ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗರಣೆ ಅನ್ನದ ನೆನಪಿನಲ್ಲಿ!

Last Updated 6 ಜೂನ್ 2020, 20:13 IST
ಅಕ್ಷರ ಗಾತ್ರ

‘ಒಗ್ಗರಣೆ’ -ಇದು ನಿತ್ಯ ಬಳಕೆಯ ಸಾಮಾನ್ಯ ಪದ ಅಂತ ಅನ್ನಿಸಬಹುದು. ಹಿಂದಿನ ತಲೆಮಾರಿನ ನನ್ನಂಥವರಿಗೆ ಈ ಪದ ಉಂಟುಮಾಡುವ ರೋಮಾಂಚನ ಎಂಥದ್ದು ಅಂತೀರಾ...!

ನಾವು ಚಿಕ್ಕವರಿದ್ದಾಗ ವಾರದಲ್ಲಿ ನಾಲ್ಕೈದು ದಿನ ಬೆಳಗಿನ ತಿಂಡಿಗೆ ‘ಒಗ್ಗರಣೆ ಅನ್ನ’ವೇ ಇರುತ್ತಿದ್ದುದು. ಆಗಿನ ಕಾಲದಲ್ಲಿ ಹತ್ತಾರು ಮಂದಿ ಒಟ್ಟಿಗೆ ವಾಸಿಸುವ ಕೂಡು ಕುಟುಂಬಗಳಿದ್ದುವಲ್ಲಾ? ಅಲ್ಲದೇ, ಮನೆಗೆ ಬಂದು ಹೋಗುವ ಜನರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದೇ ಇರುತ್ತಿದ್ದರು. ಹಾಗಾಗಿ ದಿನದ ಕಡೆಯ ರೈಲಿಗೋ, ಬಸ್ಸಿಗೋ ಬರಬಹುದಾದವರನ್ನು ಲೆಕ್ಕಕ್ಕೆ ತೆಗೆದುಕೊಂಡು, ನಾಲ್ಕು ಮುಷ್ಟಿ ಅಕ್ಕಿ ಹೆಚ್ಚಾಗಿಯೇ ಹಾಕಿ ಅನ್ನ ಮಾಡಿರುತ್ತಿದ್ದರು. ಬಹುತೇಕ ಪ್ರತಿದಿನವೂ ಅನ್ನ ಉಳಿಯುತ್ತಿತ್ತು. ಅದನ್ನು ವ್ಯರ್ಥ ಮಾಡಲು ಮನಸ್ಸು ಬರುತ್ತಿರಲಿಲ್ಲ. ನಾವು ಅಷ್ಟು ಸ್ಥಿತಿವಂತರೂ ಆಗಿರಲಿಲ್ಲ. ಆದ್ದರಿಂದ ತಂಗಳನ್ನಕ್ಕೆ ಒಗ್ಗರಣೆ ಹಾಕಿ ತಿಂಡಿಗೆ ಬಡಿಸಲಾಗುತ್ತಿತ್ತು. ಹೆಚ್ಚಿನಂಶ ಗಂಡುಮಕ್ಕಳೇ ಇದರ ಫಲಾನುಭವಿಗಳು!

ಇವತ್ತು ನಾವು ಹೇಳುವ ಚಿತ್ರಾನ್ನ ಕೂಡ ಅಲ್ಲ ಅದು. ಹಿಂದಿನ ದಿನದ ಅನ್ನಕ್ಕೆ ಎಣ್ಣೆ, ಸಾಸಿವೆ, ಅರಿಸಿಣ, ಒಣಮೆಣಸಿನಕಾಯಿಯ ಒಗ್ಗರಣೆ ಹಾಕಿ, ಉಪ್ಪಿನ ಜತೆ ಕಲೆಸಿದರೆ ಮುಗಿಯಿತು. ಒಮ್ಮೊಮ್ಮೆ ಕಡಲೆಬೇಳೆ, ಉದ್ದಿನಬೇಳೆಯನ್ನೂ ಒಗ್ಗರಣೆಗೆ ಬಳಸುತ್ತಿದ್ದುದುಂಟು. ಅಪರೂಪಕ್ಕೆ ನಿಂಬೆರಸ ಇದ್ದರೆ ಅದು ಹಬ್ಬದ ಅಡುಗೆ. ಅಪ್ಪಿತಪ್ಪಿ ನೆಲಗಡಲೆ ಬೀಜವೋ, ತೆಂಗಿನ ತುರಿಯೋ, ಕೊತ್ತಂಬರಿ ಸೊಪ್ಪೋ, ಈರುಳ್ಳಿಯೋ ಹಾಕಿದ್ದರೆ ಲಾಟರಿ ಹೊಡೆದಂತೆ. ಅದು ಮೃಷ್ಟಾನ್ನವೇ ಸರಿ! ಆ ‘ಒಗ್ಗರಣೆ ಅನ್ನ’ವನ್ನು ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಮತ್ತೊಮ್ಮೆ ಬಾಲ್ಯಕ್ಕೆ ಹೋಗಿ ಬರೋಣವೇ ಅನಿಸಿಬಿಡುತ್ತದೆ. ವರಕವಿಯ ‘ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರಯ ನಮಗದಷ್ಟೇ ಏತಕೋ...?!’ ನೆನಪಾಗುತ್ತದೆ.

ಈಗ ಅದೇ ಒಗ್ಗರಣೆ ಅನ್ನಕ್ಕೆ ಮಾಡರ್ನ್ ರೂಪ ಕೊಟ್ಟು ಚಿತ್ರಾನ್ನ ಅನ್ನೋ ಚಿತ್ತಾಕರ್ಷಕ ಹೆಸರಿಟ್ಟು, ಬೇಕು ಬೇಕಾದ್ದನ್ನೆಲ್ಲಾ (ಒಣದ್ರಾಕ್ಷಿ, ಗೋಡಂಬಿಯನ್ನೂ) ಹಾಕಿ ಬಡಿಸುತ್ತಾರೆ. ಹಲವು ಹುಳಿ, ಸಿಹಿ ಪದಾರ್ಥಗಳನ್ನು ಬಳಸಿ ತಯಾರಿಸಿದ ‘ಒಗ್ಗರಣೆ ಅನ್ನ’ಕ್ಕೆ ಆಯಾ ಹೆಸರಿನಿಂದ ಕರೆಯುವುದು ರೂಢಿಯಾಗಿದೆ. ಲೆಮನ್ ರೈಸ್, ಕಲರ್ಡ್ ರೈಸ್, ಮಸಾಲಾ ರೈಸ್ ಎಂಬೆಲ್ಲಾ ಹೆಸರಿನಿಂದಲೂ ಕರೆಯುತ್ತಾರೆ ಆಂಗ್ಲ ಭಾಷಾಪ್ರಿಯರು. ಕರಾವಳಿಯವರು ಮಾಡುವ ಗಂಜಿ ಊಟ ಕೂಡಾ ಈ ಒಗ್ಗರಣೆ ಅನ್ನದ ಇನ್ನೊಂದು ರೂಪವೇ ಎಂದು ನನಗನ್ನಿಸಿದ್ದಿದೆ. ಒಗ್ಗರಣೆ ಅನ್ನ ಅಂದರೆ ನೆನ್ನೆಯ ಅನ್ನ (ಇವತ್ತಿನದೂ ಆದೀತು) ಪ್ಲಸ್ ಒಗ್ಗರಣೆ. ಆದರೆ ಗಂಜಿಯೂಟಕ್ಕೆ ಬಿಸಿ ಅನ್ನ (ಸ್ವಲ್ಪ ನೀರಾಗಿರುವಂಥದ್ದು) ಆಗಬೇಕು. ಒಗ್ಗರಣೆಯ ಸಾಮಗ್ರಿಗಳು ಹೆಚ್ಚೂ ಕಡಿಮೆ ಅವೇ. ಗಂಜಿಯೂಟ ಹೊಟ್ಟೆಗೆ ತಂಪು, ಆರೋಗ್ಯಕ್ಕೂ ಹಿತ. ಕರಾವಳಿಯ ವಾತಾವರಣಕ್ಕೆ ಹೇಳಿ ಮಾಡಿಸಿದಂಥದ್ದು.

ತಿಳಿ ಸಾರು (ರಸಂ ಎಂಬ ಆಧುನಿಕ ನಾಮಧೇಯವುಂಟು ಇದಕ್ಕೆ - ತಮಿಳಿನ ಪ್ರಭಾವ!), ಹುಳಿ (ಈಗಿನವರ ಬಾಯಲ್ಲಿ ಸಾಂಬಾರ್), ಚಟ್ನಿ, ಗೊಜ್ಜು ಹೀಗೆ ಯಾವುದೇ ವ್ಯಂಜನವಿರಲಿ, ಒಗ್ಗರಣೆ ಇಲ್ಲದೆ ಅದರ ತಯಾರಿ ಪರಿಪೂರ್ಣವಾಗುವುದಿಲ್ಲ. ವಿಶೇಷ ಎಂದರೆ ಎಲ್ಲಕ್ಕೂ ಒಂದೇ ಬಗೆಯ ಒಗ್ಗರಣೆ ಸರಿಹೊಂದುವುದಿಲ್ಲ. ತಿಳಿಸಾರಿಗೆ ತುಪ್ಪ, ಜೀರಿಗೆ, ಇಂಗಿನ ಒಗ್ಗರಣೆ. ಹುಳಿಗೆ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿಯ ಒಗ್ಗರಣೆ. ಚಟ್ನಿ ಮತ್ತು ಗೊಜ್ಜಿಗೆ ಎಣ್ಣೆ, ಸಾಸಿವೆ, ಉದ್ದಿನಬೇಳೆಯ ಒಗ್ಗರಣೆ. ಪುಳಿಯೋಗರೆಗೂ ಒಗ್ಗರಣೆ ಇದ್ದರೆ ಅದರ ಮಜವೇ ಬೇರ‍ೆ! ಉಪ್ಪಿನಕಾಯಿಗೂ ಒಗ್ಗರಣೆ ಹಾಕುವುದುಂಟು - ಮುಂದಿನ ವರ್ಷಕ್ಕೂ ಕೆಡದೆ ಉಳಿಯಬೇಕಾದರೆ ಸರಿಯಾಗಿ ಒಗ್ಗರಣೆ ಹಾಕಲೇಬೇಕು! ಎಣ್ಣೆ ಮತ್ತು ಸಾಸಿವೆಯ ಈ ಒಗ್ಗರಣೆ ಪ್ರಿಸರ್ವೇಟಿವ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಅದು ಕಾದ ಮೇಲೆ ಒಂದೊಂದೇ ಒಗ್ಗರಣೆಯ ವಸ್ತುಗಳನ್ನು ಹಾಕುತ್ತಾ ಹೋದರೆ ಅದರ ಘಮ ಇಡೀ ಮನೆಯನ್ನು ಆವರಿಸಿಕೊಳ್ಳುತ್ತದೆ. ಮನೆಯಲ್ಲಿದ್ದವರ ಮೂಗರಳಿ ಗಮನವೆಲ್ಲಾ ಅಡುಗೆ ಮನೆಯತ್ತ ತಿರುಗುತ್ತದೆ. ಹಸಿವು ಹೆಚ್ಚಾಗತೊಡಗುತ್ತದೆ. ಯಾವಾಗ ಊಟಕ್ಕೆ ಎಬ್ಬಿಸಿಯಾರೋ ಎಂದು ಕಾತರದಿಂದ ಕಾಯುತ್ತಾ ಕೂರುತ್ತಾರೆ. ಮನೆಗೆ ಬೇಡದ ಅತಿಥಿಗಳು ಬಂದಿದ್ದು, ಹೊರಡುವ ಸೂಚನೆಯೇ ಕಾಣದಿದ್ದಾಗ ನಮ್ಮ ಜಾಣ ಹೆಂಗಸರು, ಒಗ್ಗರಣೆಯನ್ನು ಸೀಯಲು ಬಿಡುತ್ತಾರಂತೆ. ಅದರ ಘಾಟಿಗೆ ಎಂಥಾ ಘಾಟಿಯಾದರೂ ಓಟ ಕೀಳಲೇಬೇಕು!

ಕಬ್ಬಿಣದ ಸೌಟಿನಲ್ಲಿಯೇ ಒಗ್ಗರಣೆ ಹಾಕುತ್ತಿದ್ದರು ನಮ್ಮ ಅಜ್ಜಿ ಮತ್ತು ಅಮ್ಮ. ಸೌಟು ದಪ್ಪವಾಗಿದ್ದು, ಒಗ್ಗರಣೆ ಸೀಯುವುದಿಲ್ಲ ಎನ್ನುವುದು ಒಂದು ಕಾರಣವಾದರೆ ಆರೋಗ್ಯದ ದೃಷ್ಟಿಯಿಂದಲೂ ಅದು ಒಳ್ಳೆಯದು ಎನ್ನುವುದೂ ಅವರಿಗೆ ಗೊತ್ತಿತ್ತು.

ಒಗ್ಗರಣೆ ಹಾಕಬೇಕು ನಿಜ. ಆದರೆ ಯಾವುದಕ್ಕೆ ಹಾಕಬೇಕು, ಯಾವುದಕ್ಕೆ ಹಾಕಬಾರದು ಎಂಬ ಸಾಮಾನ್ಯ ಜ್ಞಾನ ಇರಲೇಬೇಕು. ಹಳ್ಳಿಯೊಂದಕ್ಕೆ ಪಟ್ಟಣದಿಂದ ಹೆಣ್ಣೊಂದನ್ನು ಮದುವೆ ಮಾಡಿಕೊಂಡು ಕರೆತಂದಿದ್ದರಂತೆ. ‘ನಮ್ ಹುಡುಗೀಗೆ ಎಲ್ಲಾ ಅಡುಗೆಯೂ ಬರುತ್ತೆ’ ಅಂತ ಮದುಮಗಳ ತಾಯಿ ಹೇಳಿಕೊಂಡಿದ್ದರಂತೆ. ಘಾಟಿ ಅತ್ತೆ ‘ಮಗಳೇ, ಪಾಯಸ ಮಾಡಿಟ್ಟಿದೀನಿ. ಒಂಚೂರು ಒಗ್ಗರಣೆ ಹಾಕಿಬಿಡಮ್ಮಾ’ ಅಂದಳಂತೆ! ‘ಆಯ್ತು ಅತ್ತೆ’ ಅಂತ ಸೊಸೆ ಅಡುಗೆಮನೆ ಕಡೆ ಹೊರಟಾಗ ಅವಳ ಬಂಡವಾಳ ಬಯಲಾಯ್ತು ಅಂತ ನಮ್ಮ ಅಜ್ಜಿ ಹೇಳ್ತಿದ್ದುದು ನೆನಪಾಗುತ್ತೆ.

ಹಿಂದಿನ ಕಾಲದಲ್ಲಿ ಒಗ್ಗರಣೆಗೆ ಬೇಕಾದ ಸಾಮಾನುಗಳನ್ನು ಬೇರೆ ಬೇರೆ ಡಬ್ಬಿಗಳಲ್ಲಿ ಹಾಕಿ ಇಟ್ಟುಕೊಳ್ಳಬೇಕಾಗಿತ್ತು. ಒಲೆಯ ಮೇಲೆ ಬಾಣಲೆ ಇರಿಸಿ, ಎಣ್ಣೆ ಹಾಕಿ, ಒಗ್ಗರಣೆಯ ಪದಾರ್ಥಗಳಿಗಾಗಿ ತಡಕಾಡುವುದು, ಒಂದನ್ನು ಹಾಕಿ ಇನ್ನೊಂದನ್ನು ತರುವಷ್ಟರಲ್ಲಿ ಮೊದಲು ಹಾಕಿದ ವಸ್ತು ಸೀದುಹೋಗುವುದು ಆಗುತ್ತಿದ್ದುದುಂಟು! ಹೆಂಗಳೆಯರ ಈ ಕಷ್ಟ ನೋಡಿದ ಯಾರೋ ಪುಣ್ಯಾತ್ಮರು ಅದಕ್ಕೆಂದೇ ವಿಶೇಷ ಡಬ್ಬಿಗಳನ್ನು ತಯಾರಿಸಿದರು. ಒಗ್ಗರಣೆಗೆ ಬೇಕಾದ ಎಲ್ಲಾ ಪದಾರ್ಥಗಳೂ ಒಂದೇ ಕಡೆ ಸಿಗುವಂತೆ ಇವುಗಳ ವಿನ್ಯಾಸ ಮಾಡಿದರು. ಹಲವು ಗಾತ್ರ, ಆಕಾರ, ಬಣ್ಣಗಳಲ್ಲಿ ಇವು ಸಿಗುತ್ತವೆ.

ಒಗ್ಗರಣೆಯ ಬಗ್ಗೆ ಬರೆಯುತ್ತಾ ಹೋದಷ್ಟೂ ಬೆಳೆಯುತ್ತದೆ. ಇವನ ಒಗ್ಗರಣೆ ಪುರಾಣ ಇನ್ನೂ ಮುಗಿಯಲಿಲ್ಲವಲ್ಲಪ್ಪಾ ಎಂದು ನೀವನ್ನುವುದರೊಳಗೆ ಮುಗಿಸಿಬಿಡುತ್ತೇನೆ. ಅಲ್ಲದೇ ಅಡುಗೆ ಮನೆಯಿಂದ ಒಗ್ಗರಣೆಯ ಘಮವೂ ನನ್ನನ್ನು ಕರೆಯುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT