ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಮಳವು ಬಣ್ಣವನ್ನು ಬದಲಿಸೀತೆ?

Published 17 ಅಕ್ಟೋಬರ್ 2023, 23:30 IST
Last Updated 17 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ನಮ್ಮ ಪಂಚೇಂದ್ರಿಯಗಳು ವಾತಾವರಣದಿಂದಾಗುವ ದೃಶ್ಯ, ವಾಸನೆ, ಶಬ್ದ, ರುಚಿ, ಹಾಗೂ ಸ್ಪರ್ಶ ಇಂತಹ ನೂರಾರು ಅನುಭವಗಳನ್ನು ಪ್ರತಿಕ್ಷಣವೂ ದಾಖಲಿಸುತ್ತಲಿರುತ್ತವೆ. ನಮ್ಮ ಮಿದುಳು ಈ ಮಾಹಿತಿಗಳ ರಾಶಿಯಿಂದ ಉದಾಹರಣೆಗೆ ಯಾವುದೇ ವಸ್ತುವಿನ ವಾಸನೆ ಹಾಗೂ ಮೃದುತ್ವ, ಔನ್ನತ್ಯ (ಪಿಚ್‌), ಬಣ್ಣ ಹಾಗೂ ಅದರ ಸಂಗೀತದ ಆಯಾಮಗಳು – ಹೀಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾಹಿತಿಗಳನ್ನು ಕ್ರೋಡೀಕರಿಸಿ ಒಂದು ವಿಷಯವನ್ನು ಅರ್ಥೈಸಿಕೊಳ್ಳುತ್ತದೆ. ಈ ರೀತಿಯ ಇಂದ್ರಿಯಾನುಭವಗಳ ಸಂಯೋಜನೆಯಿಂದಾಗಿ ಮಿದುಳು ನಮಗೆ ಒಂದು ಸಂದೇಶವನ್ನು ನೀಡುತ್ತಿರುತ್ತದೆ. ನಮಗೆ ಹೆಚ್ಚಿನ ಉಷ್ಣತೆಯನ್ನು ನೆನೆದಾಗ ಕೆಂಪು ಕೇಸರಿ ಹಳದಿಗಳಂತಹ ಬೆಚ್ಚಗಿನ ಬಣ್ಣಗಳ ಜೊತೆಗೆ ಕಲ್ಪಿಸಿಕೊಳ್ಳುವಂತಾಗುತ್ತದೆ, ಮೆಲುಧ್ವನಿಯನ್ನು ಕೇಳಿದಾಗ ಇಳಿತಗ್ಗುಗಳಿಲ್ಲದ ವಿಶಾಲವಾದ ಪ್ರಶಾಂತ ಪ್ರದೇಶಗಳು ಹಾಗೂ ಬಣ್ಣಗಳನ್ನು ನೋಡಿದಾಗ ಆಯಾ ಬಣ್ಣಕ್ಕೆ ಹೊಂದುವ ಸ್ವಾದವಿರುವ ಆಹಾರಪದಾರ್ಥಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಕೇಸರಿಬಣ್ಣವನ್ನು ನೋಡಿದ ಕೂಡಲೇ ಕಿತ್ತಳೆಹಣ್ಣಿನ ನೆನಪಾಗಿ ಬಾಯಲ್ಲಿ ನೀರೂರುವ ಹಾಗೆ! ಎಂದರೆ ಪರಿಮಳವು ಬಣ್ಣವನ್ನು ಬದಲಿಸಿದಂತೆಯೇ ಎಲ್ಲವೇ? ಇದೋ ‘ಫ್ರಂಟಿಯರ್ಸ್‌ ಇನ್‌ ಸೈಕಾಲಜಿ’ ಪತ್ರಿಕೆಯಲ್ಲಿ ಮೊನ್ನೆ ಹೀಗೊಂದು ಲೇಖನ ಪ್ರಕಟವಾಗಿದೆ. ನಾವು ಗ್ರಹಿಸುವ ವಾಸನೆಯು ನಾವು ನೋಡುವ ಬಣ್ಣವನ್ನು ಗ್ರಹಿಸುವುದರಲ್ಲಿ ವ್ಯತ್ಯಾಸ ತರಬಹುದು ಎಂದು ಲಂಡನ್ನಿನ ಲಿವರ್ಪೂಲ್‌ ವಿಶ್ವವಿದ್ಯಾನಿಲಯದ ಡಾ. ರ್ಯಾನ್‌ ವಾರ್ಡ್‌ ಮತ್ತು ಸಂಗಡಿಗರು ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ.

ಇವರು 20ರಿಂದ 57 ವಯಸ್ಸಿನ 24 ಮಹಿಳೆ ಹಾಗೂ ಪುರುಷರನ್ನು ಪರೀಕ್ಷೆಗೊಡ್ಡಿ ವಾಸನೆ ಹಾಗೂ ಬಣ್ಣವನ್ನು ಹೇಗೆ ಸಂಯೋಜಿಸಿಕೊಳ್ಳಬಲ್ಲರು ಎಂದು ಪರೀಕ್ಷಿಸಿದ್ದಾರೆ. ಯಾವುದೇ ಇಂದ್ರಿಯಾನುಭವಗಳನ್ನು ಪ್ರಚೋದಿಬಲ್ಲಂತಹ ಪ್ರಚೋದಕಗಳಿಲ್ಲದಂತಹ ಒಂದು ಕೋಣೆಯಲ್ಲಿ ಪರದೆಯ ಮುಂದೆ ಇವರೆಲ್ಲರನ್ನೂ ಕುಳ್ಳಿರಿಸಿದ್ದಾರೆ. ಇವರಲ್ಲಿ ಯಾರಿಗೂ ಬಣ್ಣಗುರುಡು ಹಾಗೂ ವಾಸನೆಯನ್ನು ಗ್ರಹಿಸಲಾರದಂತಹ ಸಮಸ್ಯೆ ಇಲ್ಲದವರನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತೆನ್ನಿ. ಪ್ರಯೋಗದ ಸಂದರ್ಭದಲ್ಲಿ ಡಿಯೋಡರೆಂಟುಗಳು ಅಥವಾ ಪರಿಮಳದ್ರವ್ಯಗಳನ್ನು ಹಚ್ಚಿಕೊಂಡಿರಲಿಲ್ಲವಂತೆ.

ಹಲವಾರು ಬಗೆಯ ಪರಿಮಳಗಳನ್ನು ಆ ಪ್ರತ್ಯೇಕ ಕೋಣೆಯೊಳಗೆ ಐದು ನಿಮಿಷಗಳ ಕಾಲ ಪಸರಿಸಲಾಯಿತಂತೆ. ಕ್ಯಾರಮೆಲ್‌, ಚೆರ್ರಿ, ಕಾಫಿ, ನಿಂಬೆ ಹಾಗೂ ಪುದಿನ ಇವುಗಳ ಪರಿಮಳಗಳನ್ನು ಹಾಗೇ ಯಾದೃಚ್ಛಿಕವಾಗಿ ಆರಿಸಿಕೊಳ್ಳಲಾಗಿತ್ತು. ಯಾವುದೇ ವಾಸನೆಯಿಲ್ಲದ ನೀರನ್ನು ನಿಯಂತ್ರಣವಾಗಿ ತೆಗೆದುಕೊಂಡಿದ್ದರು. ಅನಂತರ ಇವುಗಳಲ್ಲಿ ಒಂದು ಸುಗಂಧವನ್ನು ಅಲ್ಟ್ರಾಸೋನಿಕ್‌ ಡಿಫ್ಯೂಸರ್‌ನ ಮೂಲಕ ಐದು ನಿಮಿಷಗಳ ಕಾಲ ಪಸರಿಸಿದರು. ಇವರ ಫಲಿತಾಂಶದ ಪ್ರಕಾರ ಕ್ಯಾರಮೆಲ್‌ ಅಂದರೆ ಸುಟ್ಟಿರುವ ವಾಸನೆಯನ್ನು ಗ್ರಹಿಸಿದಾಗ ನಮಗೆ ಕಡುಕಂದು ಹಾಗೂ ಕಡುಹಳದಿ ಬಣ್ಣವು ನೆನೆಪಿಗೆ ಬರುತ್ತದಂತೆ. ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾಫಿಯ ಘಮ ಮೂಗಿಗೆ ಬಡಿದಾಗ ನಾವು ಕಣ್ಣುಮುಚ್ಚಿ ಅದನ್ನು ಅನುಭವಿಸುತ್ತಿದ್ದಂತೆಯೇ ಕಡುಕಂದು ಅಥವಾ ಕಡುಗೆಂಪು ಬಣ್ಣವೂ, ಚೆರ್‍ರಿಹಣ್ಣಿನ ಸ್ವಾದವನ್ನು ನೆನೆದಾಗ ಗುಲಾಬಿಯೋ ಕೆಂಪುಬಣ್ಣವೋ ಮತ್ತು ಪುದೀನದ ಸುಗಂಧ ಪಸರಿಸಿದಾಗ ನೀಲಿ ಅಥವಾ ಹಸಿರುಬಣ್ಣವೋ ಕಣ್ಣ ಮುಂದೆ ತೆರೆದುಕೊಳ್ಳುವ ಹಾಗೆ.

ಅನಂತರ ಒಂದು ಚೌಕಾಕಾರದೊಳಗೆ ಹಲವಾರು ಬಗೆಯ ಬಣ್ಣಗಳನ್ನು ಯಾದೃಚ್ಛಿಕವಾಗಿ ಬಳಿದಿರುವ ಪರದೆಯನ್ನು ಭಾಗವಹಿಸಿದ ಅಭ್ಯರ್ಥಿಗಳಿಗೆ ತೋರಿಸಿದರು. ನಂತರ ಅವುಗಳನ್ನು ಎರಡು ರೀತಿಯ ಬಣ್ಣಗಳಾಗಿ ವಿಭಾಗಿಸಲು ಹೇಳಿದರು. ಒಂದು ಹಳದಿಯಿಂದ ನೀಲಿ, ಮತ್ತೊಂದು ಹಸಿರುಬಣ್ಣದಿಂದ ಕೆಂಪುಬಣ್ಣದ ಕಡೆಗೆ. ಒಮ್ಮೆ ಇದು ಪೂರ್ತಿಯಾದ ನಂತರ ಅದನ್ನೇ ಪುನರಾವರ್ತಿಸುವುದು. ಆಯ್ಕೆ ಮಾಡಿದ್ದ ಎಲ್ಲಾ ಪರಿಮಳಗಳನ್ನೂ ಐದು ಬಾರಿ ಪಸರಿಸಿದರಂತೆ. ಅದು ಪೂರ್ಣವಾಗುವವರೆಗೂ ಬಣ್ಣಗಳ ಜೋಡಣೆಯನ್ನು ಪುನರಾವರ್ತಿಸಿದರಂತೆ. ಭಾಗವಹಿಸಿದವರು ಈ ಎಲ್ಲಾ ಬಣ್ಣಗಳನ್ನು ಒಂದೇ ಸಮನಾಗಿ ಸರಿದೂಗಿಸಿ, ಅದರ ಅಂತಿಮ ಬಣ್ಣ ಏಳು ಬಣ್ಣ ಸೇರಿ ಬಿಳಿಬಣ್ಣವಾಗುವ ರೀತಿಯಲ್ಲಿ ತಿಳಿಯಾದ ಬೂದುಬಣ್ಣಕ್ಕೆ ತರುವುದಾಗಿತ್ತು. ಅರ್ಥಾತ್, ಅವರು ಜೋಡಿಸಿದ ಬಣ್ಣಗಳ ಅನುಕ್ರಮವು ತಿಳಿ ಬೂದುಬಣ್ಣದಲ್ಲಿ ಕೂಡಿಕೊಂಡಿರುವ ಎಲ್ಲಾ ಬಣ್ಣಗಳ ಸರಿಯಾದ ಮಿಶ್ರಣವಾಗಿರಬೇಕಿತ್ತು. ಆದರೆ ಇದನ್ನು ಮಾಡುವಲ್ಲಿ ಸುಮಾರು ಭಾಗವಹಿಸಿದವರೆಲ್ಲರೂ ಸೋತರು. ಅವರು ಜೋಡಿಸಿದ ಕ್ರಮವು ತಿಳಿಬೂದುಬಣ್ಣಕ್ಕೆ ದೂರವೇ ಇತ್ತಂತೆ. ಉದಾಹರಣೆಗೆ, ಕಾಫಿಯ ಪರಿಮಳವನ್ನು ಪಸರಿಸಿದಾಗ ಅವರು ಜೋಡಿಸಿದ ಬಣ್ಣಗಳ ಕ್ರಮವು ತಿಳಿಬೂದುಬಣ್ಣದ ಮಿಶ್ರಣವಾಗಿರದೆ ಕಂದುಮಿಶ್ರಿತ ಕೆಂಪುಬಣ್ಣವಾಗಿತ್ತು. ಅಂತೆಯೇ ಕ್ಯಾರಮೆಲ್‌ ಪರಿಮಳವನ್ನು ಪಸರಿಸಿದಾಗ ಭಾಗವಹಿಸಿದವರೆಲ್ಲರೂ ಜೋಡಿಸಿದ ಬಣ್ಣದ ಸಂಯೋಜನೆಯು ಅಚ್ಚನೀಲಿ ಬಣ್ಣದ್ದಾಗಿತ್ತು.

ಆದರೆ ಪುದೀನ ಪರಿಮಳವನ್ನು ಪಸರಿಸಿದಾಗ ಮಾತ್ರ ಫಲಿತಾಂಶ ಬೇರೆಯೇ ಆಗಿತ್ತು. ಅಂದರೆ ಎಲ್ಲರೂ ಜೋಡಿಸಿದ ಬಣ್ಣಗಳ ಕ್ರಮವು ತಿಳಿಬೂದುಬಣ್ಣಕ್ಕೆ ಹತ್ತಿರವಾಗಿತ್ತು. ಅರ್ಥಾತ್‌, ಐದರಲ್ಲಿ ನಾಲ್ಕು ಅದುವೇ ನಿಂಬೆ, ಚೆರ್‍ರಿ, ಕ್ಯಾರಮೆಲ್‌ ಹಾಗೂ ಕಾಫಿ ಪರಿಮಳಗಳನ್ನು ಪಸರಿಸಿದಾಗ ಬಣ್ಣಗಳ ಗ್ರಹಿಕೆಯು ವಾರ್ಡ್‌ ಮತ್ತು ಸಂಗಡಿಗರ ಅಂದಾಜಿನಂತೆಯೇ ಇತ್ತಂತೆ. ಮಿದುಳು ಒಂದು ಮಾಹಿತಿಯನ್ನು ಸಂಯೋಜಿಸುವಲ್ಲಿ ಎರಡು ಅಥವಾ ಹೆಚ್ಚು ಇಂದ್ರಿಯ ಅನುಭವಗಳ ಕ್ರೋಡೀಕರಣವು ಬಹಳ ಮಹತ್ವದ್ದು ಹಾಗೂ ನಾವು ಗ್ರಹಿಸಿದ ವಾಸನೆಯು ಕೆಲವೊಮ್ಮೆ ನಾವು ಅಂದಾಜಿಸುವ ಬಣ್ಣವನ್ನೇ ಬದಲಾಯಿಸಿಬಿಡಬಲ್ಲದ್ದು ಎನ್ನುತ್ತಾರೆ, ವಾರ್ಡ್.‌ ಅರ್ಥಾತ್‌, ಗ್ರಹಿಸಿದ ವಾಸನೆಯು ನಾವು ಗ್ರಹಿಸುವ ಬಣ್ಣವನ್ನು ಬದಲಿಸುತ್ತದೆ ಎಂದಷ್ಟೇ.

ಇನ್ನೂ ಎಷ್ಟರ ಮಟ್ಟಿಗೆ ವಾಸನೆಯು ಬಣ್ಣದ ಗ್ರಹಿಕೆಯನ್ನು ಪ್ರಭಾವಿಸಬಲ್ಲದ್ದು ಎಂಬುದನ್ನು ಪತ್ತೆ ಮಾಡಬೇಕು ಹಾಗೂ ಅತಿ ವಿರಳವಾಗಿ ಸಿಗುವ ಪರಿಮಳ ಅಥವಾ ಮೊದಲ ಬಾರಿಗೆ ಅನುಭವಿಸಿದ ಹೊಸ ವಾಸನೆಗೂ ಇದೇ ರೀತಿಯ ಪರಿಣಾಮವಿರುತ್ತದೆಯೇ ಎನ್ನುವುದನ್ನು ಪರೀಕ್ಷಿಸಬೇಕು ಎನ್ನುತ್ತಾರೆ, ವಾರ್ಡ್.‌

ವಾಸ್ತವವಾಗಿ ಯಾವುದೇ ಬಣ್ಣವು ನಮಗೆ ಒಂದು ಬಣ್ಣವಾಗಿ ಕಂಡರೂ, ವೈಜ್ಞಾನಿಕವಾಗಿ ಅದು ಹಲವು ಬಣ್ಣಗಳ ಮಿಶ್ರಣ ಅಥವಾ ಮಿದುಳು ಅದನ್ನು ಗ್ರಹಿಸುವ ರೀತಿಯದು. ಆದರೆ ನಮ್ಮ ಮೂಗಿಗೆ ಬಡಿದ ಪರಿಮಳವು ನಮ್ಮ ಬಣ್ಣಗಳ ಗ್ರಹಿಕೆಯನ್ನು ಬದಲಿಸುತ್ತದೆ ಎನ್ನುವುದು ವಿಚಿತ್ರವೆನಿಸಿದರೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT