ಶುಕ್ರವಾರ, ಜನವರಿ 22, 2021
28 °C

ಶಿಶುಗಳಿಗೂ ಕಣ್ಣಿನ ಪೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಜಾತ ಶಿಶುವನ್ನು ಜೇಡಿಮಣ್ಣಿನ ಅಚ್ಚಿಗೆ ಹೋಲಿಸಲಾಗುತ್ತದೆ. ಶಿಶುವನ್ನು ಪೋಷಿಸಲು ಹೆಚ್ಚು ಶ್ರದ್ಧೆಯಿಂದ ಗಮನ ಹರಿಸಬೇಕು.ಇನ್ನು ಕಣ್ಣಿನ ಪೊರೆ ಬರುವ ಸಾಧ್ಯತೆ ಇರುವುದು ವಯಸ್ಕರಿಗೆ ಮಾತ್ರ ಎಂದು ಹಲವರು ನಂಬುತ್ತಾರೆ. ಆದರೆ ಇದು ಮಕ್ಕಳಿಗೆ ಮತ್ತು ಶಿಶುಗಳಿಗೂ ಬರುತ್ತದೆ.

ಕಣ್ಣಿನ ಪೊರೆ ಮೂಲತಃ ಕಣ್ಣಿನ ಮಸೂರದಲ್ಲಿ ತೊಂದರೆ ಕಾಣಿಸುವುದು. ಈ ಪ್ರದೇಶವು ದೊಡ್ಡದಾಗಿ ಅಥವಾ ದಟ್ಟವಾಗಿ ಕಂಡುಬಂದರೆ, ಇದು ಮಸುಕಾದ ದೃಷ್ಟಿಗೆ ಕಾರಣವಾಗಬಹುದು ಅಥವಾ ದೃಷ್ಟಿ ಸಂಪೂರ್ಣವಾಗಿ ಹೋಗಬಹುದು. ಕಣ್ಣಿನ ಪೊರೆ ಮಗುವಿನ ಒಂದು ಕಣ್ಣಿನಲ್ಲಿ ಅಥವಾ ಎರಡರಲ್ಲೂ ಇರಬಹುದು.

ಮಗುವಿನ ಕಣ್ಣಿನ ಪೊರೆ ಇರುವ ಹಿಂದಿನ ಕಾರಣಗಳು

* ಹುಟ್ಟುತ್ತಲೇ ಮಗುವಿಗೆ ಕಣ್ಣಿನ ಪೊರೆ ಇರಬಹುದು, ಇದನ್ನು ವೈದ್ಯರು ಸಾಮಾನ್ಯವಾಗಿ ‘ಜನ್ಮಜಾತ’ ಎಂದು ಕರೆಯುತ್ತಾರೆ, ಅಂದರೆ ಗರ್ಭಾವಸ್ಥೆಯಲ್ಲಿ ಮಸೂರವು ಸರಿಯಾಗಿ ರೂಪುಗೊಂಡಿರುವುದಿಲ್ಲ. ಜನ್ಮದಾತ ಕಣ್ಣಿನಪೊರೆ ದಟ್ಟವಾಗಿರುತ್ತದೆ, ಶಿಶುವಿನ ಕಣ್ಣಿನ ಮಸೂರದಲ್ಲಿ ಕ್ಷೀರ ಬಿಳಿ ಬಣ್ಣದ ಅಪಾರದರ್ಶಕವಾಗಿದ್ದು ಇದನ್ನು ಬೇಗ ತೆಗೆದುಹಾಕದಿದ್ದರೆ ದೃಷ್ಟಿದೋಷ ಕಾಣಿಸಿಕೊಳ್ಳಬಹುದು.

* ಗರ್ಭಾವಸ್ಥೆಯಲ್ಲಿ ತಾಯಿಗೆ  ಚಿಕನ್ ಪೋಕ್ಸ್, ಸೈಟೊಮೆಗಾಲೊ ವೈರಸ್, ಹರ್ಪಿಸ್ ಸಿಂಪ್ಲೆಕ್ಸ್, ಪೋಲಿಯೊ ಮೈಲಿಟಿಸ್, ಸಿಫಿಲಿಸ್ ಮತ್ತು ಟಾಕ್ಸೊಪ್ಲಾಸ್ಮಾಸಿಸ್ ಸೋಂಕುಗಳು ಬಂದಾಗ ಸಹ ಕಣ್ಣಿನ ಪೊರೆ ಸಂಭವಿಸಬಹುದು.

* ಕೆಲವೊಮ್ಮೆ ಡೌನ್ ಸಿಂಡ್ರೋಮ್‌ನಂತಹ ವರ್ಣತಂತು ಸಮಸ್ಯೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

* ಅನುವಂಶಿಕವಾಗಿರಬಹುದು, ಅಂದರೆ ಮಗುವಿನ ಅವನ/ಅವಳ ತಾಯಿ ಅಥವಾ ತಂದೆಯಿಂದ ಪಡೆಯಬಹುದು, ಅವರು ತಮ್ಮ ಬಾಲ್ಯದಲ್ಲಿ ಕಣ್ಣಿನ ಪೊರೆಯನ್ನು ಹೊಂದಿದ್ದರೆ ಮಗುವಿಗೂ ಬರುತ್ತದೆ.

* ಮಗು ಹುಟ್ಟಿದ ನಂತರವೂ ಅವುಗಳು ಕೆಲವು ಕಾರಣಗಳಿಂದ ಕಾಣಿಸಿಕೊಳ್ಳಬಹುದು, ಅವುಗಳೆಂದರೆ: ಕಣ್ಣಿನ ಗಾಯ, ಕಣ್ಣಿನ ಸಮಸ್ಯೆಗಳಿಂದ ಉಂಟಾಗುವ ತೊಂದರೆಗಳು, ವಿಕಿರಣ ಚಿಕಿತ್ಸೆ, ಸ್ಪೀರಾಯ್ಡ್ ಸೇವನೆ, ಸೋಂಕು, ಡಯಾಬಿಟಿಸ್‌ನಂತಹ ರೋಗಗಳು

ಕಂಡುಹಿಡಿಯುವುದು ಹೇಗೆ?

ಪೊರೆಗಳು ಯಾವಾಗಲೂ ಗುರುತಿಸಲಾಗುವುದಿಲ್ಲ ಆದರೆ ಅವು ಇದ್ದಾಗ ಬಿಳಿ ಅಥವಾ ಬೂದು ಬಣ್ಣದ ಚುಕ್ಕೆ ಕಣ್ಣಿನೊಳಗೆ ಕಣ್ಣಿನ ಗುಡ್ಡೆಯ ಪ್ರತಿಬಿಂಬದಂತೆ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಪೊರೆಯನ್ನು ಸಾಧ್ಯವಾದಷ್ಟು ಬೇಗ ಪತ್ತೆ ಹಚ್ಚಲು ಮಗುವಿನ ನಿಯಮಿತ ದೃಷ್ಟಿ ತಪಾಸಣೆ ಅಗತ್ಯ. ಆರಂಭಿಕ ದೃಷ್ಟಿ ತಪಾಸಣೆ ನವಜಾತ ಶಿಶುವಿನಿಂದಲೇ ಪ್ರಾರಂಭವಾಗುತ್ತದೆ. ನಿಯಮಿತ ಪರೀಕ್ಷೆಗಳನ್ನು ಮಾಡಿಸುತ್ತಿರಬೇಕು. ಕಣ್ಣುಗಳ ಮೊದಲ ಪರೀಕ್ಷೆ ಹುಟ್ಟಿನಿಂದಲೇ ಮಾಡಬೇಕು, ಇದನ್ನು ಸಾಮಾನ್ಯವಾಗಿ ಮಕ್ಕಳ ವೈದ್ಯರು ಮಾಡುತ್ತಾರೆ.

ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಮಗುವಿಗೆ 3 ತಿಂಗಳಾಗುವ ಹೊತ್ತಿಗೆ, ಅದು ಕೋಣೆಯ ಸುತ್ತಲೂ ನೋಡಲು ಮತ್ತು ಕಣ್ಣುಗಳಿಂದ ವಿಷಯಗಳನ್ನು ಗುರುತಿಸಲು ಆರಂಭಿಸುತ್ತದೆ. ಇಲ್ಲದಿದ್ದರೆ, ಮಕ್ಕಳ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು

ಕಣ್ಣಿನ ಪೊರೆಗಳನ್ನು ತೆಗೆದುಹಾಕುವುದಕ್ಕೆ ಇರುವ ಚಿಕಿತ್ಸೆ ಎಂದರೆ ಅದು ಶಸ್ತ್ರಚಿಕಿತ್ಸೆ ಮಾತ್ರ. ಒಂದು ವೇಳೆ ಕಣ್ಣಿನ ಪೊರೆ ಚಿಕ್ಕದಾಗಿದ್ದರೆ ಮತ್ತು ಮಗುವಿನ ದೃಷ್ಟಿಗೆ ಪರಿಣಾಮ ಬೀರದಿದ್ದರೆ ಅದನ್ನು ತೆಗೆದುಹಾಕುವ ಅಗತ್ಯವಿಲ್ಲ. ಆದರೆ ಇದು ದೃಷ್ಟಿಯ ಮೇಲೆ ಪರಿಣಾಮ ಬೀರಿದರೆ, ಅದನ್ನು ಆರಂಭಿಕ ಸಾಧ್ಯತೆಯಲ್ಲಿಯೇ ತೆಗೆದುಹಾಕಬೇಕು .

 ಶಸ್ತ್ರಚಿಕಿತ್ಸೆ ಯಾವಾಗ ಮಾಡಬೇಕೆಂಬುದು ತಜ್ಞರ ನಿರ್ಧಾರವಾಗಿರುತ್ತದೆ. ಕಣ್ಣಿನ ಜನ್ಮಜಾತ ಪೊರೆಗಳನ್ನು ತೆಗೆದುಹಾಕಲು ಸೂಕ್ತ ಸಮಯವೆಂದರೆ ಮಗುವಿಗೆ 6ವಾರಗಳು ಮತ್ತು 3ತಿಂಗಳಾಗಿರಬೇಕು ಎಂದು ತಜ್ಞರು ಸಾಮಾನ್ಯವಾಗಿ ಸೂಚಿಸುತ್ತಾರೆ. ಕುರುಡುತನವನ್ನು ತಡೆಯಲು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಆದಷ್ಟು ಬೇಗ ನಡೆಸಬೇಕು.

ಸಮಯೋಚಿತವಾಗಿ ಕಾಳಜಿ ವಹಿಸದಿದ್ದರೆ, ಜನ್ಮಜಾತ ಕಣ್ಣಿನ ಪೊರೆಯು ‘ಸೋಮಾರಿ ಕಣ್ಣು’ ಅಥವಾ ಆಂಬ್ಲಿಯೋಪಿಯಾಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಗಳು ವ್ಯಕ್ತಿತ್ವ, ಕಲಿಕೆಯ ಸಾಮರ್ಥ್ಯ ಮತ್ತು ಪಾಲ್ಗೊಳ್ಳುವಿಕೆಯೆ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುತ್ತವೆ, ಇದು ಅಂತಿಮವಾಗಿ ಮಗುವಿನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಶಸ್ತ್ರಚಿಕಿತ್ಸೆಯ ನಂತರವೂ ನಿಯಮಿತವಾಗಿ ಕಣ್ಣಿನ ತಪಾಸಣೆಯನ್ನು ವೈದ್ಯರೊಂದಿಗೆ ಮುಂದುವರಿಸಬೇಕಾಗುತ್ತದೆ.

ಲೇಖಕರು- ಡಾ.ವಿದ್ಯಾ ಸಿ ,ಸಲಹೆಗಾರರು ಮಕ್ಕಳ ನೇತ್ರಶಾಸ್ತ್ರಜ್ಞರು- ಶಂಕರ ಕಣ್ಣಿನ ಆಸ್ಪತ್ರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು