ಶನಿವಾರ, ಸೆಪ್ಟೆಂಬರ್ 18, 2021
26 °C

ಹಿರಿಯರ ವಿವೇಕದಲ್ಲಿದೆ ಮಕ್ಕಳ ಆರೋಗ್ಯ

ಡಾ. ವಿಜಯಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

Prajavani

‘ಮಕ್ಕಳ ಸ್ಕೂಲ್ ಮನೇಲಲ್ವೇ’ ಅಂದ್ರು ಕೈಲಾಸಂರವರು. ಅದು ಸಂಪೂರ್ಣವಾಗಿ ನಿಜವಾಗಿ ಅನುಸರಿಸುವ ಕಾಲ ಈಗ.  ಮಕ್ಕಳನ್ನು ಮನೆ ಬಿಟ್ಟು ಎಲ್ಲಿಗೂ ಹೊರಗೆ ಕಳುಹಿಸಬೇಡಿ, ಶಾಲೆಗೂ ಸಹಿತ – ಎಂದು ವಿಜ್ಞಾನಿಗಳಿಂದ ಹಿಡಿದು ರಾಜಕಾರಣಿಗಳವರೆಗೂ ಹೇಳುತ್ತಿದ್ದಾರೆ. ಪಾಠಕ್ಕೆ ಬೇಡ, ಆಟಕ್ಕಾದರೂ ಕರೆದುಕೊಂಡು ಹೋಗೋಣ ಎಂದರೆ ಅಟದ ಮೈದಾನಗಳೇ ಬಾಗಿಲು ಮುಚ್ಚಿ ಕೂತಿವೆ. ಇದರಿಂದಾಗಿ ಕೈಲಾಸಂ ಹೇಳಿದ್ದು ಸಂಪೂರ್ಣ ಸತ್ಯ ಆಗುತ್ತಿರುವಂತಿದೆ.

ಹಿಂದೆ ಪ್ರತಿಯೊಂದು ಕುಟುಂಬಕ್ಕೂ ಅದರದ್ದೇ ಆದ ವೃತ್ತಿ ಇತ್ತು. ಹಾಗಾಗಿ ಮನೆಯಲ್ಲಿ ಇದ್ದರೂ ಕೂಡ ವೃತ್ತಿಕಲಿಕೆಗೆ ಏನೂ ತೊಂದರೆ ಆಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಆದ್ದರಿಂದ ಪೋಷಕರಿಗೂ ಮಕ್ಕಳನ್ನು ಮನೆಯಲ್ಲೇ ಭವಿಷ್ಯಕ್ಕಾಗಿ ತಯಾರು ಮಾಡುವುದು ಹೇಗೆ ಎನ್ನುವ ಚಿಂತೆ. ಇದಕ್ಕಾಗಿಯೇ ಬೇರೆ ಬೇರೆ ರೀತಿಯ ಕಲಿಕಾ ವಿಧಾನಗಳು ಬಂದರೂ ಅದರಲ್ಲಿ ನುರಿತವರೇ ತರಬೇತಿ ಕೊಡಬೇಕಾದಂತಹ ಪರಿಸ್ಥಿತಿ. ಈಗ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ತಂದೆ ತಾಯಿಯರೇ ತರಬೇತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳ ವ್ಯಕ್ತಿತ್ವ ವಿಕಸನ ಎನ್ನುವಾಗ ಕೇವಲ ಬೌದ್ಧಿಕ ಬೆಳವಣಿಗೆಯಲ್ಲ; ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವೂ ಸೇರಿದೆ. ದೃಢ ಶರೀರಕ್ಕೆ ಆಹಾರ–ವಿಹಾರಗಳು ಕಾರಣವಾದರೆ, ಮನಸ್ಸಿನ ಬೆಳವಣಿಗೆಗೆ ಆಚಾರ–ವಿಚಾರಗಳು ಕಾರಣ. ಹಾಗಾಗಿ ಈಗ ಪೋಷಕರ ಜವಾಬ್ದಾರಿ ಹೆಚ್ಚು. ಮಕ್ಕಳು ಹೇಳಿಕೊಟ್ಟದ್ದನ್ನು ಅನುಸರಿಸುವುದಕ್ಕಿಂತ ನೋಡಿ ತಿಳಿದು ಅನುಸರಿಸುವುದೇ ಹೆಚ್ಚು. ಹಾಗಾಗಿ ಪೋಷಕರು, ಹಿರಿಯರು ಮನೆಯಲ್ಲಿ ಶಿಸ್ತಿನಿಂದಿರಬೇಕಾದ್ದು ಅತ್ಯಂತ ಆವಶ್ಯಕ.

ಮನೆಯಲ್ಲೇ ಇರುತ್ತೇವೆ ಎಂದು ಬೆಳಗ್ಗೆ ಹೆಚ್ಚು ಹೊತ್ತಿನವರೆಗೂ ಮಲಗಿರುವುದು, ಮಕ್ಕಳನ್ನು ಮಲಗಲು ಬಿಡುವುದು – ಹೀಗೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಕುಂದುತ್ತದೆ. ಆದ್ದರಿಂದ ಮಕ್ಕಳಲ್ಲಿ ವ್ಯಾಧಿಕ್ಷಮತ್ವ ಹೆಚ್ಚಿಸಲು ಮೊದಲು ಸೂರ್ಯೋದಯದ ಹೊತ್ತಿಗೆ ಏಳುವುದನ್ನು ಅವರಿಗೆ ಅಭ್ಯಾಸ ಮಾಡಿಸಬೇಕು. ನಿದ್ರೆ ಕಡಿಮೆಯಾದರೆ ಎಷ್ಟು ತೊಂದರೆ ಆಗುತ್ತದೆಯೋ, ಅತಿ ನಿದ್ರೆ ಅದಕ್ಕಿಂತಲೂ ಹೆಚ್ಚು ತೊಂದರೆಯನ್ನು ಕೊಡುತ್ತದೆ. ಬಾಲ್ಯದಲ್ಲಿಯೇ ಥೈರಾಯ್ಡ್, ಮಧುಮೇಹ ಇತ್ಯಾದಿ ರೋಗಗಳ ಉತ್ಪತ್ತಿಗೆ ಅದು ಕಾರಣವಾಗುತ್ತದೆ.

ಕೋವಿಡ್‌ನಿಂದ ದೂರವಿರಬೇಕೆಂದು ಅನೇಕ ಬಗೆಯ ಕಷಾಯಗಳನ್ನು ಮಕ್ಕಳಿಗೆ ಕೊಡುವುದಕ್ಕಿಂತ, ಬೆಳಗ್ಗೆ ಬೇಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಸ್ವಲ್ಪ ಹೊತ್ತು ವ್ಯಾಯಾಮ ಮಾಡಿ ಎಣ್ಣೆ ಹಚ್ಚಿ ಸ್ನಾನ ಮಾಡಿ ನಂತರ ಆಹಾರ ಸೇವಿಸುವುದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿದರೆ ಹಲವು ರೋಗಗಳಿಂದ ಅವರನ್ನು ದೂರವಿರಿಸಲು ಸಾಧ್ಯ. ವ್ಯಾಯಾಮವು ಶರೀರಬಲದೊಡನೆ ಕೆಲಸ ಮಾಡುವ ಸಾಮರ್ಥ್ಯವನ್ನೂ ಹೆಚ್ಚಿಸಿ, ಮನೋಬಲ ಇಂದ್ರಿಯ ಪಾಟವವನ್ನೂ ಹೆಚ್ಚಿಸುತ್ತದೆ.

ಅಕಾಲದಲ್ಲಿ, ಅತಿಯಾಗಿ, ಪದೇಪದೇ ಸೇವಿಸುವ ಆಹಾರದಿಂದ ಉತ್ಪನ್ನವಾಗುವ ರೋಗಗಳನ್ನು ಯಾವ ಕಷಾಯವೂ ಕಡಿಮೆ ಮಾಡಲಾಗದು. ಕಷಾಯ ಕುಡಿಯುತ್ತಿದ್ದೆ, ಕೋವಿಡ್ ಬರಲ್ಲ ನಮಗೆ – ಎನ್ನುವ ಧೋರಣೆಯಲ್ಲಿ ಆಹಾರವನ್ನು ನಿಯಮ ಮೀರಿ ಸೇವಿಸಿದರೆ ಕೋವಿಡೇತರ ಹಲವು ರೋಗಗಳ ಉತ್ಪತ್ತಿಗೆ ನಾವೇ ಕಾರಣರಾಗುತ್ತೇವೆ. ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ ಎಂದು ಅತಿಯಾಗಿ ಒಣಹಣ್ಣು, ಎಣ್ಣೆಬೀಜಗಳಾದ ಗೋಡಂಬಿ, ಬಾದಾಮಿ ಇತ್ಯಾದಿಗಳನ್ನು ಅತಿಯಾಗಿ ಸೇವಿಸಿದರೆ ಅಮ್ಲಪಿತ್ತ ಹೆಚ್ಚಾಗುತ್ತದೆ; ತೂಕ ಹೆಚ್ಚಾಗುವುದು; ಜೀರ್ಣಕ್ರಿಯೆಗೆ ಸಂಬಂಧಿಸಿದ ಇನ್ನೂ ಅನೇಕ ರೋಗಗಳ ಉತ್ಪತ್ತಿ ಆಗುತ್ತವೆ. ಸಮಯಕ್ಕೆ ಸರಿಯಾಗಿ, ನಿಯಮಿತವಾಗಿ, ಪೌಷ್ಟಿಕ ಆಹಾರವನ್ನು ಸೇವಿಸುವುದು, ಬಿಸಿ ಆಹಾರ ಸೇವಿಸುವುದು, ಆಯಾಯ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿರುವ ಆಹಾರಸೇವನೆ, ಆಯಾಯ ಋತುಗಳಲ್ಲಿ ಸಿಗುವ ಆಹಾರಪದಾರ್ಥಗಳನ್ನು ಹಿತವಾಗಿ ಮಿತವಾಗಿ ಸೇವಿಸುವುದು – ಇದನ್ನು ಹಿರಿಯರೂ ಸಹ ಪಾಲಿಸಿದರೆ ಮಕ್ಕಳು ಅದನ್ನೇ ಅನುಸರಿಸಿ ಆರೋಗ್ಯಭಾಗ್ಯವನ್ನು ಪಡೆಯುತ್ತಾರೆ. ಹೆಚ್ಚು ಆಹಾರವನ್ನು ತಯಾರಿಸಿ, ಅದನ್ನು ತಂಪುಪೆಟ್ಟಿಗೆಯಲ್ಲಿಟ್ಟು ಪದೇ ಪದೇ ಬಿಸಿಮಾಡಿ ಆಹಾರವನ್ನು ಸೇವಿಸುವುದರಿಂದ ದೈಹಿಕ ಆರೋಗ್ಯ ಹಾಳಾಗುತ್ತದೆ; ಮನಸ್ಸಿನ ಆರೋಗ್ಯವೂ ಹಾಳಾಗಿ, ಖಿನ್ನತೆಯೇ ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ.

ಶಾಲೆ ಇಲ್ಲದೆ, ಮೊಬೈಲು–ಕಂಪ್ಯೂಟರ್‌ಗಳೇ ಶಾಲೆಗಳಾಗಿರುವಾಗ ಜಾಲತಾಣಗಳಿಂದ ದೂರವಿರಿ ಎನ್ನುವುದು ದೂರದ ಮಾತೇ ಸರಿ. ಆದರೆ ಇದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡಲು, ನಿತ್ಯವೂ ಬೆಳಗ್ಗೆ ಕಣ್ಣಿಗೆ ತುಪ್ಪ ಅಥವಾ ಕೊಬ್ಬರಿಯೆಣ್ಣೆಯನ್ನು ಹಚ್ಚಿಕೊಳ್ಳುವುದು, ಮೂಗಿನ ಹೊಳ್ಳೆಗಳ ಒಳಗೆ ತುಪ್ಪ ಅಥವಾ ಕೊಬ್ಬರಿಯೆಣ್ಣೆ ಹಚ್ಚುವುದು ನೆಗಡಿಯಿಂದ ದೂರವಿರಿಸುತ್ತದೆ. ಜೊತೆಗೆ ಕಣ್ಣಿಗೆ ಮತ್ತು ಇತರೆ ಇಂದ್ರಿಯಗಳಿಗೂ ರಕ್ಷಣೆ ಕೊಡುತ್ತದೆ. ತಲೆನೋವು ಬಾರದಂತೆಯೂ ತಡೆಯುತ್ತದೆ.
ಕೊಬ್ಬರಿಯೆಣ್ಣೆ ಅಥವಾ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ, ಹಲ್ಲು ಹುಳುಕಾಗುವುದು, ವಸಡುಗಳಲ್ಲಿ ರಕ್ತಬರುವುದು, ಬಾಯಿಹುಣ್ಣುಗಳನ್ನು ತಡೆಗಟ್ಟಬಹುದು; ನಾಲಿಗೆಯ ರುಚಿ ಹಾಳಾಗದಂತೆಯೂ ಇದು ಕಾಪಾಡುತ್ತದೆ.

ಪೋಷಕರು ಜವಾಬ್ದಾರಿಯಿಂದ ವರ್ತಿಸಬೇಕು. ಆ ಮೂಲಕ, ಮನೆಯೇ ಮೊದಲ ಪಾಠಶಾಲೆ, ತಾಯಿ ತಾನೆ ಮೊದಲ ಗುರುವು – ಎನ್ನುದನ್ನು ಸಾರ್ಥಕ ಮಾಡೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು