ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಗ್ಲಾಕೋಮಾ; ಅಂಧತ್ವಕ್ಕೆ ನಾಂದಿ 

ಡಾ. ಮುರಲೀ ಮೋಹನ್ ಚೂಂತಾರು
Published 18 ಮಾರ್ಚ್ 2024, 21:49 IST
Last Updated 18 ಮಾರ್ಚ್ 2024, 21:49 IST
ಅಕ್ಷರ ಗಾತ್ರ

‘ಗ್ಲಾಕೋಮಾ’ ಕಣ್ಣುಗಳ ದೃಷ್ಟಿನರ(Optic Nerve)ಕ್ಕೆ ಸಂಬಂಧಿಸಿದ ರೋಗ. ಸಾಮಾನ್ಯವಾಗಿ ಗ್ಲಾಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ ಕುಂಠಿತವಾಗುತ್ತದೆ. ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗದ ದೃಷ್ಟಿಶಕ್ತಿ ಕೂಡ ಕುಂಠಿತವಾಗಿ ಕುರುಡುತನ ಉಂಟಾಗಬಹುದು. ಜಗತ್ತಿನಲ್ಲಿ ಕುರುಡುತನಕ್ಕೆ ಎರಡನೇ ಅತಿ ದೊಡ್ಡ ಕಾರಣವೇ ಗ್ಲಾಕೊಮಾ.

ಸಾಮಾನ್ಯವಾಗಿ ಹೆಚ್ಚಿನ ಗ್ಲಾಕೋಮಾ ರೋಗಿಗಳಲ್ಲಿ ಕಣ್ಣಿನೊಳಗೆ ದ್ರವ್ಯದ ಒತ್ತಡ ಹೆಚ್ಚಾಗಿರುತ್ತದೆ. ಈ ಹೆಚ್ಚಿದ ಒತ್ತಡದಿಂದಾಗಿ ದೃಷ್ಟಿನರದ ಮೇಲೆ ಹೆಚ್ಚಿನ ಹಾನಿ ಆಗುತ್ತದೆ. ಕೆಲವೊಮ್ಮೆ ಸಹಜ ಕಣ್ಣಿನ ಒತ್ತಡದಲ್ಲಿಯೂ, ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲವೆಂದಿಲ್ಲ. ಗ್ಲಾಕೋಮಾದಲ್ಲಿ ಎರಡು ವಿಧಗಳಿವೆ. ತೆರೆದ ಕೋನದ ಗ್ಲಾಕೋಮಾ (Open Angle Glaucoma) ಮತ್ತು ಮುಚ್ಚಿದ ಕೋನದ ಗ್ಲಾಕೋಮಾ (Closed Angle Glaucoma). ತೆರೆದ ಕೋನದ ಗ್ಲಾಕೋಮಾ ದೀರ್ಘಕಾಲದ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ.

ಹೇಗೆ ಪತ್ತೆ ಹಚ್ಚುವುದು?:

1. ತೆರೆದ ಕೋನದ ಗ್ಲಾಕೋಮಾ: ಈ ಸಮಸ್ಯೆಯಿರುವವರಲ್ಲಿ ಹೆಚ್ಚಾಗಿ ನೋವಿರುವುದಿಲ್ಲ. ನಿಧಾನವಾಗಿ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾದಂತೆ ರೋಗ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ಈ ಕಾಯಿಲೆ ಇರುವವರು ನಡೆಯುವಾಗ ನೇರ ನಡೆಯುತ್ತಾರೆ. ಆಚೆ ಈಚೆ ಇರುವ ವಸ್ತುಗಳು ಗೋಚರಿಸುವುದಿಲ್ಲ. ಓದುವಾಗ ಮತ್ತು ಬರೆಯುವಾಗ ಒಂದು ಬದಿಯಲ್ಲಿನ ಅಕ್ಷರ ಗೋಚರಿಸುವುದಿಲ್ಲ. ಕ್ರಮೇಣ ಸುತ್ತ ಮುತ್ತಲಿನ ದೃಷ್ಟಿ ಮಾಯಾವಾಗಿ ಕೇವಲ ಶೇ, 5ರಿಂದ 10ರಷ್ಟು ನೇರದೃಷ್ಟಿ ಉಳಿಯುತ್ತದೆ. ಇದಕ್ಕೆ ‘ಸುರಂಗ ದೃಷ್ಟಿ’ (Tunnel Vision) ಎನ್ನುತ್ತಾರೆ. ಪೂರ್ಣ ಅಂಧತ್ವವೂ ಉಂಟಾಗಬಹುದು. ಅದೇ ರೀತಿ ಕತ್ತಲಿನ ಕೋಣೆಗೆ ಹೊಕ್ಕಾಗ ಕಣ್ಣನ್ನು ಹೊಂದಾಣಿಕೆ ಮಾಡಲು ಕಷ್ಟವಾಗಬಹುದು. ಬೆಳಕಿನ ದೀಪದ ಸುತ್ತ ಕಾಮನಬಿಲ್ಲಿನಂತೆ ಬಗೆಬಗೆಯ ಬಣ್ಣದ ಗೋಲಗಳು ಗೋಚರಿಸಬಹುದು. ಈ ರೀತಿಯ ಗ್ಲಾಕೋಮಾವನ್ನು ಔಷಧಿಗಳ ಮುಖಾಂತರ ಕಣ್ಣಿನೊಳಗಿನ ಒತ್ತಡ ಕಡಮೆ ಮಾಡಿ ಗುಣಪಡಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮುಖಾಂತರ ಕಣ್ಣಿನ ಒತ್ತಡ ಕಡಮೆ ಮಾಡಿ ಗುಣಪಡಿಸಲಾಗುತ್ತದೆ.

2. ಮುಚ್ಚಿದ ಕೋನದ ಗ್ಲಾಕೋಮಾ: ಒಂದು ವೈದ್ಯಕೀಯ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗವಾಗಿದ್ದು, ತಕ್ಷಣ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಅತಿಯಾದ ಕಣ್ಣು ನೋವು, ತಲೆಸುತ್ತು, ಕಣ್ಣಿನ ಸುತ್ತ ನೋವು, ವಾಕರಿಕೆ, ವಾಂತಿ ಇತ್ಯಾದಿ ಇರಬಹುದು. ಕಣ್ಣು ಕೆಂಪಾಗುವುದು, ಊದಿಕೊಳ್ಳುವುದು ಇರಬಹುದು. ಕಣ್ಣಿನ ಒತ್ತಡ ತೀವ್ರವಾಗಿ ಏರಿಕೆಯಾಗಿರುತ್ತದೆ. ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡದಿದ್ದಲ್ಲಿ ದೃಷ್ಟಿನರಕ್ಕೆ ಹಾನಿಯಾಗಿ, ಶಾಶ್ವತ ಅಂಧತ್ವ ಬರುವ ಸಾಧ್ಯತೆ ಇರುತ್ತದೆ.

ಯಾವಾಗ ಕಣ್ಣಿನ ವೈದ್ಯರಲ್ಲಿ ಹೋಗಬೇಕು?:

1. ಹತ್ತಿರದ ಮತ್ತು ದೂರದ ವಸ್ತುಗಳನ್ನು ನೋಡಲು ಕಷ್ಟವಾಗುವುದು.
2. ಕತ್ತಲೆ ಕೋಣೆಗೆ ಹೋದಾಗ ದೃಷ್ಟಿಯ ಹೊಂದಾಣಿಕೆ ಕಷ್ಟವಾಗುವುದು.
3. ಕಣ್ಣಿನ ಸುತ್ತ ಪದೇ ಪದೇ ನೋವು.
4. ಎಲ್ಲವೂ ಎರಡೆರಡಾಗಿ ಗೋಚರಿಸುವುದು.
5. ಪದೇ ಪದೇ ಕಣ್ಣು ಒದ್ದೆಯಾಗಿ, ಹೆಚ್ಚು ಕಣ್ಣೀರು ಕಾರಣವಿಲ್ಲದೆ ಒಸರುವುದು.
6. ವಸ್ತುಗಳಲ್ಲಿ ಮಂದತ್ವ ಮತ್ತು ಭೂತಾಕಾರದ ಪ್ರತಿಬಿಂಬ ಗೋಚರಿಸುವುದು.
7. ಕಣ್ಣು ತುರಿಕೆ ಅಥವಾ ಕಣ್ಣು ಉರಿಯುವುದು, ಶುಷ್ಕ ಕಣ್ಣು.
8. ತನ್ನಿಂತಾನೇ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುವುದು.
9. ವಸ್ತುವಿನ ಅಥವಾ ಬೆಳಕಿನ ಸುತ್ತ ಗೋಲಾಕಾರ ಅಥವಾ ಕಾಮನಬಿಲ್ಲಿನ ರೀತಿ ಬಣ್ಣಗಳು ಕಾಣಿಸಿಕೊಳ್ಳವುದು.
10. ಎಲ್ಲವೂ ಸರಿಯಾಗಿದ್ದು, ಕಾರಣವಿಲ್ಲದೆ ದೃಷ್ಟಿ ನಾಶವಾದಂತಾಗುವುದು. 

ಯಾರಿಗೆ ಸಾಧ್ಯತೆ ಹೆಚ್ಚು?:

1. ನೀವು 40 ವರ್ಷಗಳಿಗಿಂತ ಮೇಲ್ಪಟ್ಟರವರಾಗಿದ್ದು, ಯಾವುದಾದರೂ ಜೀವನಶೈಲಿಗೆ ಸಂಬಂಧಪಟ್ಟ ರೋಗಗಳಾದ ರಕ್ತದೊತ್ತಡ, ಮಧುಮೇಹ ರೋಗದಿಂದ ಬಳಲುತ್ತಿದ್ದಲ್ಲಿ, ನಿಮಗೆ ಗ್ಲಾಕೋಮಾ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ.
2. ನೀವು ರಸದೂತಗಳ ವೈಫರೀತ್ಯದ ರೋಗಗಳಿಂದ (ಉದಾ.: ಥೈರಾಯ್ಡ್‌ ಸಮಸ್ಯೆ) ಬಳಲುತ್ತಿದ್ದಲ್ಲಿ,
3. ನಿಮ್ಮ ಕುಟುಂಬದಲ್ಲಿ ಯಾರಾದರೂ ಗ್ಲಾಕೋಮಾ ರೋಗದಿಂದ ಬಳಲುತ್ತಿದ್ದಲ್ಲಿ,
4. ನೀವು ಅತಿಯಾದ ಸ್ಟಿರಾಯ್ಡ್‌, ಧೂಮಪಾನ ಮತ್ತು ಮದ್ಯಪಾನಕ್ಕೆ ದಾಸರಾಗಿದ್ದಲ್ಲಿ,
5. ನೀವು ಅತಿಯಾದ ರಕ್ತಹೀನತೆಯಿಂದ ಬಳಲುತ್ತಿದ್ದಲ್ಲಿ, ನಿಮ್ಮ ಕಣ್ಣಿಗೆ ರಾಸಾಯನಿಕಗಳಿಂದ ಗಾಯವಾಗಿದ್ದಲ್ಲಿ, ಅಪಘಾತಗಳಿಂದ ಶಾಶ್ವತ ಗಾಯವಾಗಿದ್ದಲ್ಲಿ,
6. ನಿಮಗೆ ಹತ್ತಿರದ ದೃಷ್ಟಿ ಮಾಂದ್ಯತೆ ಮತ್ತು ತೆಳ್ಳಗಿನ ಕಾರ್ನಿಯಾ ಇದ್ದಲ್ಲಿ,

 –ಇಂಥ ಸಮಸ್ಯೆಗಳಿದ್ದವರಲ್ಲಿ ಗ್ಲಾಕೋಮಾ ಸಾಧ್ಯತೆ ಹೆಚ್ಚು. ಮೇಲಿನ ಲಕ್ಷಣಗಳು ನಿಮಗೆ ಕಾಣಿಸಿಕೊಂಡಲ್ಲಿ, ತಕ್ಷಣ ಕಣ್ಣಿನ ತಜ್ಞರಲ್ಲಿಗೆ ಹೋಗಿ, ಸೂಕ್ತ ಸಲಹೆ, ಮಾರ್ಗದರ್ಶನ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಿ.

ಚಿಕಿತ್ಸೆ ಹೇಗೆ?

ತೆರೆದ ಕೋನದ ಗ್ಲಾಕೋಮಾವನ್ನು ಹೆಚ್ಚಾಗಿ ಔಷಧಿಗಳಿಂದ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಲೇಸರ್ ಚಿಕಿತ್ಸೆಯ ಮುಖಾಂತರ ಒತ್ತಡವನ್ನು ಕಡಿಮೆಗೊಳಿಸಬಹುದು. ಮುಚ್ಚಿದ ಕೋನದ ಗ್ಲಾಕೋಮಾ ರೋಗವನ್ನು ಶಸ್ತ್ರಚಿಕಿತ್ಸೆ ಮುಖಾಂತರ ಗುಣಪಡಿಸಲಾಗುತ್ತದೆ. ನಿಮ್ಮ ದೇಹಸ್ಥಿತಿ, ರೋಗದ ಲಕ್ಷಣ ಮತ್ತು ತೀವ್ರತೆಯನ್ನು ಕೂಲಂಕಷವಾಗಿ ವೈದ್ಯರು ಅಭ್ಯಸಿಸಿ ನಿಮಗೆ ನೀಡಬೇಕಾದ ಔಷಧ ಮತ್ತು ಶಸ್ತ್ರಚಿಕಿತ್ಸೆಯ ನಿರ್ಧಾರವನ್ನು ವೈದ್ಯರೇ ತೆಗೆದುಕೊಳ್ಳುತ್ತಾರೆ. ಆರಂಭಿಕ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಿದ್ದಲ್ಲಿ ಗ್ಲಾಕೋಮಾ ರೋಗವನ್ನು ಖಂಡಿತವಾಗಿಯೂ ಗುಣಪಡಿಸಬಹುದು. ಆದರೆ ಒಮ್ಮೆ ಗ್ಲಾಕೋಮಾ ರೋಗದಿಂದ ದೃಷ್ಟಿನರ ಹಾನಿಯಾಗಿ, ಅಂಧತ್ವ ಬಂದ ಬಳಿಕ ಯಾವುದೇ ಚಿಕಿತ್ಸೆಯೂ ಫಲಿಸಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT