ಸೋಮವಾರ, ಸೆಪ್ಟೆಂಬರ್ 20, 2021
29 °C

ಮನೆಯಲ್ಲೇ ರುಚಿಕರ ಕಪ್ ನೂಡಲ್‌ ತಯಾರಿಕೆ ಬಲು ಸುಲಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೂಡಲ್ಸ್‌ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ಕಪ್‌ ನೂಡಲ್‌ ಆದರಂತೂ ಕಚೇರಿಗೂ ಒಯ್ಯಬಹುದಿತ್ತು. ಈಗ ಮನೆಯಲ್ಲೇ ಕುಳಿತು ಕೆಲಸ ಮಾಡುವಾಗಲೂ ಬೇಕೆಂದಾಗ ತಿನ್ನಬಹುದು. ಆದರೆ ರಾಸಾಯನಿಕ ವಸ್ತು ಸೇರಿಸಿದ, ಒಣಗಿದ ತರಕಾರಿ ಚೂರುಗಳು.. ಅದೂ ಅಲ್ಲೊಂದು ಇಲ್ಲೊಂದು ಎಂದು ಇಣುಕುವ ಕ್ಯಾರಟ್‌, ಬೀನ್ಸ್‌... ಒಂದು ರೀತಿ ಪ್ಲಾಸ್ಟಿಕ್‌ ಅಗಿದಂತಾಗಿ ಹೇವರಿಕೆ ಹುಟ್ಟುತ್ತದೆ. ಹಾಗಂತ ನೂಡಲ್ಸ್‌ ತಿನ್ನುವುದನ್ನೇ ಬಿಟ್ಟುಬಿಡಲಾದೀತೇ? ಮನೆಯಲ್ಲೇ ಇದನ್ನು ಸಿದ್ಧಪಡಿಸಿಕೊಂಡು ನಾಲಗೆಯ ರುಚಿಯನ್ನು ತಣಿಸಿಕೊಳ್ಳಬಹುದಲ್ಲ.

ಈ ಕಪ್‌ ನೂಡಲ್‌ ತಯಾರಿಸುವುದು ಸುಲಭ ಕೂಡ. ನಿಮಗೆ ಇಷ್ಟವಾದ ಸಾಮಗ್ರಿಗಳನ್ನು ನೂಡಲ್‌ ಜೊತೆ ಸೇರಿಸಿ ಗಾಜಿನ ಜಾರ್‌ನಲ್ಲಿ ತುಂಬಿ ಮುಚ್ಚಳ ಮುಚ್ಚಿ ಫ್ರಿಜ್‌ನಲ್ಲಿಟ್ಟರೆ ಕೆಲಸ ಸುಲಭ. ಬೇಕೆಂದಾಗ ಈ ಜಾರ್‌ ಮುಚ್ಚಳ ತೆಗೆದು ಬೇಕಾದಷ್ಟು ಬಿಸಿ ನೀರು ಸುರುವಿ ರುಚಿಕರವಾದ ನೂಡಲ್ಸ್‌ ಸವಿಯಬಹುದು. ಹಾಗಾದರೆ ನೂಡಲ್ಸ್‌ ಒದ್ದೆಮುದ್ದೆಯಾಗಿ ಗಾಜಿನ ಜಾರ್‌ನಲ್ಲಿ ಕೂತು ಅಕ್ಟೋಪಸ್‌ನ ಜೋತು ಬಿದ್ದ ಬಾಹುಗಳಂತೆ ಕಾಣುವುದಿಲ್ಲವೇ ಎಂಬ ಅನುಮಾನ ಹಲವರಲ್ಲಿರಬಹುದು. ಆದರೆ ತಣ್ಣಗಿನ ನೀರಿನಲ್ಲಿ ನೂಡಲ್ಸ್‌ ಮುಳುಗಿಸಿ ನೋಡಿ. ಅದು ಕರಗದೆ ಹಾಗೇ ತಾಜಾ ಆಗಿ ಕೂತಿರುತ್ತದೆ. ಅದಕ್ಕೆ ಬಿಸಿ ನೀರು ಸೋಕಿದರೆ ಮಾತ್ರ ಮೆತ್ತಗಾಗಿ ತಿನ್ನಲು ಸಿದ್ಧವಾಗುವುದು.

ಇದಕ್ಕೆ ಬೇಕಾಗಿರುವುದು ಸೂಪ್‌ ಪುಡಿ. ನಿಮಗೆ ಇಷ್ಟವಾದ ಪರಿಮಳದ, ಇಷ್ಟವಾದ ರುಚಿಯ ಸೂಪ್‌ ಪ್ಯಾಕೆಟ್‌ ಅಂಗಡಿಯಲ್ಲಿ ಲಭ್ಯ. ಖರೀದಿಸುವ ಮೊದಲು ಹೆಚ್ಚು ಪ್ರಿಸರ್ವೇಟಿವ್‌ ಇಲ್ಲದ ಸೂಪ್ ಪುಡಿ ಅಥವಾ ಪೇಸ್ಟ್‌ ಎಂದು ಖಾತ್ರಿಪಡಿಸಿಕೊಳ್ಳಿ. ಇದಕ್ಕೆ ನೀರು ಸೇರಿಸಿದರೆ ಮಂದವಾದ ದ್ರವ ಸಿದ್ಧ. ಇದಕ್ಕೆ ಬೇಕಿದ್ದರೆ ಸೋಯಾ ಸಾಸ್‌, ಕೆಂಪು ಖಾರ– ಬೆಳ್ಳುಳ್ಳಿ ಸಾಸ್‌ ಸೇರಿಸಬಹುದು.

ಮುಕ್ಕಾಲು ಕಪ್‌ ನೂಡಲ್ಸ್‌ ತೆಗೆದುಕೊಳ್ಳಿ. ಅಂಗಡಿಯಲ್ಲಿ ಸಿಗುವ ರೆಮೆನ್‌ ನೂಡಲ್‌ ಅನ್ನು ಹಾಗೆಯೇ ಬಳಸಬಹುದು. ಅಕ್ಕಿಯ ನೂಡಲ್ಸ್‌, ಸ್ಪೆಗೆಟಿ ಅಥವಾ ಶ್ಯಾವಿಗೆಯಾದರೆ ಬೇಯಿಸಿದ್ದು.

ಕಾಲು ಕಪ್‌ ಫ್ರೋಜನ್‌ ಜೋಳ, ಹಸಿರು ಬಟಾಣಿ, ಕ್ಯಾರಟ್‌, ಮಾಂಸಪ್ರಿಯರಾದರೆ ಬೇಯಿಸಿದ ಮಾಂಸದ ಚೂರು, ಒಣಗಿದ ಅಣಬೆ... ಹೀಗೆ ಗುಡ್ಡೆ ಹಾಕಿಕೊಳ್ಳಬಹುದು. ಫ್ರೋಜನ್‌ ಆಗಿದ್ದು ಸಿಗದಿದ್ದರೆ, ಬೇಯಿಸಿ ಉಳಿದ ತರಕಾರಿ ಹೋಳುಗಳು ಕೂಡ ಆಗಬಹುದು.

ತಾಜಾ ತರಕಾರಿ, ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಿ. ಇದಕ್ಕೆ ಈರುಳ್ಳಿ, ಮೊಳಕೆ ಬಂದ ಹೆಸರು ಕಾಳು, ಲಿಂಬೆ ಹೋಳು.. ಹೀಗೆ ಸಿದ್ಧಪಡಿಸಿಕೊಳ್ಳಿ. ಹಾಗೆಯೇ ಕೊತ್ತಂಬರಿ ಸೊಪ್ಪು.

ಎಲ್ಲವನ್ನೂ ಪದರ ಪದರವಾಗಿ ಗಾಜಿನ ಜಾರ್‌ನಲ್ಲಿ ಜೋಡಿಸಿ, ಬಿಗಿ ಮುಚ್ಚಳ ಮುಚ್ಚಿ ಫ್ರಿಜ್‌ನಲ್ಲಿಟ್ಟರೆ ಒಂದು ವಾರ ತಾಜಾ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು