ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡ ಭಯದ ಭಯ

Last Updated 16 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ನಮಗೆಲ್ಲರಿಗೂ ಒಂದಲ್ಲ ಒಂದು ಭಯ ಇದ್ದದ್ದೇ. ಹುಲಿಯ ಭಯ ಸಹಜವೆನ್ನುತ್ತೀರಾದರೂ ಕೆಲವರಿಗೆ ಜಿರಳೆಯ ಭಯ. ಇನ್ನೊಬ್ಬರಿಗೆ ಹಾವಿನ ಭಯ. ಮತ್ತೊಬ್ಬರಿಗೆ ಎತ್ತರದ ಭಯ. ಬಹಳಷ್ಟು ಜನರಿಗೆ ರೋಗದ ಭಯ. ವೃದ್ಧಾಪ್ಯದ ಭಯ. ಸಾವಿನ ಭಯ. ಯಾವುದೇ ಭಯ ಇಲ್ಲದವನಿಗೂ ಹೆಂಡತಿಯ ಭಯ ಇದ್ದೇ ಇರುತ್ತದೆ ಎಂದು ನನ್ನ ಗುರುಗಳು ಗಹಗಹಿಸಿ ನಗುತ್ತಾರೆ! ಭಯವಿಲ್ಲದವರು ಇಲ್ಲಿ ಯಾರೂ ಬದುಕಿಲ್ಲ! ಆದರೆ ಅನಿಯಂತ್ರಿತ ಭಯದಿಂದ ಬಳಲುವುದಿದೆಯಲ್ಲ, ಅದೊಂದು ಹೇಳಿಕೊಳ್ಳಲಿಕ್ಕಾಗದ ಯಾತನೆ.

ಇತ್ತೀಚೆಗಂತೂ ನಮಗಷ್ಟೇ ಅಲ್ಲ ಭಯ ಇಡೀ ಜಗತ್ತನ್ನೇ ಆವರಿಸಿದೆ. ಎಲ್ಲರಿಗೂ ಕೊರೊನಾ ಭಯ. ಬಂದಲ್ಲಿ. ಹೋದಲ್ಲಿ. ಇದ್ದಲ್ಲಿ. ಭಯವೋ ಭಯ. ಲಸಿಕೆ ಹಾಕಿಕೊಂಡವರನ್ನೂ ಕೂಡ ಸಂಪೂರ್ಣವಾಗಿ ಭಯವು ಬಿಟ್ಟಿಲ್ಲ. ಕೋವಿಡ್‌ಗೆ ಬಲಿಯಾದವರ ಕುಟುಂಬಸ್ಥರನ್ನು ಆವರಿಸಿರುವ ಭಯದ ತೀವ್ರತೆಯನ್ನು ಮಾತಲ್ಲಿ ಹೇಳಲಿಕ್ಕಾಗದು.

ಭಯ ಎನ್ನುವುದು ಮನುಷ್ಯನ ಮನಸ್ಸಿನ ಏಳು ಮೂಲಭೂತ ಭಾವನೆಗಳಲ್ಲಿ ಒಂದು. ಹಾಗಾಗಿ ಸಿಟ್ಟು, ಸಿಡುಕು, ಸಂತೋಷಗಳಂತೆಯೇ ಭಯವು ಸಹ ಎಲ್ಲ ಮನುಷ್ಯರಲ್ಲಿಯೂ ಇರುತ್ತದೆ. ಭಯ ಹಲವರಲ್ಲಿ ಸಹಜವಾಗಿ ಎನ್ನುವಂತಿದ್ದರೆ, ಕೆಲವರಲ್ಲಿ ಅದು ಅಸಹಜ ಎನ್ನುವಷ್ಟರ ಮಟ್ಟಿಗೆ ವ್ಯಕ್ತವಾಗುತ್ತದೆ. ಹೀಗಾದಾಗ ಅದು ಅವರಿಗೂ, ಅವರ ಮನೆಯವರಿಗೂ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಭಯವು ದೈಹಿಕವಾಗಿಯೂ ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಇರಬಹುದು. ಕೆಲವೊಮ್ಮೆ ಭಯವು ನಿಜವಾಗಿದ್ದರೂ ಬಹಳ ಸಲ ಭಯ ಎನ್ನುವುದು ಕೇವಲ ನಮ್ಮ ಅತಿರಂಜಿತ ಕಲ್ಪನೆಯಾಗಿರುತ್ತದೆ. ಯಾವುದೇ ರೀತಿಯದ್ದಾಗಿದ್ದರೂ ಕೂಡ, ನಮ್ಮ ಮೇಲೆ ಭಯದ ಪರಿಣಾಮವು ಮಾತ್ರ ಅಗಾಧವಾಗಿರುತ್ತದೆ, ಅಸಹನೀಯವಾಗಿರುತ್ತದೆ. ಸಾಮಾನ್ಯವಾಗಿ ಭಯವನ್ನು ಎಲ್ಲರೂ ಋಣಾತ್ಮಕ ಭಾವನೆ ಎನ್ನುತ್ತಾರೆ. ನಿಜಕ್ಕೂ ಅದು ಹಾಗಲ್ಲ. ಭಯವು ನಮ್ಮನ್ನು ಬಹಳ ಸಂದರ್ಭಗಳಲ್ಲಿ, ಮರುಕ್ಷಣದಲ್ಲಿ ಆಗಬಹುದಾಗಿದ್ದ ನಿಜವಾದ ಅಪಾಯದಿಂದ ಪಾರುಮಾಡುತ್ತದೆ. ಅಪಾಯದ ಸುಳಿವು ಸಿಕ್ಕ ಕ್ಷಣಾರ್ಧದಲ್ಲಿ ಮನಸ್ಸಿನೊಳಗಿಂದ ಭಯವು ಜಾಗೃತವಾಗಿದ್ದರಿಂದ, ಅರೆಕ್ಷಣದಲ್ಲಿ ಅಪಾಯದಿಂದ ಬಚಾವಾದ ಸಂದರ್ಭಗಳು ಇಷ್ಟರಲ್ಲಾಗಲೇ ನಿಮಗೆ ನೆನಪಾಗಿರಲಿಕ್ಕೆ ಸಾಕು. ಭಯದಿಂದ ಬದುಕಿಗೆ ಉಪಕಾರವಾದ ಘಟನೆಗಳು ಬಹುತೇಕ ಎಲ್ಲರ ಜೀವನದಲ್ಲಿಯೂ ಇರುತ್ತವೆ. ಆದರೂ ಭಯವೆಂದರೆ ಭಯವೇ!

ಚಿಕ್ಕ ಪುಟ್ಟ ಕಾರಣಗಳಿಗೂ ಮಕ್ಕಳನ್ನು ಭೂತ, ಪ್ರೇತ, ಪಿಶಾಚಿ, ಗುಮ್ಮ, ಕಳ್ಳ, ಪೊಲೀಸ್‌ ಮುಂತಾದ ಉದಾಹರಣೆಗಳನ್ನು ಕೊಟ್ಟು ಹೆದರಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಭಯದ ಬೀಜವು ಮೊಳಕೆಯೊಡೆದು, ಸಸಿಯಾಗಿ ಮುಂದೆ ಹುಲುಸಾದ ಮರವಾಗಿ ಬೆಳೆಯುತ್ತದೆ. ಸುಪ್ತಮನಸ್ಸಿನಲ್ಲಿ ಹುಟ್ಟಿ, ಬೆಳೆದುಕೊಂಡಿರುವ ಭಯವು ಅನಿರಕ್ಷಿತವಾಗಿ, ಅನಗತ್ಯ ಸಂದರ್ಭಗಳಲ್ಲಿ ವ್ಯಕ್ತವಾಗುವುದರಿಂದ ಅನಾಹುತಗಳಾಗುತ್ತವೆ. ಅದಕ್ಕೆ ವಯಸ್ಸಿನ ಹಂಗೇನಿಲ್ಲ. ಇವೆಲ್ಲವೂ ವ್ಯಕ್ತಿಯ ಮನಸ್ಸಿನೊಳಗಿನ ಕಾಲ್ಪನಿಕ ಭಯವು ವ್ಯಕ್ತವಾಗಿದ್ದರಿಂದಲೇ ಆಗುತ್ತಿರುತ್ತದೆ. ಏನೇನೋ ಆಟಾಟೋಪಗಳನ್ನು ಮಾಡುತ್ತದೆ. ಹಾಗಾದಾಗ ವ್ಯಕ್ತಿಯು ಮನಸ್ಸಿನ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಆವಾಗ ಹಸಿವಾದರೂ ಆಹಾರ ಸೇರುವುದಿಲ್ಲ. ಅಥವಾ ತಿಂದಷ್ಟೂ ಸಾಕಾಗುವುದಿಲ್ಲ. ನಿದ್ರೆ ಬರುವುದಿಲ್ಲ. ಇದರಿಂದಾಗಿ ಆರೋಗ್ಯವು ಹದಗೆಡುತ್ತದೆ. ವ್ಯಕ್ತಿಯ ದೈನಂದಿನ ಬದುಕು ಹಳಿ ತಪ್ಪುತ್ತದೆ.

ಭಯ, ಆತಂಕ, ಕೋಪಗಳಷ್ಟೆ ಅಲ್ಲ – ಯಾವುದೇ ಭಾವನೆಯಾದರೂ ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಯಾಗುತ್ತಿದ್ದರೆ ತಕ್ಷಣವೇ ತಜ್ಞರನ್ನು ಭೇಟಿಯಾಗಬೇಕು. ಮನಸ್ಸಿನಲ್ಲಿ ಆಲೋಚನೆಗಳ ಹೋಯ್ದಾಟ, ತೊಳಲಾಟ, ಖಿನ್ನತೆ ಯಾರೊಂದಿಗೂ ಹೇಳಿಕೊಳ್ಳಬಾರದ ಗುಟ್ಟಲ್ಲ. ಅದೇನೋ ಗುಣಪಡಿಸಲಾಗದ ಮಹಾರೋಗವಂತೂ ಅಲ್ಲವೇ ಅಲ್ಲ. ಮನಸ್ಸಿನ ಅನಾರೋಗ್ಯವೂ ಕೆಲವು ಸಲ ತಾತ್ಕಾಲಿಕವಾಗಿರುತ್ತದೆ, ಸರಿಪಡಿಸಬಹುದಾಗಿರುತ್ತದೆ. ಮನಸ್ಸಿನಲ್ಲಿ ಯಾವುದಾದರೂ ಭಾವನೆಯನ್ನು ಬಹಳ ಕಾಲ ಬಲವಂತವಾಗಿ ಅದುಮಿಟ್ಟುಕೊಳ್ಳುವುದರಿಂದ ಯಾವತ್ತೋ ಅನಿರೀಕ್ಷಿತವಾಗಿ ಅದು ತೀವ್ರಸ್ವರೂಪದಲ್ಲಿ - ಜ್ವಾಲಾಮುಖಿಯ ಹಾಗೆ ಸ್ಫೋಟಗೊಳ್ಳುತ್ತದೆ. ಆಗ ವ್ಯಕ್ತಿಯ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಹಾಗಾಗದಂತೆ ಪ್ರಾರಂಭದಲ್ಲಿಯೇ ಎಚ್ಚರಿಕೆಯನ್ನು ವಹಿಸುವುದು ಬಹಳ ಜಾಣತನ.

ಸಮತೋಲನವಾದ ಆಹಾರ, ಸಂತೋಷದಾಯಕವಾದ ಆಚಾರ, ಧನಾತ್ಮಕವಾದ ವಿಚಾರ, ಸಾಕಷ್ಟು ದೈಹಿಕ ಶ್ರಮ, ನಿಯಮಿತವಾದ ವ್ಯಾಯಾಮಗಳಿಂದ ಸಮಾಧಾನದ ಬದುಕನ್ನು ಬದುಕಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT