ವಿರೂಪಾಕ್ಷಿ ಬಜಿಗೆ ‘ಸುವರ್ಣ ಸಂಭ್ರಮ’..!

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನಾಮಫಲಕವಿಲ್ಲದಿದ್ದರೂ ನಾಲ್ಕುವರೆ ದಶಕದಿಂದ ಚಿರಪರಿಚಿತ ಈ ಹೋಟೆಲ್

ವಿರೂಪಾಕ್ಷಿ ಬಜಿಗೆ ‘ಸುವರ್ಣ ಸಂಭ್ರಮ’..!

Published:
Updated:
Prajavani

ಮುದ್ದೇಬಿಹಾಳ: ಪಟ್ಟಣದ ಬಜಾರ್ ಹಣಮಂತ ದೇವರ ಗುಡಿ ಮುಂಭಾಗದಲ್ಲಿನ ವಿರೂಪಾಕ್ಷಿ ಹೋಟೆಲ್‌ಗೆ ಯಾವುದೇ ನಾಮಫಲಕವಿಲ್ಲ. ಆದರೂ ವಿರೂಪಾಕ್ಷಿ ಹೋಟೆಲ್‌ ಎಂದೇ 45 ವರ್ಷಗಳಿಂದಲೂ ಚಿರಪರಿಚಿತ.

ಅರವತ್ತೇಳರ ಹರೆಯದ ವಿರೂಪಾಕ್ಷಪ್ಪ ಸಿದ್ದಪ್ಪ ಕಡೇಬಾಗಿಲ ಇದರ ಮಾಲೀಕ. ಇಬ್ಬರು ಗಂಡು ಮಕ್ಕಳು ಕೈಗೆ ಬಂದಿದ್ದರೂ; ಈಗಲೂ ಸಂಜೆ ಒಂದೆರಡು ತಾಸು ಹಿಟ್ಟು ಕಲೆಸಿ, ಎಣ್ಣೆಯಲ್ಲಿ ಬಜಿ ಕರಿದರೆ, ಮನಸ್ಸಿಗೆ ಸಮಾಧಾನ ಅವರಿಗೆ.

ಮೊದಲು ಹಳೆಯ ತರಕಾರಿ ಮಾರುಕಟ್ಟೆಯ (ಈಗ ಮುಚ್ಚಿರುವ ಶ್ರೀ ಮುರಳಿ ಟಾಕೀಸ್ ಹತ್ತಿರ) ಮೂಲೆಯೊಂದರಲ್ಲಿ ಘನಮಠೇಶ್ವರ ಟೀ ಸ್ಟಾಲ್ ಇತ್ತು. ಅಲ್ಲಿ ಮಾಡುತ್ತಿದ್ದ ತಿಂಡಿ ತಿನಿಸುಗಳ ರುಚಿಯೂ ಅಷ್ಟೇ ಸೊಗಸು.

ಅದೇ ತಾನೇ ಮೆಟ್ರಿಕ್ ಮುಗಿಸಿದ್ದ ವಿರೂಪಾಕ್ಷಿ, ವಿಷಯವೊಂದರಲ್ಲಿ ಫೇಲಾಗಿ ಮನೆಯಲ್ಲಿ ಬೈಸಿಕೊಂಡು ಘನಮಠೇಶ್ವರ ಚೌಕಿನಲ್ಲಿ ತಗಡಿನ ತಟ್ಟೆ ಕಟ್ಟಿ ಹೋಟೆಲ್‌ ಶುರು ಮಾಡಿದ್ದ. ಅಲ್ಲಿನ ಶಿರಾ, ಉಪ್ಪಿಟ್ಟು ಎರಡೂ ಸೇರಿ ಬರೀ ಬಾರಾಣೆ ದರ (ಅಂದರೆ ಕೇವಲ ಎಪ್ಪತ್ತೈದು ಪೈಸೆ).

ಆಗ ಮಾಡುತ್ತಿದ್ದ ಅದೇ ಶಿರಾ, ಉಪ್ಪಿಟ್ಟು, ಇಡ್ಲಿ, ಪೂರಿ ಈಗಲೂ ಮಾಡುತ್ತಿದ್ದಾರೆ. ಆಗಲೂ ಬಾಡಿಗೆ ಅಂಗಡಿ, ಈಗಲೂ ಬಾಡಿಗೆ ಅಂಗಡಿ. ಶ್ರೀಮಂತಿಕೆ ಏರಿಲ್ಲ, ಬಡತನ ಬಂದಿಲ್ಲ. ನಿಜ ಹೇಳಬೇಕೆಂದರೆ ಪಟ್ಟಣಕ್ಕೆ ಕೂಗಳತೆ ದೂರದಲ್ಲೇ ಇದ್ದ 8 ಎಕರೆ ಜಮೀನನ್ನು (ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಕಿಮ್ಮತ್ತು) ಗೆಳೆಯರ ಸಾಲಕ್ಕೆ ಜಾಮೀನಾಗಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರಿಗೆ ಏನೂ ಬೇಸರವಿಲ್ಲ.

ನಿತ್ಯ ₹ 3000–4000ದ ವ್ಯಾಪಾರ ಮಾಡಿದರೂ, ಕೈಗೆ ಉಳಿಯುವುದು ಅಷ್ಟಕಷ್ಟೇ. ಆಗ ಹಾಕುತ್ತಿದ್ದ ಬನಿಯನ್ನೇ ಈಗಲೂ ಹಾಕುತ್ತಿದ್ದಾರೆ. ಆದರೆ ಜನ ಮಾನಸದಲ್ಲಿ ಮಾತ್ರ ವಿರೂಪಾಕ್ಷಿ ಅಣ್ಣ ಅಂದರೇ ಅದೇನೋ ಪ್ರೀತಿ, ಅಕ್ಕರೆ, ಸಹಾನುಭೂತಿ.

ವಿರೂಪಾಕ್ಷಿಯದ್ದು ಬಹುಮುಖ ಪ್ರತಿಭೆ. ಒಳ್ಳೆಯ ಹಾಡುಗಾರ. ಈಗ್ಗೆ 30 ವರ್ಷಗಳ ಹಿಂದೆ (ಲಚ್ಚಣ್ಣ ಭೋಸಲೆ ಮಾಲೀಕತ್ವದಲ್ಲಿ) 6–7 ಜನ ಗೆಳೆಯರು ಸೇರಿ ಫ್ರೆಂಡ್ಸ್‌ ಮ್ಯೂಸಿಕಲ್ ಪಾರ್ಟಿ ಅಂತ ಮಾಡಿಕೊಂಡು, ದ್ಯಾಮವ್ವನ ಗುಡಿ ಕಟ್ಟೆಯ ಮೇಲೆ ನಿಂತು ಹಾಡುತ್ತಿದ್ದರೆ, ಕೇಳಿ ಚಪ್ಪಾಳೆ, ಶಿಳ್ಳೆ ಹೊಡೆದ ಯುವ ಜನರು ಇವತ್ತಿಗೂ ಅದೇ ಪ್ರೀತಿಯನ್ನು ವಿರೂಪಾಕ್ಷಿ ಬಗ್ಗೆ ಇಟ್ಟುಕೊಂಡಿದ್ದಾರೆ.

ಅತ್ಯಂತ ಅಗ್ಗದ ದರದಲ್ಲಿ ತಿಂಡಿ–ತಿನಿಸು ಕೊಟ್ಟವರು ವಿರೂಪಾಕ್ಷಿ. ಅವರ ಚಹಾ ಅಂಗಡಿಯಲ್ಲಿ ಎಷ್ಟು ಗದ್ದಲ ಇರುತ್ತಿತ್ತು ಎಂದರೆ ನಾಷ್ಟಾ ಮಾಡಿದ ನಂತರ, ದುಡ್ಡು ಕೊಡದೇ ಹೋದರೂ; ಆತ ಕಂಡೂ ಕಾಣದಂತೆ ಸುಮ್ಮನಿರುತ್ತಿದ್ದರು.

‘ಕೊಟ್ಟೋರೂ ನಮ್ಮವರೇ, ಕೊಡದವರೂ ನಮ್ಮವರೇ, ಗದ್ದಲಾನ ಹಾಂಗ್ ಇರ್ತಿತ್ರೀ. ಜನರ ಜೋಡಿ ಏನ್‌ ಗುದ್ದಾಡೋದು, ಬಂದಿದ್ದು ಬಂತು, ಹೋಗಿದ್ದು ಅವಂದರಿ’ ಎಂದು ಮೇಲಕ್ಕೆ ನೋಡಿ ಮುಗುಳ್ನಗುತ್ತಾರೆ ವಿರೂಪಾಕ್ಷಿ.

ಈಗ ದಿನಕ್ಕೆ 30ರಿಂದ 40 ಕೆ.ಜಿ. ಕಡಲೆ ಹಿಟ್ಟಿನ ಬಜಿ ಖರ್ಚಾಗುತ್ತದೆ. ಮಧ್ಯಾಹ್ನ 1ರಿಂದ ಶುರುವಾಗುವ ಬಜಿ ಮಾಡುವ ಕೆಲಸ, ಗಿರಾಕಿಗಳು ಬಂದಂತೆ ಬಿಸಿ ಬಿಸಿಯಾಗಿ ಮಾಡುತ್ತಾರೆ. ಚಪ್ಪಟೆ ಬಜಿ ಬಹಳ ರುಚಿಕರ. ಅಲ್ಲಿ ಕುಳಿತು ತಿನ್ನುವವರಿಗಿಂತ, ಪಾರ್ಸೆಲ್ ಕಟ್ಟಿಸಿಕೊಂಡು ಹೋಗುವವರೇ ಜಾಸ್ತಿ.

ಒಳ್ಳೆಯ ಗುಣಮಟ್ಟದ ಕಡಲೆ ಹಿಟ್ಟು, ಎಣ್ಣೆ, ರುಚಿಗೆ ತಕ್ಕಂತೆ ಅಜಿವಾನ ಹಾಕಿ ಬಜಿ ಮಾಡುತ್ತಾರೆ, ಕೈಯಲ್ಲಿ ಮೂರು ಆಳುಗಳಿದ್ದಾರೆ. ಪತ್ನಿ ದಾಕ್ಷಾಯಣಿ, ಹಿರಿಯ ಮಗ ಮಹಾಂತೇಶ (9972896373), ಸಣ್ಣ ಮಗ ಈರಣ್ಣ (9945514370) ಅಪ್ಪನ ಒಳ್ಳೆಯ ಹೆಸರಿನ ಮೇಲೆಯೇ, ಪ್ರಸಾದ–ದಾಸೋಹ ಮುಂದುವರೆಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !