ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತೋಟಿ ಇಲ್ಲದ ಮೂತ್ರ ಸಮಸ್ಯೆ

Last Updated 31 ಮೇ 2019, 19:30 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ ಮೂತ್ರ ಸಂಬಂಧಿ ಸಮಸ್ಯೆಗಳು ಸಾಮಾನ್ಯ. ಕೆಲವು ಮೂತ್ರದ ತೊಂದರೆಗಳು ಸ್ತ್ರೀ ಶರೀರ ರಚನೆಯ ವೈಶಿಷ್ಟದಿಂದ ಬಂದವುಗಳಾದರೆ, ಕೆಲವು ಇನ್ನಿತರ ಶಾರೀರಿಕ ಕಾರಣದಿಂದ ಉಂಟಾದವುಗಳು. ಇನ್ನು ಕೆಲವು ರೋಗಿಯ ಮಾನಸಿಕ ಒತ್ತಡದಿಂದ ಬಂದಂತವುಗಳು. ಹೀಗಾಗಿ ಸ್ತ್ರೀಯರ ಮೂತ್ರ ತೊಂದರೆಗಳಿಗೆ ಕಾರಣಗಳೇನು ಎಂದು ವಿಶ್ಲೇಷಿಸುವುದು ಉತ್ತಮ ಚಿಕಿತ್ಸೆಗೆ ಸೋಪಾನ.

ಅವುಗಳಲ್ಲಿ ಮೂತ್ರದ ಮೇಲೆ ನಿಯಂತ್ರಣ ಇಲ್ಲದಿರುವ (ಯೂರಿನ್‌ ಇನ್‌ಕಾಂಟಿನನ್ಸ್‌) ಸಮಸ್ಯೆಯೂ ಒಂದು. ಮೂತ್ರ ವಿಸರ್ಜಿಸುವ ಒತ್ತಡ ಇರದಿದ್ದರೂ ಮೂತ್ರವನ್ನು ತಡೆಹಿಡಿಯಲು ಕಷ್ಟವಾಗುವುದು, ಕೆಲವೊಮ್ಮೆ ಮೂತ್ರ ಮಾಡಿದ ಬಳಿಕವೂ ಒಂದೆರಡು ಹನಿ ಮತ್ತೆ ಬರುತ್ತಾ ಇರುತ್ತದೆ. ಈ ತೊಂದರೆ ಇದ್ದವರಿಗೆ ಕೆಮ್ಮು, ಸೀನು, ಬಿಕ್ಕಳಿಕೆ ಮುಂತಾದ ಸಹಜ ಒತ್ತಡದಿಂದಲೂ ಮೂತ್ರವು ಜಾರುವುದು. ಸಾಮಾನ್ಯವಾಗಿ ಹೆರಿಗೆ ಆದ ನಂತರ ಇದು ಕೆಲವು ದಿನಗಳ ಕಾಲ ಕಾಣಿಸಿಕೊಳ್ಳುತ್ತದೆ. ಋತುಬಂಧ ಹೊಂದಿದ ಸ್ತ್ರೀಯರಲ್ಲಿ, ಗರ್ಭಕೋಶ / ಮೂತ್ರಕೋಶ ಜಾರಿರುವ ಮಹಿಳೆಯರಲ್ಲಿ ಇದು ಸಾಮಾನ್ಯ.

ಕೆಲವು ಮಹಿಳೆಯರಿಗೆ ಓಡುವಾಗ, ಕೆಮ್ಮುವಾಗ, ಸೀನುವಾಗ ಮೂತ್ರದ ಮೇಲೆ ಹತೋಟಿ ಇರದಿದ್ದರೆ, ಇನ್ನು ಕೆಲವರಿಗೆ ತಕ್ಷಣವೇ ಅನಿಯಂತ್ರಿತವಾಗಿ ಮೂತ್ರ ಹೋಗುವ ಸಂಭವವಿರುತ್ತದೆ. ಮತ್ತೆ ಕೆಲವು ಮಹಿಳೆಯರಿಗೆ ಎರಡೂ ಲಕ್ಷಣಗಳು ಇರಬಹುದು. ಇಂತಹ ಸಮಸ್ಯೆ ಇದ್ದವರಿಗೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಿರಲಿ, ತಮ್ಮ ಕುಟುಂಬದಲ್ಲೇ ಮುಜುಗರ ಎದುರಿಸುವ ಪ್ರಸಂಗ ಬರುತ್ತದೆ.

ಪದೇ ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ. ಈ ತೊಂದರೆಯನ್ನು ನಿರ್ಲಕ್ಷಿಸಿದರೆ ನಿಧಾನವಾಗಿ ಹೆಚ್ಚಿನ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಿ ಆಯುರ್ವೇದ ಚಿಕಿತ್ಸೆ ತೆಗೆದುಕೊಂಡರೆ ಖಂಡಿತ ಗುಣಮುಖವಾಗುತ್ತದೆ.

ಆಯುರ್ವೇದದಲ್ಲಿ ಈ ಸಮಸ್ಯೆಗೆ ಮೂತ್ರ ನಿಗ್ರಹ ತೊಂದರೆ ಎಂದು ಕರೆಯುತ್ತಾರೆ. ಇದೊಂದು ವಾತ ರೋಗವಾಗಿದ್ದು ಅಪಾನ ವಾಯು (ವಾತದ ಒಂದು ಪ್ರಕಾರ) ಸಮಸ್ಯೆಯಿಂದ ಬರುತ್ತದೆ. ಇದರ ಬಗ್ಗೆ ಆಯುರ್ವೇದ ಸಂಹಿತೆಯಲ್ಲಿ ಅಪಾರವಾದ ಮಾಹಿತಿಗಳಿವೆ ಮತ್ತು ಚಿಕಿತ್ಸೆಯು ಕೂಡ ಅಷ್ಟೇ ಫಲಕಾರಿಯಾಗಿದೆ.

ಆಯುರ್ವೇದ ಚಿಕಿತ್ಸೆ

ಅಪಾನವಾಯು ದೋಷವಿರುವುದರಿಂದ ಅದನ್ನು ಸರಿ ಮಾಡುವುದೇ ಈ ತೊಂದರೆಗೆ ಇರುವ ಪರಿಹಾರ.

ಧನ್ವಂತರಿ ತೈಲ ಅಥವಾ ಯಾವುದಾದರೂ ವಾತಹರ ತೈಲದಿಂದ ಕಿಬ್ಬೊಟ್ಟೆ ಭಾಗ ಮಸಾಜ್ ಮಾಡಿ ನಂತರ ವಾತಹರ ಕಷಾಯಗಳಿಂದ (ದಶಮೂಲ, ಧನ್ವಂತರಿ, ಎರಂಡ ಮುಂತಾದವುಗಳು), ಧಾನ್ಯಾಮ್ಲ , ನಿರ‍್ಗೂಂಡಿ ಪತ್ರ ಭಾಷ್ಪ ಸ್ವೇದ, ಅವಗಾಹ ಸ್ವೇದ ಕೊಡುವುದರಿಂದ ಈ ಮೂತ್ರ ತೊಂದರೆಯನ್ನು ಹತೋಟಿಗೆ ತರಬಹುದು.

ಆಮಲಕಿ ಚೂರ್ಣದ ಕಷಾಯ ಅಥವಾ ಸ್ವರಸದ ಸೇವನೆಯನ್ನು ದಿನನಿತ್ಯ ಮಾಡುವುದು ತುಂಬಾ ಪರಿಣಾಮಕಾರಿಯಾಗಿದೆ. ಸುಕುಮಾರ ಕಷಾಯ, ಬಲಾಮೂಲ ಕ್ವಾಥ, ಚಂದ್ರಪ್ರಭಾ ವಟಿ, ಅಶ್ವಗಂಧ ಚೂರ್ಣ ಮುಂತಾದವುಗಳನ್ನು ಆಯುರ್ವೇದ ವೈದ್ಯರ ಸಲಹೆಯಂತೆ ನಿಯಮಿತವಾಗಿ ತೆಗೆದುಕೊಳ್ಳುತ್ತಾ ಬಂದರೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು.

ಇವೆಲ್ಲದರ ಜೊತೆಜೊತೆಗೆ ಸೂರ್ಯನಮಸ್ಕಾರ, ಉತ್ಕಟಾಸನ, ಪವನಮುಕ್ತಾಸನ, ಮೂಲ ಬಂಧ ಮೊದಲಾದವುಗಳನ್ನು ತಪ್ಪದೆ ಅಭ್ಯಾಸ ಮಾಡಬೇಕು. ಪ್ರಾಣಾಯಾಮ, ಧ್ಯಾನವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಬೇರು ಸಹಿತ ಈ ಸಮಸ್ಯೆಯನ್ನು ವಾಸಿಮಾಡಬಹುದು. ಎಲ್ಲಕ್ಕಿಂತ ಮುಖ್ಯವಾದದ್ದು ಜೀವನಶೈಲಿಯಲ್ಲಿ ಬದಲಾವಣೆ.

ಮೂತ್ರದ ಹರಿವನ್ನು ಹತೋಟಿಗೆ ತರಲು ತುಂಬಾ ಒಳ್ಳೆಯ ವ್ಯಾಯಾಮ ಅಂದರೆ ಕೆಗೆಲ್ ವ್ಯಾಯಾಮ. ಇದನ್ನು ವೈದ್ಯರ ಸಲಹೆಯಂತೆ ಸರಿಯಾದ ಕ್ರಮದಲ್ಲಿ 15 ನಿಮಿಷಗಳ ಕಾಲ ದಿನನಿತ್ಯ 2 ಸಲ ಮಾಡಿದರೆ ಖಂಡಿತವಾಗಿಯೂ ಮೂತ್ರಕೋಶದ ಸುತ್ತ ಇರುವ ಮಾಂಸಖಂಡಗಳಿಗೆ, ನರಗಳಿಗೆ, ಪೇಶಿಗಳಿಗೆ ಶಕ್ತಿ ದೊರಕುವುದಲ್ಲದೇ, ಮೂತ್ರಧಾರಣೆ ಸ್ವಾಭಾವಿಕವಾಗಿ ಆಗುವಂತೆ ಮಾಡುತ್ತದೆ. ಯಾವುದೆ ದುಗುಡ, ಸಂಕೋಚ, ತಳಮಳವಿಲ್ಲದೆ ಮೂತ್ರ ಹತೋಟಿಯಿಲ್ಲದ ಮಹಿಳೆಯರು ತೊಂದರೆ ಇದೆ ಎಂದು ತಿಳಿದ ತಕ್ಷಣವೇ ಹತ್ತಿರದ ವೈದ್ಯರ ಸಲಹೆ ಮತ್ತು ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ.

(ಲೇಖಕಿ ಆಯುರ್ವೇದ ವೈದ್ಯೆ)

***

ಕಾರಣಗಳು

* ಪದೇ ಪದೇ ಮೂತ್ರದ ಸೋಂಕಿನಿಂದ.

* ಮೂತ್ರ ಹಿಡಿದಿಟ್ಟುಕೊಳ್ಳುವ ಮಾಂಸಖಂಡಗಳ, ಪೇಶಿಗಳ, ನರಗಳ ದೌರ್ಬಲ್ಯ.

* ಮಾನಸಿಕ ಒತ್ತಡ , ಭಯ, ಆತಂಕ.

* ತೀವ್ರ ಮಲಬದ್ಧತೆಯ ಸಮಸ್ಯೆ ಇರುವವರಿಗೆ.

* ತುಂಬಾ ದಪ್ಪ ಇರುವವರಲ್ಲಿ.

* ಬೆನ್ನು ಹುರಿ ಹಾಗೂ ಬೆನ್ನು ಮೂಳೆಯ ಡಿಸ್ಕ್‌ ಸಮಸ್ಯೆ ಇದ್ದವರಲ್ಲಿ, ಶಸ್ತ್ರಚಿಕಿತ್ಸೆಯಿಂದ ಗರ್ಭಕೋಶ ತೆಗೆದ ಸಂದರ್ಭಗಳಲ್ಲಿ.

* ಮೂತ್ರ, ಮಲವನ್ನು ಹಿಡಿದಿಟ್ಟುಕೊಂಡರೆ.

* ಕೆಫಿನ್ ಪದಾರ್ಥಗಳ ಅತಿಯಾದ ಸೇವನೆಯಿಂದ.

* ಗರ್ಭಧಾರಣೆ, ಪ್ರಸೂತಿ ಅವಸ್ಥೆಯಲ್ಲಿರುವ ಮಹಿಳೆಯರಲ್ಲಿ.

* ಯಾವಾಗಲೂ ನಿದ್ರೆಗೆ ಮತ್ತು ಮಲಬದ್ಧತೆಗೆ ಔಷಧಿಗಳನ್ನು, ನೋವು ನಿವಾರಕ ಔಷಧಿಗಳನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

* ಮಹಿಳೆಯರ ಹಾರ್ಮೋನ್‌ ಏರುಪೇರು.

* ವಯಸ್ಕರಲ್ಲಿ, ಮುಟ್ಟು ನಿಲ್ಲುವ ಸಮಯದಲ್ಲಿ ಅಥವಾ ಮುಟ್ಟು ನಿಂತ ಮೇಲೆ, ಮೂತ್ರದ ಜನ್ಮಜಾತ ಕಾಯಿಲೆಗಳಿದ್ದರೆ, ನರಗಳ ಆಘಾತದಿಂದ, ಪಾರ್ಶ್ವವಾಯು ರೋಗಿಗಳಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT