ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವದ ವಿಶೇಷ: ತ್ರಿವರ್ಣ ತಿನಿಸುಗಳು

ಸ್ವಾತಂತ್ರ್ಯೋತ್ಸವದ ವಿಶೇಷ
Published 11 ಆಗಸ್ಟ್ 2023, 22:44 IST
Last Updated 11 ಆಗಸ್ಟ್ 2023, 22:44 IST
ಅಕ್ಷರ ಗಾತ್ರ

ಮನಸ್ಸು ಗಡಿಬಿಡಿಯಿಲ್ಲದೇ ಸಮಾಧಾನವಾಗಿದ್ದಾಗ ಎಷ್ಟೊಂದು ಹೊಸರುಚಿಗಳು ಹೊಳೆಯುತ್ತವೆ.  ಕೃತಕ ಬಣ್ಣ, ಪ್ರಿಸರ್ವೇಟಿವ್ ಬಳಸದೇ, ನಿಸರ್ಗದಲ್ಲೇ ಸಿಗುವ ಪದಾರ್ಥಗಳಿಂದಲೇ ರುಚಿ–ಅಂದ ಹೆಚ್ಚಿರುವ ತಿನಿಸುಗಳು ಹಿತವಾಗಿರುತ್ತವೆ. ಸ್ವಾತಂತ್ರ್ಯೋತ್ಸವ ಸಂಭ್ರದ ಹೊಸ್ತಿಲಲ್ಲಿ ನಿತ್ಯದ ನಮ್ಮ ತರಕಾರಿ, ಕಾಳುಗಳಲ್ಲಿ ಅಡಗಿರುವ ಆಕರ್ಷಕ ಬಣ್ಣ, ಪರಿಮಳದೊಂದಿಗೆ ತ್ರಿವರ್ಣ ತಿನಿಸುಗಳನ್ನು ತಯಾರಿಸಿದ್ದಾರೆ ಬಾಗಲಕೋಟೆಯ ನವನಗರದ ಜಾನಕಿ ಎಸ್. ತ್ರಿವರ್ಣ ರುಚಿಯ ತಿನಿಸುಗಳ ರೆಸಿಪಿಗಳನ್ನೂ ಇಲ್ಲಿ ಪರಿಚಯಿಸಿದ್ದಾರೆ.

ತಿರಂಗಾ ಇಡ್ಲಿ

ಬೇಕಾಗುವ ಸಾಮಗ್ರಿ: ಇಡ್ಲಿ ಹಿಟ್ಟು , ಒಂದು ಕ್ಯಾರೆಟ್, ಕೊತ್ತಂಬರಿ ಸೊಪ್ಪು ಸಣ್ಣ ಕಟ್ಟು, ಎಣ್ಣೆ, ಉದ್ದಿನ ಬೇಳೆ, ಸಾಸಿವೆ 1 ಚಮಚ, ಶುಂಠಿ ಹಸಿಮೆಣಸು ಸ್ವಲ್ಪ, ಉಪ್ಪು.

ಮಾಡುವ ವಿಧಾನ: ಉದ್ದಿನಬೇಳೆ ನೆನಸಿ ರುಬ್ಬಿ ರವೆ ಸೇರಿಸಿ ಹಿಂದಿನ ರಾತ್ರಿ ತಯಾರಿಸಿ ಇಟ್ಟಿರುವ ಇಡ್ಲಿ  ಹಿಟ್ಟನ್ನು ಮೂರು ಭಾಗ ಮಾಡಬೇಕು. ಕಾಲು ಚಮಚ ಎಣ್ಣೆ ಹಾಕಿ ಕೊತ್ತಂಬರಿ ಸೊಪ್ಪು ಹಸಿಮೆಣಸು ಸ್ವಲ್ಪ ಬಾಡಿಸಿ , ಶುಂಠಿ ಸೇರಿ‌ಸಿ ರುಬ್ಬಿ ಒಂದು ಭಾಗದ ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಬೇಕು. ಒಗ್ಗರಣೆಗೆ ಎಣ್ಣೆ ಸಾಸಿವೆ ಉದ್ದಿನಬೇಳೆ ಹಾಕಿ  ರುಬ್ಬಿದ  ಕ್ಯಾರಟ್ ಸೇರಿಸಿ, ಇನ್ನೊಂದು ಭಾಗದ ಹಿಟ್ಟಿಗೆ  ಹಾಕಿ ಕಲೆಸಬೇಕು. ಬೇರೆ ಬೇರೆ  ತಟ್ಟೆಗಳಿಗೆ ಈ ಮಿಶ್ರಣ ಹಾಕಿ  ಹದಿನೈದು ನಿಮಿಷ ಉಗಿಯೊಳಗೆ ಬೇಯಿಸಿದರೆ ,ಆಕರ್ಷಕ ಕೇಸರಿ, ಬಿಳಿ, ಹಸಿರು ಮೂರು ಬಣ್ಣದ ತಿರಂಗಾ ಇಡ್ಲಿ ರೆಡಿ.

ಕೊತ್ತಂಬರಿ ಸೊಪ್ಪಿನ ಬದಲು ಸಬ್ಬಸಿಗೆ ಬಳಸಬಹುದು. ಇದನ್ನ ಸಣ್ಣಗೆ ಕತ್ತರಿಸಿ ಒಗ್ಗರಣೆ ಹಾಕಿ ಇಡ್ಲಿ ಹಿಟ್ಟಿಗೆ ಮಿಕ್ಸ್ ಮಾಡಬೇಕು.

ಸುವರ್ಣ ಕೋಸಂಬರಿ

ಬೇಕಾಗುವ ಸಾಮಗ್ರಿ: ಕ್ಯಾರಟ್ ತುರಿ, ಕ್ಯಾಬೇಜ್, ಮೂಲಂಗಿ ಸೊಪ್ಪು, ಹಸಿ ಮೆಣಸು 2, ನಿಂಬೆ 1, ತೆಂಗಿನಕಾಯಿ ತುರಿ, ಎಣ್ಣೆ , ಸಾಸಿವೆ ಕಾಳು, ಬಿಳಿ ಎಳ್ಳು 2  ಚಮಚ, ಈರುಳ್ಳಿ 1, ಉಪ್ಪು.

ಮಾಡುವ ವಿಧಾನ: ಒಗ್ಗರಣೆಗೆ ಎಣ್ಣೆ ಹಾಕಿ ಸಾಸಿವೆ ಸ್ವಲ್ಪ, ಹಸಿಮೆಣಸು, ಎಳ್ಳು ಹಾಕಿ ಹುರಿದು, ಕ್ಯಾರೆಟ್ ಮತ್ತು ಕ್ಯಾಬೇಜ್ ತುರಿಯ ಮೇಲೆ ಸ್ವಲ್ಪ ಸ್ವಲ್ಪ ಹಾಕಿ, ಕಾಯಿತುರಿ, ಲಿಂಬು ರಸ, ಉಪ್ಪು ಸೇರಿಸಿ ಬೇರೆ ಬೇರೆ ಕಲಸಿಡಬೇಕು. ಸಣ್ಣಗೆ ಹೆಚ್ಚಿದ ಮೂಲಂಗಿ ಸೊಪ್ಪು, ಈರುಳ್ಳಿ, ಹಸಿಮೆಣಸು, ಉಪ್ಪು ಲಿಂಬು ಸೇರಿಸಿ ಕಾಯಿತುರಿ ಹಾಕಿ ಕಲಸಿದರೆ ರುಚಿಯಾದ  ಸುವರ್ಣ ಕೋಸಂಬರಿ ಸವಿಯಬಹುದು.

ಅಮೃತ ಲಾಡು

ಬೇಕಾಗುವ ಸಾಮಗ್ರಿ: ತೆಂಗಿನಕಾಯಿ ತುರಿ 1 ಕಪ್, ಕ್ಯಾರೆಟ್ ತುರಿ 1ಕಪ್, ಬಟಾಣಿ ಕಾಳು 1ಕಪ್, ಸಕ್ಕರೆ 1 1/2 ಕಪ್, ಏಲಕ್ಕಿ ಪುಡಿ, ತುಪ್ಪ 1ಕಪ್, ಹಾಲು 1/2 ಕಪ್.

ಮಾಡುವ ವಿಧಾನ: ಕಾಯಿತುರಿ, ಕ್ಯಾರೆಟ್ ತುರಿ ಬೇರೆ ಬೇರೆಯಾಗಿ ಒಂದು ಚಮಚ ತುಪ್ಪದಲ್ಲಿ ಹುರಿದು, ಹಾಲು ಸ್ವಲ್ಪ ಹಾಕಿ ಬೇಯಿಸಿ, ನಾಲ್ಕು ಚಮಚ ಸಕ್ಕರೆ ಹಾಕಿ ಸ್ವಲ್ಪ ಹೊತ್ತು ಕೈಯ್ಯಾಡಿಸುತ್ತಿದ್ದರೆ ಗಟ್ಟಿ ಹದ ಬರುತ್ತದೆ. ತಣ್ಣಗೆ ಆದಮೇಲೆ ಲಾಡು ತಯಾರಿಸಿ. ನೆನಸಿದ ಬಟಾಣಿ ಕಾಳನ್ನು ರುಬ್ಬಿ ಕಾಲು ಕಪ್ಪ ತುಪ್ಪದಲ್ಲಿ ಚೆನ್ನಾಗಿ ಹುರಿದು, ಮುಕ್ಕಾಲು ಕಪ್  ಸಕ್ಕರೆ ಸೇರಿಸಿ, ಏಲಕ್ಕಿ ಪುಡಿ ಹಾಕಿ ಇನ್ನಷ್ಟು ಕೈಯಾಡಿಸಿದರೆ  ಮಿಶ್ರಣ ಹದ ಬರುತ್ತದೆ. ನಂತರ ತಣ್ಣಾಗಾದ ಮೇಲೆ ಲಾಡು ಮಾಡಿ. ಮೃದುವಾಗಿರುತ್ತದೆ.

ತ್ರಿವರ್ಣ ಕೋಸಂಬರಿ
ತ್ರಿವರ್ಣ ಕೋಸಂಬರಿ
ತ್ರಿವರ್ಣ ಲಡ್ಡು
ತ್ರಿವರ್ಣ ಲಡ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT