ಶುಕ್ರವಾರ, ಏಪ್ರಿಲ್ 3, 2020
19 °C
ಮೇದಾರರ ಜೀವನಾಧಾರ ಮೊರ: ಬಾಗಿನ ಅರ್ಪಣೆಗೆ ಇದು ಬೇಕೇ ಬೇಕು

ಗೌರಿ–ಗಣೇಶ ಹಬ್ಬ: ಮೊರಕ್ಕೆ ಹೆಚ್ಚಿದ ಬೇಡಿಕೆ

ರವಿ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗೌರಿ ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆ ಹಬ್ಬದ ಸಿದ್ಧತೆಗಳು ಗರಿಗೆದರಿವೆ. ಈ ಬಾರಿ ಗೌರಿ ಮತ್ತು ಗಣೇಶ ಹಬ್ಬಗಳೆರಡೂ ಒಂದೇ ದಿನ ಬಂದಿರುವುದು ವಿಶೇಷ. ಗೌರಿ ಹಬ್ಬದಂದು ಬಾಗಿನ ಅರ್ಪಿಸಲು ಬಳಸುವ ಮೊರಕ್ಕೂ ಬೇಡಿಕೆ ಹೆಚ್ಚಾಗಿದೆ.

ನಗರದಲ್ಲಿ ಮೇದಾರ ಸಮುದಾಯದವರು ಬಿದಿರಿನಿಂದ ಮೊರವನ್ನು ತಯಾರಿಸುತ್ತಾರೆ. ಗಣೇಶ ಹಬ್ಬದಲ್ಲಿ ಅವರಿಗೆ ಕೈತುಂಬಾ ಕೆಲಸ.

ಗೌರಿ ಹಬ್ಬದ ದಿನ ಸ್ವರ್ಣಗೌರಿಗೆ ಬಾಗಿನ ಅರ್ಪಿಸಿದ ಮೊರಗಳನ್ನು ಮುತ್ತೈದೆಯರಿಗೆ ನೀಡುವುದು ಸಂಪ್ರದಾಯ. ಹಾಗಾಗಿ, ಹಬ್ಬ ಆಚರಿಸುವವರೆಲ್ಲರೂ ಮೊರಗಳನ್ನು ಖರೀದಿಸುತ್ತಾರೆ.

ನಗರದಲ್ಲಿರುವ ಮೇದಾರ ಬೀದಿಯ 40 ಕುಟುಂಬದವರು ಮಾತ್ರ ಮೊರ ತಯಾರು ಮಾಡುತ್ತಾರೆ. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಇವರು ಬೇರೆ ಉದ್ಯೋಗದತ್ತ ಹೋಗಲು ಶಕ್ತಿ ಇಲ್ಲ. 50ಕ್ಕೂ ಹೆಚ್ಚು ಮಂದಿ ಮೊರ ತಯಾರಿಕೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಉಳಿದವರು ಇದರೊಂದಿಗೆ ಕೂಲಿಗೆ ಹೋಗುತ್ತಾರೆ.

‘ಹಿಂದಿನಿಂದಲೂ ಬಂದ ವೃತ್ತಿಯನ್ನೇ ನೆಚ್ಚಿಕೊಂಡು ಜೀವನ ದೂಡುತ್ತಿದ್ದೇವೆ. ನಂಬಿದ ಬಿದಿರಿನ ವೃತ್ತಿಯಿಂದ ಒಪ್ಪೊತ್ತಿನ ಊಟಕ್ಕೆ ಕೊರತೆ ಆಗುವುದಿಲ್ಲ ಎನ್ನುವ ನಂಬಿಕೆಯೊಂದಿಗೆ ಇದೇ ಕಸುಬು ಮುಂದುವರಿಸಿದ್ದೇವೆ. ಜೂನ್ ಬಳಿಕ ಮಳೆಗಾಲ ಆರಂಭಗೊಳ್ಳುತ್ತದೆ. ಈ ನಡುವೆ ಡಿಸೆಂಬರ್‌ರೆಗೂ ಬಿದಿರಿನ ಬಂಬು ಕಡಿಮೆ ಪ್ರಮಾಣದಲ್ಲಿ ಕೊಡಗಿನ ಗೋಣಿಕೊಪ್ಪದಿಂದ ಬರುತ್ತದೆ’ ಎಂದು 70ರ ಬಸವಣ್ಣ ‘ಪ್ರಜಾವಾಣಿ’ಗೆ ಹೇಳಿದರು.

ಹೊಸ ಮೊರಕ್ಕೆ ಬೇಡಿಕೆ: ‘ಸ್ವರ್ಣಗೌರಿ ಹಬ್ಬದ ಬಾಗಿನಕ್ಕೆ ಹೊಸ ಮೊರಗಳನ್ನು ಹಬ್ಬದ ಹಿಂದಿನ ದಿನ ತೊಳೆದು ಒಣಗಿಸಿ ಅರಿಸಿನ ಹಚ್ಚುತ್ತಾರೆ. ಹಿರಿಯರು ಹಾಗೂ ಕಿರಿಯರಿಗಾಗಿ ಎರಡು ಜೊತೆ ದೊಡ್ಡ ಮೊರ, ಒಂದು ಜೊತೆ ಸಣ್ಣಮೊರ ನೀಡಲು ಸಿದ್ದಪಡಿಸುತ್ತೇವೆ. ಜೊತೆ ಮೊರಕ್ಕೆ ₹ 90ರಿಂದ ₹ 100 ಬೆಲೆ ಇದೆ’ ಎಂದು ಅವರು ಹೇಳಿದರು.

‘ಮೂರು ಬಿದಿರು ಬಂಬುಗೆ ₹900 ನೀಡಿ ಖರೀದಿ ಮಾಡುತ್ತೇವೆ. ಇದರಿಂದ 15ರಿಂದ 22 ಮೊರಗಳನ್ನು ತಯಾರಿಸಬಹುದು. ದಿನವೊಂದಕ್ಕೆ 10ರಿಂದ 20 ಮೊರಗಳನ್ನು ಸಿದ್ಧಪಡಿಸುತ್ತೇವೆ. ಹಬ್ಬ ಸಮೀಪಿಸಿದೆ. ಹೀಗಾಗಿ ಜೊತೆ ಮೊರ ₹100ಕ್ಕೆ ಮಾರಾಟ ಮಾಡುತ್ತೇವೆ. ಉಳಿದ ದಿನಗಳಲ್ಲಿ ₹60ಕ್ಕೆ ಮಾರಾಟ ಮಾಡುತ್ತೇವೆ’ ಎಂದು ವ್ಯಾಪಾರಿ ನಾಗೇಂದ್ರ ಹೇಳಿದರು.

ಮೊರದ ಜೊತೆಗೆ ಬುಟ್ಟಿಗಳು, ಏಣಿ, ಬೀಸಣಿಕೆ, ಚಾಪೆ ಸೇರಿದಂತೆ ಇತರ ಪರಿಕರಗಳನ್ನು ಇವರು ತಯಾರಿಸುತ್ತಾರೆ. ಗೌರಿ ಗಣೇಶ ಹಬ್ಬಕ್ಕೆ ಒಂದು ತಿಂಗಳು ಇರುವಾಗ ಮೊರ ತಯಾರಿಸಲು ಆರಂಭಿಸುತ್ತಾರೆ. ತಾಲ್ಲೂಕಿನ ತೆರಕಣಾಂಬಿ, ಸಂತೇಮರಹಳ್ಳಿ, ಯಳಂದೂರು ಭಾಗದಲ್ಲಿ ನಡೆಯುವ ಸಂತೆ ಹಾಗೂ ನಗರದ ದೊಡ್ಡ ಅಂಗಡಿ, ಚಿಕ್ಕ ಅಂಗಡಿ ಬೀದಿಗಳು ಇವರ ವ್ಯಾಪಾರ ಕೇಂದ್ರಗಳು.

ಆಧುನಿಕತೆಗೆ ಸಿಲುಕಿ ನಲುಗಿರುವ ಮೇದಾರರು

ಬಿದಿರು ಮತ್ತು ಬೆತ್ತದೊಂದಿಗೆ ನಿತ್ಯಜೀವನ ನಡೆಸುವ ಮೇದಾರರು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಬಿದಿರಿನ ವ್ಯಾಪಾರವೇ ಇವರಿಗೆ ಜೀವಾಳ. ಇದರಿಂದಲೇ ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ.

‘ಸರ್ಕಾರ ಮತ್ತು ಅರಣ್ಯ ಇಲಾಖೆ ನಮಗೆ ಆರ್ಥಿಕ ಹಾಗೂ ಇತರೇ ಸಹಾಯಹಸ್ತ ಚಾಚಿದರೆ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ಮೇದಾರರು.

ಉದ್ಯಮ ಬೆಳೆಸಬೇಕು: ಕೈಯಲ್ಲಿ ತಯಾರಿಸುವ ಕೈ ಕುಸುರಿಯ ಬಿದಿರಿನ ಪರಿಕರಗಳನ್ನು ಜನರು ಖರೀದಿಸಿ ಪ್ರೋತ್ಸಾಹಿಸಬೇಕು. ಆಗ ಮಾತ್ರ ನಾವು ತಯಾರಿಸುವ ಪರಿಕರಗಳಿಗೆ ಬೆಲೆ ಹೆಚ್ಚಿ ಬದುಕಿಗೆ ಆಸರೆಯಾಗುತ್ತದೆ. ಪ್ಲಾಸ್ಟಿಕ್ ಪರಿಕರಗಳಿಗೆ ಮೊರೆ ಹೋಗುವುದನ್ನು ನಿಲ್ಲಿಸಬೇಕು. ಇದರಿಂದ ಬಿದಿರು ಉದ್ಯೋಗವನ್ನು ಉಳಿಸಬಹುದು’ ಎಂಬುದು ಅವರ ಕಳಕಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು