ಶುಕ್ರವಾರ, ಆಗಸ್ಟ್ 19, 2022
25 °C

PV Web Exclusive: ಮಕ್ಕಳ ಕೈಲಿ ಮೊಬೈಲ್ಲಾ? ಹುಷಾರ್‌!

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ಚಾರುಕೀರ್ತಿ ಒಂಬತ್ತನೇ ತರಗತಿ ವಿದ್ಯಾರ್ಥಿ. ಈತನಿಗೆ ಹಳ್ಳಿಯಲ್ಲಿರುವ ಅಜ್ಜಿ ಮನೆಗೆ ಹೋಗುವುದೆಂದರೆ ಸಂಭ್ರಮ. ಆರನೇ ತರಗತಿಯ ರಂಜನ್‌ಗೆ ಅಪ್ಪ, ಅಮ್ಮ, ತಂಗಿಯೊಂದಿಗೆ ನಗರವನ್ನು ಸುತ್ತುವುದೆಂದರೆ ಖುಷಿಯೋ ಖುಷಿ. ಹತ್ತನೇ ತರಗತಿಯ ಪ್ರಣವ್‌ಗೆ ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡುವುದೆಂದರೆ ಬಿಸಿಲು ಮಳೆ, ಗಾಳಿಯ ಪರಿವೇ ಇರುತ್ತಿರಲಿಲ್ಲ. ಆದರೆ, ಲಾಕ್‌ಡೌನ್‌ ನಂತರ ಇವರೆಲ್ಲರ ವರ್ತನೆಯಲ್ಲಿ ತುಂಬಾ ಬದಲಾವಣೆ ಆಗಿದೆ. ಚಾರುಕೀರ್ತಿಗೆ ಅಜ್ಜಿ ಮನೆ ಅಲರ್ಜಿ. ರಂಜನ್‌ಗೆ ನಗರ ಸುತ್ತುವುದು ಬೋರ್‌. ಪ್ರಣವ್‌ಗೆ ಕ್ರಿಕೆಟ್‌ ಅಂದ್ರೆ ಬೇಜಾರು! ಈ ಮೂವರ ಇಂತಹ ಬದಲಾದ ವರ್ತನೆಗೆ ಕಾರಣ, ಮೊಬೈಲ್‌!

ಹೌದು, ಮೊಬೈಲ್‌ ಕೈಗೆ ಸಿಕ್ಕ ನಂತರ ಇವರೆಲ್ಲರೂ ಮನೆ ಬಿಟ್ಟು ಹೊರಗೆ ಹೋಗಲು ಇಷ್ಟಪಡುತ್ತಿಲ್ಲ. ಅಂದಮೇಲೆ ಮೊಬೈಲ್‌ ಮಹಿಮೆ ಏನು ಎನ್ನುವುದು ಎಲ್ಲಾ ಪಾಲಕರಿಗೂ ಗೊತ್ತೇ ಇದೆ; ಅದು, ಮೊಬೈಲ್‌ ವಿಡಿಯೊ ಗೇಮ್ಸ್‌.

ಕೈಯಲ್ಲಿ ಮೊಬೈಲ್‌ ಇದ್ದರೆ ಸಾಕು, ಹೊರ ಜಗತ್ತಿನ ಪರಿವೇ ಇರುವುದಿಲ್ಲ. ಅಪ್ಪ, ಅಮ್ಮ ಎಷ್ಟು ಕರೆದರೂ ಕೇಳಿಸುವುದಿಲ್ಲ. ಮೊದಲೆಲ್ಲ ಸಮಯಕ್ಕೆ ಸರಿಯಾಗಿ ಹಸಿವಾಗುತ್ತಿತ್ತು. ಈಗ ಹಸಿವೇ ಆಗುತ್ತಿಲ್ಲ!

ಮೊಬೈಲ್‌ ಕೈಗೆ ಸಿಕ್ಕ ಮೇಲೆ ಶುರುವಾಗುತ್ತದೆ–’ಲೇ, ಅಲ್ಲಿ ಹೋಗ್ತಾ ಇದ್ದಾನೆ, ಹೊಡಿಯೋ. ಲೇ, ಆ ಗನ್‌ ತೆಗೆದುಕೋ. ಲೇ..ಲೇ.. ಬೇಗ ಕಿಲ್‌ ಮಾಡು, ಇಲ್ಲ ಅಂದ್ರೆ ಅವನು ನಮ್ಮನ್ನು ಕಿಲ್‌ ಮಾಡಿಬಿಡುತ್ತಾನೆ‘– ಹೀಗೆ ಉದ್ವೇಗದಲ್ಲಿ ಮಾತನಾಡುತ್ತಲೇ ಫ್ರಿಫೈರ್‌‌‌ ಗೇಮ್‌ನಲ್ಲಿ ಮುಳುಗಿ ಹೋಗಿರುತ್ತಾರೆ.

ಒಮ್ಮೆ ನಮ್ಮ ಪಕ್ಕದ ಮನೆಯ ಅಜ್ಜಿ ಬಂದವರು, ’ನಿನ್ನೆ ರಾತ್ರಿ, ನನ್ನ ಮೊಮ್ಮಗ  ರೂಮ್‌ ಬಾಗಿಲು ಹಾಕಿಕೊಂಡು, ಲೋ, ಹೊಡಿಯೋ, ಕಿಲ್‌ ಮಾಡೋ ಅಂತ ಜೋರಾಗಿ ಕೂಗಾಡುತ್ತಿದ್ದ. ನನಗೆ ವಿಪರೀತ ಗಾಬರಿ ಆಯ್ತು. ಬಾಗಿಲು ತೆರೆಸಿ ಕೇಳಿದರೆ, ಅದು ಗೇಮ್‌ ಅಜ್ಜಿ ಎಂದ. ನಾನು ನಿಟ್ಟುಸಿರುಬಿಟ್ಟೆ‘ ಎಂದು ಹೇಳಿ ನಕ್ಕರು.

ಲಾಕ್‌ಡೌನ್‌‌ ಟೈಮ್‌ನಲ್ಲಿ ಮಕ್ಕಳು ಹೊರಗೆ ಹೋಗಿ ಆಟವಾಡಲು ಸಾಧ್ಯವಿರಲಿಲ್ಲ. ಮನೆಯಲ್ಲಿ ಕುಳಿತು ಬೋರು ಎನ್ನುವ ಮಾತು ಕೇಳಿ ಬೇಜಾರಾದ ಪೋಷಕರು ಮಕ್ಕಳ ಹಟಕ್ಕೆ ಮಣಿದು ಮೊಬೈಲ್‌ ಕೊಟ್ಟರು, ಅವರು ಕೆಟ್ಟರು. ಮೊಬೈಲ್‌ ವಿಡಿಯೊ ಗೇಮ್‌‌ಗೆ ಮನಸ್ಸು ಕೊಟ್ಟರು. ಗೇಮ್‌ನಲ್ಲಿ ಒಂದೊಂದೇ ಲೆವೆಲ್‌ ಮೇಲೆ ಹೋಗುತ್ತಾ, ಹೋಗುತ್ತಾ ಗೇಮ್‌ ಚಟವಾಯಿತು. ಒಂದರೆಗಳಿಗೆ ಕೈಯಲ್ಲಿ ಮೊಬೈಲ್‌ ಇಲ್ಲ ಎಂದರೂ ತಳಮಳ.

ಅನ್‌ಲಾಕ್‌‌ ಆದ ಮೇಲೆ ಆನ್‌ಲೈನ್‌ ಕ್ಲಾಸ್‌ಗಳು ಶುರುವಾದವು. ಮಕ್ಕಳ ಕೈಗೆ ಮೊಬೈಲ್‌ ಕೊಡುವುದು ಪೋಷಕರಿಗೂ ಅನಿವಾರ್ಯವಾಯಿತು. ಆನ್‌‌ಲೈನ್‌ ಕ್ಲಾಸ್‌ ನೆಪದಲ್ಲಿ ರೂಮ್‌ ಸೇರಿ ಬಾಗಿಲು ಹಾಕಿಕೊಳ್ಳ ತೊಡಗಿದರು. ಹೆಸರು ಆನ್‌‌ಲೈನ್‌ ಕ್ಲಾಸ್‌, ಆದರೆ, ಅಲ್ಲಿ ಆನ್‌‌ಲೈನ್‌ ಗೇಮ್‌ ಆಡುತ್ತಾ ಕುಳಿತುಬಿಡುತ್ತಿದ್ದರು. ಪೋಷಕರು ಬಾಗಿಲು ತೆಗೆಸುವ ಹೊತ್ತಿಗೆ ಗೇಮ್‌ನಿಂದ ಕ್ಲಾಸ್‌ಗೆ ಶಿಫ್ಟ್‌ ಆಗಿಬಿಡುವ ಚಾಲೂಕಿತನವನ್ನೂ ಕಲಿತುಬಿಟ್ಟರು.

ಮಕ್ಕಳು ಮೊಬೈಲ್‌ ಗೇಮ್‌ನಿಂದಾಗಿ ತಮಗೆ ತಾವೇ ದ್ವೀಪವಾಗಿಬಿಟ್ಟಿದ್ದಾರೆ. ಸ್ನೇಹಿತರು ಬಂದರೂ ಅವರ ಕೈಯಲ್ಲಿಯೂ ಮೊಬೈಲ್‌. ಎಲ್ಲರೂ ಸೇರಿ ಟೀಂ ಮಾಡಿಕೊಂಡು ಮತ್ತೆ ಗೇಮ್‌ ಶುರುವಿಟ್ಟುಕೊಳ್ಳುತ್ತಾರೆ. ಈಗ ಮನೆಯಿಂದ ಹೊರಗೆ ಹೋಗುವುದೆಂದರೆ ಕಷ್ಟ, ಕಷ್ಟ. ಇದರಿಂದಾಗಿ ಸಮಾಜದೊಂದಿಗೆ ಸಂಪರ್ಕ, ಸಂವಾದ ಕಡಿಮೆಯಾಗಿದೆ.

ಆಕ್ರಮಣಕಾರಿ, ದಾಳಿ ಮಾಡುವಂತಹ ಗೇಮ್‌ಗಳಿಂದಾಗಿ ಮಕ್ಕಳ ಮನಸ್ಸೂ ಆಕ್ರಮಣಶೀಲವಾಗುತ್ತದೆ. ಸಣ್ಣಪುಟ್ಟ ವಿಚಾರಕ್ಕೂ ಕೋಪ, ಕಡುಕೋಪ. ’ಯಾವಾಗಲೂ ಓದ್ಬೇಕಾ? ಆಟ ಆಡಬಾರದಾ?‘ ಎನ್ನುವ ಮಾರುತ್ತರ. ಗಂಟೆಗಟ್ಟಲೆ ಗೇಮ್ ಆಡುವುದರ ಅಡ್ಡಪರಿಣಾಮ ಇವರಿಗೆ ಗೊತ್ತೇ ಆಗುತ್ತಿಲ್ಲ. ’ಮಗನೆ, ನಿನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೋ, ಎಷ್ಟು ಸೊರಗಿದೆ. ಕಣ್ಣುಗಳು ದಣಿದು ಹೋಗಿವೆ. ಮುಖ ಕಳೆಗುಂದಿದೆ. ದೇಹದ ತೂಕ ಹೆಚ್ಚಾಗುತ್ತಿದೆ ಎಂದು ಪ್ರೀತಿಯಿಂದ ಅಮ್ಮನೋ, ಅಜ್ಜಿಯೋ ಹೇಳಿದರೆ, ಅದಕ್ಕೂ ಸಿಡುಕು.ಇದರ ಪರಿಣಾಮ ಆರೋಗ್ಯದ ಮೇಲೆ ಆಗುತ್ತಿರುವುದು ಹೆತ್ತವರಿಗೆ ಗೊತ್ತಾಗುತ್ತದೆ. ಆದರೆ, ಮಕ್ಕಳಿಗೆ ಮಾತ್ರ ಗೇಮ್‌ ಅಂದ್ರೆ ಊಟ, ನಿದ್ರೆ ಏನೂ ಬೇಡ.

ಕಲಿಕೆಯಲ್ಲಿ ಜಾಣನಾಗಿದ್ದ ಹುಡುಗ ದಿನಗಳು ಕಳೆದಂತೆ ಹಿಂದುಳಿಯುತ್ತಾನೆ. ಹೋಂ ವರ್ಕ್‌ ರಾಶಿಯಾಗುತ್ತಲೇ ಇರುತ್ತದೆ. ಅಭ್ಯಾಸದಲ್ಲಿ ನಿರಾಸಕ್ತಿ ಹೆಚ್ಚಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಅಭ್ಯಾಸಕ್ಕೆ ಕುಳಿತರೂ ನಡುವೆ ಗೇಮ್‌ ಆಡುವ ಮನಸ್ಸು.
ಇದರಿಂದಾಗಿ ಮಕ್ಕಳು ತಮಗೆ ಗೊತ್ತಿಲ್ಲದಂತೆ ಅಪಮೌಲ್ಯಗಳಿಗೆ ಮೆಲ್ಲಗೆ ಜಾರಿಕೊಳ್ಳುತ್ತಾರೆ. ಥ್ರಿಲ್‌ ಕೊಡುವ ಹೊಡಿ, ಬಡಿ, ಕೊಲ್ಲು ಎನ್ನುವ ಪದಪುಂಜಗಳು ಮಕ್ಕಳ ಎಳೆಯ ಮನಸ್ಸಲ್ಲಿ ಸಂವೇದನೆಯನ್ನೇ ಕೊಂಡುಬಿಡುತ್ತವೆ. ಗೇಮ್‌ಗೆ ಸಂಬಂಧಿಸಿದ ಖರ್ಚಿಗಾಗಿ ಅಪ್ಪ–ಅಮ್ಮನ ಬಳಿ ಸುಳ್ಳು ಹೇಳುವುದು, ಕದಿಯುವುದು ರೂಢಿ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಮೊಬೈಲ್‌ ಕೊಡದಿದ್ದರೆ ಮನೆಬಿಟ್ಟು ಹೋಗುವ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಾರೆ. ಬೆದರಿಕೆಗೆ ಮಣಿದ ಪೋಷಕರು ’ಹತ್ತು ನಿಮಿಷ ಅಷ್ಟೇ ಕೊಡೋದು‘ ಎಂದರೆ, ’ಓಕೆ‘ ಎನ್ನುತ್ತಾರೆ. ಮೊಬೈಲ್‌ ಕೈಗೆ ಸಿಕ್ಕ ಮೇಲೆ ಲೆವೆಲ್‌ ಮೇಲೆ ಲೆವೆಲ್‌ ಮಾಡುತ್ತಾ, ಗಂಟೆಗಳು ಕಳೆದರೂ ಗೇಮ್‌ ಬಿಡುವುದಿಲ್ಲ.

’ಮಕ್ಕಳು ಮೊಬೈಲ್‌ ಗೇಮ್‌ ಆಡುವುದು ತಪ್ಪೇ ಅಥವಾ ಸರಿಯೇ’ ಈ ಪ್ರಶ್ನೆಗೆ ಉತ್ತರ ಮಿತಿಯಲ್ಲಿದ್ದರೆ ಎಲ್ಲವೂ ಸರಿಯೇ. ಮಿತಿಮೀರಿದಾಗ ಮಾತ್ರ ಎಲ್ಲವೂ ತಪ್ಪೇ. ಅಳತೆಮೀರಿ ತಿಂದರೆ ಅಜೀರ್ಣ, ವಾಂತಿ ಆಗಲೇಬೇಕು. ಅದೇ ರೀತಿ ಈ ಮೊಬೈಲ್‌ ಗೇಮ್‌. ಚಾರುಕೀರ್ತಿ, ರಂಜನ್‌ ಹಾಗೂ ಪ್ರಣವ್ ರೀತಿ ಹೊತ್ತುಗೊತ್ತಿಲ್ಲದಂತೆ, ಹೊರಗಿನ ಜಗತ್ತಿನಿಂದ ದೂರು ಉಳಿದರೆ ಆಪತ್ತು ಗ್ಯಾರಂಟಿ.

ಆದ್ದರಿಂದ ಪೋಷಕರು ಮಕ್ಕಳ ಕೈಗೆ ಮೊಬೈಲ್‌ ಎಷ್ಟು ಹೊತ್ತು ಕೊಡಬೇಕು ಎನ್ನುವುದನ್ನು ನಿರ್ಧರಿಸಬೇಕು. ಅವರ ಕೈಗೆ ಮೊಬೈಲ್‌ ಕೊಟ್ಟ ಮೇಲೆ ಕಣ್ಗಾವಲು ಇಡಬೇಕು. ಇಲ್ಲದೇ ಹೋದರೆ ಮಕ್ಕಳ ಭವಿಷ್ಯವನ್ನು ಪೋಷಕರೇ ಹಾಳು ಮಾಡಿದಂತೆ ಆಗುತ್ತದೆ.     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು