ಸೋಮವಾರ, ಮೇ 23, 2022
27 °C

ಕೆಮ್ಮೆಂದು‌ ‘ಕೆಮ್ಮು’ವಂತಿಲ್ಲ

ಮೇಜರ್ ಡಾ. ಕುಶ್ವಂತ್ ಕೋಳಿಬೈಲು Updated:

ಅಕ್ಷರ ಗಾತ್ರ : | |

Prajavani

ನಮ್ಮ ಶ್ವಾಸಕೋಶದ ಒಳಗೆ ದೂಳು, ನೀರು, ಎಂಜಲು ಅಥವಾ ಆಹಾರಪದಾರ್ಥಗಳು‌ ನುಸುಳದಂತೆ ತಡೆಯಲು ಪ್ರಕೃತಿ ಒಂದು ಕಾವಲುಗಾರನನ್ನು ನೇಮಿಸಿದೆ. ಶ್ವಾಸಕೋಶದ ಒಳಗಡೆ ಗಾಳಿಯ ಹೊರತಾಗಿ ಇತರರಿಗೆ ಪ್ರವೇಶವನ್ನು ಕಡ್ಡಾಯವಾಗಿ ನಿರಾಕರಿಸಲಾಗಿದೆ. ಶ್ವಾಸಕೋಶದಲ್ಲಿ ಶರೀರಕ್ಕೆ ಬೇಕಾದ ಆಮ್ಲಜನಕ ರಕ್ತದೊಳಗೆ ಸೇರಿಕೊಳ್ಳುತ್ತದೆ ಮತ್ತು ಶರೀರ ಹೊರ ಹಾಕುವ ಇಂಗಾಲದ ಡೈಆಕ್ಸೈಡ್ ದೇಹದಿಂದ ಹೊರಬಂದು ವಾತಾವರಣದಲ್ಲಿ ಲೀನವಾಗುತ್ತದೆ. ಶ್ವಾಸಕೋಶದೊಳಗಡೆ ಗಾಳಿಯ ಹೊರತಾಗಿ ಇತರ ಪದಾರ್ಥಗಳು ಸೇರಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಚಿಕ್ಕಪುಟ್ಟ ಆಹಾರಪದಾರ್ಥಗಳು, ಎಂಜಲು ಮತ್ತು ನೀರು – ಇವು ಶ್ವಾಸಕೋಶದ ರೋಗನಿರೋಧಕ ಶಕ್ತಿಯನ್ನು ಶಮನಗೊಳಿಸಿ, ಅಲ್ಲಿ ‘ನ್ಯುಮೋನಿಯಾ’ ಸೋಂಕನ್ನು ಉಂಟುಮಾಡುತ್ತದೆ. ಧ್ವನಿಪೆಟ್ಟಿಗೆಯಲ್ಲಿ ಸ್ವಲ ದೊಡ್ಡ ವಸ್ತುಗಳಾದ ನಾಣ್ಯ, ಮೀನಿನ‌ ಮುಳ್ಳು – ಇಂಥವು ಸಿಕ್ಕಿಹಾಕಿಕೊಂಡು ಶ್ವಾಸಕೋಶದೊಳಗಡೆ ಗಾಳಿಯ ಚಲನೆಯು ಸಂಪೂರ್ಣವಾಗಿ ನಿಂತರೆ ಜೀವಕ್ಕೂ ಕುತ್ತು ಬರಬಹುದು. ನಮ್ಮ ಆಹಾರದ ಕೊಳವೆ ಮತ್ತು ಉಸಿರಾಟದ ಕೊಳವೆ ಒಂದು ಮತ್ತೊಂದರ ಪಕ್ಕದಲ್ಲಿದೆ‌. ಆದರೆ ಆಹಾರ ಮತ್ತು ಗಾಳಿ ಯಾವ ಗೂಗಲ್ ಮ್ಯಾಪಿನ ಸಹಾಯವಿಲ್ಲದೆ ತಾವು ತಲುಪಬೇಕಾದ ಸ್ಥಳವನ್ನು ಸುರಕ್ಷಿತವಾಗಿ ತಲುಪುತ್ತಿರುವ ಕಾರಣ ಈ ರಸ್ತೆಯಲ್ಲಿ ಅಪಘಾತಗಳಾಗುತ್ತಿಲ್ಲ!

ಶ್ವಾಸಕೋಶದ ಪ್ರವೇಶದ್ವಾರವಾದ ಧ್ವನಿಪೆಟ್ಟಿಗೆಯ ಒಳಗಡೆ ಗಾಳಿಯ ಹೊರತಾಗಿ ಪ್ರವೇಶ ನಿರಾಕರಿಸಲಾಗಿರುವ ಇತರ ವಸ್ತುಗಳು ಕಾಲಿಟ್ಟ ತಕ್ಷಣ ನಮ್ಮ ದೇಹವು ನಿದ್ರೆಯಲ್ಲಿದ್ದರೂ ಜಾಗೃತವಾಗುತ್ತದೆ. ದೇಹದೊಳಗಡೆ ಉತ್ಪತ್ತಿಯಾಗುವ ಕೆಮ್ಮು, ಗಾಳಿಯನ್ನು ಪ್ರತಿ ಗಂಟೆಗೆ ನೂರು ಮೈಲು ವೇಗದಲ್ಲಿ ಹೊರಹಾಕುವುದರಿಂದ ಶ್ವಾಸಕೋಶದೊಳಗೆ ಪ್ರವೇಶಿಸಲು ಹೊಂಚುಹಾಕುತ್ತಿರುವ ಪದಾರ್ಥಗಳು ದೇಹದಿಂದ ಹೊರಗೆ ಎಸೆಯಲ್ಪಡುತ್ತವೆ. ಶ್ವಾಸಕೋಶದ ನಳಿಗೆಯೊಳಗಡೆ ಬೇರೆ ಪದಾರ್ಥಗಳು ಪ್ರವೇಶ ಮಾಡಿರುವ ಸುದ್ದಿಯನ್ನು ಮೆದುಳಿಗೆ ಕೊಂಡೊಯ್ಯುವ ನರಗಳಿವೆ; ಈ ನರಗಳನ್ನು ಜಾಗೃತಗೊಳಿಸುವ ಸೂಕ್ಷ್ಮ ರಿಸೆಪ್ಟಾರುಗಳಿವೆ. ಈ ಅಪಾಯವನ್ನು ತಕ್ಷಣ ಗ್ರಹಿಸುವ ಮಿದುಳು ಕೆಮ್ಮನ್ನು ಉತ್ಪಾದನೆ ಮಾಡುವ ಮಾಂಸಖಂಡಗಳಿಗೆ ನರಗಳ ಮೂಲಕ ತುರ್ತುಸಂದೇಶವನ್ನು ರವಾನಿಸುತ್ತದೆ. ಇದು ನಮ್ಮ ಮನಸ್ಸಿನ ನಿಯಂತ್ರಣಕ್ಕೆ ಮೀರಿದ ಪ್ರಕ್ರಿಯೆಯಾಗಿರುವುದರಿಂದ ಇದನ್ನು ನಾವು ‘ಇನ್ವಾಲಂಟರಿ ರಿಫ್ಲೆಕ್ಸ್’ ಎಂದು ಕರೆಯುತ್ತೇವೆ. ಸೋಂಕಿನ ಕಾರಣದಿಂದ ಗಂಟಲಿನಲ್ಲಿ ತುರಿಕೆಯಾಗುತ್ತಿರುವಾಗಲೂ ನಾವು ಕೆಮ್ಮುವ ಮೂಲಕ ನಮ್ಮ ಗಂಟಲು ಸರಿಪಡಿಸಲು ಯತ್ನಿಸುತ್ತಿರುತ್ತೇವೆ. ಶ್ವಾಸಕೋಶದೊಳಗಡೆ ಕಫ, ನೀರು ಅಥವಾ ಅಲರ್ಜಿಯನ್ನು ಉಂಟುಮಾಡುವ ಸೂಕ್ಷ್ಮಕಣಗಳು ತುಂಬಿಕೊಂಡಾಗಲೂ ದೇಹವು ಕೆಮ್ಮುವ ಮೂಲಕ ಅದನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಕೆಮ್ಮಿನ ಶೈಲಿ ಮತ್ತು ಅದರ ತೀವ್ರತೆಯನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸುವ ವೈದ್ಯರು ರೋಗಿ ತಮ್ಮ ಕ್ಲೀನಿಕ್ಕಿನೊಳಗೆ ಕೆಮ್ಮುತ್ತಾ ಬರುವಾಗಲೇ ಅವರ ಕೆಮ್ಮಿಗೆ ಕಾರಣವಾಗಿರುವ ರೋಗವನ್ನು ಅಂದಾಜಿಸಬಹುದು. ಕೆಮ್ಮು ದೇಹದೊಳಗಿನ ಏರುಪೇರನ್ನು ಜಗತ್ತಿಗೆ ಸಾರುವ ಧ್ವನಿಯಾಗುವುದರ ಜೊತೆಗೆ ಶ್ವಾಸಕೋಶದ ಸರಹದ್ದಿನೊಳಗೆ ವೈರಿಗಳ ಪ್ರವೇಶವನ್ನು ತಡೆಯುವ ರಣಕಹಳೆಯಂತೆ ಕೆಲಸ ಮಾಡುತ್ತದೆಯೆ ಹೊರತು, ಅಸಲಿಗೆ ಕೆಮ್ಮು ಯಾವುದೇ ಕಾಯಿಲೆಯಲ್ಲ.

ಕ್ಷಯರೋಗ ಅಥವಾ ಶ್ವಾಸಕೋಶದ ಕ್ಯಾನ್ಸರ್ ಇದ್ದಾಗಲೂ ಶ್ವಾಸಕೋಶದೊಳಗಡೆ ಆಗಿರುವ ಏರುಪೇರಿನ ಸೂಚನೆಯನ್ನು ಕೆಮ್ಮ ನಮಗೆ ಸೂಕ್ಷ್ಮವಾಗಿ ತಿಳಿಸುತ್ತದೆ. ಎಂಟು ವಾರಗಳಿಗಿಂತಲೂ ಹೆಚ್ಚು ಸಮಯ ಒಬ್ಬ ವ್ಯಕ್ತಿಯು ಕೆಮ್ಮುತ್ತಿದ್ದಾಗ ನಾವು ಆ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ಆ ಧ್ವನಿಯ ಜಾಡು ಹಿಡಿದು ಅದರ ಮೂಲ ಕಾರಣಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆ ಧ್ವನಿಯನ್ನು ಅನುಮಾನದಿಂದ ನೋಡಿ ಶ್ವಾಸಕೋಶ ಸ್ವಾಸ್ಥ್ಯವನ್ನು ಅರಿಯಲು ಎಕ್ಸ್‌–ರೇ ಮತ್ತು ಶ್ವಾಸಕೋಶದ ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಭಾರತದಲ್ಲಿ ಹೆಚ್ಚು ಕಾಡುತ್ತಿರುವ ಶ್ವಾಸಕೋಶದ ಕ್ಷಯರೋಗವನ್ನು ಪತ್ತೆಹಚ್ಚಲು ವಿವಿಧ ರಕ್ತ ಮತ್ತು ಕಫದ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಆದರೆ ಆರೋಗ್ಯವಾಗಿರುವವರಲ್ಲಿ ಬರುವ ಅಲ್ಪಕಾಲದ ಕೆಮ್ಮಿಗಾಗಿ ಅನಗತ್ಯ ಪರೀಕ್ಷೆಗಳ ಅಗತ್ಯವಿರುವುದಿಲ್ಲ.

ಸೂರ್ಯನಿಗೆ ಟಾರ್ಚ್ ಹಿಡಿಯಬೇಡ – ಎಂಬ ಹಾಸ್ಯಮಯ ಹೇಳಿಕೆಯಂತೆ ‘ಅಜ್ಜಿಗೆ ಕೆಮ್ಮೆ’ – ಎಂದು ತಮಾಷೆಯಿಂದ ಪ್ರಶ್ನಿಸುವವರಿದ್ದಾರೆ. ಅಡುಗೆಮನೆಯ ಹೊಗೆಗೆ ಅಥವಾ ಧೂಮಪಾನಕ್ಕೆ ಶ್ವಾಸಕೋಶವು ನಿರಂತರವಾಗಿ ಗುರಿಯಾದಲ್ಲಿ ಶ್ವಾಸಕೋಶದ ರಚನೆ ಮತ್ತು ಕ್ರಿಯೆಯಲ್ಲಿ ಬದಲಾವಣೆಗಳುಂಟಾಗಿ ಅದರ ಕಾರ್ಯಕ್ಷಮತೆ ಕುಗ್ಗುತ್ತದೆ. ಈ ಕಾರಣದಿಂದ ವಯಸ್ಸಾದವರಲ್ಲಿ ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ಶಾಲೆಗೆ ಹೋಗುವ ಮಕ್ಕಳು ಪ್ರಪಂಚಕ್ಕೆ ತಮ್ಮನ್ನು ತಾವು ತೆರೆದುಕೊಂಡಂತೆ ವಿವಿಧ ರೋಗಾಣುಗಳ ದಾಳಿಗೆ, ಅದರಲ್ಲೂ ಮುಖ್ಯವಾಗಿ ವೈರಸ್ಸುಗಳ ಸೋಂಕಿಗೆ ತುತ್ತಾಗುವ ಕಾರಣ ಆ ಮಕ್ಕಳಲ್ಲಿ ಶೀತಜ್ವರದ ಜೊತೆಗೆ ಕೆಮ್ಮು ಕೂಡ ಇತರರಿಗಿಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ‌. ಕೊರೊನಾ ಸಹಿತ ಇತರ ಶ್ವಾಸಕೋಶದ ವೈರಸುಗಳು ಮಕ್ಕಳಲ್ಲಿ ತೀವ್ರ ಪ್ರಮಾಣದ ಆರೋಗ್ಯದ ಏರುಪೇರನ್ನು ಉಂಟುಮಾಡದಿರುವ ಕಾರಣದಿಂದ ಮತ್ತು ದೇಹದ ರೋಗನಿರೋಧಕ ಶಕ್ತಿಗೆ ಇಂತಹ ವೈರಸ್ಸುಗಳನ್ನು ಬಗ್ಗು ಬಡಿಯುವ ಸಾಮರ್ಥ್ಯವಿರುವ ಕಾರಣದಿಂದ ಈ ಕೆಮ್ಮಿನ ಬಗ್ಗೆಯೂ ಭಯಪಡುವ ಅಗತ್ಯವಿಲ್ಲ.

ಕೆಮ್ಮಿಗೆ ಔಷಧ ಎಂದು ಜನರು ಹುಚ್ಚೆದ್ದು ಬಳಸುವ ಹೆಚ್ಚಿನ ಕಾಫ್ ಸಿರಪ್ಪುಗಳ ಉದ್ದೇಶ ಕೂಡ ಕೆಮ್ಮುನ್ನು ನಿಲ್ಲಿಸುವುದಲ್ಲ‌. ಆ ದ್ರಾವಣಗಳಲ್ಲಿ ಶೀತ ಅಥವಾ ಮೂಗಿನಿಂದ ನೀರು ಸುರಿಸುವುದನ್ನು ನಿಲ್ಲಿಸುವ ಔಷಧಗಳು ಮತ್ತು ಶ್ವಾಸಕೋಶದೊಳಗೆ ಕಫವು ಗಟ್ಟಿಯಾಗಿದ್ದಲ್ಲಿ ಅದನ್ನು ಕರಗಿಸಿ ಕೆಮ್ಮಿನ ಮೂಲಕ ಶ್ವಾಸಕೋಶದಿಂದ ಹೊರಹಾಕುವ ಔಷಧಗಳು ಹೆಚ್ಚಾಗಿ ಇರುತ್ತದೆ. ಈ ಕಾಫ್ ಸಿರಪ್ಪಿನಲ್ಲಿ ಅಸ್ತಮಾದಂತಹ ಕಾಯಿಲೆಗಳಿಂದ ಬಳಲುವವರ ಶ್ವಾಸಕೋಶದೊಳಗೆ ಗಾಳಿಯ ಸಂಚಾರವನ್ನು ಸುಗಮಗೊಳಿಸುವ ಔಷಧಗಳು ತುಂಬಿರುತ್ತದೆಯೆ ಹೊರತು ಕೆಮ್ಮನ್ನು ಸ್ವಿಚ್ ಆಫ್ ಮಾಡಬಲ್ಲ ಯಾವ ರಾಮಬಾಣವೂ ಇರುವುದಿಲ್ಲ. ಏಕೆಂದರೆ ಚಿಕಿತ್ಸೆಯ ಉದ್ದೇಶವು ರೋಗವನ್ನು ನಿವಾರಿಸುವುದೇ ಹೊರತು ರೋಗಲಕ್ಷಣವಾದ ಕೆಮ್ಮನ್ನು ನಿಲ್ಲಿಸುವುದಲ್ಲ. ದೇಹವು ರೋಗದಿಂದ ವಿಮುಕ್ತಿಯಾದ ನಂತರ ರೋಗಲಕ್ಷಣಗಳು ಮಾಯವಾಗುತ್ತವೆ.

ಕೆಮ್ಮುವವರಿಗಿಂತ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವವರು ಅಸಲಿಗೆ ಕೆಮ್ಮಲು ಆಗದವರೇ! ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಪ್ರಜ್ಞಾಹೀನಸ್ಥಿತಿಯಲ್ಲಿರುವವರು, ಪಕ್ಕೆಲುಬುಗಳ ಮೂಳೆಮುರಿತದಿಂದಾಗಿ ಕೆಮ್ಮಲು ಅಶಕ್ತರಾಗಿರುವವರು ಅಥವಾ ಕೆಮ್ಮಲು ಸಾಮರ್ಥ್ಯವಿಲ್ಲದ ನವಜಾತ ಶಿಶುಗಳ ಆರೋಗ್ಯ ನಿಜಕ್ಕೂ ಕೆಮ್ಮುವವರಿಗಿಂತ ಹೆಚ್ಚು ಅಪಾಯದಲ್ಲಿರುತ್ತದೆ. ಇಂಥವರು ಶ್ವಾಸಕೋಶದೊಳಗಡೆ ಸೋಂಕು ಹರಡಬಲ್ಲ ಅಥವಾ ಧ್ವನಿಪೆಟ್ಟಿಗೆಯೊಳಗೆ ಗಾಳಿಯ ಸಂಚಾರವನ್ನು ತಡೆದು ಜೀವಕ್ಕೆ ಸಂಚಕಾರ ತರಬಲ್ಲ ವಸ್ತುಗಳು ಹೋದಾಗ ಆತ್ಮರಕ್ಷಣೆಗಾಗಿ ಇಂಥವರು ಶ್ವಾಸಕೋಶದ ಸಹಾಯಕ್ಕೆ ಕೆಮ್ಮು ಧಾವಿಸಿ ಬರುವುದಿಲ್ಲ. ಈಗ ಹೇಳಿ ನೀವು ಇಂದಿನಿಂದ ಕೆಮ್ಮನ್ನು ಶಪಿಸುತ್ತೀರಾ ಅಥವಾ ಕೆಮ್ಮಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿರಾ?

(ಲೇಖಕ ಮಾಜಿ ಸೈನ್ಯಾಧಿಕಾರಿ ಮತ್ತು ಮಕ್ಕಳ ತಜ್ಞ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು