ಶನಿವಾರ, ಜೂನ್ 19, 2021
22 °C

ಗರ್ಭಿಣಿಯರಿಗೆ ಕೋವಿಡ್‌ ಲಸಿಕೆ ಹಾಕಿಸಬಹುದೇ?

ಡಾ. ವೀಣಾ ಎಸ್‌. ಭಟ್‌ Updated:

ಅಕ್ಷರ ಗಾತ್ರ : | |

Prajavani

*ನನಗೆ 33 ವರ್ಷ. ಗರ್ಭಿಣಿಯಾಗಿದ್ದು ಜ್ವರ ಬಂದಿದೆ. ಏನು ಮಾಡಬೇಕು? ಗರ್ಭಧಾರಣೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬಹುದೇ?

-ರೂಪಾ, ಶಿವಮೊಗ್ಗ

ರೂಪಾರವರೇ, ನೀವು ಎಷ್ಟು ತಿಂಗಳು ಗರ್ಭಿಣಿ ಎಂಬುದನ್ನು ತಿಳಿಸಿಲ್ಲ. ಜ್ವರ ಎಂದರೆ ಮನುಷ್ಯನ ದೇಹದ ಉಷ್ಣತೆ ಅಥವಾ ತಾಪಮಾನ ಮಾಮೂಲಿ ಮಟ್ಟ (37.20 ಸೆಂಟಿಗ್ರೇಡ್ ಅಥವಾ 98.60 ಎಫ್)ಕ್ಕಿಂತ ಹೆಚ್ಚಾಗಿರುವುದು. ಜ್ವರ ಎಂದರೆ ಶರೀರದ ತಾಪಮಾನ 100.40 ಎಫ್‌ಗಿಂತ ಹೆಚ್ಚಿರುವುದು. ಜ್ವರ ಕೇವಲ ರೋಗದ ಲಕ್ಷಣವೇ ಹೊರತು ಜ್ವರವೇ ಕಾಯಿಲೆಯಲ್ಲ. ಎಲ್ಲ ಜನಸಾಮಾನ್ಯರು ಈ ಕೋವಿಡ್‌ನ ಸಾಂಕ್ರಾಮಿಕ ಕಾಲದಲ್ಲಂತೂ ಜ್ವರ ಬಂದರೆ ಭಯಭೀತರಾಗಿಬಿಡುತ್ತಾರೆ. ಶರೀರದ ಮೇಲೆ ರೋಗಾಣುಗಳ ದಾಳಿಯಾದಾಗ (ಬ್ಯಾಕ್ಟೀರಿಯಾ, ವೈರಸ್, ಇತ್ಯಾದಿ) ನಮ್ಮ ದೇಹದಲ್ಲಿ ರಾಸಾಯನಿಕಗಳು (ಐಎಲ್-1 ಮತ್ತು ಟಿಎನ್‌ಎಫ್) ಬಿಡುಗಡೆಯಾಗಿ ನಮ್ಮ ಶರೀರದಲ್ಲಿರುವ ರೋಗನಿರೋಧಕ ವ್ಯವಸ್ಥೆಗೂ ಹಾಗೂ ರೋಗಾಣುಗಳಿಗೂ ಯುದ್ಧ ಉಂಟಾಗುವುದರ ಚಿಹ್ನೆಯೇ ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಯಾವುದೇ ಅಂಗಗಳಿಗೆ ಸೋಂಕಾದರೆ - ಬಾಯಿ, ಗಂಟಲು, ಹಲ್ಲು, ವಸಡು, ಕಿವಿ, ಮೂಗು, ಕಣ್ಣು, ಸೈನಸ್, ಕರುಳು, ಯಕೃತ್, ಮೂತ್ರನಾಳ, ಮೂತ್ರಪಿಂಡ, ಶ್ವಾಸಕೋಶ, ಮೆದುಳು, ಜನನಾಂಗಗಳು ಕೆಲವೊಮ್ಮೆ ಆಟೋ ಇಮ್ಯೂನ್ ಕಾಯಿಲೆಗಳಲ್ಲಿ ಲ್ಯುಕೀಮಿಯಾ, ಲಿಂಫೋಮಾದಂತಹ ಕ್ಯಾನ್ಸರ್‌ಗಳಲ್ಲೂ ಜ್ವರ ಬರಬಹುದು.

ಗರ್ಭಧಾರಣೆಯಲ್ಲಿ ಸಹಜವಾಗಿಯೇ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ನೀವು ಕಾಳಜಿಯಿಂದಿರುವುದು ಬಹಳ ಮುಖ್ಯ. ಸ್ವಯಂ ಚಿಕಿತ್ಸೆಯನ್ನ ನೀವೇ ಮಾಡಿಕೊಳ್ಳುತ್ತಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಗುವಿನ ಮೇಲೂ ದುಷ್ಪರಿಣಾಮ ಬೀರಬಹುದು. ಮೊದಲ 3 ತಿಂಗಳ ಗರ್ಭಧಾರಣೆಯಲ್ಲಿ ಫೋಲಿಕ್‌ಆಸಿಡ್ ಮಾತ್ರೆ ಹೊರತಾಗಿ ಬೇರೆ ಯಾವ ಮಾತ್ರೆಯನ್ನೂ ಸೇವಿಸಬಾರದು. ನಿಮ್ಮ ಜ್ವರ ಸಾಧಾರಣ ಫ್ಲೂ ಅಥವಾ ವೈರಸ್ ಜ್ವರವಿರಬಹುದು ಅಥವಾ ಮೂತ್ರದಲ್ಲಿ ಸೋಂಕಾಗಿರಬಹುದು, ಸೈನಸ್ ತೊಂದರೆಯಿಂದಿರಬಹುದು, ತುಂಬಾ ಚಳಿ ಇದ್ದರೆ ಅದು ಮಲೇರಿಯಾ ಜ್ವರವೂ ಇರಬಹುದು. ಡೆಂಗೆ ಜ್ವರದಲ್ಲಿ ಯಾರೋ ಹೊಡೆದು ಕೈ-ಕಾಲು ಮುರಿದ ಹಾಗೇ ಮೈ-ಕೈ ನೋವು ಇರುತ್ತದೆ. ಆದರೆ ನೀವು ಹೆದರದೇ ನೀವೆ ಒಂದು ಥರ್ಮಾಮೀಟ್‌ ಅನ್ನು ಮನೆಯಲ್ಲಿಟ್ಟುಕೊಂಡು ಆಗಾಗ ದೇಹದ ತಾಪಮಾನ ನೋಡಿಕೊಳ್ಳುತ್ತಿದ್ದು ನಿಮಗೆ ಜ್ವರ 100.40 ಎಫ್‌ಗಿಂತ ಹೆಚ್ಚಿದ್ದರೆ ಪ್ಯಾರಾಸಿಟಮಾಲ್ 500 ಮಿ.ಗ್ರಾಂ ಮಾತ್ರೆಯನ್ನು ಸೇವಿಸಿ. ತೆಳ್ಳಗಿನ ಹತ್ತಿಬಟ್ಟೆಯನ್ನು ಧರಿಸಿ, ಬಟ್ಟೆಯನ್ನು ನೀರಿನಲ್ಲಿ ಅದ್ದಿ ಮೈ ಒರೆಸಿಕೊಳ್ಳಿ. ಸಾಮಾನ್ಯ ಫ್ಲೂ ಅಥವಾ ಇನ್‌ಫ್ಲೂಯೆಂಜಾ ಜ್ವರವಾಗಿದ್ದರೆ ಮೂಗಲ್ಲಿ ನೀರು ಸೋರುವುದು, ಮೈ-ಕೈ ನೋವು, ತಲೆನೋವು, ನಡುಕ, ಚಳಿ, ವಾಂತಿ, ಸುಸ್ತು ಎಲ್ಲವೂ ಆಗಬಹದು. ಉಸಿರಾಟದ ತೊಂದರೆಯೂ ಆಗಬಹುದು. ಈ ತೊಂದರೆಗಳು ಕೋವಿಡ್ ಸೋಂಕಿನಲ್ಲೂ ಆಗುತ್ತವೆ. ಇವೆಲ್ಲಾ ತೊಂದರೆಯಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಈ ಕೋವಿಡ್ ಪಿಡುಗಿನಲ್ಲಿ ಎಲ್ಲ ಜ್ವರವೂ ಅದರಿಂದಲೇ ಅಂದುಕೊಂಡೇ ಭಯಪಡಬಾರದು. ನೆಗಡಿ, ತಲೆಭಾರಕ್ಕೆ ಮನೆಯಲ್ಲೇ ಹಬೆ ತೆಗೆದುಕೊಳ್ಳಬಹುದು. ಮನೆಯಲ್ಲೇ ಸರಳವಾಗಿ ಕಷಾಯ (ಪುದಿನ, ಶುಂಠಿ, ತುಳಸಿ, ಕಾಳುಮೆಣಸು, ಅರಿಸಿನ ಇತ್ಯಾದಿ ಹಾಕಿ) ಮಾಡಿಕೊಳ್ಳುವುದು. ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಕೋವಿಡ್ ಲಸಿಕೆ ಗರ್ಭಧಾರಣೆಯಲ್ಲಿ ಸುರಕ್ಷಿತವೋ ಅಲ್ಲವೋ ಎಂಬುದಾಗಿ ಸಾಕಷ್ಟು ಅಧ್ಯಯನಗಳು ನಡೆದಿಲ್ಲ. ಕೇಂದ್ರ ಸರ್ಕಾರ ಲಸಿಕಾ ಮಾರ್ಗಸೂಚಿ ಇನ್ನಷ್ಟೇ ಕೊಡಬೇಕಾಗಿದೆ. ಆದರೆ ಅಮೆರಿಕ ಸ್ತ್ರೀರೋಗ ಸಂಘ ಹಾಗೂ ರಾಯಲ್ ಕಾಲೇಜ್ ಸ್ತ್ರೀರೋಗ ಸಂಘದ ಮಾರ್ಗಸೂಚಿ ಪ್ರಕಾರ ಗರ್ಭಿಣಿಯರು ಕೋವಿಡ್ ಲಸಿಕೆ ಹಾಕಿಸಬಹುದು. ಭಾರತದಲ್ಲೂ ಈ ಬಗ್ಗೆ ಮಾರ್ಗಸೂಚಿ ಬಂದ ಮೇಲಷ್ಟೇ ನೀವು ಹಾಕಿಸಿಕೊಳ್ಳಿ.

*ನನಗೆ 32 ವರ್ಷ, ನಾನು ಈಗ 6 ತಿಂಗಳು ಗರ್ಭಿಣಿಯಾಗಿದ್ದು, ನನ್ನ ಅತ್ತೆಗೆ ಕೋವಿಡ್ ಪಾಸಿಟಿವ್ ಬಂದಿದೆ. ಅದಕ್ಕೆ ನನಗೀಗ ಭಯವಾಗುತ್ತಿದೆ. ನಾನೂ ಪರೀಕ್ಷಿಸಿಕೊಳ್ಳಬೇಕೆ? ನಮ್ಮ ಅಮ್ಮನ ಮನೆ ಇದೇ ಊರಿನಲ್ಲಿದೆ, ಅಲ್ಲಿ ಹೋಗಿರಲೇ ನಾನು?

-ಮುಕ್ತಾ, ತರೀಕೆರೆ

ಮುಕ್ತಾರವರೇ ನಿಮ್ಮ ಅತ್ತೆಗೆ ಈಗ ಕೋವಿಡ್ ಪಾಸಿಟಿವ್ ಎಂದು ಬಂದರೆ ಅವರಿಗೆ ಟ್ರಯಾಜ್ ಮಾಡುತ್ತಾರೆ. ಅಂದರೆ ಅವರಿಗಿರುವ ರೋಗಲಕ್ಷಣಗಳ ಮೇಲೆ ಮನೆಯಲ್ಲೇ ಅವರನ್ನು ಪ್ರತ್ಯೇಕವಾಗಿಟ್ಟು ಸಲಹೆ ಸೂಚನೆ ಕೊಟ್ಟು ನೋಡಿಕೊಳ್ಳುವುದೋ ಅಥವಾ ಕೋವಿಡ್ ಸೆಂಟರ್‌ನಲ್ಲಿಡುವುದೋ ಎಂದು ಆರೋಗ್ಯಾಧಿಕಾರಿಗಳು ನಿರ್ಣಯಿಸುತ್ತಾರೆ. ಈ ಬಗ್ಗೆ ಕುಟುಂಬದ ಸದಸ್ಯರಿಗೂ, ಅಕ್ಕ-ಪಕ್ಕದ ಮನೆಯವರಿಗೂ ತಿಳಿದಿರಬೇಕು. ಯಾವುದೇ ರೋಗಲಕ್ಷಣಗಳಿಲ್ಲದೆ ಮನೆಯಲ್ಲಿದ್ದರೂ ಶರೀರದ ತಾಪಮಾನ, ನಾಡಿಮಿಡಿತದ ಬಗ್ಗೆ, ರಕ್ತದೊತ್ತಡ ಇನ್ನಿತರ ಆರೋಗ್ಯದ ಸಮಸ್ಯೆಗಳ ಬಗ್ಗೆ ವಿಚಾರಿಸುತ್ತಾ ಮೇಲ್ವಿಚಾರಣೆಯಲ್ಲೇ ಇರುತ್ತಾರೆ. ಅವುಗಳಿಗೆಲ್ಲಾ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಕೊಟ್ಟಿದೆ. ನೀವು ಈ ಬಗ್ಗೆ ವಿಚಲಿತರಾಗದೇ ನೀವು ಕೂಡ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸೋಪ್‌ನಿಂದ ಸ್ವಚ್ಛವಾಗಿ ಕೈತೊಳೆದುಕೊಳ್ಳುತ್ತಿರುವುದು ಇವೆಲ್ಲಾ ಮಾಡಿಕೊಳ್ಳುತ್ತಿರಬೇಕು.

ನಿಮ್ಮ ಅಮ್ಮನ ಮನೆಗೆ ಹೋಗುವುದು ತಪ್ಪೇನಿಲ್ಲ. ಆದರೆ ಈ ಸಂದರ್ಭದಲ್ಲಿ ನಿಮ್ಮಮ್ಮನ ಮನೆಯಲ್ಲೂ ಯಾರಿಗೆ ಬೇಕಾದರೂ ಕೋವಿಡ್‌ ಬರಬಹುದು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಮನೆಯಲ್ಲೇ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹಣ್ಣು, ತರಕಾರಿ, ವಿಟಮಿನ್ ಸಿ, ಝಿಂಕ್ ಇತ್ಯಾದಿ ಹೆಚ್ಚಿರುವ ಹಣ್ಣುಗಳಾದ ಮೋಸಂಬೆ, ಕಿತ್ತಳೆ, ಇನ್ನಿತರ ತರಕಾರಿಗಳನ್ನು ಸೇವಿಸುತ್ತಾ ಸುಲಭವಾದ ಉಸಿರಾಟದ ಅಭ್ಯಾಸಗಳನ್ನು ಮಾಡುತ್ತಾ ಧೈರ್ಯವಾಗಿರಿ.

*ವಯಸ್ಸು 23, ತೂಕ 62 ಕೆಜಿ. ಮದುವೆಯಾಗಿ 6 ತಿಂಗಳು. 3 ತಿಂಗಳ ಹಿಂದೆ ಅನ್‌ವಾಂಟೆಡ್‌ ಕಿಟ್‌ನಿಂದ ಒಂದು ಮಾತ್ರೆ ಸೇವಿಸಿ ಗರ್ಭಪಾತ ಮಾಡಿಕೊಂಡೆ. ಈ ಮಾತ್ರೆ ತೆಗೆದುಕೊಂಡ ನಂತರ ನನ್ನ ತೂಕ ಹೆಚ್ಚಾಗಿದೆ. ಯಾವಾಗಲೂ ನಿದ್ದೆ ಮಾಡುತ್ತೇನೆ, ಮನೆಗೆಲಸ ಮಾಡಿದರೆ ತುಂಬಾ ಸುಸ್ತಾಗುತ್ತದೆ. ನನ್ನ ತೂಕ ಮುಂಚೆ 50 ಆಗಿತ್ತು. ಇದಕ್ಕೆ ಪರಿಹಾರ ಏನು?

-ಮಾನವಿ, ತಿಪಟೂರು

ಮಾನವಿಯವರೆ, ನೀವು ಮೊದಲನೆ ಗರ್ಭವನ್ನು ಅನ್‌ವಾಂಟೆಡ್‌ ಕಿಟ್‌ ತೆಗೆದುಕೊಂಡು ಯಾಕೆ ಗರ್ಭಪಾತ ಮಾಡಿಕೊಂಡಿರಿ? ಗರ್ಭಧಾರಣೆಯಾಗದ ಹಾಗೆ ತಾತ್ಕಾಲಿಕ ಸಂತಾನ ನಿಯಂತ್ರಣ ಕ್ರಮಗಳನ್ನು (ನಿರೋಧ್‌, ಓ.ಸಿ. ಪಿಲ್ಸ್, ಇತ್ಯಾದಿ) ದಂಪತಿ ಮೊದಲೇ ಯೋಚಿಸಿ ಬಳಸಬಹುದಿತ್ತು. ಇರಲಿ, ನಿಮಗೆ ತೂಕ ಹೆಚ್ಚಾಗಿರುವುದು ಗರ್ಭಪಾತದ ಮಾತ್ರೆಯಿಂದ ಇರಲಿಕ್ಕಿಲ್ಲ, ಬದಲಾಗಿ ನಿಮ್ಮ ಆಹಾರ ಸೇವನೆ ಹೆಚ್ಚಾಗಿ ದೈಹಿಕ ಶ್ರಮ ಕಡಿಮೆಯಾಗಿರಬಹುದು. ಅತಿಯಾಗಿ ಆಹಾರ ಸೇವನೆ ಮಾಡುತ್ತಿದ್ದರೆ ನಿಯಂತ್ರಿಸಿಕೊಳ್ಳಿ ಮತ್ತು ತಜ್ಞ ವೈದ್ಯರಿಂದ ತಪಾಸಣೆಗೊಳಗಾಗಿ. ಥೈರಾಯಿಡ್ ಹಾರ್ಮೋನ್‌ ಕಡಿಮೆ ಸ್ರಾವದಿಂದಲೂ ತೂಕ ಏರಬಹುದು. ಆದರೆ ನವವಿವಾಹಿತರಲ್ಲಿ ಹೆಚ್ಚಿನವರಲ್ಲಿ ತೂಕ ಏರಿಕೆಗೆ ಕಾರಣ ಅತಿಯಾದ ಆಹಾರ ಸೇವನೆ. ಅದನ್ನು ನಿಯಂತ್ರಿಸಿಕೊಳ್ಳಿ.

ನನ್ನ ಮಡದಿಯ ಗರ್ಭಾಶಯದಲ್ಲಿ ಗಡ್ಡೆಗಳ ಬಗೆಗೆ ವಿವರವಾದ ಮಾಹಿತಿಯನ್ನು ದಿನಾಂಕ 14/4/2021ರಂದು ನೀಡಿದ್ದೀರಿ. ತಮಗೆ ವಂದನೆಗಳು. ನನ್ನ ವಯಸ್ಸು 55. ನನ್ನ ಮಡದಿಯ ವಯಸ್ಸು 44. ಎರಡು ಮಕ್ಕಳಿದ್ದಾರೆ. ನನ್ನ ಮಡದಿಯ ಗರ್ಭಾಶಯವನ್ನು ಲ್ಯಾಪ್ರೊಸ್ಕೋಪಿ ಮೂಲಕ ತೆಗೆಯಲಾಯಿತು. ಈಗ ನನ್ನ ಪ್ರಶ್ನೆ ಏನೆಂದರೆ ಈಗ ಅವಳ ಕಾಮಾಸಕ್ತಿ ಹೊರಟು ಹೋಗುತ್ತದೆಯೇ? ಏಕೆಂದರೆ ಈಗಾಗಲೇ ನಾಲ್ಕು ಐದು ವರ್ಷಗಳಿಂದ ಅವಳಿಗೆ ಕಾಮಾಸಕ್ತಿಯೇ ಇಲ್ಲ. ಯೋನಿ ಒಣಗಿರುತ್ತದೆ. ಲ್ಯೂಬಿಕ್ ಕ್ರೀಮ್ ಅಥವಾ ಶುದ್ಧ ತೆಂಗಿನ ಎಣ್ಣೆ ಉಪಯೋಗಿಸಿ ಎಂದು ವೈದ್ಯರು ಹೇಳಿದ್ದಾರೆ. ಅದನ್ನು ಬಳಸಲು ಅವಳು ಒಪ್ಪುತ್ತಿಲ್ಲ. ಈಗ ಅವಳ ಕಾಮಾಸಕ್ತಿ ಹೆಚ್ಚುತ್ತದೆಯೋ ಇಲ್ಲವೋ ದಯವಿಟ್ಟು ತಿಳಿಸಿ.

ನಿಮ್ಮ ಮಡದಿಗೆ ಕಳೆದ 4–5 ವರ್ಷದಿಂದಲೇ ಕಾಮಾಸಕ್ತಿ ಇಲ್ಲವೆಂದರೆ ಅವರು ಋತುಬಂಧದ ಆಸುಪಾಸಿನಲ್ಲಿ ಇದ್ದಿರಬಹುದು. ಈಗಂತೂ ಗರ್ಭಕೋಶ ತೆಗೆದಿರುವುದರಿಂದ ಕೃತಕ ಋತುಬಂಧ ಆಗಿದೆ. ಅವರಲ್ಲಿ ಹೆಣ್ತನದ ಹಾರ್ಮೋನಾದ ಈಸ್ಟ್ರೋಜೆನ್ ಮಟ್ಟ ಕಡಿಮೆಯಾಗಿರಬಹುದು. ಜೊತೆಗೆ ಕಾಮಾಸಕ್ತಿ ಹೆಚ್ಚಿನ ಮಹಿಳೆಯರಲ್ಲಿ ಸಹಜವಾಗಿಯೇ 40 ವರ್ಷದ ನಂತರ ಕಡಿಮೆಯಾಗುತ್ತಾ ಬರುತ್ತದೆ. ಆದರೆ ಹೆಚ್ಚಿನ ಪುರುಷರಲ್ಲಿ ಹಾಗಾಗದೇ, ನಿಧಾನವಾಗಿ ಕಡಿಮೆಯಾಗುತ್ತದೆ. ಪರಸ್ಪರ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಲೈಂಗಿಕ ಆಸಕ್ತಿ ಇದ್ದು, ಇಬ್ಬರೂ ಸಂತೋಷದಿಂದ ಆ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಅದು ಸಂಸಾರದಲ್ಲಿ ಸುಖ-ಸಂತೋಷ ಹೆಚ್ಚಿಸುವುದು ನಿಜ. ಆದರೆ ಮಧ್ಯವಯಸ್ಸಿನಲ್ಲಿ ಬೇರೆ ಬೇರೆ ಸಾಂಸಾರಿಕ ಜವಾಬ್ದಾರಿಗಳು ಮಹಿಳೆಯರನ್ನು ಹೆಚ್ಚು ಆವರಿಸಿಕೊಳ್ಳುವುದರಿಂದಲೋ ಅಥವಾ ಸಹಜವಾಗಿಯೇ ಋತುಬಂಧದ ಭಾಗವಾಗಿ ಉಂಟಾಗುವ ಕುಂದಿದ ಕಾಮಾಸಕ್ತಿಗೋ ಹೆಚ್ಚಿನ ಮಹಿಳೆಯರು 45ರ ನಂತರ ಲೈಂಗಿಕವಾಗಿ ಪುರುಷರೊಂದಿಗೆ ಸಹಕರಿಸುವುದಿಲ್ಲವೆಂಬ ಆಪಾದನೆಯನ್ನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಕೇಳಿದ್ದೇನೆ. ನೀವು ಕೂಡ ಕೇವಲ ಲೈಂಗಿಕತೆ ಕಾಮಾಸಕ್ತಿಯೇ ಜೀವನದಲ್ಲಿ ಎಲ್ಲವೂ ಅಲ್ಲ ಎಂದು ನಿಮ್ಮ ಮಡದಿಯೊಂದಿಗೆ ಆತ್ಮೀಯತೆಯಿಂದ ಇದ್ದು ಸಹಕರಿಸಿ ಜೀವನ ನಡೆಸಬಹುದು. ಸಂಗೀತ ಕೇಳುವುದು, ಸಾಹಿತ್ಯ ಓದುವುದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇತ್ಯಾದಿಯೆಡೆಗೆ ನಿಮ್ಮ ಗಮನವನ್ನು ಹೊರಳಿಸಿ. ಕೃತಕ ಈಸ್ಟ್ರೋಜೆನ್ ಹಾರ್ಮೋನ್‌ಗಳನ್ನು ಒಂದೆರಡು ತಿಂಗಳು ಮಾತ್ರ ತೆಗೆದುಕೊಂಡರೆ ಅವರ ಯೋನಿ ಶುಷ್ಕತೆ ಸ್ವಲ್ಪ ಕಡಿಮೆಯಾಗಬಹುದು. ಆದರೆ ದೀರ್ಘವಾಧಿ ತೆಗೆದುಕೊಂಡರೆ ಅದರಿಂದ ಬೇರೆ ದುಷ್ಪರಿಣಾಮಗಳಾಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು