ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಸ್ಪಂದನ: ಗರ್ಭಿಣಿಯರು ಹಲ್ಲು ಕೀಳಿಸಬಹುದೇ?

Published : 7 ಫೆಬ್ರುವರಿ 2025, 23:40 IST
Last Updated : 7 ಫೆಬ್ರುವರಿ 2025, 23:40 IST
ಫಾಲೋ ಮಾಡಿ
Comments
ಪ್ರ

ವಯಸ್ಸು 39, ಮದುವೆಯಾಗಿ 11 ವರ್ಷ ಆಗಿದೆ. ನನ್ನ ಗಂಡನ ವಯಸ್ಸು 45. ಅನಿಯಮಿತ ಮುಟ್ಟಿನ ಸಮಸ್ಯೆ ಇದೆ. ಪಿಸಿಒಡಿ ಸಮಸ್ಯೆ ಇರುವುದರಿಂದ ಇನ್ನು ಮಕ್ಕಳು ಆಗಿಲ್ಲ.  ಐಯುಐ, ಐವಿಫ್ ಮಾಡಿಸಿಕೊಂಡೆ. ಚಿಕಿತ್ಸೆ ವಿಫಲವಾಯಿತು. ರಕ್ತಪರೀಕ್ಷೆ ಮಾಡಿದಾಗ ಕ್ಷಯ ಇರುವುದು ಪತ್ತೆಯಾಯಿತು. ಆರು ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಏನು ಮಾಡಬೇಕು ತೋಚುತ್ತಿಲ್ಲ. 

ADVERTISEMENT

39 ವರ್ಷಗಳು ಆಗಿವೆ. ಜತೆಗೆ ಪಿಸಿಒಡಿ ಸಮಸ್ಯೆ ಇದೆ ಎಂದು ಹೇಳಿದ್ದೀರಿ. ಹಾಗಾಗಿ ಅಂಡಾಶಯದ ಮೀಸಲು ಸಾಮರ್ಥ್ಯ ಕಡಿಮೆ ಆಗುತ್ತದೆ. ಐವಿಎಫ್‌ ಚಿಕಿತ್ಸೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಬಯಸಲು ಸಾಧ್ಯವಿಲ್ಲ. ಅದಕ್ಕೂ ಪ್ರಯತ್ನಿಸಬೇಕಾಗುತ್ತದೆ. ರಕ್ತ ಪರೀಕ್ಷೆಯಲ್ಲಿ ಕ್ಷಯ ರೋಗ ಇದೆ ಎಂದ ಮೇಲೆ ಕನಿಷ್ಠ ಆರು ತಿಂಗಳು ಕ್ಷಯ ಹರಡುವ ಬ್ಯಾಕ್ಟೀರಿಯಾ ನಿಯಂತ್ರಣಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 

ಕ್ಷಯವು ಕರುಳು, ಶ್ವಾಸಕೋಶ ಸೇರಿ ಜನನಾಂಗದ ಭಾಗಗಳಿಗೂ ಹಬ್ಬಿರಬಹದು. ಕ್ಷಯರೋಗ ಬಂದಾಗ ತೆಳ್ಳಗಾಗಿ, ಪೀಚಲಾಗಿ, ನಿಃಶ್ಯಕ್ತಿ ಕಾಣಿಸದೆಯೂ ಕ್ಷಯ ನಂಜು ಜನನಾಂಗಕ್ಕೆ ತಗುಲಬಹುದು. 

ಕ್ಷಯದ ಸೋಂಕು ಗರ್ಭನಾಳಕ್ಕೆ ಅಂಟಿಕೊಂಡರೆ ನಾಳ ಗಟ್ಟಿಯಾಗಿ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು. ಈ ಸೋಂಕು ಅಂಡಾಶಯಕ್ಕೆ ಹರಡಿದಾಗ ಅಂಡೋತ್ಪತ್ತಿ ಪ್ರಕ್ರಿಯೆಗೂ ತೊಡಕಾಗಬಹುದು.  ಗರ್ಭಕೋಶದ ಒಳಾವರಣಕ್ಕೆ ಹರಡಿದರೆ ಅದು ನಾಶವಾಗಿ ಮುಟ್ಟೇ ನಿಂತುಹೋಗುವ ಪರಿಸ್ಥಿತಿ ಬರಬಹುದು. ಗರ್ಭ ಕೊರಳಿನಿಂದ ಯೋನಿಗೂ ಹರಡಬಹುದು. ಹಾಗಾಗಿ ತಡ ಮಾಡದೇ ಕ್ಷಯ ನಿವಾರಕ ಮಾತ್ರೆಗಳನ್ನು ಆರು ತಿಂಗಳು ತಪ್ಪದೇ ತೆಗೆದುಕೊಳ್ಳಿ. ನಂತರವಷ್ಟೆ ಸಹಜ ಅಥವಾ ಐ.ವಿ.ಎಫ್‌  ಮೂಲಕ ಮಗುವಿಗೆ ಪ್ರಯತ್ನಿಸಿ.

ಪ್ರ

ನನಗೆ 26 ವರ್ಷಗಳು. ಮೂರು ತಿಂಗಳ ಗರ್ಭಿಣಿ. ಡಾಕ್ಟರ್ ನನಗೆ ಕೆಳಗೆ ಬಲಬದಿಯ ಕೊನೆಯ ಹಲ್ಲನ್ನು‌ ಕೀಳಿಸಲು ಹೇಳಿದ್ದಾರೆ. ಇದನ್ನು ಏಕೆ ತೆಗೆಸಬೇಕು? ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ.

ನಿಮಗಾಗಿರುವುದು ಜ್ಞಾನದ ಹಲ್ಲಿನ ಸಮಸ್ಯೆ. ನೀವು ಗರ್ಭಿಣಿಯಾಗಿದ್ದಾಗ ಮೊದಲ ಮೂರು ತಿಂಗಳು ಹಲ್ಲು ಕೀಳಿಸುವುದು ಸುರಕ್ಷಿತವಲ್ಲ. ಯಾಕೆಂದರೆ ಹಲ್ಲು ಕಿತ್ತಾಗ ಹೆಚ್ಚುವರಿ ಆಂಟಿ ಬಯೋಟಿಕ್ ಮತ್ತು ನೋವು ನಿವಾರಕ ಮಾತ್ರಗಳನ್ನೆಲ್ಲ ಸೇವಿಸುವ ಅವಶ್ಯಕತೆ ಬರುತ್ತದೆ ಈ ಸಂದರ್ಭದಲ್ಲಿ ಭ್ರೂಣ ಬೆಳೆದು ಅಂಗಾಂಗಗಳ ಬೆಳವಣಿಗೆ ಆಗುವುದರಿಂದ ಭ್ರೂಣದ ಮೇಲೆ ದುಷ್ಪರಿಣಾಮ ಉಂಟಾಗಬಹುದು.

ಇನ್ನು ಕೊನೆಯ ತ್ರೈಮಾಸಿಕದಲ್ಲಿ ಹಲ್ಲು ಕೀಳ ಹೊರಟರೂ ಅಕಾಲಿಕ ಹೆರಿಗೆ ನೋವು ಸೋಂಕು ಸೆಪ್ಟಿಸೀಮಿಯಾ ಉಂಟಾಗಬಹುದು. ಆ ಹಲ್ಲು ತೆಗೆಯುವುದು ಅನಿವಾರ್ಯವಾದರೆ ತಜ್ಞವೈದ್ಯರನ್ನು ಸಂಪರ್ಕಿಸಿ. ಗರ್ಭಿಣಿಯರು ದಂತ ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT