ಲಿ ಚುರುಮುರಿ, ಚೂಡಾ, ಖಾರಾ ಮಂಡಕ್ಕಿ ಹೀಗೆ ಪಟ್ಟಿ ಬೆಳೆಯುತ್ತದೆ.

ಸಾಬುದಾನಿ ಚೂಡಾ, ಬೆಳ್ಳುಳ್ಳಿ ಚೂಡಾ, ಬಟಾಟಿ ಚುಡ್ವಾ, ದಾವಣಗೆರೆ ನರ್ಗೀಸ್ ಮಂಡಕ್ಕಿ, ಪುದಿನಾ ಮಸಾಲ ಮಂಡಕ್ಕಿ, ಉಳ್ಳಾಗಡ್ಡಿ ಚುನಮರಿ, ಕೊಲ್ಹಾಪುರಿ ಬದಂಗ್ ಚೂಡಾ, ಬೆಳಗಾವಿ ಚುನಮರಿ ಚೂಡಾ ಹೀಗೆ 37 ಬಗೆಯ ಚೂಡಾ ರೆಸಿಪಿಗಳನ್ನು ಹೇಳಿಕೊಟ್ಟಿದ್ದಾರೆ. ಹಾಗೆಯೇ ಸಾಟಿ ಹಚ್ಚಿ ಮಾಡಿದ ಕರ್ಚಿಕಾಯಿ, ಪಡುವಲಕಾಯಿ ಎಣ್ಣೆಗಾಯಿ, ಪರಡಿ ಪಾಯಸ, ಗುದುಗಿನ ಹುಗ್ಗಿ, ಉಳಿದ ಜೋಳದ ರೊಟ್ಟಿಯಿಂದ ಮಾಡುವ ಮಜ್ಜಿಗ್ಯಾಗಿನ ರೊಟ್ಟಿ, ಬಾಂದಿಟ್ಟು, ದೀಪಾವಳಿ ಹಬ್ಬಕ್ಕೆ ಮಾಡುವ ಚೌಡೆ, ಮೆಣಸಿನಕಾಯಿ ಸಂಡಿಗೆ... ಹೀಗೆ ಇವರು ಪರಿಚಯಿಸಿರುವ ಸಾಂಪ್ರದಾಯಿಕ ರೆಸಿಪಿಗಳ ಪಟ್ಟಿಯೂ ಉದ್ದವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.