ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಕ್ಯಾನ್ಸರ್‌ ರೋಗಿಗಳು ‘ಕೊರೊನಾ‘ದಿಂದ ಗುಣಮುಖ

Last Updated 7 ಸೆಪ್ಟೆಂಬರ್ 2020, 8:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಕೋವಿಡ್‌ 19 ಸೋಂಕಿಗೆ ಒಳಗಾಗಿದ್ದ 40 ಕ್ಕೂ ಹೆಚ್ಚು ಕ್ಯಾನ್ಸರ್‌ ರೋಗಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಉಳಿದ ಶೇ 98ರಷ್ಟು ಮಂದಿ ಅಚ್ಚರಿಯ ರೀತಿಯಲ್ಲಿ ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರೆ.

ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ವಿಕ್ಟೋರಿಯಾ ಆಸ್ಪತ್ರೆ, ಆಸ್ಟರ್‌ ಸಿಎಂಐ ಮತ್ತು ನಾರಾಯಣ ಹೆಲ್ತ್‌ನಲ್ಲಿರುವ ಮಜುಂದಾರ್ ಶಾ ವೈದ್ಯಕೀಯ ಕೇಂದ್ರದಲ್ಲೂ ಇಂಥದ್ದೇ ಫಲಿತಾಂಶಗಳು ಲಭ್ಯವಾಗಿವೆ.

ಕ್ಯಾನ್ಸರ್ ರೋಗಿಗಳಿಗೆ ಕೋವಿಡ್‌ 19 ಸೋಂಕು ಬೇಗ ಬಾಧಿಸುತ್ತದೆ. ಸೋಂಕು ತಗುಲಿದ ಕ್ಯಾನ್ಸರ್ ರೋಗಿಗಳಲ್ಲಿ ಗುಣಮುಖರಾಗುವ ಸಂಖ್ಯೆ ಕಡಿಮೆ ಎಂಬುದಕ್ಕೂ ಹಲವು ಸಾಕ್ಷ್ಯಗಳಿವೆ. ಸಾಮಾನ್ಯ ಜನರ ಸಾವಿನ ಪ್ರಮಾಣ ಶೇ 0.6ಕ್ಕಿಂತ ಕಡಿಮೆ ಇದ್ದರೆ, ಕ್ಯಾನ್ಸರ್ ರೋಗಿಗಳಲ್ಲಿನ ಮರಣ ಪ್ರಮಾಣ ಶೇ 20ರಷ್ಟು ಹೆಚ್ಚಾಗಿದೆ ಎಂದು ಹಿಂದಿನ ವರದಿಗಳಲ್ಲಿ ಉಲ್ಲೇಖವಾಗಿದೆ. ಆದರೆ, ಈ ಪ್ರಕರಣಗಳಲ್ಲಿ ಆ ಭಯವನ್ನು ಹೋಗಲಾಡಿಸುವಂತಹ ಫಲಿತಾಂಶಗಳು ಲಭ್ಯವಾಗಿವೆ.

ಈ ಪ್ರಕರಣದಲ್ಲಿ ವೈದ್ಯರು,ಕ್ಯಾನ್ಸರ್ ರೋಗಕ್ಕೆ ನೀಡುವ ಚಿಕಿತ್ಸೆಯಿಂದ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತದೆ ಎಂಬುದನ್ನು ಗಮನಿಸಿ, ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳಿಗೆ, ಕ್ಯಾನ್ಸರ್‌ಗೆ ನೀಡುವ ಕಿಮೊ ಥೆರಪಿಯಂತಹ ಚಿಕಿತ್ಸೆಯನ್ನು ತುಸು ವಿಳಂಬಗೊಳಿಸಿದ್ದಾರೆ. ಆನಂತರ ಕ್ಯಾನ್ಸರ್ ಪೀಡಿತರು ಸೋಂಕಿನಿಂದ ಗುಣಮುಖರಾಗುವುದನ್ನು ಗಮನಿಸಿದ್ದಾರೆ. ಸೋಂಕಿನಿಂದ ಗುಣಮುಖರಾದ ರೋಗಿಗಳಿಗೆ ನಂತರ ಕ್ಯಾನ್ಸರ್ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.

‘ಕಿದ್ವಾಯ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಬಾಧಿತ 40ಕ್ಕೂ ಹೆಚ್ಚು ರೋಗಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅದರಲ್ಲಿ ಇಬ್ಬರು ಸಾವನ್ನಪ್ಪಿದರು. ಉಳಿದ ಶೇ 98 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ‘ ಎಂದು ತಿಳಿಸಿದ ಕಿದ್ವಾಯ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ರಾಮಚಂದ್ರ, ‘ರೋಗನಿರೋಧಕ ಶಕ್ತಿ ಮತ್ತು ಕ್ಯಾನ್ಸರ್‌ ಮೇಲೆ ರೋಗಿಯ ಸಾವು ನಿರ್ಧಾರವಾಗುವುದಿಲ್ಲ. ರೋಗಿಗೆ ತಗಲಿರುವ ವೈರಸ್ಸಿನ ಪ್ರಮಾಣ ಮತ್ತು ರೋಗಿಯಲ್ಲಿರುವ ಇತರೆ ಗಂಭೀರ ರೋಗಗಳು ಸಾವಿಗೆ ಕಾರಣವಾಗಬಹುದು ‘ ಎಂದು ಸ್ಪಷ್ಟಪಡಿಸಿದ್ದಾರೆ.

‘ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳಲ್ಲಿ, ಸೋಂಕು ನೆಗೆಟಿವ್ ಬರುವವರೆಗೂ ಅಂದರೆ ಗುಣಮುಖರಾಗುವವರೆಗೂ ಒಂದೂವರೆ ತಿಂಗಳು ಕಿಮೊಥೆರಪಿ ನೀಡುವುದಿಲ್ಲ. ಸೋಂಕಿನಿಂದ ಗುಣಮುಖರಾದ ರೋಗಿಗಳಲ್ಲಿ ಕಿಮೊ ಥೆರಪಿ ತಡೆದುಕೊಳ್ಳುವಷ್ಟು ಶಕ್ತಿ ವೃದ್ಧಿಯಾದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ‘ ಎಂದು ಅವರು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಮತ್ತು ಥೈರಾಯ್ಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದರು. ಅವರೆಲ್ಲ ಈಗ ಗುಣಮುಖರಾಗಿದ್ದಾರೆ. ‘ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳಿಗೆ, ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಯನ್ನು ನಿಲ್ಲಿಸಿದ್ದೆವು. ಕೊರೊನಾ ಸೋಂಕಿತರಾಗಿದ್ದರೂ, ಅವರಲ್ಲಿ ಸೋಂಕಿನ ಲಕ್ಷಣಗಳಿರಲಿಲ್ಲ. ಇವರ ದೇಹದಲ್ಲಿ ಸೌಮ್ಯ ಸ್ವರೂಪದ ವೈರಸ್‌ಗಳಿದ್ದವು. ಹೀಗಾಗಿ ಅವರು ಬೇಗ ಗುಣಮುಖರಾದರು‘ ಎಂದು ತಿಳಿಸಿದರು. ಈ ಕ್ಯಾನ್ಸರ್ ರೋಗಿಗಳಿಗೆ 21 ದಿನಗಳವರೆಗೆ ಕಿಮೊ ಥೆರಪಿಯನ್ನು ಮುಂದೂಡಿದ್ದೆವು‘ ಎಂದು ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮನೋರಂಜನ್ ತಿಳಿಸಿದರು.

‘ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದೇಶದಿಂದ ಬಂದಿದ್ದ ಕೆಲವು ಕ್ಯಾನ್ಸರ್ ರೋಗಿಗಳಿಗೆ ಕೊರೊನಾ ಸೋಂಕು ತಗುಲಿತ್ತು. ಈ ಸಮಯದಲ್ಲಿ ಅಂಥ ರೋಗಿಗಳಿಗೆ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆಯನ್ನು ಸ್ವಲ್ಪ ಮಾರ್ಪಾಡು ಮಾಡಿ, ಮುಂದುವರಿಸಲಾಯಿತು ಎಂದುಮಜುಂದಾರ್ ಶಾ ವೈದ್ಯಕೀಯ ಕೇಂದ್ರದ ತಲೆ ಅಂಡ್ ಕುತ್ತಿಗೆ ಕ್ಯಾನ್ಸರ್ ಸರ್ಜನ್ ಡಾ. ಮೋನಿ ಅಬ್ರಹಾಂ ಕುರಿಯಾಕೊಸೆ ಹೇಳಿದರು.

ಆದರೆ ಎಲ್ಲಾ ಕ್ಯಾನ್ಸರ್ ರೋಗಿಗಳೂ ಹೀಗೆ ಗುಣಮುರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ‘ ಎಂದು ಎಚ್ಚರಿಸಿರುವ ವೈದ್ಯರು, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಪಡೆಯಲು ನೋಂದಣಿ ಮಾಡಿಕೊಂಡಿರುವ ಎಲ್ಲ ರೋಗಿಗಳ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಒಂದು ಪರಿಪೂರ್ಣ ಚಿತ್ರ ಸಿಗುತ್ತದೆ ಎಂದು ಹೇಳಿದ್ದಾರೆ.

ಹೆಬ್ಬಾಳದ ಆಸ್ಟರ್‌ ಸಿಎಂಐ ಆಸ್ಪತ್ರೆಯ ಮೆಡಿಕಲ್ ಆಂಕೋಲಜಿಸ್ಟ್‌ ಡಾ. ವಿಜಯ್ ಅಗರ್‌ವಾಲ್, ‘ಇಷ್ಟು ಕಡಿಮೆ ಸಂಖ್ಯೆಯಲ್ಲಿ ಗುಣಮುಖರಾಗಿರುವ ರೋಗಿಗಳನ್ನಿಟ್ಟುಕೊಂಡು ಎಲ್ಲ ಕ್ಯಾನ್ಸರ್‌ ರೋಗಿಗಳು ಹೀಗೆ ಗುಣಮುಖರಾಗುತ್ತಾರೆಂದು ಹೇಳಲಾಗುವುದಿಲ್ಲ. ಒಟ್ಟು ಕ್ಯಾನ್ಸರ್ ರೋಗಿಗಳನ್ನು ಪರಿಗಣಿಸುವುದಾದರೆ ಶೇ 7 ರಿಂದ 8ರಷ್ಟು ರೋಗಿಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ನಮ್ಮಲ್ಲಿ ಆರು ಕ್ಯಾನ್ಸರ್ ರೋಗಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ‘ ಎಂದು ಮಾಹಿತಿ ನೀಡಿದರು. ಈ ಆಸ್ಪತ್ರೆಯಲ್ಲಿ ಏಳು ಕ್ಯಾನ್ಸರ್ ರೋಗಿಗಳಿಗೆ ಕೊರೊನಾ ಸೋಂಕು ತಗುಲಿತ್ತು. ಅದರಲ್ಲಿ ಇಬ್ಬರು ರೋಗಿಗಳು ಮೃತಪಟ್ಟರು. ಗುಣಮುಖರಾದ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಕಿಮೊ ಥೆರಪಿ ಚಿಕಿತ್ಸೆ ಪುನರಾರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT