ಗುರುವಾರ , ಆಗಸ್ಟ್ 18, 2022
23 °C

ಕೋವಿಡ್‌ಗೆ ಡಿಆರ್‌ಡಿಒದಿಂದ ಔಷಧ: ಹೇಗೆ ಕೆಲಸ ಮಾಡುತ್ತದೆ 2–ಡಿಜಿ, ಪ್ರಯೋಜನವೇನು?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶವು ಕೋವಿಡ್‌–19 ಎರಡನೇ ಅಲೆಯಿಂದ ತತ್ತರಿಸಿದ ಈ ಸಂದರ್ಭದಲ್ಲೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸಿರುವ ಔಷಧದ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.

ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ನ ಸಹಯೋಗದಲ್ಲಿ ಡಿಆರ್‌ಡಿಒದ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್‌ ಮೆಡಿಸಿನ್‌ ಅಂಡ್ ಅಲೈಡ್ ಸೈನ್ಸಸ್‌ (ಐಎನ್‌ಎಂಎಎಸ್‌) ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿರುವ 2–ಡಯಾಕ್ಸಿ–ಡಿ–ಗ್ಲೂಕೋಸ್‌ (2–ಡಿಜಿ) ಔಷಧಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದಾರೆ.

‘2–ಡಿಜಿ’ ಔಷಧದಿಂದ ಸೋಂಕಿತರು ವೇಗವಾಗಿ ಗುಣಮುಖರಾಗಿರುವುದು ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸಾಬೀತಾಗಿದೆ. ಸೋಂಕಿತರಿಗೆ ವೈದ್ಯಕೀಯ ಆಮ್ಲಜನಕ ಬಳಕೆಯ ಅಗತ್ಯವೂ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಡಿಸಿಜಿಐ ಹೇಳಿದೆ.

ಓದಿ: ಕೋವಿಡ್‌ ಚಿಕಿತ್ಸೆ: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧ ಬಳಕೆಗೆ ಅನುಮತಿ

ಈ ಔಷಧ ಹೇಗೆ ಕೆಲಸ ಮಾಡುತ್ತದೆ, ಇದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ;

ಯಾವ ರೂಪದಲ್ಲಿದೆ ‘2–ಡಿಜಿ’?

ಸಣ್ಣ ಪೊಟ್ಟಣದಲ್ಲಿ ಪುಡಿಯ ರೂಪದಲ್ಲಿರುವ ‘2–ಡಿಜಿ’ ಔಷಧವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಇದು ಕೋವಿಡ್‌ಗೆ ಒಳಗಾಗಿ ಆಸ್ಪತ್ರೆಗೆ ಸೇರಿದ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ನೆರವಾಗುತ್ತದೆ. ಅಲ್ಲದೆ, ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಹೇಗೆ ಕೆಲಸ ಮಾಡುತ್ತದೆ ‘2–ಡಿಜಿ’?

ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದ ಪ್ರಕಾರ, ಔಷಧವು ವೈರಸ್ ಸೋಂಕಿತ ಜೀವಕೋಶಗಳನ್ನು ಸೇರುತ್ತದೆ. ಅಲ್ಲಿ ವೈರಸ್ ಸಂಶ್ಲೇಷಣೆ ಮತ್ತು ಶಕ್ತಿ ಉತ್ಪಾದನೆಗೆ ತಡೆಯೊಡ್ಡಿ ಅದು ಬೆಳವಣಿಗೆಯಾಗದಂತೆ ತಡೆಯುತ್ತದೆ. ವೈರಸ್ ಸೋಂಕಿತ ಕೋಶಗಳಲ್ಲಿ ಶೇಖರಣೆಯಾಗುವ ಮೂಲಕ ಈ ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಪ್ರಯೋಜನವೇನು?

ಕೋವಿಡ್–19 ಎರಡನೇ ಅಲೆಯು ದೇಶದ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕಡಿಮೆ ಲಭ್ಯತೆ, ವೈದ್ಯಕೀಯ ಆಮ್ಲಜನಕದ ಕೊರತೆ ಸೋಂಕಿತರನ್ನು ಸಂಕಷ್ಟಕ್ಕೀಡುಮಾಡಿದೆ. ಇಂಥ ಸಂದರ್ಭದಲ್ಲಿ ಈ ಔಷಧದಿಂದ ಸೋಂಕಿತರು ಬೇಗನೆ ಗುಣಮುಖರಾಗುವುದರಿಂದ ಬಹಳ ಪ್ರಯೋಜನವಾಗಲಿದೆ. ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ಶೀಘ್ರ ಚೇತರಿಸಿಕೊಂಡು ಬಿಡುಗಡೆಯಾಗಬಹುದು ಎಂದು ಡಿಆರ್‌ಡಿಒ ಹೇಳಿದೆ.

ಓದಿ: 

ಔಷಧ ನೀಡುವ ಮುನ್ನ ಮತ್ತು ನಂತರ ಜೀವಕೋಶಗಳು ಹೇಗಿವೆ ಎಂಬುದರ ಮೈಕ್ರೋಸ್ಕಾಪ್‌ ಚಿತ್ರವನ್ನೂ ಡಿಆರ್‌ಡಿಒ ಬಿಡುಗಡೆ ಮಾಡಿದೆ. ‘2–ಡಿಜಿ’ ಔಷಧದ ಮೂಲಕ ಚಿಕಿತ್ಸೆ ಪಡೆದ ಹೆಚ್ಚಿನ ಕೋವಿಡ್ ಸೋಂಕಿತರು ಬೇಗನೆ ಚೇತರಿಸಿಕೊಂಡಿರುವುದಲ್ಲದೆ, ಅವರ ಆರ್‌ಟಿ–ಪಿಸಿಆರ್ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್‌ ಬಂದಿದೆ ಎಂದೂ ಸಂಸ್ಥೆ ತಿಳಿಸಿದೆ.


ಸೋಂಕಿತ ಜೀವಕೋಶಗಳು ‘2–ಡಿಜಿ’ ಔಷಧ ನೀಡುವ ಮೊದಲು ಮತ್ತು ನಂತರ

ಸೋಂಕಿನ ಲಕ್ಷಣಗಳೂ ಬೇಗನೆ ಮಾಯ

‘2–ಡಿಜಿ’ ಔಷಧ ಪಡೆದವರಲ್ಲಿ ಇತರ ಸೋಂಕಿತರಿಗಿಂತ ಬೇಗನೆ ರೋಗ ಲಕ್ಷಣಗಳು ಕಡಿಮೆಯಾಗಿವೆ. ಎರಡೂವರೆ ದಿನಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದೂ ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ.

ಇಂದು (ಭಾನುವಾರ) ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ದೇಶದಾದ್ಯಂತ 4,03,738 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 4,000ಕ್ಕೂ ಹೆಚ್ಚು ಸಾವು ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು