ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಾಂತ್ವನ: ‘ಸಕಾರಾತ್ಮಕ ಆಲೋಚನೆ ಜತೆ ಮುನ್ನೆಚ್ಚರಿಕೆ ಇರಲಿ’

Last Updated 30 ಏಪ್ರಿಲ್ 2021, 21:32 IST
ಅಕ್ಷರ ಗಾತ್ರ

‘ಕೋವಿಡ್‌ ಎರಡನೇ ಅಲೆಯಲ್ಲಿ ವೈರಾಣು ವೇಗವಾಗಿ ಹರಡುತ್ತಿದೆ. ಹೀಗಾಗಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಜತೆಗೆ ಕಾಯಿಲೆಯ ತೀವ್ರತೆ ಕಡಿಮೆ ಮಾಡಲು ಸಹಕಾರಿಯಾಗಿರುವ ಲಸಿಕೆ ಪಡೆದುಕೊಳ್ಳಬೇಕು. ಅನಗತ್ಯವಾಗಿ ಭಯ, ಆತಂಕಕ್ಕೆ ಒಳಗಾಗುವ ಬದಲು ಸಕಾರಾತ್ಮಕ ಆಲೋಚನೆಯೊಂದಿಗೆ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು.’

‘ಲಸಿಕೆ ಪಡೆಯುವ ಮೊದಲು ದೇಹಕ್ಕೆ ವಿಶ್ರಾಂತಿ ನೀಡಬೇಕು. 6ರಿಂದ 8 ಗಂಟೆವರೆಗೆ ನಿದ್ದೆ ಮಾಡುವುದು ಉತ್ತಮ. ಇದರಿಂದ ದೇಹ ಮತ್ತು ಮನಸ್ಸು ಶಾಂತಗೊಳ್ಳಲಿದೆ. ಕೋವಿಡೇತರ ಕಾಯಿಲೆಗೆ ನಿಯಮಿತವಾಗಿ ಔಷಧ ತೆಗೆದುಕೊಳ್ಳುತ್ತಿದ್ದರೆ ಅಥವಾ ಜ್ವರ, ಕೆಮ್ಮು, ಮೈಕೈ ನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ, ಲಸಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅನಾರೋಗ್ಯ ಸಮಸ್ಯೆಗಳು ಸಂಪೂರ್ಣ ಕಡಿಮೆಯಾದ ಬಳಿಕ ಲಸಿಕೆ ಹಾಕಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾದ ಪೌಷ್ಟಿಕ ಆಹಾರ ಸೇವಿಸಬೇಕು.’

‘ಸದ್ಯ ದೇಶದಲ್ಲಿ ಬಳಕೆಯಲ್ಲಿರುವ ಲಸಿಕೆಗಳು ಸುರಕ್ಷಿತವಾಗಿವೆ. ಲಸಿಕೆಯ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಲಸಿಕೆ ಪಡೆಯುವ ದಿನ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇಲ್ಲವಾದರೆ ದೇಹದಲ್ಲಿ ನೀರಿನ ಕೊರತೆ (ನಿರ್ಜಲೀಕರಣ) ಉಂಟಾಗಿ, ತಲೆ ತಿರುಗುವಿಕೆ, ದಣಿವು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಅನುಭವವಾಗುತ್ತದೆ.’

‘ಲಸಿಕೆ ಪಡೆದ ಬಳಿಕ ಕೂಡ ಆರೋಗ್ಯದ ಮೇಲೆ ನಿಗಾ ಇಡಬೇಕಾಗುತ್ತದೆ. ವಾಂತಿ, ಮೂರ್ಛೆ, ಜ್ವರ, ಮೈಕೈ ನೋವು, ಚುಚ್ಚುಮದ್ದು ನೀಡಿದ ಜಾಗದಲ್ಲಿ ತುರಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಲಸಿಕೆ ಪಡೆಯುವ ದಿನ ಮದ್ಯಪಾನ ಮಾಡದಿರುವುದು ಉತ್ತಮ. ಆದರೆ, ಈ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ಲಸಿಕೆ ಪಡೆದ ಬಳಿಕ ನೋವಿನ ಅನುಭವವಾದರೂ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಇದು ರೋಗನಿರೋಧಕ ವ್ಯವಸ್ಥೆಗೆ ಅಡ್ಡಿಪಡಿಸುವ ಜತೆಗೆ ಅಡ್ಡ ಪರಿಣಾಮಗಳಿಗೆ ಕಾಣವಾಗುತ್ತದೆ.’

‘ಮೊದಲ ಡೋಸ್ ಲಸಿಕೆ ಪಡೆದ 4ರಿಂದ 12 ವಾರಗಳ ಅವಧಿಯಲ್ಲಿ ಎರಡನೇ ಡೋಸ್ ಲಸಿಕೆಯನ್ನು ‍ಪಡೆದುಕೊಳ್ಳಬೇಕು. ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಸೋಂಕಿತರಾದರೂ ಅದರ ತೀವ್ರತೆ ಕಡಿಮೆ ಇರು‌ತ್ತದೆ. ಹಾಗಾಗಿ, ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಪಾಲಿಸಬೇಕು.’

-ಡಾ. ಪ್ರುಥು ನರೇಂದ್ರ ಧೇಕನೆ, ಸಾಂಕ್ರಾಮಿಕ ರೋಗಗಳ ಸಲಹೆಗಾರ, ಫೋರ್ಟಿಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT