ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಹಬ್ಬಕ್ಕೆ ಸಿಹಿ ಸಂಭ್ರಮ

Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹಬ್ಬಗಳೆಂದರೆ ಸಂಭ್ರಮ, ಸಡಗರ. ಸಿಹಿ ತಿನಿಸುಗಳ ತೋರಣ. ನವರಾತ್ರಿಯಲ್ಲಿ ಒಂಬತ್ತು ದಿನಗಳು ವಿಶೇಷ ಪೂಜೆಯ ಜೊತೆಗೆ ಸಿಹಿತಿನಿಸಿನ ನೈವೇದ್ಯವೂ ದೇವರಿಗೆ ಜೊತೆಯಾಗುತ್ತದೆ. ನವದುರ್ಗೆಯರ ಪೂಜೆಗೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ಮೈಸೂರುಪಾಕ್, ಹಲ್ವ, ಪಾಯಸ, ಬರ್ಫಿ ಹೀಗೆ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಒಂಬತ್ತೂ ದಿನ ದೇವರಿಗೆ ಎಡೆ ಇಟ್ಟು ಸಂಭ್ರಮಿಸುತ್ತಾರೆ. ಇಂತಹ ಕೆಲವು ತಿನಿಸುಗಳನ್ನು ಇಲ್ಲಿ ಪರಿಚಯಿಸಿದ್ದಾರೆ ಗೀತಾ ಎಸ್. ಭಟ್ ಮತ್ತು ಸವಿ.

ಮೆದು ಮೈಸೂರುಪಾಕ್‌

ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು-1 ಕಪ್, ತುಪ್ಪ-2 ಕಪ್, ಸಕ್ಕರೆ-2 ಕಪ್, ನೀರು-½ಕಪ್

ತಯಾರಿಸುವ ವಿಧಾನ: ತುಪ್ಪ ಕರಗಿಸಿಕೊಂಡು, ಹಸಿ ಕಡಲೆಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ಗಂಟಾಗದಂತೆ ದೋಸೆಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಕಡಾಯಿಯಲ್ಲಿ ಸಕ್ಕರೆ ಹಾಕಿ ಮತ್ತು ಸಕ್ಕರೆ ಮುಳುಗುವಷ್ಟು ನೀರು ಹಾಕಿ ಕರಗಲು ಇಡಿ. ಪೂರ್ತಿ ಸಕ್ಕರೆ ಕರಗಿ ಒಂದೆಳೆ ಪಾಕ ಬರುವಷ್ಟರಲ್ಲಿ ತುಪ್ಪದಲ್ಲಿ ಕಲೆಸಿಟ್ಟ ಕಡಲೆಹಿಟ್ಟು ಹಾಕುತ್ತಾ ಕೈಬಿಡದಂತೆ ಮಗುಚುತ್ತಾ ಇರಬೇಕು. ಹಿಟ್ಟು ಸ್ವಲ್ಪ ಗಟ್ಟಿಯಾಗುವಷ್ಟರಲ್ಲಿ ಮತ್ತೆ ತುಪ್ಪಹಾಕಿ ತಿರುವುತ್ತಿರಬೇಕು. ಹೀಗೇ ಮಧ್ಯೆ ಮಧ್ಯೆ ಮೂರ್ನಾಲ್ಕು ಸಲ ತುಪ್ಪ ಹಾಕುತ್ತಾ ತಳಹಿಡಿಯದಂತೆ ಮಗುಚುತ್ತಾ ಹಿಟ್ಟು ಗಟ್ಟಿಯಾಗಿ ಕಡಾಯಿಯ ತಳಬಿಟ್ಟನಂತರ ಒಂದು ಬಟ್ಟಲಿಗೆ ಸುರಿಯಬೇಕು. ನಂತರ ಆ ಗಟ್ಟಿ ದ್ರಾವಣವನ್ನು ಮತ್ತೆ ಕೈ ಅಥವಾ ಸೌಟಿನಿಂದ ಒತ್ತಬಾರದು. ಹಾಗೇ ಸೆಟ್ ಆಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ. ಬಾಯಲ್ಲಿ ಇಟ್ಟ ತಕ್ಷಣ ಕರಗುವ ಮೃದುವಾದ ಮೈಸೂರುಪಾಕ್‌ ರೆಡಿ. (ಗಮನಿಸಿ- ಮೈಸೂರುಪಾಕ್ ರೆಡಿಯಾಗುವ ತನಕವೂ ಸಣ್ಣ ಉರಿಯಲ್ಲಿ ತಳಹಿಡಿಯದಂತೆ ಮಗುಚುತ್ತಲೇ ಇರಬೇಕು)

ಸೀಬೆ ಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು: ಸೀಬೆಹಣ್ಣು-5, ಸಕ್ಕರೆ- 1 ಕಪ್, ತುಪ್ಪ-4 ಚಮಚ, ಡ್ರೈಫ್ರೂಟ್ಸ್‌ – ಸ್ವಲ್ಪ.

ತಯಾರಿಸುವ ವಿಧಾನ: ಸೀಬೆಹಣ್ಣುಗಳನ್ನು ತೊಳೆದು ಸ್ವಲ್ಪ ನೀರು ಬೆರೆಸಿ ಬೇಯಿಸಿಕೊಳ್ಳಿ. ನಂತರ ನೀರು ಬಸಿದು, ಹಣ್ಣುಗಳನ್ನು ಕತ್ತರಿಸಿ ಮಿಕ್ಸಿಜಾರಿಗೆ ಹಾಕಿ ನೀರು ಬೆರೆಸದೆ ನುಣ್ಣಗೆ ರುಬ್ಬಿ. ನಂತರ ಜರಡಿಯಲ್ಲಿ ಹಾಕಿ ಸೋಸಿ ಬೀಜ ಪ್ರತ್ಯೇಕಿಸಿ. ರುಬ್ಬಿದ ಮಿಶ್ರಣವನ್ನು ಒಂದು ಕಡಾಯಿಗೆ ಹಾಕಿ ಅದಕ್ಕೆ ಸಕ್ಕರೆ ಮತ್ತು ತುಪ್ಪ ಬೆರೆಸಿ ಚೆನ್ನಾಗಿ ಮಗುಚುತ್ತಿರಿ. ಸ್ವಲ್ಪ ಗಟ್ಟಿಯಾದ ನಂತರ ಡ್ರೈಫ್ರೂಟ್ಸ್‌ ಹಾಕಿ ಮಗುಚಿ ಇನ್ನೊಂದು ಪಾತ್ರೆಗೆ ಹಾಕಿ.

ಶ್ಯಾವಿಗೆ, ಸಬ್ಬಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು: ಸಬ್ಬಕ್ಕಿ-1 ಕಪ್, ಶ್ಯಾವಿಗೆ-1 ಕಪ್, ಸಕ್ಕರೆ-3 ಕಪ್, ಹಾಲು-½ ಲೀಟರ್, ಗೋಡಂಬಿ ಮತ್ತು ದ್ರಾಕ್ಷಿ- ಸ್ವಲ್ಪ, ತುಪ್ಪ-2 ದೊಡ್ಡ ಚಮಚ

ತಯಾರಿಸುವ ವಿಧಾನ: ಹಾಲನ್ನು ನೀರು ಬೆರೆಸದೇ ಕಾಯಿಸಿಕೊಳ್ಳಿ. ಸಬ್ಬಕ್ಕಿಯನ್ನು ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಶ್ಯಾವಿಗೆಯನ್ನು ಸಬ್ಬಕ್ಕಿ ಜೊತೆ ಬೆರೆಸಿ ಹಾಲು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಸಕ್ಕರೆ ಸೇರಿಸಿ. ಹದ ನೋಡಿಕೊಂಡು ಬೇಕಿದ್ದರೆ ತುಸು ನೀರು ಬೆರೆಸಿ. ಒಂದು ಕುದಿ ಬಂದ ನಂತರ ತುಪ್ಪದಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹುರಿದುಕೊಂಡು ಪಾಯಸಕ್ಕೆ ಬೆರೆಸಿ.

ಹಾಲುಸೋರೆಕಾಯಿ ಬರ್ಫಿ

ಬೇಕಾಗುವ ಸಾಮಗ್ರಿಗಳು: ಹಾಲುಸೋರೆಕಾಯಿ-1, ಸಕ್ಕರೆ-3½ ಕಪ್, ತುಪ್ಪ-1 ಚಮಚ

ತಯಾರಿಸುವ ವಿಧಾನ: ಹಾಲುಸೋರೆಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ಮೂರು ಕಪ್ ಸೋರೆಕಾಯಿ ತುರಿಗೆ 3½ಕಪ್ ಸಕ್ಕರೆ ಬೆರೆಸಿ (ಸೋರೆಕಾಯಿ ತುರಿಗೆ ಸಕ್ಕರೆ ಬೆರೆಸಿದಾಗ ತುಂಬಾ ನೀರು ಬಿಟ್ಟುಕೊಳ್ಳುತ್ತದೆ. ಹಾಗಾಗಿ ನೀರು ಆರಿ ಗಟ್ಟಿಯಾಗುವ ತನಕ ಚೆನ್ನಾಗಿ ಮಗುಚುತ್ತಿರಬೇಕು.). ಪಾಕ ಗಟ್ಟಿಯಾಗಿ ತಳಬಿಟ್ಟನಂತರ ತುಪ್ಪ ಸವರಿಕೊಂಡ ಒಂದು ಬಟ್ಟಲಿಗೆ ಹಾಕಿ ಸೆಟ್ ಮಾಡಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

ಗೋಧಿ ಬರ್ಫಿ

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು-1ಕಪ್, ಸಕ್ಕರೆ-2 ಕಪ್, ತುಪ್ಪ-1ಕಪ್, ಹಾಲು-2 ಕಪ್, ಡ್ರೈಫ್ರೂಟ್ಸ್‌ ಸ್ವಲ್ಪ, ಏಲಕ್ಕಿ ಪುಡಿ-½ಚಮಚ

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ 1 ಕಪ್ ಗೋಧಿಹಿಟ್ಟು ಮತ್ತು ಸ್ವಲ್ಪ ತುಪ್ಪ ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಘಮ್ ಅನ್ನೋವರೆಗೂ ಹುರಿಯಿರಿ. ಅದಕ್ಕೆ1/2 ಕಪ್ ತುಪ್ಪ, ಸಕ್ಕರೆ ಹಾಕಿ ಮಗುಚಿ. ಅದಕ್ಕೆ 1 ಕಪ್ ಹಾಲು, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಸಕ್ಕರೆ ಕರಗಿ ಹಿಟ್ಟು ಗಟ್ಟಿ ಆಗುತ್ತದೆ. ಮತ್ತೆ 1 ಕಪ್ ಹಾಲು, 2 ಚಮಚ ತುಪ್ಪ ಹಾಕಿ ಕಲೆಸಿ ಸಣ್ಣ ಉರಿಯಲ್ಲೇ 10 ನಿಮಿಷ ಕೈ ಬಿಡದೆ ಕಲೆಸುತ್ತಿರಿ. ಈಗ ಬರ್ಫಿ ಹದ ಬಂದ ಮೇಲೆ 1 ಚಮಚ ಏಲಕ್ಕಿ ಪುಡಿ ಹಾಕಿ. ತುಪ್ಪ ಬಾಣಲೆ ಬಿಡುತ್ತೆ. ಆಗ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಮೇಲೆ ಬಾದಾಮಿ, ಗೋಡಂಬಿ, ಪಿಸ್ತಾ ಚೂರುಗಳನ್ನು ಹಾಕಿ ಒತ್ತಿ 1 ಗಂಟೆ ಫ್ರಿಡ್ಜ್‌ನಲ್ಲಿಟ್ಟು ನಂತರ ನಿಮಗಿಷ್ಟವಾದ ಆಕಾರಕ್ಕೆ ಕತ್ತರಿಸಿ.

ಅಕ್ಕಿ ವಡೆ

ಬೇಕಾಗುವ ಸಾಮಗ್ರಿಗಳು: ಅಕ್ಕಿ– 4 ಕಪ್‌, ಉದ್ದಿನ ಬೇಳೆ– 1 ಕಪ್‌, ಜೀರಿಗೆ– 1 ಟೀ ಚಮಚ, ಓಂಕಾಳು– ಒಂದೂವರೆ ಟೀ ಚಮಚ, ಹಿಂಗು ಸ್ವಲ್ಪ, ಹಸಿ ಮೆಣಸಿನಕಾಯಿ– 5–6, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಅಕ್ಕಿಯನ್ನು 5–6 ತಾಸು ನೆನೆ ಹಾಕಿ. ನಂತರ ನೀರನ್ನು ಬಸಿದು ಬಟ್ಟೆಯ ಮೇಲೆ ಆರಲು ಬಿಡಿ. ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಹಿಟ್ಟು ಮತ್ತು ಅಕ್ಕಿ ರವೆ ಸಮ ಪ್ರಮಾಣದಲ್ಲಿರುವಂತೆ ಮಿಕ್ಸಿಯಾಡಿಸಿ.

ಉದ್ದಿನ ಬೇಳೆಯನ್ನು ಕೂಡ 4–5 ತಾಸು ನೆನೆಹಾಕಿ. ನಂತರ ಮೇಲೆ ಹೇಳಿದ ಮಸಾಲೆಯೊಂದಿಗೆ ಗಟ್ಟಿಯಾಗಿ ರುಬ್ಬಿ. ಇದು ಉದ್ದಿನ ವಡೆ ಹಿಟ್ಟಿನ ಹದಕ್ಕಿರಲಿ. ಇದಕ್ಕೆ ಪುಡಿ ಮಾಡಿಟ್ಟುಕೊಂಡ ಅಕ್ಕಿಯನ್ನು ಹಾಗೂ ಉಪ್ಪನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. 20 ನಿಮಿಷ ಹಾಗೇ ಬಿಡಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಮಧ್ಯೆ ಸಣ್ಣ ರಂಧ್ರ ಮಾಡಿ ಕರಿಯಿರಿ. ಇದು ಗರಿಗರಿಯಾಗಿ ತಿನ್ನಲು ಬಹಳ ರುಚಿ. ಬಿಗಿ ಮುಚ್ಚಳವಿರುವ ಡಬ್ಬಿಯಲ್ಲಿ ತುಂಬಿಟ್ಟರೆ 15– 20 ದಿನಗಳಾದರೂ ಕೆಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT