ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು ಮತ್ತು ಸಂತಾನಶಕ್ತಿ

Last Updated 21 ಜೂನ್ 2019, 19:30 IST
ಅಕ್ಷರ ಗಾತ್ರ

ಮೆಟ್ರೊ ನಗರಗಳಲ್ಲಿ, ಅದರಲ್ಲೂ ದುಡಿಯುವ ದಂಪತಿ ಮಕ್ಕಳನ್ನು ಪಡೆಯುವ ಹಂಬಲವಿದ್ದರೂ ಅದನ್ನು ಮುಂದೂಡಲು ಬಯಸುತ್ತಾರೆ. ಹೀಗಾಗಿ ಗರ್ಭಧಾರಣೆಯನ್ನು ಬಯಸುವ ಇಂತಹ ದಂಪತಿ ಸಂತಾನೋತ್ಪತ್ತಿಯ ಮೇಲೆ ವಯಸ್ಸು ಬೀರುವ ಪರಿಣಾಮವನ್ನು ಅರಿತುಕೊಳ್ಳುವುದು ಬಹಳ ಮುಖ್ಯ.

ಪ್ರೌಢಾವಸ್ಥೆಯ ನಂತರ, ಹದಿಹರೆಯದ ಪ್ರಾಯದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಅತ್ಯಧಿಕ ಫಲವತ್ತತೆಯನ್ನು ಹೊಂದಿರುತ್ತಾರೆ. ಬಾಲಕಿಯರ ಸಂತಾನೋತ್ಪತ್ತಿಯ ಆರಂಭವವನ್ನು ಮುಟ್ಟಿನ ಆರಂಭದಿಂದ ಗುರುತಿಸಲಾಗುತ್ತದೆ. ಹಾಗೆಯೇ ಋತುಬಂಧದ ನಂತರ ಮಹಿಳೆಯ ಗರ್ಭಧರಿಸುವ ಸಾಮರ್ಥ್ಯ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಆದರೆ ಇದಕ್ಕೂ ಮೊದಲೇ, ಅಂದರೆ ಋತುಬಂಧಕ್ಕಿಂತಲೂ 5 ರಿಂದ 10 ವರ್ಷಗಳ ಮೊದಲೆ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯವು ಕಡಿಮೆಯಾಗುತ್ತ ಬರುತ್ತದೆ.

ಇತ್ತೀಚೆಗಂತೂ ವಯಸ್ಸಿಗೆ ಸಂಬಂಧಿಸಿದ ಬಂಜೆತನ ಸಮಸ್ಯೆ ಹೆಚ್ಚು ಸಾಮಾನ್ಯವಾಗುತ್ತಿದೆ. ಇದಕ್ಕೆ ಕಾರಣಗಳು ಹಲವು- ಜೀವನಶೈಲಿ, ಆಹಾರಾಭ್ಯಾಸ, ಮಾನಸಿಕ ಒತ್ತಡ. ಅಲ್ಲದೆ, ಅನೇಕ ಮಹಿಳೆಯರು ಕುಟುಂಬ ಜೀವನವನ್ನು ಪ್ರಾರಂಭಿಸುವುದೇ 30ನೇ ವಯಸ್ಸು ದಾಟಿದ ನಂತರ. ಇಂದು ಮಹಿಳೆಯರ ಜೀವನ ಮಟ್ಟ ಸುಧಾರಿಸಿದೆ ಮತ್ತು ಹಿಂದೆಂದಿಗಿಂತಲೂ ಇಂದು ಅವರು ತಮ್ಮ ಆರೋಗ್ಯ-ಯೋಗಕ್ಷೇಮದ ಮೇಲೆ ಹೆಚ್ಚು ಗಮನ ಕೊಡುತ್ತಿದ್ದಾರೆ. ವೈದ್ಯಕೀಯ ವಲಯ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದರೂ ವಯಸ್ಸಿಗೆ ಸಂಬಂಧಿಸಿದ ಫಲವತ್ತತೆಯ ಸಮಸ್ಯೆ ಇದ್ದೇ ಇದೆ. ವಯಸ್ಸಾದಂತೆ ಅಂಡಾಶಯದಲ್ಲಿ ಉಳಿಯುವ ಅಂಡಾಣುಗಳ ಸಂಖ್ಯೆಯಲ್ಲಿ ಇಳಿಕೆಯುಂಟಾಗುವುದರಿಂದ ಮಹಿಳೆಯ ಫಲವತ್ತತೆಯ ಸಾಮರ್ಥ್ಯ ಕುಸಿಯುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇದು ಕೆಲವು ಮಹಿಳೆಯರಲ್ಲಿ ಸ್ವಲ್ಪ ಬೇಗನೇ ಕಾಣಿಸಿಕೊಳ್ಳಬಹುದು, ಕೆಲವರಲ್ಲಿ ತುಸು ತಡವಾಗಿ ಉಂಟಾಗಬಹುದು.

ಸಂತಾನೋತ್ಪತ್ತಿ ಅವಧಿಯಲ್ಲಿ, ಮಾಸಿಕ ಮುಟ್ಟು ನಿಯಮಿತವಾಗಿರುತ್ತದೆ. ಏಕೆಂದರೆ ಆಗ ಪ್ರತಿ ತಿಂಗಳು ನಿಯಮಿತವಾಗಿ ಅಂಡೋತ್ಪತ್ತಿಯಾಗುತ್ತದೆ. “ಕಿರುಚೀಲಗಳು” (follicles) ಎಂದು ಕರೆಯಲ್ಪಡುವ ದ್ರವ ತುಂಬಿದ ಗೋಳಗಳ ಒಳಗೆ ಮೊಟ್ಟೆಗಳು ಪ್ರಬುದ್ಧತೆಗೆ ಬರುತ್ತವೆ. ಮುಟ್ಟಾದಾಗ ಪ್ರತಿ ಮುಟ್ಟಿನ ಚಕ್ರದ ಆರಂಭದಲ್ಲಿ, ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯಲ್ಲಿ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ಎರಡೂ ಅಂಡಾಶಯಗಳಲ್ಲಿರುವ ಕಿರುಚೀಲಗಳ ಗುಂಪನ್ನು ಹೆಚ್ಚು ವೇಗವಾಗಿ ಬೆಳೆಯಲು ಉತ್ತೇಜಿಸುತ್ತದೆ. ಅಂಡಾಶಯವನ್ನು ಉತ್ತೇಜಿಸುವ ಈ ಪಿಟ್ಯುಟರಿ ಹಾರ್ಮೋನ್ ಅನ್ನು ಕಿರುಚೀಲಗಳನ್ನು ಉತ್ತೇಜಿಸುವ ಹಾರ್ಮೋನ್ (ಎಫ್ಎಸ್ಎಚ್) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಆ ಕಿರುಚೀಲಗಳಲ್ಲಿ ಒಂದು ಮಾತ್ರ ಪ್ರಬುದ್ಧತೆಯನ್ನು ತಲುಪಿ, ಅಂಡಾಣುವನ್ನು ಬಿಡುಗಡೆ ಮಾಡುತ್ತದೆ (ಅಂಡೋತ್ಪತ್ತಿ); ಉಳಿದವು ಕ್ರಮೇಣ ಬೆಳೆಯುವುದನ್ನು ನಿಲ್ಲಿಸುತ್ತವೆ ಮತ್ತು ಕ್ಷೀಣಿಸಿ ಹೋಗುತ್ತವೆ.

ಅಂಡಾಣು ಫಲವತ್ತಾಗಿ ಗರ್ಭಾಶಯದ ಒಳಪದರದಲ್ಲಿ (ಎಂಡೊಮೆಟ್ರಿಯಮ್) ಗಟ್ಟಿಯಾಗಿ ನೆಲೆಯೂರಿದಾಗ ಗರ್ಭಧಾರಣೆಯಾಗುತ್ತದೆ. ಗರ್ಭಧಾರಣೆ ಸಂಭವಿಸದಿದ್ದರೆ, ಮುಟ್ಟಿನ ಹರಿವಿನ ರೂಪದಲ್ಲಿ ಅದು ಬಿಡುಗಡೆಯಾಗುತ್ತದೆ ಮತ್ತು ಆ ಮೂಲಕ ಋತುಚಕ್ರವು ಮತ್ತೆ ಪ್ರಾರಂಭವಾಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ, ಕೆಲವರಲ್ಲಿ ಅನಿಯಮಿತ ಅಂಡೋತ್ಪತ್ತಿ ಉಂಟಾಗುತ್ತದೆ. ಇದರಿಂದಾಗಿ ಮುಟ್ಟಿನ ಚಕ್ರಗಳೂ ಅನಿಯಮಿತವಾಗುತ್ತವೆ. ಆದರೆ 16ನೇ ವಯಸ್ಸಿನ ನಂತರ ಅಂಡೋತ್ಪತ್ತಿ ನಿಯಮಿತ ಹಂತವನ್ನು ತಲುಪಬೇಕು ಮತ್ತು ಮುಟ್ಟು ಕೂಡ ನಿಯಮಿತವಾಗಬೇಕು.

ಅದರಂತೆಯೇ ಋತುಚಕ್ರಗಳು 30 ವರ್ಷದ ಒಳಗೆ 26– 35 ದಿನಗಳಂತೆ ನಿಯಮಿತವಾಗಿರುತ್ತವೆ. 30– 40ರ ವಯೋಮಾನದಲ್ಲಿ ಋತುಚಕ್ರಗಳ ಅವಧಿ ಕಡಿಮೆಯಾಗುತ್ತದೆ. ಸಮಯ ಕಳೆದಂತೆ, ಋತುಚಕ್ರಗಳು ಏರುಪೇರಾಗುತ್ತವೆ. ಋತುಚಕ್ರಗಳು ಸಂಪೂರ್ಣವಾಗಿ ನಿಲ್ಲುವವರೆಗೂ ಈ ಏರುಪೇರು ಮುಂದುವರಿಯುತ್ತದೆ. ಒಂದು ವರ್ಷ ಋತುಚಕ್ರ ನಿಂತು ಹೋದಾಗ ಅದನ್ನು ಋತುತುಬಂಧವೆಂದು ಪರಿಗಣಿಸಲಾಗುತ್ತದೆ. ವಯಸ್ಸಾದಂತೆ ಗರ್ಭಾಶಯ ಮತ್ತು ಗರ್ಭನಾಳದ ಸಮಸ್ಯೆಗಳೂ ಎದುರಾಗುವುದರಿಂದ ಗರ್ಭಧರಿಸುವ ಸಾಧ್ಯತೆ ಕ್ಷೀಣಿಸುತ್ತದೆ. ಮಹಿಳೆಯರ ವಯಸ್ಸು ಹೆಚ್ಚಿದಂತೆ ಹೆರಿಗೆಯ ಅಪಾಯವೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT