ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು 2 ಕಪ್ (ಹಿಟ್ಟು ಸ್ವಲ್ಪ ತರಿ ತರಿಯಾಗಿರಲಿ), ಸಕ್ಕರೆ 1 ಕಪ್, ತುಪ್ಪ 1 ಕಪ್ + 2 ಟೇಬಲ್ ಚಮಚ, ಹಾಲು 1/2 ಕಪ್, ನೀರು 3/4 ಕಪ್, ಕೇಸರಿದಳ 8 ರಿಂದ 10, ಏಲಕ್ಕಿಪುಡಿ 1/4 ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾ ಸ್ವಲ್ಪ.
ತಯಾರಿಸುವ ವಿಧಾನ: ಬಟ್ಟಲಿಗೆ ಕಡಲೆಹಿಟ್ಟನ್ನು ಹಾಕಿ ಜೊತೆಗೆ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹಾಲನ್ನು ಸೇರಿಸಿ ಮಿಶ್ರಣ ಮಾಡಿ. ಎಲ್ಲವೂ ಚೆನ್ನಾಗಿ ಹೊಂದಿಕೆಯಾದ ಬಳಿಕ ಮಿಶ್ರಣವನ್ನು ಗಟ್ಟಿಯಾಗಿ ಒತ್ತಿ ಹತ್ತು ನಿಮಿಷ ಮುಚ್ಚಿಡಿ. ಬಳಿಕ ಮುಚ್ಚಳ ತೆಗೆದು ಮಿಶ್ರಣ ಮಾಡಿ. ನಂತರ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ಜರಡಿ ಹಿಡಿಯಿರಿ. ಬಳಿಕ ಕಡಲೆಹಿಟ್ಟನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ತಿಳಿ ಕಂದು ಬಣ್ಣ ಬರುವರೆಗೆ ಹುರಿಯಿರಿ.
ಈಗ ಎರಡು ಟೇಬಲ್ ಚಮಚ ತುಪ್ಪ ಸೇರಿಸಿ ಪುನಃ ಹುರಿಯಿರಿ. ಬಣ್ಣ ಬದಲಾದ ಬಳಿಕ ಸ್ವಲ್ಪ ಸ್ವಲ್ಪ ಹಾಲನ್ನು ಸೇರಿಸುತ್ತಾ ಮಗುಚುತ್ತಿರಿ. ಹಾಲು ಪೂರ್ತಿ ಮಿಶ್ರಣದೊಂದಿಗೆ ಸೇರಿ ಉದುರು ಉದುರಾದ ಬಳಿಕ ಒಲೆಯನ್ನು ಆರಿಸಿ ಪಕ್ಕದಲ್ಲಿಡಿ. ಬಾಣಲೆಗೆ ಸಕ್ಕರೆ, ನೀರು, ಕೇಸರಿದಳವನ್ನು ಹಾಕಿ ಮಿಶ್ರಣ ಮಾಡಿ. ಸಕ್ಕರೆ ಪಾಕವು ಒಂದೇಳೆ ಬರುವರೆಗೆ ಕುದಿಸಿ. ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ ಒಲೆಯನ್ನು ಆರಿಸಿ. ಈಗ ಹುರಿದ ಕಡಲೆಹಿಟ್ಟಿಗೆ ಸಕ್ಕರೆ ಪಾಕವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಐದರಿಂದ ಹತ್ತು ನಿಮಿಷ ಚೆನ್ನಾಗಿ ಬೆರೆಸಿ. ಬಳಿಕ ಅದನ್ನು ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ.
ಬಾದಾಮಿ ಮತ್ತು ಪಿಸ್ತಾದ ತೂರಿಗಳಿಂದ ಅಲಂಕರಿಸಿ. ಪೂರ್ತಿ ಆರಲು ಮೂರರಿಂದ ನಾಲ್ಕು ಗಂಟೆ ಬೇಕಾಗಬಹುದು. ಬಳಿಕ ಚಾಕುವಿನಿಂದ ಕತ್ತರಿಸಿ. ಇದನ್ನು ಒಂದು ವಾರ ಇಟ್ಟು ಸವಿಯಬಹುದು.
ಬೇಕಾಗುವ ಸಾಮಗ್ರಿಗಳು: ಬೂಂದಿ ತಯಾರಿಸಲು 250 ಗ್ರಾಂ ಕಡಲೆಹಿಟ್ಟು 1/4 ಟೀ ಚಮಚ ಕೇಸರಿ ಫುಡ್ ಕಲರ‍್ ಕರಿಯಲು ಎಣ್ಣೆ.ಸಕ್ಕರೆ ಪಾಕ ತಯಾರಿಸಲು: ಸಕ್ಕರೆ 400 ಗ್ರಾಂ 300 ಎಮ್ ಎಲ್ ನೀರು 2 ಚಿಟಿಕೆ ಕೇಸರಿ ಫುಡ್ ಕಲರ‍್ 3 ಟೀ ಚಮಚ ತುಪ್ಪ 1 ಟೀ ಚಮಚ ಏಲಕ್ಕಿಪುಡಿ ಪಚ್ಚಕರ್ಪೂರ 1/2 ಟೀ ಚಮಚ 20 ಗೋಡಂಬಿ.
ತಯಾರಿಸುವ ವಿಧಾನ: ಬಟ್ಟಲಿಗೆ ಕಡಲೆಹಿಟ್ಟು ಕೇಸರಿ ಫುಡ್ ಕಲರ‍್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆಯನ್ನು ಬಿಸಿ ಮಾಡಿಕೊಂಡು ಸಣ್ಣ ಕಣ್ಣಿನ ಬೂಂದಿ ಜರಡಿಗೆ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿ ಗರಿ ಗರಿಯಾಗಿ ಬೂಂದಿ ತಯಾರಿಸಿಕೊಳ್ಳಿ. ಬೂಂದಿ ಎಷ್ಟು ಇರುತ್ತದೆಯೋ ಅಷ್ಟು ಗ್ರಾಂ ಸಕ್ಕರೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.ಸಕ್ಕರೆಯನ್ನು ಬಾಣಲೆಗೆ ಹಾಕಿ ನೀರನ್ನು ಸೇರಿಸಿ.
ಸಕ್ಕರೆ ಕರಗಿದ ಬಳಿಕ ಪಾಕಕ್ಕೆ ಪಚ್ಚಕರ್ಪೂರ ಕೇಸರಿ ಫುಡ್ ಕಲರ‍್ ಎರಡು ಚಿಟಿಕೆ ಸೇರಿಸಿ ಮಿಶ್ರಣ ಮಾಡಿ. ನಂತರ ಬೂಂದಿ ಸೇರಿಸಿ. ಸಣ್ಣ ಉರಿಯಲ್ಲಿ ಮಿಶ್ರಣ ಮಾಡಿ. ಬೂಂದಿ ಪಾಕದೊಂದಿಗೆ ಹೊಂದಿಕೆಯಾದದಾಗ ಅದನ್ನು ಸಮತಟ್ಟಾಗಿ ಮಾಡಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಬಿಡಿ. ಬಳಿಕ ಏಲಕ್ಕಿ ಪುಡಿ ಗೋಡಂಬಿ ತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಉಂಡೆಗಳನ್ನು ಕಟ್ಟಿಕೊಳ್ಳಿ.
ಬಾಸುಂದಿ
ಬೇಕಾಗುವ ಸಾಮಗ್ರಿಗಳು: ಹಾಲು 2 ಲೀಟರ‍್ ಕೇಸರಿದಳ 1 ಟೀ ಚಮಚ ಗೋಡಂಬಿ 10 ಬಾದಾಮಿ ಹತ್ತು ಪಿಸ್ತಾ 10 ಸಕ್ಕರೆ 1/2 ಕಪ್ ಏಲಕ್ಕಿಪುಡಿ 1/2 ಟೀ ಚಮಚ.
ತಯಾರಿಸುವ ವಿಧಾನ: ದಪ್ಪ ತಳದ ಬಾಣಲೆಗೆ ಹಾಲನ್ನು ಹಾಕಿ ಜೊತೆಗೆ ಕೇಸರಿದಳವನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲನ್ನು ಕುದಿಸುತ್ತಲೇ ಇರಿ. ಹಾಲಿನಲ್ಲಿ ಬರುವ ಕೆನೆಯನ್ನು ಕುದಿಯುತ್ತಿರುವ ಹಾಲಿಗೆ ಸೇರಿಸುತ್ತಾ ಬನ್ನಿ. ಹೀಗೆ ಪ್ರತಿ ಬಾರಿಯೂ ಕನೆ ಕಟ್ಟಿದಾಗ ಹಾಲಿಗೆ ಹಾಕುತ್ತಿರಿ. ಹೀಗೆ ಅರ್ಧ ಗಂಟೆ ಮಾಡುತ್ತಿರಬೇಕಾಗುತ್ತದೆ. ಹಾಲು ಗಟ್ಟಿಯಾಗುತ್ತಾ ಬಂದಾಗ ಗೋಡಂಬಿ ಬಾದಾಮಿ ಮತ್ತು ಪಿಸ್ತಾವನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ಮಿಶ್ರಣ ಮಾಡಿ.
ಹಾಲು ದಪ್ಪವಾಗುತ್ತಾ ಬಂದಾಗ ಸಕ್ಕರೆ ಸೇರಿಸಿ ಐದು ನಿಮಿಷ ಕುದಿಸಿ. ಬಳಿಕ ಏಲಕ್ಕಿಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಹಾಲು ಸಕ್ಕರೆಯೊಂದಿಗೆ ಸೇರಿ ದಪ್ಪವಾದ ಬಳಿಕ ಒಲೆ ಆರಿಸಿ. ಇದನ್ನು ಬಿಸಿ ಇರುವಾಗಲೂ ಸವಿಯಬಹುದು. ಫ್ರೀಡ್ಜ್ನಲ್ಲಿಟ್ಟು ತಣ್ಣಾಗದ ಮೇಲೆ ಸವಿಯಲು ಇನ್ನೂ ರುಚಿ ಇರುತ್ತದೆ.
ಮಿಲ್ಕ್ ಬರ್ಫಿ
ಬೇಕಾಗುವ ಸಾಮಗ್ರಿಗಳು: ಮಿಲ್ಕ್ ಪೌಡರ‍್ 3 ಕಪ್ ಒಂದೂವರೆ ಕಪ್ ಹಾಲು ಸಕ್ಕರೆ 1 ಕಪ್ ತುಪ್ಪ 1/2 ಕಪ್ 1/2 ಟೀ ಚಮಚ ಏಲಕ್ಕಿ ಪುಡಿ ಅಲಂಕರಿಸಲು ಬಾದಾಮಿ ಪಿಸ್ತಾ ಚಿಕ್ಕದಾಗಿ ಕತ್ತರಿಸಿದ್ದು ಒಂದೊಂದು ಟೇಬಲ್ ಚಮಚ.
ತಯಾರಿಸುವವಿಧಾನ: ಮಿಲ್ಕ್ ಪೌಡರ್‌ಅನ್ನು ಜರಡಿ ಹಿಡಿದು ಬಾಣಲೆಗೆ ಹಾಕಿ. ಹಾಲು ಸಕ್ಕರೆ ಮತ್ತು ತುಪ್ಪವನ್ನು ಸೇರಿಸಿ ಗಂಟಾಗದ ರೀತಿಯಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಮಗುಚುತ್ತಾ ಬನ್ನಿ. ಗಟ್ಟಿಯಾಗುತ್ತಾ ಬಂದಾಗ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
ಬಾಣಲೆಯ ತಳ ಬಿಟ್ಟು ಬರುವಾಗ ಒಲೆಯನ್ನು ಆರಿಸಿ ತುಪ್ಪ ಸವರಿದ ಪ್ಲೇಟಿಗೆ ಹಾಕಿ. ಸಮತಟ್ಟಾಗಿ ಮಾಡಿ ಅದರ ಮೇಲೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹರಡಿ. ಬಳಿಕ ಫ್ರೀಡ್ಜ್ನಲ್ಲಿ ಒಂದು ಗಂಟೆ ಇಡಿ. ಬಳಿಕ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.