ಶುಕ್ರವಾರ, ಮೇ 29, 2020
27 °C

ಆತಂಕವೇ? ಬರವಣಿಗೆ ಶುರುಮಾಡಿ

ಡಾ. ಬ್ರಹ್ಮಾನಂದ ನಾಯಕ Updated:

ಅಕ್ಷರ ಗಾತ್ರ : | |

ಕೋವಿಡ್‌– 19 ಪಿಡುಗಿನ ಈ ದಿನಗಳಲ್ಲಿ ಬರವಣಿಗೆ ಚಿಕಿತ್ಸೆ ಎನ್ನುವುದು ಅತ್ಯಂತ ಪರಿಣಾಮಕಾರಿ. ಚಿಂತೆಯನ್ನು, ಆತಂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ವಾರಕ್ಕೆ ಕನಿಷ್ಠ ನಾಲ್ಕು ದಿನಗಳ ಕಾಲ ಇದನ್ನು ರೂಢಿಸಿಕೊಂಡರೆ ಮಾನಸಿಕ ಸಮಸ್ಯೆಗಳಿಂದ ಮುಕ್ತರಾಗಬಹುದು.

ಕೊರೊನಾ ಸೋಂಕಿನಿಂದಾಗಿ ಇಡೀ ಜಗತ್ತೇ ಅಕ್ಷರಶಃ ಬಾಗಿಲಿನ ಹಿಂದೆ ಬಂಧಿಯಾಗಿದೆ. ನಮ್ಮ ಮುಂಜಾವಿನ ನಡಿಗೆ, ಆಹ್ಲಾದಕರ ಸೂರ್ಯೋದಯದ ನೋಟಕ್ಕೂ ತೆರೆ ಬಿದ್ದಿದೆ. ನಿತ್ಯ ಚಟುವಟಿಕೆಗಳಿಗೂ ಕಡಿವಾಣ ಹಾಕಿದಂತಾಗಿದೆ. ನಮ್ಮ ಸುತ್ತ ಒಂದು ರೀತಿಯ ನಿರಾಶಾದಾಯಕ ವಾತಾವರಣ ಕವಿದಿದೆ, ಅದು ಭವಿಷ್ಯದ ಚಿಂತೆಯಿಂದ ಇರಬಹುದು, ಆರ್ಥಿಕ ಕುಸಿತದಿಂದ ಇರಬಹುದು.

ಈ ಕೊರೊನಾ ಪಿಡುಗಿನಿಂದ ಕೋಟ್ಯಂತರ ಮಂದಿ ಆತಂಕ, ಖಿನ್ನತೆ, ದಿಗಿಲಿನಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ವೈರಸ್‌ಗಿಂತ ಹೆಚ್ಚಾಗಿ ಕ್ವಾರಂಟೈನ್‌ ಎಂಬುದು ಹಲವರಿಗೆ ಆಘಾತ ತಂದಿದೆ.

ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬೇಕಾದಷ್ಟು ನೈಸರ್ಗಿಕ ಮಾರ್ಗಗಳಿವೆ. ಅಂತಹ ಪರಿಹಾರೋಪಾಯಗಳಲ್ಲಿ ಒಂದು ‘ಬರವಣಿಗೆಯ ಚಿಕಿತ್ಸೆ’. ಉಳಿದವೆಂದರೆ ಯೋಗ, ಪ್ರಾಣಾಯಾಮ, ಧ್ಯಾನ, ಕೊನೆಯದು ಔಷಧ.

ಈ ಬರವಣಿಗೆ ಎಂಬ ಚಿಕಿತ್ಸೆ ಬಹಳ ಪುರಾತನವಾದುದು. ಒತ್ತಡ ಹಾಗೂ ಆಘಾತವನ್ನು ಹೊರಹಾಕಲು ಇದೊಂದು ಯಶಸ್ವಿ ವಿಧಾನ. ಹಾರ್ವರ್ಡ್‌ ವಿಶ್ವವಿದ್ಯಾಲಯ ಕೂಡ ಈ ಕುರಿತು ಸಂಶೋಧನ ಪ್ರಬಂಧ ಪ್ರಕಟಿಸಿದೆ.

ಹಾಗಾದರೆ ಚಿಕಿತ್ಸಾಕಾರಕ ಬರವಣಿಗೆ ಎಂದರೇನು?
ಒಬ್ಬರ ಬದುಕಿನಲ್ಲಿ ನಡೆದಂತಹ ಆಘಾತಕಾರಿ ಅಥವಾ ಆತಂಕಕಾರಿ ಘಟನೆಗಳನ್ನು ಬರೆಯುವ ವಿಧಾನವಿದು. ಅದು ಎಷ್ಟೇ ಕಹಿ ಇರಲಿ ಅಥವಾ ವೇದನೆ ತರುವಂತಹದ್ದಿರಲಿ, ನಿಜವಾದ ಭಾವನೆಗಳನ್ನು ಬಿಚ್ಚಿಡುವಂತಹದ್ದು.

ಉದಾಹರಣೆಗೆ ಕಚೇರಿಯ ನಿಮ್ಮ ಮುಖ್ಯಸ್ಥರಿಗೆ ಹೇಳಬೇಕು ಎನಿಸಿದ ವಿಷಯ, ನಿಮ್ಮ ಸ್ನೇಹಿತರ ಜೊತೆಗಿನ ಮುನಿಸು, ನಲ್ಲ/ ನಲ್ಲೆಯ ಜೊತೆಗೆ ಹದಗೆಟ್ಟ ಸಂಬಂಧ ಅಥವಾ ಹೇಳಿಕೊಳ್ಳಲಾರದಂತಹ ನೋವು.

ನೋವು ಹೊರಹಾಕಿ
ಇಂತಹ ನಕಾರಾತ್ಮಕ ವಿಷಯಗಳು ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಲೇ ಇರುತ್ತವೆ. ಇಂತಹ ನೋವನ್ನು ನಿಮಗೆ ಹೊರಹಾಕಬೇಕು ಎನ್ನುವಂತಹ ಒತ್ತಡ ಇರುತ್ತದೆ. ಈ ಅಭಿವ್ಯಕ್ತಿ ಬರವಣಿಗೆ ಇದಕ್ಕೆ ಅನುವು ಮಾಡಿಕೊಡುತ್ತದೆ.

ಒತ್ತಡದಿಂದ ಬಳಲುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಒತ್ತಡದ ಬದುಕು, ವೃತ್ತಿಪರ ಒತ್ತಡ, ವೈಯಕ್ತಿಕ ಅವಗಢಗಳು ಮನಸ್ಸನ್ನು ಕಂಗೆಡಿಸುವುದು ಸಾಮಾನ್ಯ. ಈ ಒತ್ತಡದಿಂದ ಉಂಟಾಗುವ ತಲೆನೋವು, ಬೆನ್ನುನೋವು, ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳಲು ಬರುವಂಥವರು ಸಮಸ್ಯೆಗಳ ಪೂರ್ಣ ವಿವರ ನೀಡಲು ಹಿಂಜರಿಯುತ್ತಾರೆ. ಕೆಲವರಿಗೆ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಂಥವರಿಗೆ ಸಲಹೆ ನೀಡುವುದು ಇದೇ ಬರವಣಿಗೆ ಚಿಕಿತ್ಸೆಯನ್ನು!

ಆತಂಕ ಅಕ್ಷರ ರೂಪದಲ್ಲಿ..
ಕಾಗದ ಅಥವಾ ಖಾಲಿ ಹಾಳೆ ನಿಮ್ಮ ಒಳ್ಳೆಯ ಶ್ರೋತೃವಿದ್ದಂತೆ. ಹೃದಯದೊಳಗಿರುವುದನ್ನೆಲ್ಲ ಈ ಹಾಳೆಯ ಮೇಲೆ ಹರಿಯಬಿಡಿ. ನಿಮ್ಮ ನೋವು, ದುಃಖವೆಲ್ಲ ಈ ಕಾಗದವನ್ನು ನೆನೆಸಲಿ. ನಿಮ್ಮ ಬಗ್ಗೆ ನಿಮ್ಮಷ್ಟು ಚೆನ್ನಾಗಿ ಅರಿತಿರುವವರು ಯಾರೂ ಇಲ್ಲ. ಹೀಗಾಗಿ ನಿಮ್ಮ ಮನದಾಳದಲ್ಲಿರುವ ಆತಂಕವನ್ನೆಲ್ಲ ಕಾಗದದ ಮೇಲೆ ಅಕ್ಷರ ರೂಪದಲ್ಲಿ ಹರಿಸಿ. ಅದನ್ನು ನಿಮ್ಮಷ್ಟಕ್ಕೇ ಓದಿ.

ನೀವು ಒತ್ತಡ ಎನಿಸುವಂತಹ ವಿಷಯದ ಬಗ್ಗೆ ಆಲೋಚಿಸಿದಾಗ ನಿಮ್ಮ ಮನಸ್ಸು ಅಲ್ಲಿ ಇಲ್ಲಿ ಅಲೆದಾಡಬಹುದು. ಯೋಚನೆ ಎಲ್ಲಿಂದೆಲ್ಲಿಗೋ ಹಾರಾಡಬಹುದು. ಆದರೆ ಬರವಣಿಗೆ ಎನ್ನುವುದು ಏಕಾಗ್ರತೆ ಬೇಡುವಂತಹ ಕ್ರಿಯೆ. ನಿಮ್ಮ ಮನಸ್ಸು ನಿಶ್ಚಿತವಾಗಿ ಅದೇ ಘಟನೆಯ ಮೇಲೆ ಕೇಂದ್ರೀಕೃತವಾಗುತ್ತದೆ. ಸಮಸ್ಯೆ ಸಣ್ಣದಿರಲಿ, ದೊಡ್ಡದಿರಲಿ ಪರಿಹಾರ ಎನ್ನುವುದು ಗೋಚರಿಸುತ್ತದೆ.

ಲಾಭ
ಆತಂಕ, ನಿದ್ರಾಹೀನತೆ, ಒಸಿಡಿ (ಒಬ್ಸೆಸ್ಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌) ಇರುವಂಥವರು ತಮ್ಮ ಭಯ, ಆಂತಕವನ್ನು ಈ ರೀತಿ ಬರೆದುಕೊಂಡು ಗುಣಮುಖರಾಗಿದ್ದಾರೆ. ನಕಾರಾತ್ಮಕ ಭಾವನೆಗಳಿಂದ ತೊಂದರೆಗೀಡಾದವರೂ ಪರಿಹಾರ ಕಂಡುಕೊಂಡಿದ್ದಾರೆ. ಎಲ್ಲವೂ ನೂರಕ್ಕೆ ನೂರು ಸರಿ ಇರಬೇಕೆಂದು ಬಯಸುವವರು, ಅಹಂಕಾರಿಗಳು, ಡೆಡ್‌ಲೈನ್‌ ಬಗ್ಗೆ ಆತಂಕ ಹೊಂದಿರುವವರು ಈ ಬರವಣಿಗೆಯಿಂದ ಶಾಂತಿ ಕಂಡುಕೊಂಡಿದ್ದಾರೆ. ಕೆಲವು ತೀವ್ರತರದ ಕಾಯಿಲೆ ಇರುವಂಥವರೂ ಕೂಡ ಮಾನಸಿಕ ಹಾಗೂ ದೈಹಿಕವಾಗಿ ಚೇತರಿಸಿಕೊಂಡ ಉದಾಹರಣೆಗಳಿವೆ. ಕೀಳರಿಮೆ ಇರುವವರಲ್ಲಿ ಈ ಚಿಕಿತ್ಸೆಯಿಂದ ಆತ್ಮವಿಶ್ವಾಸ ಮೂಡುತ್ತದೆ; ಯಾವುದೋ ಕಾಯಿಲೆಯಿದೆ ಎಂಬ ಭ್ರಮೆಯಿಂದಿರುವವರು ಕೂಡ ಅದರಿಂದ ಹೊರಗೆ ಬರಬಹುದು.

ತೀವ್ರತರದ ಖಿನ್ನತೆ ಇರುವಂಥವರು ಈ ಬರವಣಿಗೆ ಚಿಕಿತ್ಸೆಗೆ ಯತ್ನಿಸಬೇಡಿ. ಇದರಿಂದ ಗಾಯವನ್ನು ಇನ್ನಷ್ಟು ಕೆರೆದಂತಾಗುತ್ತದೆ. ಆಘಾತಕಾರಿ ಅನುಭವವಾದವರು ಕೂಡ ಇದನ್ನು ಯತ್ನಿಸದಿರುವುದು ಒಳಿತು. ‌

ಹೀಗೆ ಮಾಡಿ..
* ಕೊಠಡಿಯ ಬಾಗಿಲನ್ನು 20 ನಿಮಿಷಗಳ ಕಾಲ ಮುಚ್ಚಿ, ಕಾಗದ ಮತ್ತು ಪೆನ್‌ ಹಿಡಿದು ಕೂತುಕೊಳ್ಳಿ.
* ವ್ಯಾಕರಣ ಅಥವಾ ವಾಕ್ಯ ರಚನೆ ಕಡೆ ತಲೆ ಕೆಡಿಸಿಕೊಳ್ಳದೇ ನಿಮ್ಮ ಭಾವನೆಗಳನ್ನೆಲ್ಲ ಕಾಗದದ ಮೇಲೆ ಹರಿಯಬಿಡಿ.
* ಇದಕ್ಕೆ ಅತ್ಯುತ್ತಮ ಸಮಯವೆಂದರೆ ರಾತ್ರಿ ಮಲಗುವ ಮೊದಲು. ಯಾವುದೇ ಭಯವನ್ನು ತೆಗೆದು ಹಾಕಿ.
* ಬರವಣಿಗೆ ಮುಗಿದ ನಂತರ ಒಮ್ಮೆ ಓದಿ. ಸಮಸ್ಯೆಗೆ ಪರಿಹಾರ ಇದೆಯೇ ಎಂದು ಹುಡುಕಿ.
* ಬರೆದ ಕಾಗದವನ್ನು ಹರಿದು ಹಾಕಿ. ಸುಟ್ಟುಬಿಡಿ. ಮರುದಿನ ಹೊಸದಾಗಿ ಆರಂಭಿಸಿ.

(ಲೇಖಕರು ಬೆಂಗಳೂರಿನಲ್ಲಿ ಆಯುರ್ವೇದ ತಜ್ಞರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು