ಗುರುವಾರ , ಆಗಸ್ಟ್ 6, 2020
28 °C

ಕೋವಿಡ್-19: ಸೋಂಕು ಹರಡದಂತೆ ಎಚ್ಚರವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಮಾಸ್ಕ್‌ಗಳನ್ನು ನೀಡುತ್ತಿಲ್ಲ. ಬಸ್‌ಗಳಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಾರೆ. ಇದರಿಂದ ನಮಗೆ ಸೋಂಕು ತಗಲುವ ಸಾಧ್ಯತೆ ಇಲ್ಲವೇ ? 

ನಂಜುಂಡ, ಬಿಎಂಟಿಸಿ ಉದ್ಯೋಗಿ, ಸುರೇಶ್, ಬೆಂಗಳೂರು

ಈ ಸೋಂಕು ಉಸಿರಾಟದಿಂದ ಹರಡುವುದಿಲ್ಲ. ಹಾಗಾಗಿ ಮಾಸ್ಕ್‌ಗಳನ್ನು ಧರಿಸಬೇಕಿಲ್ಲ. ಸೀನಿದಾಗ ಹಾಗೂ ಕೆಮ್ಮಿದಾಗ ಹೊರಹೊಮ್ಮುವ ತುಂತುರು ಹನಿಗಳ ಸ್ಪರ್ಷದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಆಗಾಗ ಸೋಪಿನ ನೀರು ಅಥವಾ ಸ್ಯಾನಿಟೈಸರ್‌ಗಳಿಂದ ಕೈಗಳನ್ನುತೊಳೆದುಕೊಳ್ಳಬೇಕು. ಕೈಗಳಿಂದ ಬಾಯಿ, ಮೂಗು ಹಾಗೂ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಅನಗತ್ಯವಾಗಿ ಭಯಪಡಬೇಕಿಲ್ಲ. ನಮ್ಮಲ್ಲಿ ಇನ್ನೂ ಸಮುದಾಯದಲ್ಲಿ (ಕಮ್ಯುನಿಟಿ) ಹರಡಲು ಪ್ರಾರಂಭವಾಗಿಲ್ಲ. ಈಗಾಗಲೇ ವಿವಿಧ ನಿಗಮ,ಕಚೇರಿಗಳಿಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕಳಿಸಲಾಗಿದೆ. 

ಮಾಸ್ಕ್‌ಗಳ ಬೆಲೆ ದುಪ್ಪಟ್ಟು ಆಗಿದ್ದು, ಔಷಧಿ ಮಳಿಗೆಗಳಲ್ಲಿ ವಸೂಲಿ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು. ಗೋಮೂತ್ರ ಕುಡಿಯುವುದರಿಂದ ಸೋಂಕು ತಗಲುವುದಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ನಿಜವೇ ?

ನಿರ್ಮಲಾ ಅಂಗಡಿ, ಚಿಕ್ಕಬಾಣಾವರ

ಈ ರೀತಿ ಅಧಿಕ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಲ್ಲಿ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ, ಕೂಡಲೇ ದೂರು ನೀಡಿ. ಅಂತಹ ಔಷಧಿ ಮಳಿಗೆಗಳ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂದ ಹಾಗೆ, ಮಾಸ್ಕ್‌ ಧರಿಸಿದರೆ ನಮಗೆ ಸೋಂಕು ತಗಲುವುದಿಲ್ಲ ಎಂಬದು ತಪ್ಪು ಕಲ್ಪನೆ. 

ಈವರೆಗೂ ಸೋಂಕಿಗೆ ಔಷಧಿ ಕಂಡುಹಿಡಿದಿಲ್ಲ. ಗೋಮೂತ್ರ ಸೇವನೆಯಿಂದ ಸೋಂಕು ತಗುಲುವುದಿಲ್ಲ ಎನ್ನುವುದು ವೈದ್ಯಕೀಯವಾಗಿ ಸಾಬೀತಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡಬೇಡಿ. 

ಉಡುಪಿ ಗ್ರ್ಯಾಂಡ್‌ ಹೋಟೆಲ್‌ಗೆ ಹೊಂದಿಕೊಂಡೇ ಚರಂಡಿ ನೀರು ಹರಿಯುತ್ತಿದೆ. ಹೋಟೆಲ್‌ನಲ್ಲಿಯೂ ಸ್ವಚ್ಛತೆ ಇಲ್ಲ. ಸ್ಯಾನಿಟೈಸರ್ ಕೂಡ ಇಡುತ್ತಿಲ್ಲ. ಇದಿರಂದ ಹೋಟೆಲ್‌ಗೆ ತೆರಳಲು ಭಯವಾಗುತ್ತಿದೆ. 

ವೆಂಕಟಾಚಲಪತಿ, ಯಲಹಂಕ 

ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಾರೆ. ಸೂಚನೆಗಳನ್ನು ಪಾಲಿಸದಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು. 

ಕೊರೊನಾ ಸೋಂಕಿನ ಪ್ರಾಥಮಿಕ ಲಕ್ಷಣಗಳು ಯಾವವು?

ಪ್ರಿಯಾ, ಬ್ಯಾಂಕ್ ಉದ್ಯೋಗಿ

ನೆಗಡಿ, ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಸಾಮಾನ್ಯ ಲಕ್ಷಣಗಳಾಗಿವೆ. ಆದರೆ, ಈ ಲಕ್ಷಣ ಕಾಣಿಸಿಕೊಂಡ ಎಲ್ಲರಿಗೂ ಈ ಸೋಂಕು ತಗುಲಿದೆ ಎಂದು ತೀರ್ಮಾನಿಸುವುದು ತಪ್ಪು. ವಾತಾವರಣದ ಏರುಪೇರಿನಿಂದಲೂ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿದ್ದವರು ಸಮೀಪದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದುಕೊಳ್ಳಿ. ಮಕ್ಕಳು ಹಾಗೂ ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಈ ವಯೋಮಾನದವರ ಜತೆಗೆ, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡವರು ಹೆಚ್ಚು ಜಾಗೃತಿ ವಹಿಸಬೇಕು. 

ಸೋಂಕಿನ ಬಗ್ಗೆ ಜನರಿಗೆ ಭೀತಿ ಹುಟ್ಟಿಸಲಾಗುತ್ತಿದೆ. ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುತ್ತಿರುವ ಕ್ರಮ ಸರಿಯೇ ?

ಸಂತೋಷ್, ನೆಲಮಂಗಲ

ವಿದೇಶಗಳಿಂದ ಬಂದವರಿಂದ ಈ ಸೋಂಕು ಹರಡುತ್ತಿದೆ. ಸಮುದಾಯ ಮಟ್ಟದಲ್ಲಿ ಹರಡಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಚಿತ್ರಮಂದಿರ, ಮಾಲ್‌, ವಿವಾಹ ಸೇರಿದಂತೆ ಕೆಲವೊಂದಕ್ಕೆ ನಿರ್ಬಂಧ ಹಾಕಲಾಗಿದೆ.

ಕೆಲವೊಂದು ಸೂಪರ್ ಮಾರುಕಟ್ಟೆ ತೆರೆಯಲಾಗುತ್ತಿದೆ. ಅಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರುವುದರಿಂದ ಸೋಂಕು ಹರಡುವ ಆತಂಕ ಉಂಟಾಗಿದೆ.

ಕುಬೇರಪ್ಪ, ಬೊಮ್ಮಸಂದ್ರ

ಸೂಪರ್‌ ಮಾರುಕಟ್ಟೆಗಳನ್ನು ಬಂದ್ ಮಾಡಿಸಿದಲ್ಲಿ ದಿನಸಿ ಬೆಲೆ ಏರಿಕೆಯಾಗುವ ಜತೆಗೆ ಆಹಾರ ಪದಾರ್ಥದ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ. ಹಾಗಾಗಿ ಅವುಗಳಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಬಳಕೆ ಮಾಡುವ ಎ.ಸಿಗಳಿಂದ ಸೋಂಕು ಹರಡುವುದಿಲ್ಲ. ಹವಾನಿಯಂತ್ರಿತ ವ್ಯವಸ್ಥೆಯಿಂದ ಈ ಸೋಂಕು ಹರಡುತ್ತದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಅಲ್ಲಿನ ಲಿಫ್ಟ್, ಬಾಗಿಲು ಮತ್ತು ನೆಲವನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಲು ಸೂಚಿಸಲಾಗಿದೆ. 

ತಾಯಿ ಅಬುಧಾಬಿಯಿಂದ ವಾಪಸ್‌ ಆಗಿದ್ದಾರೆ. ಅವರಿಗೆ ಪರೀಕ್ಷೆ ಮಾಡಿಸಬೇಕಾ? ನಾವು ಏನು ಮಾಡಬೇಕು? 

ಶಂಕರ್, ಬೆಂಗಳೂರು

ಅವರ ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಆರೋಗ್ಯ ಸಹಾಯವಾಣಿಗೆ ಕರೆಮಾಡಿ ತಿಳಿಸಬೇಕು. ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ 14 ದಿನ ಅವರನ್ನು ಇರಿಸಬೇಕು. ಸಾಧ್ಯವಾದಷ್ಟು ಅವರಿಂದ ಅಂತರ ಕಾಯ್ದುಕೊಳ್ಳಿ. ಈ ಅವಧಿಯಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಲ್ಲಿ ಅವರನ್ನು ಆದ್ಯತೆಯ ಆಸ್ಪತ್ರೆಗೆ ದಾಖಲಿಸಬೇಕು. ಮನೆಯ ಸದಸ್ಯರೂ ಅನಾರೋಗ್ಯ ಸಮಸ್ಯೆಗೆ ಒಳಗಾದಲ್ಲಿ ಮಾಹಿತಿಯನ್ನು ಸಹಾಯವಾಣಿ ಮೂಲಕ ತಿಳಿಸಬೇಕು. 

ಮಕ್ಕಳಿಗೆ ಈ ಸೋಂಕು ತಗುಲದಂತೆ ಏನು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು? 

ಅರುಂಧತಿ, ಹೆಸರುಘಟ್ಟ

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿಯೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳಿಗೆ ಕೈ ತೊಳೆಯುವ ಹವ್ಯಾಸ ಮಾಡಿಸಬೇಕು. ಗುಂಪಾಗಿ ಆಟವಾಡದಂತೆ ಸೂಚಿಸಬೇಕು. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು. ಸಮಾರಂಭಗಳಿಗೆ ಕರೆದೊಯ್ಯುವುದನ್ನು ನಿಲ್ಲಿಸಬೇಕು. ಮನೆಯಲ್ಲಿನ ಆಹಾರವನ್ನೇ ಅವರಿಗೆ ನೀಡಬೇಕು. ಹೊರಗಡೆ ಆಹಾರ ಕೊಡಿಸಬಾರದು. 

ಕೈಗಳನ್ನು ತೊಳೆದುಕೊಳ್ಳಲು ಸ್ಯಾನಿಟೈಸರ್ ಸಿಗುತ್ತಿಲ್ಲ. ಇದರ ದರವನ್ನು ಏರಿಕೆ ಮಾಡಲಾಗುತ್ತಿದೆ. 

ಶಿವಕುಮಾರ್, ಯಲಹಂಕ

ಸ್ಯಾನಿಟೈಸರ್ ಬಳಕೆಗಿಂತ ಸೋಪಿನ ನೀರಿನಲ್ಲಿ ಕೈತೊಳೆಯುವುದರಿಂದಲೇ ಉತ್ತಮ ಫಲಿತಾಂಶ ಬರುತ್ತದೆ. ಎಲ್ಲೆಡೆ ಸೋಪು ಲಭ್ಯವಿರುವುದರಿಂದ ಸೋಪನ್ನು ಬಳಕೆ ಮಾಡಿ. ಸ್ಯಾನಿಟೈಸರ್ ಉತ್ಪಾದನೆಯನ್ನು ಹೆಚ್ಚಿಸಲು ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ. 

ಬ್ಯಾಂಕ್‌ಗಳಿಗೆ ವಿವಿಧೆಡೆಯಿಂದ ಗ್ರಾಹಕರು ಬರುತ್ತಾರೆ. ಅವರ ಪ್ರಯಾಣದ ಇತಿಹಾಸ ನಮಗೆ ತಿಳಿದಿರುವುದಿಲ್ಲ. ಸಿಬ್ಬಂದಿಗೆ ಅಗತ್ಯ ರಕ್ಷಣೆ ಇಲ್ಲದಂತಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿಲ್ಲ. 

ವಿಶ್ವನಾಥ್, ಬ್ಯಾಂಕ್ ಉದ್ಯೋಗಿ

ಕೇಂದ್ರ ಆರೋಗ್ಯ ಸಚಿವಾಲಯವು ಕಚೇರಿಗಳಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ ಬಯೋಮೆಟ್ರಿಕ್ ಸ್ಥಗಿತ ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಸುತ್ತೋಲೆಗಳನ್ನು ಬ್ಯಾಂಕ್‌ಗಳಿಗೂ ಕಳುಹಿಸಲಾಗಿದೆ. ಈ ಬಗ್ಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗುವುದು. 

ವಿದೇಶದಿಂದ ಬರುವ ವ್ಯಕ್ತಿಗಳು ತಾವು ಬಳಸುತ್ತಿದ್ದ ಲ್ಯಾಪ್‌ಟಾಪ್, ಮೊಬೈಲ್‌ ಮುಂತಾದ ಪರಿಕರಗಳ ಮೂಲಕ ಸೋಂಕು ಹರಡದಂತೆ ಯಾವರೀತಿ ಎಚ್ಚರವಹಿಸಬೇಕು ?

ಅರುಣ್ ಜಾವಗಲ್, ಬೆಂಗಳೂರು

ಈ ಸಾಧನಗಳನ್ನು ಆಲ್ಕೋಹಾಲ್ ಆಧಾರಿತ ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಬೇಕು. ಅದು ಇಲ್ಲದಿದ್ದರೆ ಫಿನಾಯಿಲ್, ಸೋಡಿಯಂ ಹೈಪೋಕ್ಲೋರೈಟ್‌ಗಳಿಂದಲೂ ಸ್ವಚ್ಛ ಮಾಡಬಹುದು. ವ್ಯಕ್ತಿಗಳನ್ನು ಪ್ರತ್ಯೇಕಿಸಿ, ನಿಗಾ ಇಡುವ ವೇಳೆ ಅವರ ಸಾಧನಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ಸೂಚಿಸುತ್ತೇವೆ. 

ನಿರ್ವಹಣೆ: ಎಂ.ಜಿ. ಬಾಲಕೃಷ್ಣ, ವರುಣ ಹೆಗಡೆ,
ಚಿತ್ರ–ಎಂ.ಎಸ್. ಮಂಜುನಾಥ್

 

ವಿದೇಶದಿಂದ ಬಂದವರಿಗೆ ಯಾವ ರೀತಿ ಪರೀಕ್ಷೆ / ಚಿಕಿತ್ಸೆ ?

ಈಗಾಗಲೇ ಸೋಂಕು ಪ್ರಕರಣ ಹೆಚ್ಚಾಗಿ ವರದಿಯಾಗಿರುವ 14 ದೇಶಗಳನ್ನು ‍ಪಟ್ಟಿ ಮಾಡಲಾಗಿದೆ. ಯಾವುದೇ ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿಯೇ ಥರ್ಮಲ್‌ ಸ್ಕ್ಯಾನಿಂಗ್ ಮಾಡುತ್ತಾರೆ. ವಿಮಾನ ನಿಲ್ದಾಣದಲ್ಲಿಯೇ ಮೂರು ವಿಭಾಗಗಳಲ್ಲಿ ವರ್ಗೀಕರಿಸಲಾಗುತ್ತದೆ. ಸೋಂಕಿನ ಲಕ್ಷಣ ಹೊಂದಿರುವವರು, ಸಾಮಾನ್ಯರು ಹಾಗೂ 60 ವರ್ಷ ಮೇಲ್ಪಟ್ಟವರನ್ನು ಪ್ರತ್ಯೇಕಿಸಲಾಗುತ್ತದೆ. ಸೋಂಕಿನ ಲಕ್ಷಣ ಹೊಂದಿರುವವರನ್ನು 108 ಆ್ಯಂಬುಲೆನ್ಸ್ ಮೂಲಕ ನೇರವಾಗಿ ಗುರುತಿಸಲ್ಪಟ್ಟ ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಿಕೊಳ್ಳಲಾಗುತ್ತದೆ. 60 ವರ್ಷ ಮೇಲ್ಪಟ್ಟವರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ, 14 ದಿನಗಳು ನಿಗಾ ಇಡಲಾಗುವುದು. ಅವರಲ್ಲಿ ಜ್ವರ ಸೇರಿದಂತೆ ಯಾವುದೇ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬೇಕು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುವುದು ಎಂದು ಡಾ.ರವಿಕುಮಾರ್ ಸುರಪುರ ಮಾಹಿತಿ ನೀಡಿದರು. 

ಒಂದೇ ವಾರ್ಡ್‌ನಲ್ಲಿದ್ದರೂ ಸೋಂಕು ಹರಡಲ್ಲ

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳನ್ನು ಪ್ರಥಮ ಆದ್ಯತೆಯ ಆಸ್ಪತ್ರೆಗಳು ಎಂದು ಗುರುತಿಸಿ, ಕೊರೊನಾ ಸೋಂಕಿತ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಅಲ್ಲಿಯೇ ಸೋಂಕಿತರು ಹಾಗೂ ಶಂಕಿತರನ್ನು ದಾಖಲಿಸಿಕೊಂಡು ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದ ಸೋಂಕು ಮತ್ತೊಬ್ಬರಿಗೆ ಹರಡುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಾ.ರವಿಕುಮಾರ್ ಸುರಪುರ, ‘ಉಸಿರಾಟದಿಂದ ಈ ಸೋಂಕು ಹರಡುವುದಿಲ್ಲ. ಮಾಸ್ಕ್‌ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಕೆಮ್ಮು, ನೆಗಡಿ, ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೆ ಕೊರೊನಾ ಸೋಂಕು ತಗುಲಿದೆ ಎಂದು ಆತಂಕ ಪಡಬೇಕಿಲ್ಲ

ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ, ಸಾಮಾನ್ಯ ಪರೀಕ್ಷೆ ಮಾಡಿಸಿಕೊಳ್ಳಿ ಸಾಮಾನ್ಯ ಔಷಧಿಗಳನ್ನು ಪಡೆದು, ವಿಶ್ರಾಂತಿ ಮಾಡಿ

 ಪೌಷ್ಟಿಕವಾದ ಆಹಾರವನ್ನು ಸೇವಿಸಬೇಕು. ಹೊರಗಡೆಯ ಆಹಾರ ಸೇವನೆ ಕಡಿಮೆ ಮಾಡಿ

 ವಿದೇಶಗಳಿಗೆ ಹೋಗಿ ಬಂದ 60 ವರ್ಷ ಮೇಲ್ಪಟ್ಟವರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ, 14 ದಿನಗಳು ನಿಗಾದಲ್ಲಿ ಇಡಿ.

 ಮನೆಯಲ್ಲಿ ಇರುವ ಅವಧಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಆರೋಗ್ಯ ಸಹಾಯವಾಣಿಗೆ ಕರೆ ಮಾಡಬೇಕು

 ವಿದೇಶದಿಂದ ಬಂದ ಸೋಂಕಿತರು ಹಾಗೂ ಶಂಕಿತರೊಂದಿಗೆ ಒಡನಾಟ ಹೊಂದಿದಲ್ಲಿ ತಾವಾಗಿಯೇ ಮೊದಲ ಆದ್ಯತೆಯಾಗಿ ಆಸ್ಪತ್ರೆಗಳಿಗೆ ತೆರಳಿ, ಪರೀಕ್ಷೆಗೆ ಒಳಪಡಬೇಕು. ಹೀಗೆ ಪರೀಕ್ಷೆಗೆ ಒಳಪಟ್ಟವರನ್ನು ಆರೋಗ್ಯ ಸಿಬ್ಬಂದಿ ಪ್ರತ್ಯೇಕ ನಿಗಾ ಘಟಕದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು