ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಯಾವಾಗ ಎಷ್ಟು

ವಾರದ ವೈದ್ಯ
Last Updated 31 ಜನವರಿ 2014, 19:30 IST
ಅಕ್ಷರ ಗಾತ್ರ

ಚುಚ್ಚುಮದ್ದಿನ ವೇಳಾಪಟ್ಟಿಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು

ಬಿಸಿಜಿ ಕೊಟ್ಟ ನಂತರ ಚರ್ಮದ ಮೇಲೆ ಕಲೆ ಮೂಡದಿದ್ದಲ್ಲಿ ಮಗುವಿಗೆ ಮತ್ತೊಮ್ಮೆ ಚುಚ್ಚುಮದ್ದು ನೀಡಬೇಕೇ?
ಚರ್ಮದ ಮೇಲೆ ಕಲೆ ಮೂಡದಿದ್ದರೂ ಮತ್ತೊಮ್ಮೆ ಚುಚ್ಚುಮದ್ದನ್ನು ನೀಡಬೇಕಾದ ಅವಶ್ಯಕತೆ ಇಲ್ಲ.

ಲಸಿಕಾ ವೇಳಾಪಟ್ಟಿಯಂತೆ ಡಿ.ಪಿ.ಟಿ. ಓಪಿವಿ 1, 2, 3ನೇ ಡೋಸು ಪಡೆಯದಿದ್ದಲ್ಲಿ ಯಾವ ವಯಸ್ಸಿನವರಿಗೆ ಈ ಲಸಿಕೆ ಕೊಡಬಹುದು?
ಡಿ.ಪಿ.ಟಿ. ಲಸಿಕೆಯನ್ನು 7 ವರ್ಷ ವಯಸ್ಸಿನವರಿಗೆ ಕೊಡಬೇಕು. ಓಪಿವಿ. ಲಸಿಕೆಯನ್ನು 5 ವರ್ಷಗಳ ವರೆಗೆ ನೀಡಬಹುದು. ಮಗು ಈ ಹಿಂದೆ ಕೆಲವು ಲಸಿಕೆಗಳ ಡೋಸು ಪಡೆದಿದ್ದು,  ವೇಳಾಪಟ್ಟಿಯಂತೆ ಪೂರ್ಣವಾಗದಿದ್ದಲ್ಲಿ,  ಮೊದಲಿನಿಂದ ಲಸಿಕೆಯನ್ನು ನೀಡಬಾರದು. ವೇಳಾಪಟ್ಟಿಯಂತೆ ಪೂರ್ಣಗೊಳಿಸಲು ಉಳಿದ ಡೋಸುಗಳನ್ನು ನೀಡಿ.

ಹುಟ್ಟಿನಿಂದ ಯಾವುದೇ ಲಸಿಕೆಯನ್ನು ಪಡೆಯದ 1 ವರ್ಷದ ಮಗುವಿಗೆ ಚುಚ್ಚುಮದ್ದಿನ ಯಾವ ವೇಳಾಪಟ್ಟಿ ಪಾಲಿಸಬೇಕು.



 


9 ತಿಂಗಳು ವಯಸ್ಸಾಗುವುದಕ್ಕಿಂತ ಮೊದಲೇ ಮಗುವು ದಡಾರ ಲಸಿಕೆಯನ್ನು ಪಡೆದಿದ್ದಲ್ಲಿ, ನಂತರ ಈ ಲಸಿಕೆಯನ್ನು ಪುನ: ನೀಡಬೇಕಾದ ಅವಶ್ಯಕತೆ ಇದೆಯೆ?

ಹೌದು ರಾಷ್ಟ್ರೀಯ ವೇಳಾಪಟ್ಟಿಯ ಪ್ರಕಾರ ಪೂರ್ಣವಾಗಿ 9 ರಿಂದ 12 ತಿಂಗಳ ವಯಸ್ಸಿನವರೆಗೂ ಹಾಗೂ 2ನೇ ಡೋಸ್ 16–24 ತಿಂಗಳ ವಯಸ್ಸಿನವರೆಗೂ ದಡಾರ ಲಸಿಕೆ ಕೊಡಬೇಕು. ಸರಿಯಾದ ವಯಸ್ಸಿನಲ್ಲಿ ಈ ಲಸಿಕೆ ಪಡೆಯದಿದ್ದಲ್ಲಿ 5 ವರ್ಷದವರೆಗೆ ಇದನ್ನು ನೀಡಬಹುದು.

ದಡಾರದ ಮೊದಲ ಲಸಿಕೆ ಪಡೆಯಲು ಮಗು ತಡವಾಗಿ ಬಂದಲ್ಲಿ, ಅದು 2ನೇ ಡೋಸ್‌ ಅನ್ನು ಪಡೆಯಬಹುದೇ?
ಸರಿಯಾದ ವಯಸ್ಸಿನಲ್ಲಿ ಅಂದರೆ 9–12 ತಿಂಗಳೊಳಗಾಗಿ ಮೊದಲ ಡೋಸ್ ಮತ್ತು 16–24 ತಿಂಗಳುಗಳಲ್ಲಿ 2ನೇ ಡೋಸ್ ಲಸಿಕೆಯನ್ನು ಪಡೆಯಲು ಎಲ್ಲಾ ಪ್ರಯತ್ನ ಮಾಡಬೇಕು. ಆದಾಗ್ಯೂ ಮಗು ತಡವಾಗಿ ಬಂದಲ್ಲಿ, ಐದು ವರ್ಷಗಳವರೆಗೆ ಒಂದು ತಿಂಗಳ ಅಂತರದಲ್ಲಿ ಎರಡು ಡೋಸ್ ದಡಾರ ಲಸಿಕೆಯನ್ನು ನೀಡಿ.

9ನೇ ತಿಂಗಳಲ್ಲಿ ಆವರೆಗೆ ಒಂದು ಬಾರಿಯೂ ಲಸಿಕೆ ಪಡೆಯದ ಮಗು ಬಂದಲ್ಲಿ, ಅದೇ ದಿನ ಎಲ್ಲಾ ಲಸಿಕೆ ಕೊಡಬೇಕೆ?
ಹೌದು. ಪಡೆಯಬೇಕಾದ ಎಲ್ಲಾ ಲಸಿಕೆಯನ್ನು ಅಂದೇ ನೀಡಬಹುದು, ಆದರೆ ಅವುಗಳನ್ನು ನೀಡುವಾಗ ಪ್ರತಿ ಲಸಿಕೆಗೆ ಪ್ರತ್ಯೇಕವಾದ ಎ.ಡಿ. ಸಿರಿಂಜ್‌ಗಳನ್ನು ಉಪಯೋಗಿಸಿ  ಸೂಕ್ತವಾದ ಭಾಗಗಳಿಗೆ ಸೂಜಿಮದ್ದು ಕೊಡಬೇಕು. ಯಾವುದೇ ಲಸಿಕೆಯನ್ನು ಪಡೆಯದ 9 ತಿಂಗಳ ಮಗುವಿಗೆ ಒಂದೇ ವೇಳೆಯಲ್ಲಿ ಬಿಸಿಜಿ/ಡಿಪಿಟಿ/ ಹೆಪಾಟೈಟಿಸ್‌–ಬಿ/ಓಪಿವಿ ಮತ್ತು ದಡಾರ ಲಸಿಕೆಗಳು ಹಾಗೂ ವಿಟಾಮಿನ್‌–ಎ ದ್ರಾವಣವನ್ನು ಕೊಡುವುದು ಸುರಕ್ಷಿತವೂ, ಪರಿಣಾಮಕಾರಿಯೂ ಆಗಿರುತ್ತದೆ.

1 ರಿಂದ 5 ವರ್ಷದೊಳಗಿನ ಮಗು ಈವರೆಗೆ ಯಾವುದೇ ಲಸಿಕೆ ಪಡೆಯದಿದ್ದಲ್ಲಿ, ಯಾವ ಲಸಿಕೆಗಳನ್ನು ನೀಡಬಹುದು?
ಬಿಸಿಜಿ, ಡಿಪಿಟಿ/1, ಹೆಪಾಟೈಟಿಸ್‌ (ಬಿ), ಓಪಿವಿ–1 ದಡಾರ ಮತ್ತು 2ಎಂಐ ವಿಟಾಮಿನ್‌ ಎ ದ್ರಾವಣವನ್ನು ಮಗುವಿಗೆ ಕೊಡಬೇಕು. ನಂತರ ಒಂದೊಂದು ತಿಂಗಳ ಅಂತರದಲ್ಲಿ ಡಿಪಿಟಿ ಮತ್ತು ಓಪಿವಿಗಳ 2ನೇ ಮತ್ತು 3ನೇ ಡೋಸ್ ಲಸಿಕೆಗಳನ್ನು ನೀಡಬೇಕು. ವೇಳಾಪಟ್ಟಿಯ ಪ್ರಕಾರ ದಡಾರದ 2ನೇ ಡೋಸ್ ಕೊಡಬೇಕು. ಓಪಿವಿ–3 ಮತ್ತು ಡಿಪಿಟಿ–3ನೇ ಡೋಸ್ ನೀಡಿದ ಕಡೇಪಕ್ಷ 6 ತಿಂಗಳಾದ ಮೇಲೆ ಓಪಿವಿ ಮತ್ತು ಡಿಪಿಟಿಯ ಬಲವರ್ಧಕ (ಬೂಸ್ಟರ್) ಡೋಸುಗಳನ್ನು ಕೊಡಬೇಕು. ಹೆಪಾಟೈಟಿಸ್‌ (ಬಿ) 2ನೇ ಡೋಸನ್ನು ಡಿಪಿಟಿ/ಓಪಿವಿ 2ನೇ ಡೋಸ್ ಜೊತೆ ನೀಡಬೇಕು.

5–7 ವರ್ಷಗಳ ಮಗು ಆವರೆಗೆ ಯಾವುದೇ ಲಸಿಕೆ ಪಡೆಯದಿದ್ದಲ್ಲಿ ಯಾವ ಲಸಿಕೆ ನೀಡಬಹುದು?
ಒಂದೊಂದು ತಿಂಗಳ ಅಂತರದಲ್ಲಿ ಮಗುವಿಗೆ ಒಂದು ಎರಡು ಮತ್ತು ಮೂರು ವರಸೆಗಳ ಡಿಪಿಟಿ ಲಸಿಕೆಗಳನ್ನು ಕೊಡಬೇಕು. ಡಿಪಿಟಿ–3ನೇ ವರಸೆಯನ್ನು ನೀಡಿದ ಕಡೇಪಕ್ಷ 6 ತಿಂಗಳ ನಂತರ ಬಲವರ್ಧಕ ಡಿಪಿಟಿ ವರಸೆಯನ್ನು ನೀಡಬೇಕು.

ಮಗು ಈಗಾಗಲೇ ಒಂದು ಡೋಸು ಲಸಿಕೆಯನ್ನು ಪಡೆದಿದ್ದು, ಉಳಿದವುಗಳಿಗೆ ತಡವಾಗಿ ಬಂದಲ್ಲಿ ಮೊದಲಿನ ಡೋಸಿನಿಂದಲೇ ಪುನಃ ಲಸಿಕೆಯನ್ನು ನೀಡಲು ಪ್ರಾರಂಭಿಸಬೇಕೇ?
ಮತ್ತೊಂದು ಡೋಸು ಲಸಿಕೆಯನ್ನು ಪಡೆಯಲು ಮಗು ತಡವಾಗಿ ಬಂದಲ್ಲಿ, ಮೊದಲಿನಿಂದ ಪ್ರಾರಂಭಿಸಬೇಡಿ, ವೇಳಾಪಟ್ಟಿಯಂತೆ ಮೊದಲು ಯಾವ ಲಸಿಕೆ ನೀಡಲಾಗಿತ್ತು ಅಲ್ಲಿಂದ ಮುಂದುವರೆಸಿ, ಉದಾ– ಒಂದು ಮಗು 5 ತಿಂಗಳಲ್ಲಿ ಬಿಸಿಜಿ, ಹೆಪಾಟೈಟಿಸ್‌ ಬಿ–1 ಡಿಪಿಟಿ–1 ಮತ್ತು ಓಪಿವಿ–1 ಪಡೆದಿದ್ದಲ್ಲಿ ಮತ್ತು ಆ ಮಗು 11ನೇ ತಿಂಗಳಿನಲ್ಲಿ ತಡವಾಗಿ ಬಂದಲ್ಲಿ, ಆ ಮಗುವಿಗೆ ಡಿಪಿಟಿ–2, ಹೆಪಾಟೈಟಿಸ್‌–ಬಿ–2 ಮತ್ತು ಓಪಿವಿ–2 ಹಾಗೂ ದಡಾರ ಲಸಿಕೆಗಳನ್ನು ನೀಡಿ.

ವಯಸ್ಸಿಗೆ ಅನುಗುಣವಾಗಿ ಹಿಬ್‌ (ಮೆದುಳುಜ್ವರ) ಲಸಿಕೆ ಕೊಡುವ ಬಗೆ ಹೇಗೆ?
* 6 ತಿಂಗಳ ಒಳಗಿನ ಮಕ್ಕಳಿಗೆ 1 ತಿಂಗಳ ಅಂತರದಲ್ಲಿ 3 ಡೋಸ್ ಕೊಡಬಹುದು.
* ಮಗು 6 ರಿಂದ 12 ತಿಂಗಳ ವಯಸ್ಸಿನೊಳಗೆ ಮೊದಲ ಬಾರಿಗೆ ಬಂದರೆ ಎರಡೇ ಡೋಸ್ ಲಸಿಕೆಯನ್ನು 1 ತಿಂಗಳ ಅಂತರದಲ್ಲಿ ಕೊಡಬಹುದು.
* ಮಗು 12 ರಿಂದ 15 ತಿಂಗಳಲ್ಲಿ ಮೊದಲ ಬಾರಿಗೆ ಬಂದಲ್ಲಿ 1 ಡೋಸ್ ಹಿಬ್‌ ಲಸಿಕೆ ನೀಡಬೇಕು.
* 18 ತಿಂಗಳಿಂದ 5 ವರ್ಷ ವಯಸ್ಸಿನ ಮಗು ಮೊದಲಿಗೆ ಹಿಬ್‌ ಲಸಿಕೆ ತೆಗೆದುಕೊಳ್ಳಲು ಬಂದಲ್ಲಿ 1 ಡೋಸ್‌ ಲಸಿಕೆ ಕೊಡಬಹುದು. 5 ವರ್ಷದ ನಂತರದ ಮಕ್ಕಳಿಗೆ ಹಿಬ್‌ ಲಸಿಕೆಯನ್ನು ಕೊಡುವುದಿಲ್ಲ.

ಓಪಿವಿ–0 ಡೋಸ್‌ ಎಂದರೇನು?
ಮಗು ಹುಟ್ಟಿದ ತಕ್ಷಣ 15 ದಿನಗಳೊಳಗಾಗಿ ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ಎರಡು ಓಪಿವಿ ಹನಿಗಳನ್ನು ಬಾಯಿಯ ಮೂಲಕ ನೀಡುವುದಕ್ಕೆ ಓಪಿವಿ–0 ಡೋಸ್‌ ಎನ್ನುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT