ಗುರುವಾರ , ಜನವರಿ 28, 2021
27 °C

ಕೊರೊನಾ ಬಗ್ಗೆ ಒಂದಿಷ್ಟು ತಿಳಿಯೋಣ: ಎಆರ್‌ಟಿ ಔಷಧ ತಪ್ಪದೆ ತೆಗೆದುಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೋವಿಡ್‌–19 ತಗಲುವ ಅಪಾಯ ಹೆಚ್ಚು ಎಂಬುದನ್ನು ವೈದ್ಯಕೀಯ ಸಂಶೋಧನೆಗಳು ದೃಢಪಡಿಸಿವೆ. ಸಾಮಾನ್ಯವಾಗಿ ಎಚ್‌ಐವಿ ಬಾಧಿತರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದದಂತೆ ಕಾಳಜಿ ವಹಿಸಬೇಕು. ಮುಖ್ಯವಾಗಿ ಎಚ್‌ಐವಿ ಬಾಧಿತರು ಎಆರ್‌ಟಿ (ಆ್ಯಂಟಿ ರಿಟ್ರೊವೈರಲ್ ಥೆರಪಿ) ಔಷಧಗಳನ್ನು ತಪ್ಪದೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ಉಡುಪಿ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು.

ಕೋವಿಡ್‌ ತಗಲುವ ಭಯದಿಂದ ಎಚ್‌ಐವಿ ಬಾಧಿತರು ಆಸ್ಪತ್ರೆಗೆ ಬರಲು ಹೆದರಿ ಎಆರ್‌ಟಿ ಔಷಧ ಸೇವನೆ ನಿಲ್ಲಿಸಿದರೆ ದೇಹದಲ್ಲಿ ಸಿಡಿ4 ಕಣಗಳ ಸಂಖ್ಯೆ ಕುಸಿದು, ಎಚ್‌ಐವಿ ಕಣಗಳ ಸಂಖ್ಯೆ ವೃದ್ಧಿಸುತ್ತವೆ. ಪರಿಣಾಮ ಪ್ರಾಣಕ್ಕೆ ಸಂಚಕಾರವಾಗಬಹುದು. ‌ಐಎಲ್‌ಐ ಅಂದರೆ, ಯಾವುದೇ ರೀತಿಯ ಕೆಮ್ಮು, ನೆಗಡಿ, ಜ್ವರ, ಶ್ವಾಸಕೋಶ ಸಂಬಂಧಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಎಆರ್‌ಟಿ ಕೇಂದ್ರಗಳನ್ನು ಸಂಪರ್ಕಿಸಿ ಕೋವಿಡ್‌ ಪರೀಕ್ಷೆಗೊಳಪಡಬೇಕು. ಇದರಿಂದ ಆರೋಗ್ಯ ಗಂಭೀರ ಸ್ಥಿತಿಗೆ ತಲುಪುವುದನ್ನು ತಪ್ಪಿಸಬಹುದು. ಮರಣ ಪ್ರಮಾಣವನ್ನು ತಗ್ಗಿಸಬಹುದು. 

ಹೆಚ್ಚು ಜನದಟ್ಟಣೆ ಸ್ಥಳಗಳಾದ ದೇವಸ್ಥಾನ, ಮಾರುಕಟ್ಟೆಗೆ ತೆರಳದಿದ್ದರೆ ಒಳಿತು. ಸಾರ್ವಜನಿಕರ ಸಾರಿಗೆ ಬಳಕೆ ಸುರಕ್ಷಿತವಲ್ಲ. ಇದೇ ಕಾರಣಕ್ಕೆ ಲಾಕ್‌ಡೌನ್ ಅವಧಿಯಲ್ಲಿ ಎಚ್‌ಐವಿ ಬಾಧಿತರ ಮನೆಗಳಿಗೆ ಎಆರ್‌ಟಿ ಔಷಧಗಳನ್ನು ತಲುಪಿಸಲಾಗಿತ್ತು. ಈಗಲೂ ಬಾಧಿತರು ಸಂಬಂಧಿಗಳ ಅಥವಾ ಸ್ನೇಹಿತರ ಮೂಲಕ ಔಷಧಗಳನ್ನು ಆಸ್ಪತ್ರೆಗಳಿಂದ ತರಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ಡಾ.ಚಿದಾನಂದ.

ಎಚ್‌ಐವಿ ಬಾಧಿತರಲ್ಲಿ ಅಪೌಷ್ಟಿಕತೆ ಹೆಚ್ಚಾದರೆ ಕೋವಿಡ್‌ ಮಾತ್ರವಲ್ಲ, ಇತರೆ ಸೋಂಕುಗಳು ತಗಲುವುದರಿಂದ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಬೇಕು. ಕೋವಿಡ್‌ನಿಂದ ಖಿನ್ನತೆಗೆ ಜಾರುವ ಅಪಾಯವೂ ಇರುವುದರಿಂದ ನಿತ್ಯ ವ್ಯಾಯಾಮ ರೂಢಿಸಿಕೊಂಡರೆ ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಖಿನ್ನತೆಯಿಂದ ದೂರವಿರಬಹುದು. ಎಚ್‌ಐವಿ ಬಾಧಿತರು ತಂಬಾಕು ಹಾಗೂ ಮದ್ಯಪಾನ ಮಾಡಲೇಬಾರದು. ತಂಬಾಕು ಸೇವನೆಯಿಂದ ಶ್ವಾಸಕೋಶ ಸಮಸ್ಯೆ ಉಲ್ಬಣಿಸಿ ಕೋವಿಡ್‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಮದ್ಯಪಾನದಿಂದ ಯಕೃತ್ತು ಸಮಸ್ಯೆ ಉಂಟಾಗಿ ಇತರೆ ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ದೇಶದಲ್ಲಿ ಅತಿಹೆಚ್ಚು ಎಚ್‌ಐವಿ ಬಾಧಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಸಮಾಧಾನದ ಸಂಗತಿ ಎಂದರೆ ಎಚ್‌ಐವಿಗೆ ತುತ್ತಾಗುತ್ತಿರುವವರ ಪ್ರಮಾಣ ಕುಸಿಯುತ್ತಿದೆ. ಭವಿಷ್ಯದಲ್ಲಿ ಭಾರತ ಎಚ್‌ಐವಿ ಮುಕ್ತವಾಗಬೇಕಾದರೆ ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಕೋವಿಡ್‌ನ ಈ ಸಂದರ್ಭದಲ್ಲಿ ಮಾಸ್ಕ್‌, ದೈಹಿಕ ಅಂತರ, ನಿಯಮಿತವಾಗಿ ಕೈತೊಳೆಯುವ ಹವ್ಯಾಸ ರೂಢಿಸಿಕೊಳ್ಳುವುದು ಅವಶ್ಯ ಎಂದು ಅವರು ಸಲಹೆ ನೀಡುತ್ತಾರೆ.

-ಡಾ.ಚಿದಾನಂದ ಸಂಜು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು