ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಂಥ ಹೋಳಿಗಿ ಸವಿದಾಗ..

Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಹೂವಿನಂಥ ಹೋಳಗಿಯದು ತುಂಬ ಮೃದು...
ತಿನ್ನೋವ್ರೆ ಲಕ್ಕಿ ಗುರು...

ಹಿಂಗ ಕನ್ನಡದ ಹಾಡು ಹಾಡಬೇಕಂತ ಅನಿಸಿದ್ದು ಆ ಸುಮಕೋಮಲ, ಹೂ ಮೃದುಲ ಹೋಳಿಗೆ ತಿಂದಾಗ.
ಈ ಕಡೆಯೆಲ್ಲ ಹಂಗೇ. ಸೋಮವಾರ, ಶುಕ್ರವಾರ ರೊಟ್ಟಿ ಬಡಿಯೂದಿಲ್ಲ. ಅಮಾಸಿಗೆ ಹೋಳಗಿ, ಹುಗ್ಗಿ, ಸಜ್ಜಕ ತಪ್ಸೂಹಂಗಿಲ್ಲ...

ನಮ್ಮಜ್ಜನ ಮನೀಗೆ ರೇವುಬಾಯಿ ಅಂತ ಬರ್ತಿದ್ಲು. ರೊಟ್ಟಿ, ಚಪಾತಿ ಮಾಡಾಕ. ರೇವುಬಾಯಿ ಹೋಳಗಿಯಂದ್ರ ಹಿಡಿಯೊಳ ಮುದ್ದಿ ಮಾಡಿ, ತುಪ್ಪ ಸುರದು ಶೀಕರಣಿಯೊಳಗ ಕಲಸಿದ್ರ, ಅದರ ಗುರುತೇ ಇರಲಾರದ್ಹಂಗ ಮಾಯ ಆಗ್ತಿತ್ತು. ಹೋಳಗಿಯನ್ನೂದು ಮಾಯೆ ಅಂತ ಅನಿಸಿದ್ದು ಅವಾಗಲೇ. ಅಂಥ ಹೋಳಗಿ ಮಾಡಬೇಕಾದ್ರ ಮನಿಯೊಳಗೆಲ್ಲ ಕಡಲಿಬ್ಯಾಳಿ ಘಮ ಹೊಗಿಜೊತಿಗೆ ಇಡೀ ಬ್ರಹ್ಮಾಂಡ ಆವರಿಸಿಕೊಂಡಂಗ ಅನಸ್ತಿತ್ತು.

ನಮ್ಮ ಬೀದರ್‌ನಾಗ ಹೋಳಗಿ ಮಾಡೂದಂದ್ರ ಹಿಟ್ಟು ಹಚ್ಚಿ ಮಾಡ್ತಾರ. ಅದ್ಯಾಕೋ ಅದೆಷ್ಟೇ ತುಪ್ಪ ಹಾಕಿದ್ರಲ್ಲ, ಸುರದ್ರೂ ಮೆತ್ತಗ ಅನಸೂದಿಲ್ಲ. ಎಣ್ಣಿ ಹಚ್ಚಿದ್ದ ಹೋಳಗಿ ಮಾಡೂದು ಅಪರೂಪನೆ. ಅದೇ ಕಲಬುರ್ಗಿ, ವಿಜಯಪುರಕ್ಕ ಬಂದ್ರ ರೇವುಬಾಯಿ ಮಾಡುವಂಥ ಹೋಳಗಿನ ಸಿಗ್ತಾವ. ರಾಯಚೂರು, ಕೊಪ್ಪಳ ಕಡೆ ಹೋದ್ರ ಒಂದು ಹೋಳಗಿ ಉಂಡ್ರ ಸಾಕಪ್ಪಾ ಅನಸಬೇಕು.. ಪೀಟ್ಜಾದಷ್ಟು ದಪ್ಪ, ಕಣಕ ಕಡಿಮಿ, ಹೂರಣ ಜಾಸ್ತಿ. ಅಂಗೈಅಗಲ ಹೋಳಗಿ ಬೆಲಚಂದ್ರ ಬೆಲಚ. ಹಿಂಗ ನಮ್ಮ ಹೋಳಗಿಯಾತ್ರಿ ಈ ಕಡೆ ಚಾಲೂ ಇದ್ದಾಗಲೇ ಮದಿವಿಯಾಗಿದ್ದು ಹಾಸನದ ಹುಡುಗನ್ನ. ಅಲ್ಲಿ ನಮ್ಮತ್ತಿ ಒಬ್ಬಟ್ಟು ಮಾಡ್ತಿದ್ರು. ಅದರ ರುಚಿನೂ ಮಸ್ತ. ಸಣ್ಣಗೆ ಹಸಿಕೊಬ್ಬರಿ ರುಚಿ ಬರ್ತದ.. ತಿಳಿ ಹಳದಿ ಬಣ್ಣದ ಪುಟ್ಟ ಪುಟಾಣಿ ಒಬ್ಬಟ್ಟು, ಹೋಳಿಗಿಯ ಮಿನಿಯೇಚರ್‌ ಅನಸ್ತಿದ್ದು.

ಹೋಳಗಿ ಕಥಿ ಹೇಳ್ಕೊಂತ ಹಾಸನ ತನ ಹೋದೆ. ಹುಬ್ಬಳ್ಳಿಗೆ ಬಂದ ಮ್ಯಾಲೆ ಇಲ್ಲಿ ಶ್ರೀ ಸಿದ್ಧಾರೂಢ ಖಾನಾವಳಿ ಅಂತದ. ಅಷ್ಟೇನು ಹೆಸರಾಗಿಲ್ಲ. ಡಾ.ಜಕರೆಡ್ಡಿ ಆಸ್ಪತ್ರೆ ಹತ್ರ. ಅಲ್ಲಿ ನಮ್ಮವ್ವನ್ಹಂಗ ನಕ್ಕೊಂತ ಅಡಗಿ ಮಾಡೂ ಹೆಣ್ಮಗಳು ಹೋಳಗಿ ಮಾಡ್ತಿರ್ತಾರ. ನಕ್ಕೊಂತ ನೀಡೂದು. ಅದೇ ಕಡಲಿಬ್ಯಾಳಿ ಘಮ. ದಪ್ಪಿರದ ದಂಡಿ, ಮೃದುಮೃದು ಕಣಕ, ಯಾಲಕ್ಕಿ ವಾಸನಿ ಇರುವ ಹೂರಣ.. ಪಸಂದಗೆ ನಮ್ಮ ಸಿಂದಗಿ ಅಜ್ಜನ್ನ ನೆನಪಿಸುವ ಹೋಳಗಿನ ಅವು.

ಒಲಿ ಮುಂದ ನಿಂತಿದ್ರು, ಎಲ್ಲಾರ ಕಡೆ ಲಕ್ಷ್ಯ. ಆ ಅಕ್ಕಗ... ಹೋಳಗಿ ಅಗ್ದಿ ಮೆತ್ತಗದಾವ ಅಂದಾಗ ಬಾಯ್ತುಂಬ ನಕ್ಕ ಅಕ್ಕೋರು, ತಮ್ಮ ರೆಸಿಪಿಯ ಗುಟ್ಟು ಬಿಟ್ಟುಕೊಟ್ಟಿದ್ರು. ಹೂರ್ಣ ಅರಿಯೂಮುಂದ ಅದಕ್ಕೊಂದಿಷ್ಟು ತುಪ್ಪಾ ಹಾಕಬೇಕ್ರಿ.. ಹರೀಲಾರ್ದೆ ದಂಡಿತನಾ ಹೂರಣ ಸರೀತದ... ಅಂತ ಏನರೆ ಯಾಕ ಇರವಲ್ದು.. ಅಮವಾಸಿ ಬಂದ್ರ ಸಾಕು, ಶ್ರೀ ಸಿದ್ಧಾರೂಢ ಖಾನಾವಳಿಗೆ ಶರಣನ್ನೂದೆ ಅಂತ ನಿರ್ಧಾರ ಮಾಡುವಂಗದಾವು ಆ ಹೋಳಗಿ.

ಹೋಳಗಿ ಯಾಕಿಷ್ಟು ಸವಿ, ಸಿಹಿ ಅಂತ ಗೊತ್ತೇನು? ಮೊದಲು ಬೇಯಸ್ತಾರ.. ಬ್ಯಾಳಿ, ಆಮೇಲೆ ಅರಿತಾರ... ಬೆಂದು, ಅರದು, ಮತ್ತು ಸುಟ್ಟಾಗಲೂ ಅವು ಒಟ್ಟೊಟ್ಟಿಗೆ ಸಂಯೋಗ ಆಗ್ತಾವ. ಥೇಟ್‌ ನಮ್ಮ ಜೀವನದ್ಹಂಗ... ಹಿಂಗ, ಬೆಂದಾಗ, ಕಾಲ ನಮ್ಮನ್ನು ತನ್ನ ಕಾಲಡಿಗೆ ಹಾಕಿ ಜಜ್ಜೂಮುಂದ, ಹತಾಶೆಯೆನ್ನುವ ಹಂಚಿನೊಳಗ ಎರಡೂ ಕಡೆ ಸುಡೂಮುಂದ ಸಹಿತ ಒಂದು ಸಾಂಗತ್ಯ ಒಟ್ಟಿಗಿದ್ದರ ಆ ಇಡೀ ಅನುಭವ ಹೋಳಗಿಯಷ್ಟ ಸಿಹಿಯಾಗ್ತದ. ಬಹುಶಃ ಇದೇ ಕಾರಣಕ್ಕ ಹಿರಿಯರು.. ಹೋಳಗಿ ಉಣ್ಣಾಕ, ಉಣಸಾಕ ಕಾರಣ ಹುಡುಕ್ತಿದ್ರು ಅನಸ್ತದ. ಹೂವಿನಂಥ ಹೋಳಗಿಯದು ತುಂಬಾ ಮೃದು... ಆದ್ರ ಆ ಮಿದುತ್ವದ ಹಿಂದ ಇಷ್ಟೆಲ್ಲ ಕಷ್ಟ ಅಡಗ್ಯಾವ ನೋಡ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT