ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜೀರ್ಣವಾದೀತು, ಎಚ್ಚರ!

Last Updated 6 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಅಜೀರ್ಣ, ಹೆಸರೇ ತಿಳಿಸುವಂತೆ ನಾವು ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾಗದೆ ಇರುವುದು. ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುವುದು ಅಲ್ಲಿರುವ ಜಠರಾಗ್ನಿಯಿಂದ. ಈ ಜಾಠರಾಗ್ನಿಯು ಮಂದ ಆದಾಗ, ಸೇವಿಸಿದ ಆಹಾರ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಸರಿಯಾಗಿ ಜೀರ್ಣವಾಗದ ಆಹಾರ ಅನೇಕ ರೋಗಗಳಿಗೆ ಮೂಲವಾಗಿದೆ.

ಸಂಪೂರ್ಣ ಜೀರ್ಣಕ್ರಿಯೆಯ ಲಕ್ಷಣಗಳು

ಮನಸ್ಸು ಉಲ್ಲಾಸದಿಂದಿರುತ್ತದೆ. ದೇಹ ಲಘುವಾಗಿ ಚಟುವಟಿಕೆಯಿಂದಿರುತ್ತದೆ. ಹಸಿವು ಬಾಯಾರಿಕೆಗಳು ಸರಿಯಾಗಿ ಆಗುತ್ತವೆ. ಮಲ–ಮೂತ್ರಗಳು ಸುಲಭವಾಗಿ ಆಗುತ್ತವೆ. ನೆಮ್ಮದಿಯ ರಾತ್ರಿನಿದ್ರೆ‌.

ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಅಜೀರ್ಣವನ್ನು, ಅದರ ತೊಂದರೆಗಳನ್ನು ಅನುಭವಿಸಿಯೇ ಇರುತ್ತಾನೆ. ಅಜೀರ್ಣ ಅನೇಕ ರೋಗಗಳ ಆಗರ.

ಅಜೀರ್ಣದ ಸಾಮಾನ್ಯ ಲಕ್ಷಣಗಳು

ಹೊಟ್ಟೆಯ ಮೇಲ್ಭಾಗದಲ್ಲಿ ಉರಿ, ನೋವು.

ಎದೆಯ ಉರಿ, ವಾಕರಿಕೆ, ಹೊಟ್ಟೆ ಉಬ್ಬರ, ಪದೇಪದೇ ತೇಗು ಬರುವುದು, ಸೇವಿಸಿದ ಆಹಾರವೇ ಮೇಲೆ ಬಂದಂತಾಗುವುದು.

ಆಹಾರ ಸೇವಿಸಿದ ಬಳಿಕವೂ ತೃಪ್ತಿ ಇಲ್ಲದಿರುವುದು.

ವಾಂತಿ, ತೀವ್ರವಾದ ತಲೆನೋವು, ಮೈ–ಕೈ ನೋವು.

ಸುಸ್ತು

ದೇಹ ಭಾರವಾಗುವಿಕೆ.

ಮಲಬದ್ಧತೆ

ಅತಿಯಾದ ಬಾಯಾರಿಕೆ.

ಕಾರಣಗಳು

ಧಾವಂತದ ಆಧುನಿಕ ಜೀವನಶೈಲಿಯೇ ಪ್ರಮುಖ ಕಾರಣ.

ಆಹಾರವನ್ನು ತಯಾರಿಸುವಾಗ ಮತ್ತು ಸೇವಿಸುವಾಗ ಮನಸ್ಸು ಶುದ್ಧವಾಗಿರಬೇಕು. ಟಿವಿ ಮೊಬೈಲ್ ನೋಡುತ್ತಾ, ಭೀಕರ ದೃಶ್ಯಗಳನ್ನು ನೋಡುತ್ತಾ ಕೇಳುತ್ತಾ, ಮಾತನಾಡುತ್ತಾ, ಮನದಲ್ಲಿ ಅಸೂಯೆ, ದ್ವೇಷ, ಕೋಪಗಳೊಂದಿಗೆ ಆಹಾರವನ್ನು ಸೇವಿಸುವುದರಿಂದ, ತ್ರಿದೋಷಗಳು ಏರುಪೇರಾಗಿ ಸೇವಿಸಿದ ಆಹಾರ ಜೀರ್ಣವಾಗದೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಅವಸರವಸರವಾಗಿ ಆಹಾರಸೇವನೆ, ಓಡಾಡಿಕೊಂಡು, ಎಲ್ಲೆಂದರಲ್ಲಿ ನಿಂತಲ್ಲೇ ಆಹಾರವನ್ನು ಸೇವಿಸುವುದು, ನಾಲಗೆಗೆ ರುಚಿ ಎಂದು ಎಣ್ಣೆಯಲ್ಲಿ ಕರಿದ ತಿನಿಸುಗಳ ಸೇವನೆ, ಅತಿ ತೀಕ್ಷ್ಣ, ಅತಿ ರೂಕ್ಷ ಆಹಾರಸೇವನೆ. ದೇಹಕ್ಕೆ ಅಭ್ಯಾಸವಿರದ ಬೇರೆ ಪ್ರದೇಶಗಳ ಆಹಾರಸೇವನೆ.

ಆಗಾಗ ಕಾಫಿ ಚಹಾ, ಅದರೊಂದಿಗೆ ಬೇಕರಿ ತಿನಿಸುಗಳ ಸೇವನೆ.

ಹೊಟ್ಟೆ ಪೂರ್ತಿ ತುಂಬುವಷ್ಟು ಆಹಾರಸೇವನೆ, ಇಲ್ಲವೇ ಅತಿ ಕಡಿಮೆ ಸೇವನೆ.

ಹಸಿವಾಗುವ ಮೊದಲೇ ಆಹಾರವನ್ನು ಸೇವಿಸುವುದು ಮತ್ತು ಹಸಿವಾದಾಗ ಹೊಟ್ಟೆ ತುಂಬುವಷ್ಟು ನೀರು ಕುಡಿಯುವುದು.

ಮಲ, ಮೂತ್ರ, ಅಪಾನವಾಯುವನ್ನು ತಡೆಯುವುದು.

ಮಾನಸಿಕ ಒತ್ತಡ.

ಅಜೀರ್ಣವಾಗದಿರಲು ಏನು ಮಾಡಬೇಕು?

ಕೈ–ಕಾಲು ಮುಖ ತೊಳೆದು ಬಂದು, ಸುಖಾಸನದಲ್ಲಿ ಕುಳಿತು ಸಮಾಧಾನವಾಗಿ ಆಹಾರವನ್ನು ಸೇವಿಸಬೇಕು. ಆಹಾರವನ್ನು ಸಂಪೂರ್ಣವಾಗಿ ಸಾವಧಾನವಾಗಿ ಚೆನ್ನಾಗಿ ಅಗೆದು, ಬಾಯಲ್ಲೇ ಜೊಲ್ಲಿನೊಂದಿಗೆ ಸೇರಿ ಅರ್ಧದಷ್ಟು ಆಹಾರ ಜೀರ್ಣವಾಗುವಂತೆ ತಿನ್ನುವುದರಿಂದ ಸಮಸ್ಯೆಯೇ ಆಗುವುದಿಲ್ಲ.

ಹಸಿವಾಗದೇ, ಮೊದಲು ಸೇವಿಸಿದ ಆಹಾರ ಜೀರ್ಣವಾಗದೆ ಆಹಾರ ಸೇವಿಸಬಾರದು.

ಹಸಿವು ಆದಾಗ ತುಂಬಾ ನೀರನ್ನು ಕುಡಿಯಬಾರದು.

ಆಹಾರವು ಶುಚಿಯಾಗಿ ಸಾತ್ವಿಕವಾಗಿರಬೇಕು, ಅತಿಯಾದ ಖಾರ, ತೀಕ್ಷ್ಣ ಒಳ್ಳೆಯದಲ್ಲ.

ಆಹಾರ ಸೇವಿಸುವಾಗ ಮಧ್ಯದಲ್ಲಿ ಸ್ವಲ್ಪ ಬೆಚ್ಚಗಿನ ನೀರು ಸೇವನೆ ಜೀರ್ಣಕ್ಕೆ ಸಹಕಾರಿ.

ಹೊಟ್ಟೆ ಪೂರ್ತಿ ತುಂಬುವಷ್ಟು ಆಹಾರವನ್ನು ಎಂದೂ ಸೇವಿಸಬಾರದು.

ಆಹಾರ ಸೇವಿಸಿದ ಕೂಡಲೆ ಅತಿ ತಂಪಾದ ಮತ್ತು ಅತಿಯಾಗಿ ನೀರನ್ನು ಕುಡಿಯಬಾರದು.

ನಮ್ಮ ದೇಹಕ್ಕೆ ಸಾತ್ಮ್ಯ (ಹೊಂದಿಕೊಳ್ಳುವ, ಅಭ್ಯಾಸವಿರುವ) ಆಹಾರವನ್ನಷ್ಟೇ ಸೇವಿಸಬೇಕು.

ಕಾಲಕ್ಕೆ ತಕ್ಕಂತಹ, ಆಯಾ ಋತುಗಳಲ್ಲಿ ಸಿಗುವ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣುಗಳ ಸೇವನೆ ಒಳ್ಳೆಯದು. ಕಾಲವಲ್ಲದ ಕಾಲದಲ್ಲಿ ಸಿಗುವ ಅವರೆಕಾಳು ಮುಂತಾದ ಆಹಾರಪದಾರ್ಥಗಳನ್ನು ಖಂಡಿತ ಸೇವಿಸಬಾರದು.

ರಾತ್ರಿ ಆಹಾರ ಸೇವಿಸಿದ ಎರಡು ಗಂಟೆಯ ನಂತರವೇ ಮಲಗಬೇಕು.

ಭೂಮಿಯ ಅಡಿಯಲ್ಲಿ ಸಿಗುವ ಕಂದಮೂಲಗಳನ್ನು ಹಸಿಯಾಗಿ ತಿನ್ನಬಾರದು.

ವಿರುದ್ಧ ಆಹಾರ; ಮೊಸರು/ ಮಜ್ಜಿಗೆಗೆ ಹಾಲನ್ನು ಸೇರಿಸಿಕೊಳ್ಳುವುದು, ಆಮ್ಲರಸವಿರುವ ಹಣ್ಣುಗಳೊಂದಿಗೆ ಹಾಲನ್ನು ಸೇರಿಸಿ ಸೇವಿಸಬಾರದು.

ಬೇಕರಿ ಉತ್ಪನ್ನಗಳು, ಸಂರಕ್ಷಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು.

ಆಹಾರ ತಯಾರಿಸುವಾಗ, ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಅಜೀರ್ಣವಾಗದಂತೆ ತಡೆಯುವ ಜೀರಿಗೆ, ಕಾಳುಮೆಣಸು, ಅಜವಾನ, ಧನಿಯಾ, ಮೆಂತ್ಯೆ, ಹಿಂಗು, ಹಿಪ್ಪಲಿ, ಶುಂಠಿ, ಬೆಳ್ಳುಳ್ಳಿ, ಸೈಂಧವ ಲವಣ, ನೆಲ್ಲಿಕಾಯಿ, ದ್ರಾಕ್ಷಿ, ಲವಂಗ, ಬಿಸಿ ನೀರು ಮುಂತಾದ ಆಹಾರೌಷಧಗಳನ್ನು ದಿನನಿತ್ಯದ ಬಳಸಬೇಕು.

ಅತಿಯಾದ ಕಾಫಿ–ಚಹಾ ಸೇವನೆ ಸರ್ವಥಾ ಸರಿಯಲ್ಲ.

ರಾತ್ರಿ ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು; ಮನಸ್ಸನ್ನು ಸಮಾಧಾನದಲ್ಲಿಟ್ಟುಕೊಳ್ಳುವುದು.

ಪ್ರತಿದಿನವೂ ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ, ನಡಿಗೆ.

ಮಲಮೂತ್ರಗಳನ್ನು ನಿರ್ಬಂಧಿಸಬಾರದು.

ಸರಳ ಪರಿಹಾರಗಳು

ಕುಡಿಯುವ ನೀರಿಗೆ ಒಣಶುಂಠಿ, ಧನಿಯಾ, ಮುಸ್ತಾ, ಜೀರಿಗೆ ಹಾಕಿ ಬಿಸಿ ಮಾಡಿ ಈ ಔಷಧಿಯುಕ್ತ ನೀರನ್ನು ಕುಡಿಯುವುದು.

ಹದವಾಗಿ ಬಿಸಿಯಾದ ನೀರಿಗೆ ಸ್ವಲ್ಪ ನಿಂಬೆರಸ, ಒಂದೆರಡು ಹನಿ ಶುಂಠಿರಸ, ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಸೇವಿಸುವುದು.

ಚಿಕ್ಕ ಶುಂಠಿಯ ತುಂಡನ್ನು ಸೈಂಧವ ಲವಣದೊಂದಿಗೆ ಆಹಾರವನ್ನು ಸೇವಿಸುವ ಮೊದಲು ಚೆನ್ನಾಗಿ ಜಗಿದು ಸೇವಿಸುವುದು.

ಆಹಾರ ಸೇವಿಸಿದ ನಂತರ ಆಗಷ್ಟೇ ಕಡಿದ ಮಜ್ಜಿಗೆಗೆ ಚಿಟಿಕೆ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದು.

ಊಟದ ನಂತರ ಅಜವಾನ, ಸೊಂಪನ್ನು ಜಗಿದು ತಿನ್ನಬೇಕು. ಇದರಿಂದ ಸೇವಿಸಿದ ಆಹಾರವು ಸುಲಭವಾಗಿ ಸಂಪೂರ್ಣವಾಗಿ ಜೀರ್ಣವಾಗುತ್ತದೆ.

ಆಹಾರಸೇವನೆಯ ನಂತರ ಸ್ವಲ್ಪ ಹೊತ್ತು ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.l ಬಿಸಿನೀರಿನ ಸೇವನೆ ಹಿತಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT