ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಪೌಷ್ಟಿಕಾಂಶಕ್ಕೆ ಮಕ್ಕಳ ಡಬ್ಬಿಯಲ್ಲಿರಲಿ ಹಣ್ಣು

Last Updated 24 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ವರ್ಷಗಳ ನಂತರ ಮಕ್ಕಳು ಬೆನ್ನಿಗೆ ಬ್ಯಾಗ್‌ ಏರಿಸಿ ಶಾಲೆಯತ್ತ ಮುಖ ಮಾಡಿದ್ದಾರೆ. ಮನೆಯಲ್ಲೇ ಇಡೀ ದಿನ ಕಾಲ ಕಳೆಯುವಾಗ ಅಮ್ಮನ ಬೆನ್ನು ಬಿದ್ದು ನಾಲಿಗೆ ಬಯಸಿದ ತಿನಿಸುಗಳನ್ನು ಮಾಡಿಸಿಕೊಂಡು ತಿಂದವರಿಗೆ ಈಗ ಶಾಲೆಯಲ್ಲೂ ಆಗಾಗ ತಿನ್ನಬೇಕೆಂಬ ಆಸೆಯಾಗುವುದು ಸಹಜವೇ. ಆರನೇ, ಏಳನೇ ತರಗತಿ ಮಕ್ಕಳೆಂದರೆ ಆಟವಾಡುವ, ಆಟವಾಡಿ ಹಸಿವಾದಾಗ ತಿನ್ನುವ ವಯಸ್ಸು. ಇಂತಹ ಮಕ್ಕಳ ಶೈಕ್ಷಣಿಕ ಸಾಧನೆ ಅವರು ತಿನ್ನುವ ಆಹಾರ, ಅದರಲ್ಲಿರುವ ಪೌಷ್ಟಿಕಾಂಶಗಳನ್ನೂ ಅವಲಂಬಿಸಿದೆ.

ಬೆಳಗಿನ ಉಪಾಹಾರ, ಆರೋಗ್ಯಕರ ಸ್ನ್ಯಾಕ್ಸ್‌ ಜೊತೆಗೆ ಎಲ್ಲಾ ವಯಸ್ಸಿನ ಮಕ್ಕಳಿಗೆ ಮಧ್ಯಾಹ್ನ ಒಳ್ಳೆಯ ಊಟ ಕೂಡ ಅಗತ್ಯ. ಹೆಚ್ಚಿನ ಮಕ್ಕಳು ಅರ್ಧ ದಿನದ ತರಗತಿ ಮುಗಿಸಿ ಬರುತ್ತಿದ್ದರೂ, ಕೆಲವರು ಮಧ್ಯಾಹ್ನ 3 ಗಂಟೆಯವರೆಗೂ ತರಗತಿಯಲ್ಲಿರುತ್ತಾರೆ. ಹೀಗಾಗಿ ಅಂಥವರಿಗೆ ಹೆಚ್ಚು ಶಕ್ತಿ, ಉತ್ಸಾಹ ಭರಿಸುವ ಊಟದ ಡಬ್ಬಿ ಅವಶ್ಯಕ. ಅದರ ಜೊತೆ ಕೆಲವು ಸ್ನ್ಯಾಕ್ಸ್‌, ಹಣ್ಣು, ಒಣ ಹಣ್ಣುಗಳನ್ನು ಕಟ್ಟಿಕೊಟ್ಟರೆ ಪಾಠದ ಕಡೆ ಲಕ್ಷ್ಯ ವಹಿಸಲು ಸಹಕಾರಿ.

ಹಣ್ಣುಗಳು

ನಿಮ್ಮ ಮಕ್ಕಳು ಹಣ್ಣುಗಳ ಸೇವನೆಯನ್ನು ಇಷ್ಟಪಟ್ಟರೆ ಸದ್ಯ ಮಾರುಕಟ್ಟೆಯಲ್ಲಿ ಸ್ಥಳೀಯವಾಗಿ ದೊರಕುವ ಹಣ್ಣುಗಳನ್ನು ಬ್ಯಾಗ್‌ಗೆ ಹಾಕಿಕೊಡಿ. ಸ್ಥಳೀಯ ಬಾಳೆಹಣ್ಣಿನ ಜೊತೆ ಮೋಸಂಬಿ, ಸೇಬು ಈಗ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ. ಬಾಳೆಹಣ್ಣಿನಲ್ಲಿರುವ ಪೋಟ್ಯಾಶಿಯಂ ಬಹು ಬೇಗ ಶಕ್ತಿಯನ್ನು ತುಂಬುತ್ತದೆ. ಈ ಹಣ್ಣುಗಳಲ್ಲಿರುವ ವಿಟಮಿನ್‌, ಆ್ಯಂಟಿಆಕ್ಸಿಡೆಂಟ್‌ಗಳು ಪಾಠದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುವವು. ಜೊತೆಗೆ ಸ್ಮರಣ ಶಕ್ತಿ ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು.

ಈ ಹಣ್ಣುಗಳನ್ನು ಬ್ಯಾಗ್‌ನಲ್ಲಿ ಒಯ್ಯುವುದೂ ಸುಲಭ.

ಇನ್ನೆರಡು ತಿಂಗಳು ಕಳೆದರೆ ಕಿತ್ತಳೆ ಹಣ್ಣುಗಳೂ ಬರಲಾರಂಭಿಸುತ್ತವೆ. ಇದರಿಂದ ವಿಟಮಿನ್‌ ಸಿ ದೇಹಕ್ಕೆ ಸೇರುವುದಲ್ಲದೇ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು. ಈ ಕೋವಿಡ್‌ ಸಂದರ್ಭದಲ್ಲಂತೂ ಮಕ್ಕಳಿಗೆ ಇದು ಹೆಚ್ಚು ಮುಖ್ಯ. ಹಾಗೆಯೇ ಶೀತ, ಫ್ಲೂನಂತಹ ಸಮಸ್ಯೆಗಳನ್ನೂ ಈ ಸೂಕ್ಷ್ಮ ಪೌಷ್ಟಿಕಾಂಶಗಳಿಂದ ಎದುರಿಸಬಹುದು.

ಈ ಕಾಲದಲ್ಲಿ ಸ್ಥಳೀಯವಾಗಿ ಕಿತ್ತಳೆ ಹಣ್ಣು ಸಿಗದಿದ್ದರೂ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ವಿದೇಶಿ ಕಿತ್ತಳೆ ಹಣ್ಣುಗಳು ಸಿಗುತ್ತವೆ. ಅವುಗಳ ದರ ಕೈಗೆಟುಕದಿದ್ದರೆ ಸಕ್ಕರೆ ಮತ್ತು ಪ್ರಿಸರ್ವೇಟಿವ್‌ ಸೇರಿಸದ, ಶೇಕಡಾ ನೂರರಷ್ಟು ಕಿತ್ತಳೆ ರಸವಿರುವ ಟೆಟ್ರಾ ಪ್ಯಾಕ್‌ ಮಕ್ಕಳಿಗೆ ನೀಡಬಹುದು.

ಮಕ್ಕಳಿಗೆ ಚಿಪ್ಸ್‌, ಕುರ್‌ಕುರೆಯಂತಹ ಅನಾರೋಗ್ಯಕರ ತಿನಿಸನ್ನು ಕೊಡುವುದಕ್ಕಿಂತ ಒಣ ಹಣ್ಣುಗಳನ್ನು ಕೊಡಿ. ಒಣ ದ್ರಾಕ್ಷಿ, ಬಾದಾಮಿ ಹಾಗೂ ವಾಲ್‌ನಟ್‌ ಸೇರಿಸಿ ಕೊಟ್ಟರೆ ಪೌಷ್ಟಿಕಾಂಶಗಳು ಹೇರಳವಾಗಿ ಸಿಗುತ್ತವೆ. ವಾಲ್‌ನಟ್‌ನಲ್ಲಿರುವ ಒಮೆಗಾದಂತಹ ಉತ್ತಮ ಕೊಬ್ಬು ಮಕ್ಕಳಿಗೆ ಹೊಟ್ಟೆ ತುಂಬಿದಂತಹ ಅನುಭವ ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವೂ ಒಮ್ಮೆಲೇ ಏರಿಳಿತ ಆಗುವುದನ್ನು ತಡೆಯುತ್ತದೆ. ಇದರಿಂದ ಹೇರಳ ನಾರಿನಾಂಶವೂ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT