ಭಾನುವಾರ, ಸೆಪ್ಟೆಂಬರ್ 19, 2021
24 °C

ನಳಪಾಕ: ಜಿಂಜರ್ ಚಿಕನ್ ಗ್ರೀನ್‌ ಬೀನ್ ನೂಡಲ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡಿಮೆ ಕ್ಯಾಲೊರಿ ಅಂಶ ಹೊಂದಿರುವ ಜಿಂಜರ್‌ ಚಿಕನ್ ಗ್ರೀನ್‌ಬೀನ್‌ ನೂಡಲ್ಸ್‌ ಮಧ್ಯಾಹ್ನದ ಊಟಕ್ಕೆ ಹೆಚ್ಚು ಹೊಂದುತ್ತದೆ. ಡಯೆಟ್‌ ಪಾಲಿಸುವವರಿಗೂ ಇದು ಉತ್ತಮ ಎನ್ನಬಹುದು. ಏಷ್ಯಾ ಖಂಡದ ಕೆಲ ಭಾಗ ಹಾಗೂ ಟರ್ಕಿ ದೇಶದಲ್ಲಿ ಈ ರೆಸಿಪಿ ಹೆಚ್ಚು ಬೇಡಿಕೆ ‍ಹೊಂದಿದೆ. ಬೀನ್ಸ್ ಹಾಗೂ ಚಿಕನ್ ಮಿಶ್ರಣವಿರುವ ಈ ನೂಡಲ್ಸ್‌ನಲ್ಲಿ ಕೊಬ್ಬಿನಂಶವೂ ಕಡಿಮೆ. ಕಡಿಮೆ ಸಾಮಗ್ರಿಗಳು ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವ ಗ್ರೀನ್ ಬೀನ್‌ ನೂಡಲ್ಸ್‌ ತಿನ್ನಲು ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು: ಮೂಳೆರಹಿತ ಚಿಕನ್ ತುಂಡುಗಳು – ಅರ್ಧ ಕಪ್‌, ಗ್ರೀನ್‌ ಬೀನ್ಸ್‌ – 200 ಗ್ರಾಂ, ಶುಂಠಿ – ಒಂದೂವರೆ ಇಂಚು, ಬೆಳ್ಳುಳ್ಳಿ – 3 ಎಸಳು, ಸ್ಟೆಮ್‌ ಜಿಂಜರ್‌ ಸಿರಪ್‌ – ಸ್ವಲ್ಪ, ಕಾರ್ನ್‌ಫ್ಲೋರ್‌ – 1 ಚಮಚ, ಸೋಯಾ ಸಾಸ್‌ – 1ಚಮಚ, ರೈಸ್‌ ವಿನೆಗರ್‌ – 2 ಚಮಚ, ಬೇಯಿಸಿದ ಎಗ್‌ ನೂಡಲ್ಸ್‌ – 200ಗ್ರಾಂ.

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ 5 ನಿಮಿಷ ಬೇಯಿಸಿ. ಅದಕ್ಕೆ ಗ್ರೀನ್ ಬೀನ್ಸ್ ಸೇರಿಸಿ ಬೇಯುವವರೆಗೂ ಕೈಯಾಡಿಸಿ. ಅದನ್ನು ಬೇರೆ ಪಾತ್ರೆಗೆ ಹಾಕಿ. ಅದೇ ಎಣ್ಣೆಯಲ್ಲಿ ಜಜ್ಜಿದ ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ 2 ನಿಮಿಷ ಹುರಿಯಿರಿ. ಅದಕ್ಕೆ ಸ್ಟೆಮ್ ಜಿಂಜರ್ ಸಿರಪ್ ಸೇರಿಸಿ. ನಂತರ ಒಂದು ಚಮಚ ನೀರಿನೊಂದಿಗೆ ಕಾರ್ನ್‌ಫ್ಲೋರ್ ಅನ್ನು ಗಂಟಿಲ್ಲದಂತೆ ಮಿಶ್ರಣ ಮಾಡಿ ಅದನ್ನು ಸೇರಿಸಿ. ಸೋಯಾ ಸಾಸ್‌ ಹಾಗೂ ವಿನೆಗರ್ ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಒಂದು ನಿಮಿಷ ಹುರಿದುಕೊಳ್ಳಿ. ಇದನ್ನು ಬೇಯಿಸಿಕೊಂಡ ಎಗ್‌ ನೂಡಲ್ಸ್‌ಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸೋಯಾ ಸಾಸ್ ಚಿಮುಕಿಸಿ ಬಿಸಿ ಇದ್ದಾಗಲೇ ತಿನ್ನಿ.

ಗ್ರಿಲ್ಡ್‌ ಚಿಕನ್ ಸ್ಕ್ಯೂವರ್‌

ಬೇಕಾಗುವ ಸಾಮಗ್ರಿಗಳು: ನಿಂಬೆರಸ – 2, ಮೂಳೆ ರಹಿತ ಚಿಕನ್ ತುಂಡು – 1 ಕಪ್‌, ಕಾಳುಮೆಣಸಿನ ಪುಡಿ – ಚಿಟಿಕೆ, ಬ್ರೆಡ್‌ ತುಂಡುಗಳು – 4, ಬೆಳ್ಳುಳ್ಳಿ ಎಸಳು – ಸ್ವಲ್ಪ (ಚೆನ್ನಾಗಿ ಹೆಚ್ಚಿದ್ದು), ಮೊಟ್ಟೆಯ ಹಳದಿ ಭಾಗ – 1 ದೊಡ್ಡದು, ಸಾಸಿವೆ – 1/2 ಚಮಚ, ಆಲಿವ್ ಎಣ್ಣೆ – 1 ಚಮಚ, ಹೆಚ್ಚಿದ ಪಾರ್ಮಿಸ್ಯಾನ್‌ – 1 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ: ಒಂದು ನಿಂಬೆಹಣ್ಣನ್ನು ಕತ್ತರಿಸಿ ಅರ್ಧ ನಿಂಬೆಹಣ್ಣಿನ ಹೋಳಿನಿಂದ ತಿರುಳು ತೆಗೆದು ಇರಿಸಿ. ಇನ್ನರ್ಧ ನಿಂಬೆಹೋಳನ್ನು ಹಿಂಡಿ ರಸ ತೆಗೆಯಿರಿ. ಚಿಕನ್ ತುಂಡುಗಳನ್ನು ಒಂದೇ ಆಕಾರಕ್ಕೆ ಕತ್ತರಿಸಿಕೊಂಡು ಅದಕ್ಕೆ ಸ್ಕ್ಯೂವರ್‌ಗಳನ್ನು ಚುಚ್ಚಿ. ಅದನ್ನು ಉಪ್ಪು ಹಾಗೂ ಕಾಳುಮೆಣಸಿನ ಮಿಶ್ರಣದಲ್ಲಿ ಅದ್ದಿ. ಅದನ್ನು ಚೆನ್ನಾಗಿ ಎರಡೂ ಬದಿ ಬೇಯಿಸಿ. ಅರ್ಧ ನಿಂಬೆ ತುಂಡನ್ನು ಸುಟ್ಟು ಅದರ ‍ಬೂದಿಯನ್ನು ಚಿಕನ್ ತುಂಡುಗಳ ಮೇಲೆ ಉದುರಿಸಿ. ಬ್ರೆಡ್‌ ಅನ್ನು ಗ್ರಿಲ್ ಮಾಡಿ ಟೋಸ್ಟ್ ತಯಾರಿಸಿಕೊಳ್ಳಿ. ಅದರ ಮೇಲೆ ಬೆಳ್ಳುಳ್ಳಿ ಎಸಳಿನಿಂದ ಉಜ್ಜಿ. ಒಂದು ದೊಡ್ಡ ಬೌಲ್‌ ನಿಂಬೆ ತಿರುಳು, ನಿಂಬೆರಸ, ಮೊಟ್ಟೆಯ ಹಳದಿ ಭಾಗ, ಸಾಸಿವೆ, ಜಜ್ಜಿದ ಬೆಳ್ಳುಳ್ಳಿ ಹಾಗೂ ಉಪ್ಪನ್ನು ಮಿಶ್ರಣ ಮಾಡಿ. ಅದನ್ನು 1 ಚಮಚ ಬಿಸಿ ಎಣ್ಣೆಗೆ ಹಾಕಿ ನಿಧಾನಕ್ಕೆ ಮಿಶ್ರಣ ಮಾಡಿ ಸ್ಕ್ರ್ಯಾಂಬಲ್ಡ್ ಎಗ್ ತಯಾರಿಸಿಕೊಳ್ಳಿ. ಅದರೊಂದಿಗೆ ಬೆಂದ ಚಿಕನ್ ಹಾಗೂ ಟೋಸ್ಟ್ ಸೇರಿಸಿ ಮಿಶ್ರಣ ಮಾಡಿ. ಅದರ ಮೇಲೆ ಪಾರ್ಮಿಸ್ಯಾನ್‌, ಕೊತ್ತಂಬರಿ ಹಾಗೂ ಕಾಳುಮೆಣಸಿನ ಉದುರಿಸಿ ಅಲಂಕರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು