ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದ ಸುದೀರ್ಘ ಯಾನದ ಹೆಬ್ಬಾಗಿಲು; ಬಾಯಿಯೆಂಬ ಬಾಗಿಲು ಕಾಯುವಾ

Last Updated 13 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಆಹಾರದ ಸುದೀರ್ಘ ಯಾನದ ಹೆಬ್ಬಾಗಿಲು ಬಾಯಿ. ಇದರ ಆರೋಗ್ಯವೇ ದೇಹಾರೋಗ್ಯದ ಮೊದಲ ಮೆಟ್ಟಿಲು...

ಬಾಯಿ ಮತ್ತು ಅದರ ಉಪಾಂಗಗಳ ಸ್ಪಷ್ಟ ವರ್ಣನೆ ಭಾರತೀಯ ವೈದ್ಯಗ್ರಂಥಗಳಲ್ಲಿದೆ. ತುಟಿ, ಒಸಡು, ನಾಲಿಗೆ, ಹಲ್ಲು, ಅಂಗಳ, ಗಂಟಲು ಮತ್ತು ಇಡಿಯ ಬಾಯಿ ಎಂಬ ಸಪ್ತಾಂಗಗಳ ಬಗ್ಗೆ ವಿವರಗಳಿವೆ. ಅವುಗಳ ರಕ್ಷಣೆಯಿಂದ ದೇಹದ ಹೆಬ್ಬಾಗಿಲ ಸಂರಕ್ಷಣೆ ಸಾಧ್ಯ. ಇಂತಹ ಅಂಗಗಳಲ್ಲಿ ಸಂಭವಿಸುವ 65 ರೋಗಗಳ ಯಾದಿ ಮಾತ್ರವಲ್ಲ. ಅವುಗಳ ಕಾರಣ, ಲಕ್ಷಣ ಮತ್ತು ಚಿಕಿತ್ಸೆಯ ವಿವರಗಳು ಭಾರತೀಯ ಪ್ರಾಚೀನ ವೈದ್ಯಸಾಹಿತ್ಯದ ಹೆಮ್ಮೆ.

ತುಟಿಯ ಆರೋಗ್ಯ: ಅತ್ತ ಚರ್ಮವೂ ಅಲ್ಲ. ಇತ್ತ ಒಳ ಲೋಳ್ಪದರವೂ ಅಲ್ಲ, ಅಂತಹ ಒಂದು ನಾಜೂಕಿನ ಅಂಗವೇ ತುಟಿ. ಕಾವ್ಯಗಳಲ್ಲಿ ಬಣ್ಣನೆಗೊಳ್ಳುವ ಕೆಂಪು ತೊಂಡೆಯ ಬಣ್ಣದ ತುಟಿ ನಿಜ ಆರೋಗ್ಯದ ಲಕ್ಷಣ. ಅದರ ಸಹಜ ಬಣ್ಣಕ್ಕೆ ಕೃತಕ ರಾಸಾಯನಿಕ ಸಾಧನವೂ ಅನಗತ್ಯ. ರಾಸಾಯನಿಕಗಳಿಂದ ಹಾನಿಯೇ ಸಂಭವಿಸೀತು. ಚಳಿಗಾಲದ ದಿನಗಳಲ್ಲಿ ಸೀಳುವ ತುಟಿ ತೊಂದರೆ ಒಂದೆಡೆ. ಬೇಸಿಗೆಯಲ್ಲಿ ಒಣಗುವ ಸಮಸ್ಯೆ ಕೂಡ ಕಿರಿಕಿರಿಯದೇ ಸೈ. ಒಂದರ್ಥದಲ್ಲಿ ಚರ್ಮದ ಸಹಜ ಆರೋಗ್ಯವಿದ್ದರೆ ಅಂದದ ತುಟಿಯ ಸಂರಕ್ಷಣೆಗೆ ಸುಸಾಧ್ಯ. ಹಾಲು ಮತ್ತು ಅದರ ಎಲ್ಲ ಉತ್ಪನ್ನಗಳು ಚರ್ಮಾರೋಗ್ಯಕ್ಕೆ ಪೂರಕ. ತುಪ್ಪದ ಸೇವನೆ ಹಾಗೂ ರಾತ್ರಿ ವೇಳೆ ತುಟಿಗೆ ಸವರುವ ಸರಳ ಉಪಾಯ ಕೈಗೊಳ್ಳಿರಿ. ಸಾಸಿವೆ ಎಣ್ಣೆ, ಹರಳೆಣ್ಣೆ, ತೆಂಗಿನೆಣ್ಣೆಯ ತಿಳು ಲೇಪನದಿಂದಲೂ ಲಾಭವಿದೆ. ತುಟಿಯಂಚಿನ ಹುಣ್ಣು ತಡೆಗೆ ಮನೆ ಮದ್ದಿದೆ. ಕಲ್ಲುಸಕ್ಕರೆಯನ್ನು ಚೀಪಬಹುದು. ಬಸಳೆ ಎಲೆ ಜಗಿಯಲಾದೀತು. ಕಡೆಬಾಯಿಯ ಜೊಲ್ಲು ಸುರಿತದ ಸಮಸ್ಯೆ; ನಿದ್ರಿಸುವಾಗ ಅಥವಾ ಸಹಜವಾದ ಜೊಲ್ಲು ಸ್ರಾವಗಳು ಕೇಡಿನದಲ್ಲ. ಇಳಿ ಹರೆಯದ ಸಮಸ್ಯೆ. ಒಣ ಶುಂಠಿಯ ಚೂರುಗಳನ್ನು ಚೀಪುವದಾದೀತು. ಜತೆಗೆ ಬೆಲ್ಲದ ಚೂರು ಸಹ. ಬಾಯಿಯ ಆರೋಗ್ಯಕ್ಕೆ ಸಹಕಾರಿ. ಆಹಾರದ ರುಚಿ ವರ್ಧಕ. ಲಾಲಾಸ್ರಾವದ ಸಹಜತೆಗೆ ಪೂರಕ.

ಒಸಡಿನ ಆರೋಗ್ಯ: ಹಲ್ಲಿನ ಭದ್ರ ಅಡಿಗಲ್ಲು ಒಸಡು. ಬಲವಾದ ಮಾಂಸಪೇಶಿಗಳ ಸಮುಚ್ಚಯವಿದು. ಆಗಾಗ ಕಾಣುವ ಕುರು, ರಕ್ತಸ್ರಾವ, ಕೀವು ಸುರಿತಗಳು ಒಸಡಿನ ಸಮಸ್ಯೆಗಳು. ಬೇವು, ಹೆಬ್ಬೇವು ಎಲೆಗಳ ಮುದ್ದೆಯನ್ನು ಕೆಲ ನಿಮಿಷ ಕಾಲ ಬಾಯಿಯಲ್ಲಿಡುವುದೇ ಸರಳ ಉಪಾಯ. ಕವಲ ಎಂಬ ಚಿಕಿತ್ಸೆ ಇದು. ಒಸಡಿನ ಆರೋಗ್ಯಪಾಲನೆಗೆ ಪೂರಕ. ತೆಂಗಿನ ಅಥವಾ ಸಾಸಿವೆ ಅಥವಾ ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕುಳಿಸಿರಿ. ಅನಂತರ ಹದ ಬಿಸಿನೀರಿನ ಬಾಯಿ ಮುಕ್ಕುಳಿಸುವ ಉಪಚಾರ. ಹಲ್ಲುಗಳೂ ಸೇರಿದಂತೆ, ಇಡಿಯ ಬಾಯಿಗೆ ಮತ್ತು ಅದರ ಉಪಾಂಗಗಳಿಗೆ ಇಂತಹ ಸರಳ ವಿಧಾನದಿಂದ ಲಾಭವಿದೆ.

ಶುಚಿಯಾದ ಹಲ್ಲು-ಆರೋಗ್ಯದ ಮೆಟ್ಟಿಲು: ಹೊಂಗೆ, ಬೇವು, ಬಿಳಿಮತ್ತಿ, ಕರಿಜಾಲಿ ಮತ್ತು ಕಗ್ಗಲಿ ಎಂಬ ಪರಿಸರದ ಮರಗಳಿವೆಯಲ್ಲ. ಅವುಗಳ ಕಿರು ಬೆರಳಿನ ಗಾತ್ರದ ಕಡ್ಡಿಗಳಿಂದ ಹಲ್ಲು ಶುಚಿಗೊಳಿಸುವ ವಿಧಾನ ಶತಶತಮಾನಗಳ ಸಂಪ್ರದಾಯ. ಜಜ್ಜಿದ ಟೊಂಗೆಯ ಬ್ರಷ್ ಪರಿಸರ ಪೂರಕ. ನಾಜೂಕಾಗಿ ಹಲ್ಲು ಶುಚಿಗೊಳಿಸಿರಿ. ಗೋಡಂಬಿ ಎಲೆ, ಮಾವಿನೆಲೆಯ ಸುರುಳಿಯ ನೈಸರ್ಗಿಕ ದಂತ ಬ್ರಷ್ ಕೂಡ ಯೂಸ್ ಎಂಡ್ ತ್ರೋ ಮಾತ್ರವಲ್ಲ. ಅವುಗಳಲ್ಲಿರುವ ಸೆಲೆನಿಯಂ, ಕ್ರೋಮಿಯಂ ಎಂಬ ಟ್ರೇಸ್ ಎಲಿಮೆಂಟ್(ಕಣ ರೂಪಿ ಮೂಲ ಧಾತು) ದೇಹಾರೋಗ್ಯ ಸಾಧಕ. ಎಲೆಗಳ ನಡುವಿನ ದಪ್ಪ ನರವು ಅತ್ಯುತ್ತಮ ಟಂಗ್ ಕ್ಲೀನರ್ ಎಂಬುದು ನೆನಪಿಡಿ. ಲಿಂಬೆಯ ಒಣಗಿದ ಸಿಪ್ಪೆ ಪುಡಿಮಾಡಿರಿ. ಪುಡಿಯುಪ್ಪು ಕೂಡಿಸಿರಿ. ಹಲ್ಲು ಪುಡಿಯಂತೆ ಬಳಸಿರಿ. ದಂತ ಪಂಕ್ತಿಯ ಜುಮುಗುಟ್ಟುವಿಕೆ, ಹಲ್ಲು ನೋವು ಪರಿಹಾರಕ ವಿಧಾನವಿದು. ನಡುರಾತ್ರಿಯ ಹಲ್ಲು ನೋವಿನ ಸಮಸ್ಯೆಯೇ? ತುಳಸಿ ಎಲೆರಸ ತೊಟ್ಟಿಕ್ಕಿಸಿರಿ. ತೆಂಗಿನ ಎಣ್ಣೆಯ ಬಾಯಿ ಮುಕ್ಕುಳಿಸುವಿಕೆ ಕೂಡ ಪ್ರಥಮ ಉಪಚಾರವೇ ಸೈ.

ನಾಲಿಗೆ ಶುದ್ಧವಿರಲಿ: ದಪ್ಪನೆಯ ಲೇಪವಿದ್ದರೆ ಪಚನ ಕ್ರಿಯೆ ನಿಧಾನವೆಂದರ್ಥ. ಮಲಪ್ರವೃತ್ತಿಯ ಅಡಚಣೆಯನ್ನೂ ನಿಧಾನಿಸಲಾದೀತು. ಬೆಳ್ಳಿಯ ಅಥವಾ ಉಕ್ಕಿನ ತಿಳು ಕಡ್ಡಿಯಿಂದ ಬೆಳಗು, ಬೈಗಿಗೆ ಎರಡು ಬಾರಿ ನಾಲಿಗೆ ಶುಚಿಗೊಳಿಸಿರಿ. ಜ್ಯೇಷ್ಠಮಧು ಎಂಬ ಅಂಗಡಿಮದ್ದು ಲಭ್ಯವಿದೆ. ಇದು ಬೇರಿನ ರೂಪದಲ್ಲಿ ಅಥವಾ ಪುಡಿಯಾಗಿ ಲಭ್ಯ. ಅದರ ಕಷಾಯ ತಯಾರಿಸಿರಿ. ನಾಕಾರು ಬಾರಿ ಬಾಯಿ ಮುಕ್ಕುಳಿಸಿರಿ. ಪದೇ ಪದೇ ಕಾಡುವ ಬಾಯಿ ಹುಣ್ಣು ಪರಿಹಾರಕ್ಕಿದುವೇ ಸಂಜೀವಿನಿ. ನೆಲ್ಲಿಯ ಚೂರು ಅಥವಾ ಒಣ ಶುಂಠಿಯ ಚೂರು ಚಪ್ಪರಿಸಿ ತಿನ್ನಲಾದೀತು. ಬಾಯಿ ರುಚಿ ಹೆಚ್ಚಲು ಇದು ಸುಲಭ ಉಪಾಯ. ಬಾಯಿಯ ದುರ್ವಾಸನೆ ತಡೆಗೆ ಲವಂಗ, ಏಲಕ್ಕಿಯ ಚಪ್ಪರಿಸುವಿಕೆ ಕೂಡ ಸಹಕಾರಿ.

ಅಂಗಳದ ಆರೋಗ್ಯ: ಬಾಯಿಯೆಂಬ ಹೆಬ್ಬಾಗಿಲ ಮೇಲು ಕಮಾನು ಅಂಗಳ. ಅಲ್ಲಿ ಉರಿಯೂತ, ಒಣಗುವಿಕೆಯಂತಹ ಸಮಸ್ಯೆ ಉಂಟಾದೀತು. ಬೇವಿನೆಲೆ, ನೇರಿಳೆ, ಕರಿಬೇವಿನೆಲೆ, ಜಾಜಿ ಚಿಗುರೆಲೆಯಂತಹ ಸಸ್ಯಸಾಧನಗಳ ಬಳಕೆ ಸೂಕ್ತ. ಎಲೆ ಅರೆದ ಮುದ್ದೆ ನಾಲಗೆ ಮತ್ತು ಅಂಗಳದ ನಡುವೆ ಹತ್ತು ನಿಮಿಷ ಕಾಲ ಒತ್ತಿಡಿರಿ. ಬಾಯಿಯ ಆರೋಗ್ಯ ಸಾಧನೆಗೆ ಇದು ಸರಳ ಸೂತ್ರ. ನಿರಪಾಯಕರ ಕೂಡ. ಯಾವುದೇ ಕಾರಣಕ್ಕೂ ತಂಬಾಕು ಬಳಕೆ ಖಂಡಿತ ಬೇಡ. ತಂಬುಳಿ ಬಳಸಿರಿ. ವೀಳ್ಯದೆಲೆ, ನೆಲನೆಲ್ಲಿ, ಒಂದೆಲಗ, ಧನಿಯಾ, ಮೆಂತೆ, ನೆಲ್ಲಿ, ದಾಳಿಂಬೆ ಚಿಗುರುಗಳ ತಂಬುಳಿ ತಂಪು ಮಾತ್ರ ಅಲ್ಲ. ತುಟಿ, ಬಾಯಿಯ ಹುಣ್ಣಿಗೆ ಖಂಡಿತ ರಾಮಬಾಣ. ಬಾಯಿಯ ಆರೋಗ್ಯಕ್ಕೆ ಸುಲಭ ಸೂತ್ರ.

ಗಂಟಲು ಸಂರಕ್ಷಣೆ: ದಾಳಿಂಬೆ, ಕಿತ್ತಳೆಯಂತಹ ಹಣ್ಣುಗಳ ಯಥೇಚ್ಛ ಸೇವನೆಯಿಂದ ಬಾಯಿಯ ಆರೋಗ್ಯರಕ್ಷಣೆಗೆ ಒತ್ತು ನೀಡಬಹುದು. ಗಂಟಲ ಬದಿಯ ಗ್ರಂಥಿಗಳ ಉರಿಯೂತ ಮತ್ತು ನೋವು ಪದೇ ಪದೇ ಕಾಣುವ ಶೀತಬಾಧೆಯ ತೊಂದರೆ. ನೆನಪಿಡಿರಿ. ಕುತ್ತಿಗೆಯ ಮೇಲಿನ ಎಲ್ಲ ಇಂದ್ರಿಯಗಳಿಗೆ ಕಫದ ತೊಂದರೆಯಿಂದಲೇ ರೋಗಭಯ. ಹಾಗಾಗಿ ಕಫದ ನಿಯಂತ್ರಣಕ್ಕೆ ಒತ್ತು ಬೇಕು. ಶುಂಠಿ, ಕಾಳು ಮೆಣಸು, ಹಿಪ್ಪಲಿಯ ಬಳಕೆಗೆ ಇಲ್ಲಿ ಅವಕಾಶವಿದೆ. ಮಲ ಪ್ರವೃತ್ತಿ ಸರಾಗವಾದರೆ ದೇಹದ ಅನಗತ್ಯ ವಿಷಾಂಶ ಹೊರಹೋದಂತೆ. ಅದಕ್ಕೆ ಒತ್ತು ನೀಡಲು ತ್ರಿಫಲಾ ಎಂಬ ಚೂರ್ಣ ಬಳಕೆ ಲೇಸು. ಅಣಿಲೆ, ತಾರೆ ಮತ್ತು ನೆಲ್ಲಿಗಳ ಸಮ್ಮಿಶ್ರಣವೇ ತ್ರಿಫಲಾ. ಒಂದೊಂದಾಗಿ ಅಥವಾ ಒಟ್ಟಾಗಿ ಬಳಸಲಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT