ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಸ್ವಚ್ಛತೆಯೇ ಶಕ್ತಿ

–ಡಾ. ಕುಶ್ವಂತ್‌ ಕೋಳಿಬೈಲು
Published 29 ಏಪ್ರಿಲ್ 2024, 22:52 IST
Last Updated 29 ಏಪ್ರಿಲ್ 2024, 22:52 IST
ಅಕ್ಷರ ಗಾತ್ರ

ಭಾರತದಲ್ಲಿ ಪ್ರತಿ ವರ್ಷ ಸುಮಾರು ಮೂರು ಲಕ್ಷದಷ್ಟು ಮಕ್ಕಳು ವಾಂತಿ ಮತ್ತು ಭೇದಿಯಿಂದ ಸಾವನ್ನಪ್ಪುತ್ತಾರೆ. ವಾಂತಿ ಮತ್ತು ಭೇದಿಗಳು ಕಲುಷಿತ ನೀರು ಮತ್ತು ಆಹಾರಸೇವನೆಯಿಂದ ಉಂಟಾಗುವ ಕಾರಣ ಈ ಕಾಯಿಲೆಗಳು ಹೆಚ್ಚಾಗಿದ್ದಲ್ಲಿ ಅದು ಆ ದೇಶದ ಆರೋಗ್ಯವ್ಯವಸ್ಥೆ ಮತ್ತು ಶುಚಿತ್ವದಲ್ಲಿನ ಲೋಪದೋಷಗಳಿಗೆ ಹಿಡಿದ ಕೈಗನ್ನಡಿಯಾಗುತ್ತದೆ.

ಪ್ರಪಂಚದ ಮುಂದುವರಿದ ದೇಶಗಳಲ್ಲಿ ಆರೋಗ್ಯವ್ಯವಸ್ಥೆ, ನೀರಿನ ಸರಬರಾಜು, ಶೌಚಾಲಯ ಮತ್ತು ಶುಚಿತ್ವದ ವ್ಯವಸ್ಥೆಯು ಉತ್ತಮವಾಗಿರುವ ಕಾರಣ ಅಲ್ಲಿನ ಜನರು, ಮುಖ್ಯವಾಗಿ ಮಕ್ಕಳು, ವಾಂತಿ ಭೇದಿಯ ಕಾಯಿಲೆಗೆ ಕಡಿಮೆ ತುತ್ತಾಗುತ್ತಾರೆ.

ಸುಮಾರು ಇನ್ನೂರು ವರ್ಷಗಳಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕಾಲೆರಾ ಕಾಯಿಲೆಯು ಕಲುಷಿತವಾದ ನೀರಿನಿಂದ ಬರುತ್ತದೆಯೆಂಬುದನ್ನು ವಿಜ್ಞಾನಿ ಜಾನ್ ಸ್ನೋ ಕಂಡುಹಿಡಿದ ನಂತರ ಶುದ್ಧವಾದ ನೀರು ಮತ್ತು ಆರೋಗ್ಯಕ್ಕೆ ಇರುವ ನಂಟಿನ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿತು.

ವಾಂತಿ ಮತ್ತು ಭೇದಿಯನ್ನು ಉಂಟುಮಾಡುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ನೀರು ಮತ್ತು ಆಹಾರದ ಮೂಲಕ ಜನರ ದೇಹವನ್ನು ಪ್ರವೇಶ ಮಾಡುತ್ತವೆ. ಅವು ಮನುಷ್ಯನ ಹೊಟ್ಟೆ ಮತ್ತು ಕರುಳಿನಲ್ಲಿ ಸೋಂಕನ್ನು ಉಂಟುಮಾಡಿ ನೀರು ಮತ್ತು ಆಹಾರ ಜೀರ್ಣವಾಗದಂಥ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ಕರುಳಿನೊಳಗೆ ನೀರು ಮತ್ತು ಲವಣಾಂಶಗಳು ರಕ್ತವನ್ನು ಸೇರದೆ ಉಳಿದುಕೊಂಡರೆ ಅವು ವಾಂತಿ ಮತ್ತು ಭೇದಿಯ ರೂಪದಲ್ಲಿ ದೇಹದಿಂದ ಹೊರಹಾಕಲ್ಪಡುತ್ತವೆ. ಕೆಲವು ಕೀಟಾಣುಗಳು ಕರುಳಿನಲ್ಲಿ ಗಾಯವನ್ನು ಮಾಡಿದರೆ ಭೇದಿಯಲ್ಲಿ ರಕ್ತವೂ ಹೊರಹೋಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದ ರೋಗಿಯ ದೇಹದಲ್ಲಿ ನೀರ ಮತ್ತು ಲವಣದ ಅಂಶದ ಕೊರತೆಯುಂಟಾಗಿ ದೇಹ ನಿಸ್ತೇಜವಾಗುತ್ತದೆ. ದೇಹದಿಂದ ಹೊರಹೋಗುತ್ತಿರುವ ನೀರು ಮತ್ತು ಲವಣದ ಪ್ರಮಾಣವು ಅತಿಯಾದಲ್ಲಿ ಮತ್ತು ರೋಗಿಗೆ ಡ್ರಿಪ್ಸ್ ಅಥವಾ ಬಾಯಿಯ ಮೂಲಕ ನೀರು ಮತ್ತು ಲವಣಗಳನ್ನು ನೀಡಲು ವಿಳಂಬವಾದರೆ ವಾಂತಿ–ಭೇದಿಗಳಿಂದ ಪ್ರಾಣಹಾನಿಯೂ ಆಗಬಹುದು. ಚಿಕ್ಕ ಮಕ್ಕಳು ತಮಗೆ ಬಾಯಾರಿದಾಗ ಅವರೇ ನೀರನ್ನು ಕೇಳಿ ಕುಡಿಯುವ ಸಾಧ್ಯತೆಗಳು ಕಡಿಮೆ. ಅವರ ದೇಹದಲ್ಲಿ ನೀರಿನ ಕೊರತೆಯುಂಟಾದಾಗ ಕಂಡುಬರುವ ಸಮಸ್ಯೆಗಳನ್ನು ಎದುರಿಸುವ ಶಕ್ತಿಯೂ ಕಡಿಮೆಯಿರುತ್ತದೆ. ಈ ಕಾರಣಗಳಿಂದಾಗಿ ವಾಂತಿ–ಭೇದಿಯ ಕಾಯಿಲೆಯು ಮಕ್ಕಳಲ್ಲಿ ಹೆಚ್ಚಿನ ಸಾವು–ನೋವನ್ನು ಉಂಟುಮಾಡುತ್ತದೆ.

ಭಾರತದಲ್ಲಿ ಇನ್ನೂ ಬಯಲು ಶೌಚಾಲಯದ ಪದ್ಧತಿಯು ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದೆ. ಜನರು ಸಾಬೂನು ಬಳಸಿ ಕೈ ತೊಳೆಯುವುದನ್ನು ಗ್ರಾಮೀಣ ಭಾಗಗಳಲ್ಲಿ ಪಾಲಿಸುವುದಿಲ್ಲ. ಜನರು ಕುಡಿಯುವ ನೀರಿಗೆ ಬಳಸುವ ಕೆರೆ ಮತ್ತು ನದಿಗಳಲ್ಲಿಯೇ ಜಾನುವಾರುಗಳನ್ನು ತೊಳೆಯುತ್ತಾರೆ, ಬಟ್ಟೆಗಳನ್ನು ಒಗೆಯುತ್ತಾರೆ. ನಗರಗಳಂತೆ ಕ್ಲೋರಿನ್‌ ಬಳಸಿ ಕೀಟಾಣುಗಳನ್ನು ನಿಯಂತ್ರಿಸಿದ ನೀರು ಗ್ರಾಮೀಣ ಭಾಗಗಳಲ್ಲಿ ಸರಬರಾಜಾಗುವುದಿಲ್ಲ. ಈ ಕಾರಣಗಳಿಂದ ವಾಂತಿ–ಭೇದಿಯ ಸಮಸ್ಯೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಹಾನಗರಗಳ ‘ಸ್ಲಂ’ಗಳಲ್ಲಿಯೂ ಸೂಕ್ತ ನೀರಿನ ಸರಬರಾಜು ಮತ್ತು ಶುಚಿತ್ವವಿಲ್ಲದಿರುವ ಕಾರಣ ಅಲ್ಲಿಯೂ ವಾಂತಿಭೇದಿಯ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರಸ್ತೆಬದಿಯಲ್ಲಿ ಮಾರುವ ತಿಂಡಿ ತಿನಿಸುಗಳ ಮೇಲೆ ಕುಳಿತಿರುವ ನೊಣ ಮತ್ತು ಕೀಟಗಳು ಕೂಡ ವಾಂತಿ ಭೇದಿಯನ್ನುಂಟುಮಾಡುವ ಕೀಟಾಣುಗಳನ್ನು ಪಸರಿಸುತ್ತವೆ. ಮಾಂಸಾಹಾರ ಮತ್ತು ಚೆನ್ನಾಗಿ ಬೇಯಿಸದ ಆಹಾರದಲ್ಲಿ ಕೀಟಾಣುಗಳು ಹೆಚ್ಚು ಬೇಗ ಬೆಳೆಯುವ ಕಾರಣ ಜನರು ರಸ್ತೆ ಬದಿಯಲ್ಲಿ ಆಹಾರ ಸೇವಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಹಸಿ ತರಕಾರಿಗಳನ್ನು ಬೇಯಿಸದೆ ಸಲಾಡ್ ಮೂಲಕ ಸೇವಿಸುವವರು ತರಕಾರಿಯನ್ನು ಚೆನ್ನಾಗಿ ತೊಳೆಯುವುದರಿಂದ ಅದರ ಮೇಲಿರುವ ಕೀಟಾಣುಗಳ ಜೊತೆಗೆ ತರಕಾರಿಗೆ ಅಂಟಿರುವ ರಾಸಾಯನಿಕಗಳೂ ಹೊಟ್ಟೆಗೆ ಹೋಗುವುದನ್ನು ತಡೆಯಬಹುದು. ನವಜಾತ ಶಿಶುಗಳ ಹೊಟ್ಟೆ ಮತ್ತು ಕರುಳಿನಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಿರುವ ಕಾರಣ ಮೊದಲ ಆರು ತಿಂಗಳು ತಾಯಿಯ ಹಾಲನ್ನು ಮಾತ್ರ ಕುಡಿಸಬೇಕು. ವಾಂತಿ ಭೇದಿಯ ಸಮಸ್ಯೆಯಿಂದ ಆಗ ಶಿಶುವನ್ನು ಪಾರುಮಾಡಬಹುದು.

‘ರೋಟಾ ವೈರಸ್’ ಒಂದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಮಾರಣಾಂತಿಕ ವಾಂತಿ–ಭೇದಿಯನ್ನು ಉಂಟು ಮಾಡುತ್ತಿತ್ತು. ಆದರೆ ಮಗುವಿಗೆ ಮೊದಲ ಆರು ತಿಂಗಳಲ್ಲಿ ‘ರೋಟಾ ವೈರಸ್ ಲಸಿಕೆ’ಯನ್ನು ನೀಡಲಾಗುತ್ತದೆ. ಇದರಿಂದ ಭಾರತದಂತಹ ದೇಶದಲ್ಲಿ ರೋಟಾ ವೈರಸ್ ಭೇದಿಯ ಪ್ರಮಾಣ ಬಹಳ ಇಳಿಮುಖವಾಯಿತು, ಲಕ್ಷಾಂತರ ಮಕ್ಕಳ ಜೀವ ಉಳಿಯಿತು. ವಾಂತಿ–ಭೇದಿಯಲ್ಲಿ ದೇಹದಿಂದ ನೀರಿನ ಜೊತೆಗೆ ಲವಣಗಳೂ ಹೊರ ಹೋಗುವುದರಿಂದ ‘ಓಆರ್‌ಎಸ್’ ಮಿಶ್ರಿತ ನೀರನ್ನು ಕುಡಿಸುವುದರಿಂದ ದೇಹದಲ್ಲಿನ ನೀರಿನ ಮತ್ತು ಲವಣದ ನಷ್ಟವನ್ನು ಸರಿದೂಗಿಸಬಹುದು. ‘ಓಆರ್ ಎಸ್’ ಪುಡಿಯನ್ನು ಒಂದು ಲೀಟರ್ ಕುದಿಸಿ ಆರಿಸಿದ ನೀರಿಗೆ ಬೆರೆಸಿ ನಿಯಮಿತವಾಗಿ ತೆಗೆದುಕೊಂಡಾಗ ದೇಹಕ್ಕೆ ಚೈತನ್ಯ ಬರುತ್ತದೆ. ತಮ್ಮ ಊರಿನಲ್ಲಿ ಅಥವಾ ಕೇರಿಯಲ್ಲಿ ವಾಂತಿಭೇದಿಯ ಕಾಯಿಲೆ ಕಾಣಿಸಿಕೊಂಡಾಗ ಜನರು ಕುದಿಸಿ ಆರಿಸಿದ ನೀರನ್ನು ಬಳಸಬೇಕು. ಆಗ ಈ ಕಾಯಿಲೆಯನ್ನು ಉಂಟುಮಾಡುವ ಕೀಟಾಣುಗಳು ಹರಡುವುದನ್ನು ತಡೆಯಬಹುದು. ಬಹುಪಾಲು ವಾಂತಿ–ಭೇದಿಯ ಕಾಯಿಲೆಗಳನ್ನು ವೈರಸ್‌ಗಳೇ ಉಂಟುಮಾಡುತ್ತವೆ. ಈ ಕಾರಣದಿಂದ, ವಾಂತಿ–ಭೇದಿಯಿರುವ ಎಲ್ಲ ರೋಗಿಗಳಿಗೆ ಆ್ಯಂಟಿಬಯಾಟಿಕ್ ಅಗತ್ಯವಿರುವುದಿಲ್ಲ.

ದೇಹದಿಂದ ಹೊರಹೋಗುವ ನೀರು ಮತ್ತು ಲವಣದ ಪ್ರಮಾಣವನ್ನು ‘ಓಆರ್‌ಎಸ್’ ಮೂಲಕ ನೀಡಿದಲ್ಲಿ ದೇಹವು ಶೀಘ್ರವಾಗಿ ಚೇತರಿಸಿಕೊಳ್ಳುತ್ತದೆ. ಅತ್ಯಂತ ಕಡಿಮೆ ದರದಲ್ಲಿ ಸಿಗುವ ‘ಓಆರ್‌ಎಸ್’ ಉಳಿಸಿರುವಷ್ಟು ಜೀವಗಳನ್ನು ಪ್ರಪಂಚದ ಯಾವ ದುಬಾರಿ ಔಷಧಿಗಳೂ ಉಳಿಸಿಲ್ಲ.

ಕುದಿಸಿದ ನೀರು ಮತ್ತು ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವುದರ ಜೊತೆಗೆ ಶುಚಿತ್ವದತ್ತ ಗಮನ ನೀಡಿದರೆ ವಾಂತಿ ಮತ್ತು ಭೇದಿಯ ರೋಗಗಳು ಹರಡುವುದನ್ನು ಕಡಿಮೆ ಮಾಡಬಹುದು. ಶುಚಿತ್ವವಿರುವ ಕಡೆ ಆರೋಗ್ಯ ಸಮಸ್ಯೆಗಳು ತನ್ನಿಂದ ತಾನೆ ಕಡಿಮೆಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT