ಭಾನುವಾರ, ಸೆಪ್ಟೆಂಬರ್ 20, 2020
23 °C
ಶ್ರದ್ಧಾಂಜಲಿ: ವ್ಯಕ್ತಿ, ಕೃತಿಯನ್ನು ಅರಿಯದೆ ಸಾವಿಗೆ ಪ್ರತಿಕ್ರಿಯೆ; ಕನಿಕರ

‘ಕಾರ್ನಾಡ ಧರ್ಮ ವಿರೋಧಿ ಅಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಧಿವಿಧಾನಗಳನ್ನು ನಂಬದ ಗಿರೀಶ ಕಾರ್ನಾಡ ಅವರು ಧರ್ಮ ವಿರೋಧಿ ಆಗಿರಲಿಲ್ಲ. ಆದರೆ, ಧರ್ಮಾತೀತವಾಗಿ ಬದುಕಿದವರು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ಗಿರೀಶ ಕಾರ್ನಾಡ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಕಾರ್ನಾಡರು ಅಪಾರ ಕೊಡುಗೆ ನೀಡಿದ್ದಾರೆ. ಆ ಮೂಲಕವೇ ಅವರು ದೇಶದ ಚಲನಶೀಲ ಪರಂಪರೆಯ ಭಾಗವಾಗಿ ಉಳಿದಿದ್ದಾರೆ’ ಎಂದರು.

‘ಕಾರ್ನಾಡರು ತಾವು ನಂಬಿದ್ದ ಮಾರ್ಗಗಳಿಗೆ, ಜಾತ್ಯತೀತ ಮೌಲ್ಯಕ್ಕೆ ಬದ್ಧರಾಗಿ ಜೀವಿಸಿದವರು. ಅವರ ಸಾಹಿತ್ಯ ಕೃಷಿಯಲ್ಲಿ ಅನುಸಂಧಾನದ ಮಾರ್ಗ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಮುಖಾಮುಖಿಯ ಮಾರ್ಗ ಕಾಣುತ್ತೇವೆ.ಧಾರವಾಡ, ಮುಂಬೈ, ಆಕ್ಸ್‌ಫರ್ಡ್‌ ಸುತ್ತಿದ ಕಾರ್ನಾಡರು ಬೆಂಗಳೂರಿನಲ್ಲಿ ವಿಕಾಸಗೊಂಡರು’ ಎಂದು ಹೇಳಿದರು.

ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಮಾತನಾಡಿ, ‘ಭಾರತೀಯ ನಾಗರಿಕತೆ ಹಾಗೂ ಸಂಸ್ಕೃತಿಯನ್ನು ಕಾರ್ನಾಡರಷ್ಟು ಆಳವಾಗಿ ತಿಳಿದುಕೊಂಡವರು ಬಹಳ ಕಡಿಮೆ. ಅವರ ನಾಟಕಗಳಲ್ಲಿ ಅದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

‘ಯು.ಆರ್. ಅನಂತಮೂರ್ತಿ ಹಾಗೂ ಕಾರ್ನಾಡರ ಕಥೆ, ಕಾದಂಬರಿಗಳನ್ನು ಓದಿದ ಯಾರೂ ಅವರ ಸಾವನ್ನು ಸಂಭ್ರಮಿಸಲು ಸಾಧ್ಯವಿಲ್ಲ. ತಿಳಿವಳಿಕೆ ಇಲ್ಲದೆ, ಕೇವಲ ಅವರು ಭಾಗವಹಿಸಿದ ಚಳವಳಿಗಳನ್ನು ಆಧರಿಸಿ ಅವರ ಸಾವನ್ನು ಸಂಭ್ರಮಿಸುವ ಜನರ ಮೇಲೆ ಸಿಟ್ಟಿಗೆ ಬದಲಾಗಿ ಕನಿಕರ ಮೂಡುತ್ತದೆ’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಕಾರ್ನಾಡರು ಯಾವುದಕ್ಕೂ ರಾಜಿ ಮಾಡಿಕೊಂಡವರಲ್ಲ. ಬಹುತ್ವದ ರಾಯಭಾರಿಯಾಗಿ ಕನ್ನಡ ಶ್ರೀಮಂತಗೊಳಿಸಿದವರು’ ಎಂದು ಸ್ಮರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು