ಗುರುವಾರ , ಮೇ 26, 2022
28 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ವಿದ್ಯುತ್ ಪ್ರವಾಹ ಕಾಂತೀಯ ಪರಿಣಾಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೌತಶಾಸ್ತ್ರ

ಅಧ್ಯಾಯ-13 – ಕಾಂತಕ್ಷೇತ್ರ ಮತ್ತು ಕಾಂತೀಯ ರೇಖೆಗಳು

ಕಾಂತದ ಸುತ್ತಲೂ ಕಾಂತೀಯ ಬಲದ ಪ್ರಭಾವವಿರುವ ಪ್ರದೇಶವನ್ನು ಕಾಂತಕ್ಷೇತ್ರ ಎನ್ನುತ್ತಾರೆ.

ಕಾಂತಕ್ಷೇತ್ರವನ್ನು ಅದರ ದಿಕ್ಕಿನೊಂದಿಗೆ ತೋರಿಸುವ ರೇಖೆಗಳನ್ನು ಕಾಂತೀಯ ಬಲ ರೇಖೆಗಳು ಎಂದು ಕರೆಯುತ್ತಾರೆ.

ಕಾಂತಕ್ಷೇತ್ರವು ದಿಕ್ಕು ಮತ್ತು ಪರಿಣಾಮ ಎರಡನ್ನೂ ಹೊಂದಿದ್ದು, ಕಾಂತೀಯ ಬಲರೇಖೆಗಳ ಉತ್ತರ ಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ. ಕಾಂತೀಯ ಬಲರೇಖೆಗಳು ಆವೃತ ಜಾಲಗಳಾಗಿವೆ. ಕಾಂತಕ್ಷೇತ್ರದ ಸಾಪೇಕ್ಷ ಶಕ್ತಿಯು ಕಾಂತೀಯ ಬಲ ರೇಖೆಗಳ ದಟ್ಟಣೆಯ ಮೇಲೆ ಅವಲಂಬಿತವಾಗಿದ್ದು, ಒಂದನ್ನೊಂದು ಎಂದಿಗೂ ಛೇದಿಸುವುದಿಲ್ಲ.

ವಿದ್ಯುತ್ ಪ್ರವಾಹವಿರುವ ವಾಹಕದಿಂದ ಕಾಂತಕ್ಷೇತ್ರ

ವಿದ್ಯುತ್ ಪ್ರವಾಹವಿರುವ ವಾಹಕವು ತನ್ನ ಸುತ್ತಲೂ ಕಾಂತಕ್ಷೇತ್ರವನ್ನು ಉಂಟು ಮಾಡುತ್ತದೆ. ಮತ್ತು ಕಾಂತಕ್ಷೇತ್ರದ ಬಲರೇಖೆಗಳ ದಿಕ್ಕು ವಿದ್ಯುತ್ ಪ್ರವಾಹದ ದಿಕ್ಕಿನ ಮೇಲೆ ಅವಲಂಬಿತವಾಗಿರುತ್ತದೆ.
ಕಾಂತೀಯ ಕ್ಷೇತ್ರದ ಪ್ರಮಾಣವು ವಿದ್ಯುತ್ ಪ್ರವಾಹದ ಮೇಲೆ ಅವಲಂಬಿತವಾಗಿದ್ದು, ವಿದ್ಯುತ್ ಪ್ರವಾಹ ಹೆಚ್ಚಾದಂತೆ ಕಾಂತೀಯ ಕ್ಷೇತ್ರದ ಪ್ರಮಾಣವು ಹೆಚ್ಚಾಗುತ್ತದೆ. ಅಂತೆಯೇ ವಾಹಕದಿಂದ ದೂರ ಹೋದಂತೆಲ್ಲಾ ಕಾಂತಕ್ಷೇತ್ರವು ಕಡಿಮೆಯಾಗುತ್ತಾ ಹೋಗುತ್ತದೆ.

ಬಲಗೈ ಹೆಬ್ಬೆರಳ ನಿಯಮ

ಈ ನಿಯಮವು ವಿದ್ಯುತ್ ಪ್ರವಹಿಸುತ್ತಿರುವ ವಾಹಕಕ್ಕೆ ಸಂಬಂಧಿದಂತೆ ಕಾಂತಕ್ಷೇತ್ರದ ದಿಕ್ಕನ್ನು ಕಂಡು ಹಿಡಿಯುವ ಒಂದು ವಿಧಾನವಾಗಿದ್ದು ಇದರ ಪ್ರಕಾರ ಬಲಗೈನಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ನೇರವಾದ ಒಂದು ವಾಹಕನವನ್ನು ಹಿಡಿದಿರುವಂತೆ ಊಹಿಸಿಕೊಂಡರೆ ಆಗ ಹೆಬ್ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಉಳಿದ ಬೆರಳುಗಳು ಕಾಂತಕ್ಷೇತ್ರದ ಕಾಂತೀಯ ಬಲರೇಖೆಗಳ ದಿಕ್ಕನ್ನು ಪ್ರತಿನಿಧಿಸುತ್ತದೆ.

ವೃತ್ತಾಕಾರದ ವಾಹಕ ಸುರುಳಿಯಲ್ಲಿನ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರ

ವಿದ್ಯುತ್ ಪ್ರವಾಹವಿರುವ ಸುರುಳಿ ವಾಹಕದಲ್ಲಿನ ಪ್ರತಿಬಿಂದುವಿನಲ್ಲಿ ಅದರ ಸುತ್ತಲಿನ ಕಾಂತಕ್ಷೇತ್ರವನ್ನು ಪ್ರತಿನಿಧಿಸುವ ಏಕಕೇಂದ್ರೀಯ ವೃತ್ತಗಳು ತಂತಿಯಿಂದ ದೂರ ಸರಿದಂತೆಲ್ಲಾ ನಿರಂತರವಾಗಿ ದೊಡ್ಡದಾಗುತ್ತವೆ.

ವೃತ್ತಾಕಾರದ ಸುರುಳಿಯ ಕೇಂದ್ರವನ್ನು ತಲುಪುತ್ತಿದ್ದಂತೆ ದೊಡ್ಡ ವೃತ್ತಗಳ ಕಮಾನಿನಂತಿರುವ ಕ್ಷೇತ್ರದ ಬಲರೇಖೆಗಳು ಸರಳ ರೇಖೆಯಂತೆ ಗೋಚರಿಸುತ್ತವೆ.

ಬಲಗೈ ಹೆಬ್ಬೆರಳಿನ ನಿಯಮದ ಪ್ರಕಾರ ಬಲರೇಖೆಗಳ ದಿಕ್ಕನ್ನು ಪ್ರತಿ ಬಿಂದುವಿನಲ್ಲಿ ಪ್ರತಿನಿಧಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು