ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನಾಡಿನ ರುಚಿ ಖಾದ್ಯಗಳು

Last Updated 9 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಳೆ ಎಷ್ಟೇ ಅವಾಂತರ ಸೃಷ್ಟಿಸಿದರೂ ಮುಸಲಧಾರೆಯನ್ನು ಸಂಭ್ರಮಿಸಲು ಜೀವನಪ್ರೀತಿ ಇದ್ದರೆ ಸಾಕು. ರುಚಿಮೊಗ್ಗುಗಳನ್ನು ಅರಳಿಸುವ ಖಾದ್ಯಗಳು ಜತೆಯಾದರೆ ಮಳೆಗಾಲಕ್ಕೆ ಮತ್ತಷ್ಟು ಮೆರುಗು. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಹಾಗೂ ಮಲೆನಾಡಿನಲ್ಲಿ ಬಳಕೆಯಲ್ಲಿರುವಂಥ ಮಳೆಗಾಲದ ಖಾದ್ಯಗಳ ರೆಸಿಪಿಗಳು ಇಲ್ಲಿವೆ.

***

ಕೆಸುವಿನ ಪಲ್ಯ

ತೆಂಗಿನಕಾಯಿ ತುರಿ, ಮೆಣಸಿನಪುಡಿ, ದನಿಯಾಪುಡಿ, ಜೀರಿಗೆ, ಅರಿಸಿನ, ಶುಂಠಿ, ಬೆಳ್ಳುಳ್ಳಿ, ಟೊಮೆಟೊ, ಹುಣಸೆಹಣ್ಣು, ಬೇಕಾದರೆ ಚಿಕ್ಕೆ-ಲವಂಗ ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಎಸಳು, ಈರುಳ್ಳಿ ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕುದಿಸಬೇಕು. ಕುದಿಯುವ ಮಸಾಲೆಗೆ ಹಬೆಯಲ್ಲಿ ಬೇಯಿಸಿ ಕತ್ತರಿಸಿಟ್ಟುಕೊಂಡ ಮರಕೆಸ-ಹಿಟ್ಟಿನ ಮಿಶ್ರಣದ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಸಿ ಸ್ವಲ್ಪ ಹೊತ್ತು ಬೇಯಿಸಿ. ರುಚಿಯಾದ ಕೆಸುವಿನ ಪಲ್ಯ ರೆಡಿ. ಸ್ವಲ್ಪ ತಣ್ಣಗಾದ ಮೇಲೆ ತಿನ್ನಲು ಚೆನ್ನಾಗಿರುತ್ತದೆ.

ಮುಂಗಾರಿನಲ್ಲಿ ಕಾಣಿಸಿಕೊಳ್ಳುವ ‘ಮರಕೆಸ’ ಎಂಬ ಸೊಪ್ಪು ಔಷಧೀಯಗುಣ ಹೊಂದಿದೆ. ಅಂದ ಹಾಗೆ, ಇದರಿಂದ ತಯಾರಿಸಿರುವಪತ್ರೊಡೆ ದೇಹದ ಉಷ್ಣಾಂಶ ಹೆಚ್ಚಿಸಿ ಶೀತ ಮತ್ತು ಚಳಿಯಿಂದ ರಕ್ಷಿಸುತ್ತದೆ.

ಮರಕೆಸದ ಪತ್ರೊಡೆ

ಬೇಕಾಗುವ ಸಾಮಗ್ರಿಗಳು:

10 ಕೆಸುವಿನ ಎಲೆ, 1 ಲೋಟ ಅಕ್ಕಿ, 2 ಚಮಚ ಕಡ್ಲೆಬೇಳೆ, 2 ಚಮಚ ತೊಗರಿಬೇಳೆ, 2 ಚಮಚ ಉದ್ದಿನ ಬೇಳೆ, ಅರ್ಧ ಚಮಚ ಮೆಂತ್ಯ, 4 ಚಮಚ ದನಿಯಾಬೀಜ, 1 ಚಮಚ ಜೀರಿಗೆ, ಒಣಮೆಣಸಿನಕಾಯಿ ಕಾರಕ್ಕೆ ತಕ್ಕಷ್ಟು, ಸ್ವಲ್ಪ ಕರಿಬೇವು, ಸ್ವಲ್ಪ ಅರಿಸಿನ ಪುಡಿ, ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣು, ರುಚಿಗೆ ತಕ್ಕಷ್ಟು ಹರಳುಪ್ಪು, ರುಚಿಗೆ ಸ್ವಲ್ಪ ಬೆಲ್ಲ.

ತಯಾರಿಸುವ ವಿಧಾನ: ಅಕ್ಕಿ, ಕಡ್ಲೆಬೇಳೆ, ತೊಗರಿಬೇಳೆ, ಉದ್ದಿನಬೇಳೆ, ಮೆಂತ್ಯವನ್ನು ಚೆನ್ನಾಗಿ ತೊಳೆದು 4 ರಿಂದ 6 ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಬೇಕು. ನಂತರ, ನೀರು ಬಸಿದು ಗ್ರೈಂಡರ್ ಅಥವಾ ಮಿಕ್ಸಿ ಜಾರಿಗೆ ಹಾಕಿ. ಅದರ ಜತೆಯಲ್ಲಿ ದನಿಯಾಬೀಜ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು, ಹುಣಸೆಹಣ್ಣು, ಅರಿಸಿನ, ಉಪ್ಪು, ಬೆಲ್ಲ, ಸ್ವಲ್ಪ ನೀರು ಬೆರೆಸಿ, ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಮರಕೆಸ ಎಲೆಯನ್ನು ಚೆನ್ನಾಗಿ ತೊಳೆಯಿರಿ. ಆ ಎಲೆಯ ಮೇಲೆ ರುಬ್ಬಿದ ಹಿಟ್ಟನ್ನು ಚೆನ್ನಾಗಿ ಸವರಿ. ಗಟ್ಟಿಯಾಗಿ ಮಡಚಿ. ಇದೇ ರೀತಿ ಅಗತ್ಯವಿರುವಷ್ಟು ಎಲೆಗೆ ಹಿಟ್ಟನ್ನು ಲೇಪಿಸಿ, ಗಟ್ಟಿಯಾಗಿ ಮಡಚಿಟ್ಟುಕೊಳ್ಳಿ. ನಂತರ ಇಡ್ಲಿ ಪಾತ್ರೆಯಲ್ಲಿ ಈ ಒಂದರ ಮೇಲೊಂದು ಇಟ್ಟು ಹಬೆಯಲ್ಲಿ ಚೆನ್ನಾಗಿ ಬೇಯಿಸಿ. ಅವು ತಣ್ಣಗಾದ ಮೇಲೆ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.

ಮಡಹಾಗಲಕಾಯಿ

ಪೋಡಿ

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ 5-6, ಕಡಲೆಹಿಟ್ಟು ಒಂದುಕಪ್, ಖಾರದ ಪುಡಿ ಸ್ವಲ್ಪ, ರುಚಿಗೆ ತಕ್ಕ ಉಪ್ಪು, ಎಣ್ಣೆ.

ಮಾಡುವ ವಿಧಾನ: ಮಡಹಾಗಲಕಾಯಿಯನ್ನು ಉರುಟಾಗಿ ಕತ್ತರಿಸಿ. ಒಂದು ಪಾತ್ರೆ ಕಡಲೆಹಿಟ್ಟು, ಉಪ್ಪು, ಖಾರದಪುಡಿ ಹಾಕಿ ದೋಸೆಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಕತ್ತರಿಸಿದ ಮಡಹಾಗಲಕಾಯಿ ಚೂರನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಮಜ್ಜಿಗೆಹುಳಿ

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ 8 ರಿಂದ10, ತೆಂಗಿನಕಾಯಿ 1, ಒಣಮೆಣಸು 4, ಮಜ್ಜಿಗೆ 1/2 ಲೀ, ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಮಡಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿ. ಉಪ್ಪು, ನೀರು ಹಾಕಿ ಹೋಳುಗಳನ್ನು ಬೇಯಿಸಿಕೊಳ್ಳಿ.ನಂತರ ತೆಂಗಿಕಾಯಿ, ಒಣಮೆಣಸು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಬೇಯಿಸಿದ ಹೋಳಿಗೆ ಹಾಕಿ. ಸ್ವಲ್ಪ ಹುಳಿಮಜ್ಜಿಗೆ, ಸ್ವಲ್ಪ ಸಿಹಿಮಜ್ಜಿಗೆ ಹಾಕಿ ಒಲೆಯ ಮೇಲಿಟ್ಟು, ಸೌಟಿನಿಂದ ತಿರುವುತ್ತಾ ಕುದಿಸಿ. ಪರಿಮಳಕ್ಕಾಗಿ ಎರಡು ಹಸಿಮೆಣಸು ಹಾಗೂ ಅರ್ಧ ಚಮಚ ಅರಿಸಿನವನ್ನು ಹಾಕಿ. ಕುದ್ದ ನಂತರ ಇಳಿಸಿ. ಸಾಸಿವೆ ಕರಿಬೇವು ಸೊಪ್ಪಿನ ಒಗ್ಗರಣೆ ಕೊಡಿ.

ದೀವಿ ಹಲಸುಬೋಂಡ

ಬೇಕಾದ ಸಾಮಗ್ರಿಗಳು:ದೀವಿ ಹಲಸು, ಕಡ್ಲೆಹಿಟ್ಟು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಹುಡಿ ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ದೀವಿ ಹಲಸಿನ ಸಿಪ್ಪೆ ತೆಗೆದು ತೆಳ್ಳಗೆ ಬಿಲ್ಲೆ ಬಿಲ್ಲೆಯಾಗಿ ಹೆಚ್ಚಿಟ್ಟುಕೊಳ್ಳಿ. ಕಡ್ಲೆ ಹಿಟ್ಟನ್ನು ಜರಡಿ ಹಿಡಿದು ಒಂದು ಪಾತ್ರೆಯಲ್ಲಿ ಉಪ್ಪು, ನೀರು, ಮೆಣಸಿನ ಹುಡಿ ಹಾಕಿ ಕಲಸಿ.

ನಂತರ, ಬಾಣಲೆ ಒಲೆಯ ಮೇಲಿಟ್ಟು ಎಣ್ಣೆಹಾಕಿ. ಎಣ್ಣೆ ಕಾದ ನಂತರ ಕತ್ತರಿಸಿಟ್ಟಿರುವ ದೀವಿ ಹಲಸಿನ ಹೋಳುಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹದವಾಗಿ ಕರಿಯಿರಿ. ತಿನ್ನಲು ಬೊಂಡ ರೆಡಿ.

ಸಿಪ್ಪೆಯಿಂದ ಚಟ್ನಿ

ಬೇಕಾಗುವ ಸಾಮಗ್ರಿಗಳು: ದೀವಿ ಹಲಸು ಸಿಪ್ಪೆ, ಕಡ್ಲೆಬೇಳೆ 2 ಚಮಚ, ಉಪ್ಪು, ಕೆಂಪು ಮೆಣಸು-4, ಹುಣಸೆ ಹಣ್ಣು ಸ್ವಲ್ಪ.

ತಯಾರಿಸುವ ವಿಧಾನ: ದೀವಿ ಹಲಸಿನ ಸಿಪ್ಪೆಯನ್ನು ಬೇಯಿಸಿ ಇಟ್ಟುಕೊಳ್ಳಿ. ಕಡ್ಲೆಬೇಳೆ, ಮೆಣಸು ಹುರಿದುಕೊಳ್ಳಿ. ಬೇಯಿಸಿದ ಸಿಪ್ಪೆಯೊಂದಿಗೆ ಹುಣಿಸೆ ಹಣ್ಣು, ಉಪ್ಪು, ಹುರಿದ ಮಸಾಲೆ, ಕಾಯಿತುರಿ ಸೇರಿಸಿ ರುಬ್ಬಿ.

ನಿರ್ವಹಣೆ: ಕೆ.ಎಸ್.ಗಿರೀಶ, ಮಾಹಿತಿ: ಶ.ಗ.ನಯನತಾರಾ, ಸಿ.ಎಸ್.ಸುರೇಶ್, ವಿದ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT