ಮಂಗಳವಾರ, ನವೆಂಬರ್ 24, 2020
19 °C

ಕೊರೊನಾ ಒಂದಿಷ್ಟು ತಿಳಿಯೋಣ: ಕೊರೊನಾ ಚೇತರಿಕೆ ನಂತರದ ಸಮಸ್ಯೆಗಳು, ಪರಿಹಾರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇಂತಹ ಕೆಲವರು ರೋಗದ ಪರಿಣಾಮಗಳನ್ನು ಅಂದರೆ ಹತ್ತಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್‌–19 ಪ್ರಮುಖವಾಗಿ ಶ್ವಾಸಕೋಶಗಳಿಗೆ ಹಾನಿ ಮಾಡಿದರೂ ಕೆಲವರಿಗೆ ಹೃದಯಕ್ಕೂ ತೊಂದರೆ ನೀಡುತ್ತಿದೆ. ರೋಗನಿರೋಧಕ ಶಕ್ತಿ ಕುಂದಿಸುವ ಜತೆಗೆ ಮಿದುಳಿನ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ. ಜತೆಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮೇಲೂ ಹಲವರಿಗೆ ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ಸ್ನಾಯು ಮತ್ತು ಕೀಲು ನೋವು, ಆಯಾಸ, ಸುಸ್ತು, ವರ್ಟಿಗೊ (ತಲೆ ಸುತ್ತುವುದು), ಅರಿವಿನ ತೊಂದರೆ, ಮರೆವು, ಖಿನ್ನತೆ, ಎದೆ ನೋವಿನಂತಹ ರೋಗಲಕ್ಷಣಗಳು ಕೆಲವು ವಾರದಿಂದ ತಿಂಗಳವರೆಗೆ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಆಯುಷ್‌ ವಿಭಾಗದ ವೈದ್ಯಾಧಿಕಾರಿ ಡಾ. ಪ್ರಶಾಂತ್ ಕೆ.ಬಿ.

ಕೊರೊನಾ ರೋಗ ಲಕ್ಷಣಗಳು ಸೌಮ್ಯ ಮತ್ತು ಮಧ್ಯಮ ರೀತಿಯಲ್ಲಿ ಇದ್ದ ಸಂದರ್ಭಗಳಲ್ಲಿ ವ್ಯಕ್ತಿಯ ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಬರಲು ನಾಲ್ಕರಿಂದ ಆರು ವಾರ ತೆಗೆದುಕೊಳ್ಳಬಹುದು. ಆದರೆ, ಗಂಭೀರ ರೋಗ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಶ್ವಾಸಕೋಶಕ್ಕೆ ಶಾಶ್ವತ ಹಾನಿಯಾಗುವ ಅಪಾಯವಿದೆ. ಕೊರೊನಾದಿಂದ ಅನಾರೋಗ್ಯಕ್ಕೀಡಾಗುವ ಮುಂಚಿನ ಶ್ವಾಸ
ಕೋಶದ ಕಾರ್ಯನಿರ್ವಹಣೆಗೆ ಮರಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಕೆಲವರಲ್ಲಿ ಹೃದಯದ ಉರಿಯೂತ, ಮಯೋಕಾರ್ಡೈಟಿಸ್‌ನಿಂದ ಬಳಲಿಕೆ ಕಾಣಿಸಿಕೊಳ್ಳುತ್ತಿದೆ. ಹೃದಯ ಸ್ನಾಯುವಿಗೆ ಶಾಶ್ವತ ಹಾನಿಯೂ ಆಗುತ್ತದೆ.

ನರಸಂಬಂಧಿ ಕಾಯಿಲೆ ಲಕ್ಷಣಗಳೂ ಕಾಣಿಸುತ್ತಿವೆ. ಕೆಲವರು ತಲೆ ತಿರುಗುವಿಕೆ, ತಲೆನೋವು, ಮರೆವು, ಅರಿವಿನ ದೌರ್ಬಲ್ಯ ಸೇರಿ ನರಗಳಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದು ತಾತ್ಕಾಲಿಕ ಅಥವಾ ಶಾಶ್ವತ ಸಮಸ್ಯೆಯೇ ಎ‌ನ್ನುವುದನ್ನು ಖಚಿತವಾಗಿ ಹೇಳಲು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ ಎನ್ನುತ್ತಾರೆ ಡಾ. ಪ್ರಶಾಂತ್‌.

ಕೊರೊನಾ ಕಾಯಿಲೆ ಮನುಷ್ಯನ ದೇಹದಲ್ಲಿನ ಪ್ರತಿರಕ್ಷಣಾ ಕಾಯದ ಪ್ರತಿಕ್ರಿಯೆಯನ್ನು ಕ್ಷೀಣಗೊಳಿಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ ಹಾಗೂ ಸುಲಭವಾಗಿ ಬೇರೆ ಸೋಂಕಿಗೆ ತುತ್ತಾಗುವಂತೆ ಮಾಡುತ್ತದೆ.

ಪೋಸ್ಟ್ ಕೋವಿಡ್ ಕ್ಲಿನಿಕ್‌ಗಳನ್ನು ತೆರೆಯುವುದರ ಮೂಲಕ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು