ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಿಳಿಯೋಣ: ನ್ಯುಮೋನಿಯ ಪತ್ತೆಗೆ ಡಿಎನ್‌ಎ ಪರೀಕ್ಷೆ

Last Updated 22 ಜನವರಿ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ನಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ನ್ಯುಮೋನಿಯದಿಂದ ಬಳಲುವ ಸಾಧ್ಯತೆ ಹೆಚ್ಚು. ಆದರೆ ಕೋವಿಡ್‌ ರೋಗಿಗಳಲ್ಲಿ ಅದರಲ್ಲೂ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರುವವರಲ್ಲಿ ನ್ಯುಮೋನಿಯದಂತಹ ಅಪಾಯಕಾರಿ ಲಕ್ಷಣವನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಈಗ ಈ ನ್ಯುಮೋನಿಯ ಸೋಂಕನ್ನು ತಕ್ಷಣಕ್ಕೆ ಪತ್ತೆ ಮಾಡುವ ಡಿಎನ್‌ಎ ಪರೀಕ್ಷೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಇಂಗ್ಲೆಂಡ್‌ನ ಸಂಶೋಧಕರು ಈ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶವು ವೈದ್ಯರ ಕೈ ಸೇರಲಿದೆ. ಹೀಗಾಗಿ ರೋಗಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುವುದು ಸಾಧ್ಯ ಎಂದು ‘ಕ್ರಿಟಿಕಲ್‌ ಕೇರ್‌’ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನ ಲೇಖನದಲ್ಲಿ ತಿಳಿಸಲಾಗಿದೆ. ವೆಂಟಿಲೇಟರ್‌ ಸಹಾಯದಿಂದ ಉಸಿರಾಡುತ್ತಿರುವ ಕೋವಿಡ್‌–19 ರೋಗಿಗಳಲ್ಲಿ ಶ್ವಾಸಕೋಶದ ಸೋಂಕು ನ್ಯುಮೋನಿಯ ತಗಲುವ ಸಾಧ್ಯತೆ ಹೆಚ್ಚು ಎಂದಿರುವ ಸಂಶೋಧಕರು, ಇದಕ್ಕೆ ಕಾರಣವಾಗುವ ಸೂಕ್ಷ್ಮಾಣುಗಳನ್ನು ಪತ್ತೆ ಮಾಡಿರುವುದಾಗಿ ಹೇಳಿದ್ದಾರೆ. ಈ ಪರೀಕ್ಷೆಯನ್ನು ಬ್ರಿಟನ್‌ನ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಆರಂಭಿಸಲಾಗಿದ್ದು, ‘ಕೇಂಬ್ರಿಜ್‌ ಪರೀಕ್ಷೆ’ ಎಂದೇ ಕರೆಯಲಾಗುತ್ತಿದೆ.

ನ್ಯುಮೋನಿಯವನ್ನು ತಕ್ಷಣ ಪತ್ತೆ ಮಾಡಿದರೆ, ಶೀಘ್ರ ಚಿಕಿತ್ಸೆ ಆರಂಭಿಸಬಹುದು, ಹಾಗೆಯೇ ಆ್ಯಂಟಿಬಯಾಟಿಕ್‌ಗೆ ದೇಹವು ಪ್ರತಿರೋಧಿಸುವ ಸಾಧ್ಯತೆಯೂ ಕಡಿಮೆ. ಇದುವರೆಗಿನ ಪದ್ಧತಿಯಿಂದ ನ್ಯುಮೋನಿಯ ಪತ್ತೆ ಮಾಡಲು ಹೆಚ್ಚು ಸಮಯ ಹಿಡಿಯುತ್ತಿತ್ತು. ರೋಗಿಯಿಂದ ಪಡೆದ ಬ್ಯಾಕ್ಟೀರಿಯ ಮಾದರಿಯನ್ನು ಪ್ರಯೋಗಾಲಯದಲ್ಲಿ ಬೆಳೆಸುವ ಪ್ರಕ್ರಿಯೆಗೆ 48–72 ತಾಸು ಬೇಕಾಗುತ್ತದೆ, ನಂತರ ಅದರ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ಅಧ್ಯಯನ ನಡೆಸಿದ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಆ್ಯಂಡ್ರ್ಯೂ ಕಾನ್‌ವೇ ಮೋರಿಸ್‌ ವರದಿಯಲ್ಲಿ ಹೇಳಿದ್ದಾರೆ.

ನ್ಯುಮೋನಿಯ ಸಮಸ್ಯೆಗೆ ಯಾವ ಬ್ಯಾಕ್ಟೀರಿಯ ಕಾರಣ ಎಂದು ಪತ್ತೆ ಮಾಡುವುದು ಮಹತ್ವದ ಅಂಶ. ತುರ್ತು ನಿಗಾ ಘಟಕದಲ್ಲಿ ಕೆಲವೊಮ್ಮೆ ನ್ಯುಮೋನಿಯ ತರಹದ ಲಕ್ಷಣಗಳು ಗೋಚರಿಸಿದರೂ ಅದು ನಿಜವಾಗಿ ನ್ಯುಮೋನಿಯ ಆಗಿರುವುದಿಲ್ಲ. ಹೀಗಾಗಿ ಆ್ಯಂಟಿಬಯಾಟಿಕ್‌ಗೆ ರೋಗಿ ಸ್ಪಂದಿಸುವುದಿಲ್ಲ. ಕೋವಿಡ್‌–19 ವೈರಸ್‌ನಿಂದ ಬರುವುದರಿಂದ ಶ್ವಾಸಕೋಶಕ್ಕೆ ಸೋಂಕು ಆದವರಿಗೆ ಆ್ಯಂಟಿಬಯಾಟಿಕ್‌ ಉಪಯೋಗ ಆಗುವುದಿಲ್ಲ.

ಕೇಂಬ್ರಿಜ್‌ ಪರೀಕ್ಷೆಯಲ್ಲಿ 52 ವಿವಿಧ ಬಗೆಯ ಸೂಕ್ಷ್ಮಾಣುಗಳ ಡಿಎನ್‌ಎ ಪತ್ತೆ ಮಾಡಬಹುದು. ಪಿಸಿಆರ್‌ ವಿಧಾನವನ್ನು ಬಳಸಿ ಬ್ಯಾಕ್ಟೀರಿಯ, ಫಂಗಸ್‌ ಅಥವಾ ವೈರಸ್‌ ಡಿಎನ್‌ಎ ಕಂಡು ಹಿಡಿಯಬಹುದು. ಒಂದೇ ತಾಸಿನಲ್ಲಿ ಪರೀಕ್ಷೆಯ ಫಲಿತಾಂಶ ಲಭ್ಯವಾಗುತ್ತದೆ. ಬ್ಯಾಕ್ಟೀರಿಯ ಕಂಡು ಬಂದರೆ ಆ್ಯಂಟಿಬಯಾಟಿಕ್‌ ಶುರು ಮಾಡಲು ಕೂಡ ಅನುಕೂಲ ಎಂದು ಅವರು ವಿವರಿಸಿದ್ದಾರೆ.

ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಕೋವಿಡ್‌–19 ರೋಗಿಗಳಲ್ಲಿ ಕಂಡು ಬರುವ ಸೆಕೆಂಡರಿ ನ್ಯುಮೋನಿಯ ಚಿಕಿತ್ಸೆಗೆ ಇದು ಸಹಕಾರಿ ಎಂದೂ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT