ಮಂಗಳವಾರ, ಜನವರಿ 26, 2021
15 °C

ಕೊರೊನಾ ಒಂದಿಷ್ಟು ತಿಳಿಯೋಣ: ಕೋವಿಡ್‌ ಚಿಕಿತ್ಸೆಗೆ ಕ್ಯಾನ್ಸರ್‌ ಔಷಧಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಬರದಂತೆ ತಡೆಯಲು ಲಸಿಕೆಯನ್ನು ಕೆಲವು ದೇಶಗಳಲ್ಲಿ ನೀಡಲಾಗುತ್ತಿದ್ದು, ಭಾರತದಲ್ಲೂ ಇನ್ನೇನು ಈ ಅಭಿಯಾನಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಕೋವಿಡ್‌ ಬಂದರೆ ಅದನ್ನು ಸಮರ್ಥವಾಗಿ ಎದುರಿಸಿ ಗುಣಪಡಿಸುವಂತಹ ಔಷಧವನ್ನು ಇನ್ನೂ ಕಂಡು ಹಿಡಿಯುವ ಹಂತದಲ್ಲಿದ್ದೇವೆ. ಸದ್ಯಕ್ಕೆ ಜ್ವರಕ್ಕೆ ಬಳಸುವ ಔಷಧಗಳು, ರೆಮ್ಡೆಸಿವಿರ್‌ನಂತಹ ಮಾತ್ರೆಗಳು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಪೋಷಕಾಂಶಗಳು ಸೇರಿದಂತೆ ಹಲವು ಬಗೆಯ ಔಷಧಗಳನ್ನು ಕೋವಿಡ್‌ ಗುಣಪಡಿಸಲು, ಲಕ್ಷಣ ಹಾಗೂ ತೀವ್ರತೆ ಕಡಿಮೆ ಮಾಡಲು ಬಳಸಲಾಗುತ್ತಿದೆ. ಆದರೆ ವೈರಸ್‌ ಸೋಂಕು ತಗಲಿದ ನಂತರ ಅದು ಸಂಖ್ಯೆಯಲ್ಲಿ ಹೆಚ್ಚಾಗದಂತೆ ಶೇ ನೂರರಷ್ಟು ತಡೆಯುವಂತಹ ಔಷಧವನ್ನು ಎಲ್ಲಿಯೂ ಕಂಡುಹಿಡಿದಿಲ್ಲ. ಆದರೆ ಪ್ರಯತ್ನಗಳಂತೂ ನಡೆದೇ ಇದೆ.

ಇತ್ತೀಚೆಗೆ ಚೀನಾದಲ್ಲಿ ನಡೆದ ಅಧ್ಯಯನವೊಂದು ಕ್ಯಾನ್ಸರ್‌ನಲ್ಲಿ ಕಿಮೊಥೆರಪಿಗೆ ಬಳಸುವಂತಹ ಔಷಧವನ್ನು ವೈರಸ್‌ ಸಂಖ್ಯೆ ಹೆಚ್ಚಾಗುವುದನ್ನು ತಡೆಗಟ್ಟಲು ಬಳಸಬಹುದು ಎಂದು ಹೇಳಿದೆ. ಪಿಎಲ್‌ಒಎಸ್‌ ಕಂಪ್ಯೂಟೇಶನಲ್‌ ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಈ ಸಾಧ್ಯತೆ ಮೇಲೆ ಬೆಳಕು ಚೆಲ್ಲಿದೆ.

ಔಷಧ ಮತ್ತು ವೈರಸ್‌ ನಡುವಿನ ವಿವಿಧ ಬಗೆಯ ಪರಿಣಾಮಗಳನ್ನು ವಿಭಿನ್ನ ಕೋನಗಳಿಂದ ಅಧ್ಯಯನ ಮಾಡಲಾಗಿದೆ. ಚೀನಾದ ಶೇಂಝೆನ್‌ ಅಡ್ವಾನ್ಸ್ಡ್‌ ಟೆಕ್ನಾಲಜಿ ಸಂಸ್ಥೆಯಲ್ಲಿ ವೈರಸ್‌ ಪ್ರೊಟೀನ್‌ ಆರ್‌ಎನ್‌ಎ ಪಾಲಿಮರೇಸ್‌ ಮೇಲೆ ಹಲವಾರು ಔಷಧಗಳನ್ನು ಪ್ರಯೋಗಿಸಿ ವೈರಸ್‌ ಸಂಖ್ಯೆಯಲ್ಲಿ ಹೆಚ್ಚಾಗುತ್ತ ಹೋಗುವ ಪ್ರಕ್ರಿಯೆ ತಡೆಯುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲಾಗಿದೆ. ಇವುಗಳಲ್ಲಿ ನಾಲ್ಕು ಔಷಧಿಗಳನ್ನು ಸಾರ್ಸ್‌ ಕೋವ್‌–2 ವೈರಸ್‌ ಮೇಲೆ ಪ್ರಯೋಗಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರಲ್ಲಿ ಪ್ರಾಲಾಟ್ರೆಕ್ಸೇಟ್‌ ಎಂಬ ಔಷಧಿಯು ವೈರಸ್‌ ಸಂಖ್ಯೆ ಹೆಚ್ಚಾಗುವುದನ್ನು ಯಶಸ್ವಿಯಾಗಿ ತಡೆಗಟ್ಟಿರುವುದು ಕಂಡು ಬಂದಿದೆ. ಸದ್ಯ ಕೋವಿಡ್‌–19 ಗುಣಪಡಿಸಲು ಬಳಸುವ ರೆಮ್ಡೆಸಿವಿರ್‌ಗಿಂತ ಇದು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಆದರೆ ಕ್ಯಾನ್ಸರ್‌ ರೋಗಿಗಳ ಮೇಲೆ ಅದರಲ್ಲೂ ಕೊನೆಯ ಹಂತದಲ್ಲಿರುವ ಲಿಂಫೋಮ ಕ್ಯಾನ್ಸರ್‌ಗೆ ಬಳಸುವ ಪ್ರಾಲಾಟ್ರೆಕ್ಸೇಟ್‌ ಔಷಧದಿಂದಾಗುವ ಅಡ್ಡ ಪರಿಣಾಮಗಳು ಜಾಸ್ತಿ. ಹೀಗಾಗಿ ಕೋವಿಡ್‌–19ಗೆ ಇದನ್ನು ತಕ್ಷಣಕ್ಕೆ ಬಳಸಲು ಸಾಧ್ಯವಿಲ್ಲ ಎಂದು ಹೇಳಿರುವ ಸಂಶೋಧಕರು, ಈ ಔಷಧದ ಕಣ ರಚನೆಯನ್ನು ಬದಲಾಯಿಸಿ ಹೊಸ ಬಗೆಯ ಔಷಧವನ್ನು ತಯಾರಿಸಿದರೆ ಕೋವಿಡ್‌–19 ಚಿಕಿತ್ಸೆಗೆ ಅನುಕೂಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು