ಬುಧವಾರ, ಜುಲೈ 28, 2021
29 °C

ಮುಖದ ಅಂದ ಹೆಚ್ಚಲು ಮನೆಯಲ್ಲೇ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖದ ತ್ವಚೆ ಸೌಂದರ್ಯ– ಸಾಂದರ್ಭಿಕ ಚಿತ್ರ

ಹವಾಮಾನದಲ್ಲಿ ಬದಲಾವಣೆಯಾದಂತೆ ನಮ್ಮ ಚರ್ಮದ ಆರೋಗ್ಯದಲ್ಲೂ ವ್ಯತ್ಯಾಸ ಕಾಣಿಸುತ್ತದೆ. ಜೊತೆಗೆ ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕುಗಟ್ಟುತ್ತದೆ. ಹೊಳಪು ಕಡಿಮೆಯಾಗುತ್ತದೆ. ನಮ್ಮ ಚರ್ಮವು ಕೊಲಾಜನ್‌ ಅಂಶದ ಬಿಡುಗಡೆಯನ್ನೂ ಕಡಿಮೆ ಮಾಡುತ್ತಾ ಬರುತ್ತದೆ. ಇದರಿಂದ ಚರ್ಮದ ಕಾಂತಿ ಕುಂದುವುದಲ್ಲದೇ ವಯಸ್ಸಾದಂತೆ ಕಾಣುತ್ತದೆ. ಆ ಕಾರಣಕ್ಕೆ ಅನೇಕರು ದುಬಾರಿ ಬೆಲೆಯ ಸ್ಕಿನ್‌ ಕೇರ್‌ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಅಡುಗೆಗೆ ಬಳಸುವ ಕೆಲ ಉತ್ಪನ್ನಗಳಿಂದ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಚರ್ಮ ಸುಕ್ಕುಗಟ್ಟುವುದು ಹಾಗೂ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.

ಪಪ್ಪಾಯ ಮಾಸ್ಕ್‌

ಚರ್ಮದ ಆರೋಗ್ಯಕ್ಕೆ ಪಪ್ಪಾಯ ಒಂದು ಉತ್ತಮ ಪದಾರ್ಥ. ಇದು ನಮ್ಮ ಚರ್ಮವನ್ನು ಮೃದುವಾಗಿಸುವುದಲ್ಲದೇ ದೇಹದಲ್ಲಿ ಕೊಲಾಜನ್‌ ಅಂಶವನ್ನು ಹೆಚ್ಚಿಸುತ್ತದೆ. ಪಪ್ಪಾಯ ಮಾಸ್ಕ್‌ ತಯಾರಿಸಲು ಮೊದಲು ಪಪ್ಪಾಯದ ತಿರುಳಿಗೆ 4 ಹನಿ ನಿಂಬೆರಸ ಸೇರಿಸಿ. ಈ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ವಾರದಲ್ಲಿ 4 ದಿನ ಮಾಡಿದರೆ 2 ತಿಂಗಳಲ್ಲಿ ನಿಮ್ಮ ಮುಖದ ಅಂದ ಹೆಚ್ಚುತ್ತದೆ.

ಕ್ಯಾರೆಟ್‌ ಮಾಸ್ಕ್‌

ಕ್ಯಾರೆಟ್‌ ದೇಹದ ಆರೋಗ್ಯಕ್ಕೂ ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್‌ ಎ ಅಂಶ ಅಧಿಕವಿದೆ. ಇದು ಚರ್ಮಕ್ಕೆ ಆ್ಯಂಟಿಆಕ್ಸಿಡೆಂಟ್‌ನಂತೆ ಕೆಲಸ ಮಾಡುತ್ತದೆ. ಅಲ್ಲದೇ ಚರ್ಮದ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಈ ಮಾಸ್ಕ್‌ ತಯಾರಿಸಲು ಮೊದಲು ಕ್ಯಾರೆಟ್‌ ಅನ್ನು ಬೇಯಿಸಿಕೊಳ್ಳಬೇಕು. ಬೇಯಿಸಿಕೊಂಡ ಕ್ಯಾರೆಟ್‌ಗೆ 2 ಚಮಚ ಜೇನುತುಪ್ಪ ಹಾಗೂ ಕಾಲು ಕಪ್‌ ಮೊಸರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಸೌತೆಕಾಯಿ ಹಾಗೂ ಬೆಣ್ಣೆಹಣ್ಣಿನ ಮಾಸ್ಕ್‌

ಸೌತೆಕಾಯಿ ಹಾಗೂ ಬೆಣ್ಣೆಹಣ್ಣು ಎರಡೂ ಚರ್ಮಕ್ಕೆ ತುಂಬಾ ಒಳ್ಳೆಯದು. ಸೌತೆಕಾಯಿಯಲ್ಲಿ ವಿಟಮಿನ್‌ ಸಿ ಅಂಶ ಅಧಿಕವಿದೆ. ಅಲ್ಲದೇ ಇದು ದೇಹದಲ್ಲಿ ನೀರಿನಂಶ ಹೆಚ್ಚುವಂತೆ ಮಾಡುತ್ತದೆ. ಬೆಣ್ಣೆಹಣ್ಣಿನಲ್ಲಿ ಎಣ್ಣೆ ಅಂಶ ಅಧಿಕವಿರುವುದರಿಂದ ಇದು ಚರ್ಮವನ್ನು ತೇವಾಂಶಭರಿತವಾಗಿಸುತ್ತದೆ. ಈ ಎರಡರ ಮಿಶ್ರಣದ ಮಾಸ್ಕ್ ತಯಾರಿಸಲು ಸೌತೆಕಾಯಿ ತಿರುಳು, ಬೆಣ್ಣೆಹಣ್ಣಿನ ತಿರುಳನ್ನು ತೆಗೆದು ಕಪ್‌ನಲ್ಲಿ ಹಾಕಿಕೊಳ್ಳಿ. ಅದಕ್ಕೆ 2 ಚಮಚ ಜೇನುತುಪ್ಪ ಹಾಗೂ ಮೊಸರು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಬಾದಾಮಿ ಹಾಗೂ ಹಾಲಿನ ಫೇಸ್‌ಪ್ಯಾಕ್‌

ಬಾದಾಮಿ ಹಾಗೂ ಹಾಲಿನಲ್ಲಿ ಪೌಷ್ಟಿಕಾಂಶ ಅಧಿಕವಿದೆ. ಇವು ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲಿ ಚರ್ಮದ ಆರೋಗ್ಯವನ್ನು ಸಮತೋಲನದಲ್ಲಿಡುತ್ತವೆ. ಇದಕ್ಕೆ ಬಾದಾಮಿಯನ್ನು ನೀರಿನಲ್ಲಿ ಕೆಲ ಗಂಟೆಗಳ ಕಾಲ ನೆನೆಸಿಡಿ. ನಂತರ ಹಾಲಿನೊಂದಿಗೆ ಬಾದಾಮಿಯನ್ನು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ತೊಳೆಯಿರಿ.

ಅರಿಸಿನ

ಅರಿಸಿನ ಎಲ್ಲಾ ಕಾಲಕ್ಕೂ ದೇಹಾರೋಗ್ಯಕ್ಕೆ ಉತ್ತಮ. ಅಲ್ಲದೇ ಇದು ಸದಾ ಮನೆಯಲ್ಲಿ ಸಿಗುವ ಪದಾರ್ಥಗಳಲ್ಲೊಂದು. ಅರಿಸಿನದಲ್ಲಿ ಕರ್ಕ್ಯಮಿನ್‌ ಎಂಬ ರಾಸಾಯನಿಕ ಅಂಶ ಇರುವುದರಿಂದ ಇದು ಚರ್ಮದ ಕಾಂತಿ ಹಾಗೂ ಹೊಳಪನ್ನು ಹೆಚ್ಚಿಸುತ್ತದೆ. ಜೊತೆಗೆ ಕೊಲಾಜನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅರಿಸಿನದ ಮಾಸ್ಕ್‌ ತಯಾರಿಸಲು ಅರಿಸಿನಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 10 ರಿಂದ 15 ನಿಮಿಷ ಹಾಗೇ ಬಿಡಿ. ನಂತರ ಮುಖ ತೊಳೆಯಿರಿ. ಪ್ರತಿದಿನ ಈ ಮಾಸ್ಕ್‌ ಹಚ್ಚಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು